ಪಪ್ಪಾಯಿ ಹಣ್ಣಿನ ರೋಗಗಳು ಮತ್ತು ಹತೋಟಿ ಕ್ರಮಗಳು (ಭಾಗ ೨)

ಪಪ್ಪಾಯಿ ಹಣ್ಣಿನ ರೋಗಗಳು ಮತ್ತು ಹತೋಟಿ ಕ್ರಮಗಳು (ಭಾಗ ೨)

೪) ಬೇರು ಗಂಟು ಜಂತು ರೋಗ : ರೋಗದ ಲಕ್ಷಣಗಳು: ಬಾಧೆಗೊಳಗಾದ ಬೇರನ್ನು ಕಿತ್ತು ನೋಡಿದಾಗ ಸಣ್ಣ ಮತ್ತು ದಪ್ಪದ ಗಂಟುಗಳು ಕಂಡುಬರುತ್ತವೆ. ಬಾಧಿತ ಬೇರಿನ ಗಂಟುಗಳ ಮೇಲೆ ಬಲಿತ ಹೆಣ್ಣು ಜಂತು ಹುಳು ಇಟ್ಟ ಕಂದು ಮಿಶ್ರಿತ ಕೆಂಪು ಬಣ್ಣದ ಮೊಟ್ಟೆ ಕವಚಗಳನ್ನು ನೋಡಬಹುದು.

ರೋಗಾಣು: ಈ ರೋಗವು ಮೆಲಾಯ್ಡಾಗೈನ್ ಎಂಬ ಜಂತುಹುಳುವಿನಿಂದ ಬರುತ್ತದೆ. ಈ ರೋಗವು ತರಕಾರಿ ಮತ್ತು ಕುಂಬಳ ಜಾತಿಯ ಬೆಳೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ

ನಿರ್ವಹಣೆ:  ಜಂತು ಹುಳು ರಹಿತ ಭೂಮಿಯಲ್ಲಿ ಸಸಿ ಮಡಿ ಮಾಡಬೇಕು. ಸಸಿಗಳನ್ನು ನಾಟಿಮಾಡುವ ೨-೩ ವಾರಗಳ ಮುಂಚಿತವಾಗಿ ೩-೪ ಕ್ವಿಂಟಾಲ್ ಬೇವಿನ ಹಿಂಡಿ/ಹರಳು ಹಿಂಡಿಯನ್ನು ಹಾಕಬೇಕು. ಸಸಿಗಳನ್ನು ನಾಟಿ ಮಾಡುವ ಮುನ್ನ ಪ್ರತಿ ಗುಣಿಗೆ ೧೦-೨೦ ಗ್ರಾಂ. ಕಾರ್ಬೋಫ್ಯುರಾನ್ ೩ ಜಿ ಹರಳುಗಳನ್ನು ಹಾಕಬೇಕು. 

೫. ಉಂಗುರ ಚುಕ್ಕೆ ಮೊಸಾಯಿಕ್ ನಂಜುರೋಗ : ರೋಗದ ಲಕ್ಷಣಗಳು: ಎಲೆಗಳು ಮೊದಲಿಗೆ ಸುಕ್ಕುಕಟ್ಟಿ ತಿಳಿ ಹಳದಿಯಾಗಿ ವಿಕಾರಗೊಂಡು ಪೂರ್ತಿಯಾಗಿ ಬಳ್ಳಿಯ ಕುಡಿಯ ಸಣ್ಣ ಹಂಬುಗಳಾಗಿ/ ಮಾರ್ಪಾಡಾಗುತ್ತವೆ. ಎಲೆಗಳ ಗಾತ್ರ ಚಿಕ್ಕದಾಗಿ, ಹಳೆಯ ಎಲೆಗಳು ಗಿಡದಿಂದ ಬೀಳಲಾರಂಬಿಸುತ್ತವೆ. ಗಿಡದ ತುದಿಯಲ್ಲಿ ಸಣ್ಣ ಎಲೆಗಳು ಗುಚ್ಚುಗಳಾಗಿ ಮಾರ್ಪಾಡಾಗುತ್ತವೆ. ಗಿಡಗಳು ನೇರವಾಗಿದ್ದು ತುದಿಯಲ್ಲಿ ಮೊನಚಾಗಿರುತ್ತವೆ ಮತ್ತು ಗಿಡದ ಎತ್ತರ ಕಡಿಮೆಯಗುತ್ತದೆ. ರೋಗ ತಗುಲಿದ ಗಿಡದಲ್ಲಿ ಕೆಲವೇ ಸಣ್ಣ ಮತ್ತು ಉದ್ದನೆಯ ಹಣ್ಣುಗಳು ಬರುತ್ತವೆ ಮತ್ತು ಅವುಗಳ ಮೇಲೆ ಮೊಸಾಯಿಕ್ ಅಥವಾ ಉಂಗುರದ ಚುಕ್ಕೆಗಳು ಕಾಣಿಸುತ್ತವೆ. 

ರೋಗಾಣು: ಉಂಗುರ ಚುಕ್ಕೆ ಮೊಸಾಯಿಕ್ ನಂಜಾಣುವು  ಗಿಡದಿಂದ ಗಿಡಕೆ ಮತ್ತು ಒಂದು ತೋಟದಿಂದ ಇನ್ನೊಂದು ತೋಟಕ್ಕೆ ರೆಕ್ಕೆವುಳ್ಳ ಹೇನುಗಳ ಮುಖಾಂತರ ಮತ್ತು ಸಲಕರಣೆಗಳ ಮುಖಾಂತರವೂ ಪ್ರಸಾರವಾಗಬಹುದಾಗಿದೆ.  ಈ ಹೇನುಗಳಿಗೆ ಪಪಾಯವು ಸೂಕ್ತವಾದ ಆಹಾರ ಒದಗಿಸುವ ಸಸ್ಯವಲ್ಲ, ಆದ್ದರಿಂದ ಯಾವುದೇ ಹೇನುಗಳಾಗಲೀ ಅಥವಾ ಹೇನಿನ ಗುಂಪಾಗಲಿ ನೋಡಲು ಸಿಗುವುದಿಲ್ಲ. ಆದರೆ ರೆಕ್ಕೆವುಳ್ಳ ಹೇನು ಆಗಾಗ್ಗೆ ಪಪ್ಪಾಯಿ ಗಿಡಕ್ಕೆ ಬೇಟಿ ಕೊಟ್ಟು ನೈಸರ್ಗಿಕವಾಗಿ ಈರೋಗವನ್ನು ಪ್ರಸಾರ ಮಾಡುತ್ತದೆ. 

೬). ಎಲೆ ಮುಟುರು ರೋಗ: ಎಲೆತೊಟ್ಟು ಮುದುಡಿ ಒರಟಾಗುತ್ತದೆ. ಎಲೆತೊಟ್ಟು ಡೊಂಕಾಗಿ ಬಾಗುತ್ತವೆ. ಗಿಡಗಳ ಬೆಳವಣಿಗೆ ಕುಂಟಿತಗೊಂಡು ಕಾಯಿಗಳು ಬಲು ಸಣ್ಣದಾಗಿರುತ್ತವೆ. ಗಿಡಗಳಲ್ಲಿ ಬಿಳಿನೊಣಗಳು ಹೆಚ್ಚಾಗಿ ಕಂಡುಬರುತ್ತವೆ

ರೋಗಾಣು: ಪಪಾಯ ಎಲೆ ಮುಟುರು ನಂಜಾಣು ರೋಗವು ಬಿಳಿ ನೊಣಗಳ ಸಹಾಯದಿಂದ ಹರಡುತ್ತದೆ.    

ನಂಜಾಣು ರೋಗಗಳ ಸಮಗ್ರನಿರ್ವಹಣೆ: ಪಪ್ಪಾಯಿ ತೋಟದ ಸುತ್ತ ಹತ್ತಿ, ಬದನೆ ಮತ್ತು ಕುಂಬಳ ಜಾತಿಯ ಬೆಳೆಗಳನ್ನು ಬೆಳೆಯಬಾರದು ಹಾಗೂ ಹಳೆಯ ಪಪಾಯ ತೋಟದ ಸಮೀಪ ಪಪ್ಪಾಯಿ ಸಸಿ ತಯಾರಿಸಬಾರದು. ರೋಗಮುಕ್ತ ಸಸಿಗಳನ್ನು ನಾಟಿಗೆ ಬಳಸಬೇಕು. ಪಪಾಯ ಸಸಿಗಳನ್ನು ೪೦-೫೦ ಮೆಶ್ ನೈಲಾನ್ ಪರದೆಯ ಅಡಿಯಲ್ಲಿ ೬೦ ದಿನ ಬೆಳೆದ ನಂತರ ಮುಸುಕಿನ ಜೋಳದ ಮಧ್ಯೆ ನಾಟಿ ಮಾಡುವುದು ಹೊಲದ ಸುತ್ತ ೨-೩ ಸಾಲು ಆಫ್ರಿಕನ್ ಟಾಲ್ ಮುಸುಕಿನ ಜೋಳವನ್ನು ತಡೆ ಬೆಳೆಯಾಗಿ ೩೦-೪೦ ದಿವಸ ಮುಂಚಿತವಾಗಿ ಬಿತ್ತಬೇಕು. ಜೂನ್‌ ಜುಲೈ ತಿಂಗಳಲ್ಲಿ ನಾಟಿ ಮಾಡುವುದರಿಂದ ರೋಗದ ಬಾಧೆ ಕಡಿಮೆಯಾಗುತ್ತದೆ.

ರೋಗರಹಿತ ಸಸಿಗಳನ್ನು ನಾಟಿಗೆ ಉಪಯೋಗಿಸುವುದು, ತೋಟದಲ್ಲಿ ನಿತ್ಯ ತಿರುಗಾಡಿ ನಂಜಾಣು ಪೀಡಿತ ಸಸಿಗಳನ್ನು ಗುರುತಿಸಿ ಕಿತ್ತು ನಾಶಪಡಿಸಬೇಕು. ಆಗಾಗ್ಗೆ ಕೀಟನಾಶಕಗಳ ಬದಲಿಗೆ, ಶೇ. ೫ ರ ಬೇವಿನ ಬೀಜದ ಕಷಾಯ ಸಿಂಪಡಿಸುವುದು (೧೫ ಕಿ. ಗ್ರಾಂ ಬೇವಿನ ಬೀಜವನ್ನು ಪುಡಿಮಾಡಿ ಅರಿವೆಯಲ್ಲಿ ಕಟ್ಟಿ ನೀರಿನಲ್ಲಿ ೧೦ ತಾಸು ನೆನೆಸಿ, ಕಿವುಚಿ, ಸೋಸಿಬಂದ ದ್ರಾವಣವನ್ನು ೩೦೦ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು). ಈ ಸಿಂಪರಣೆಗೆ ೧೦ ಗ್ರಾಂ ಸಾಬೂನಿನ ಪುಡಿ ಬಳಸಿದರೆ ಉತ್ತಮ. ಇದರ ಬದಲಾಗಿ ೧೫೦೦ ಪಿ.ಪಿ.ಎಮ್ ಅಜಾರಡಿಕ್ಟಿನ್ ಬೇವು ಮೂಲದ ಕೀಟನಾಶಕವನ್ನು ೨ ಮಿ.ಲೀ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.  ಕೀಟನಾಶಕಗಳ ಜೊತೆ ಶೇ. ೧ ರ ಬೇವಿನ ಎಣ್ಣೆ/ ಶೇಂಗಾ ಎಣ್ಣೆ (೧೦ ಮಿ.ಲೀ./ ಲೀಟರ್ ನೀರಿಗೆ) ಸಿಂಡಿಸುವುದರಿಂದ ನಂಜಾಣು ಪ್ರಸಾರ ತಡೆಗಟ್ಟಬಹುದು.

(ಮುಗಿಯಿತು) 

ಚಿತ್ರ ೧: ಉಂಗುರ ಚುಕ್ಕೆ ರೋಗ

ಚಿತ್ರ ೨: ಎಲೆ ಮುರುಟು ರೋಗ

ಚಿತ್ರಗಳು ಮತ್ತು ಮಾಹಿತಿ  ಕಾವ್ಯಶ್ರೀ ಎಂ. ಸಿ, ಡಾ. ಹನುಮಂತಪ್ಪ ಎಂ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ.