ಪಪ್ಪಾಯಿ ಹಣ್ಣಿನ ಹಲ್ವ
ಹಣ್ಣಾದ ಹದಗಾತ್ರದ ಪಪ್ಪಾಯಿ ಹಣ್ಣು ೧, ಟೊಮೆಟೊ ೩-೪, ಹಾಲು ೨ ಕಪ್, ಸಕ್ಕರೆ ೨ ಕಪ್, ತುಪ್ಪ ೧/೨ ಕಪ್, ಏಲಕ್ಕಿ ಹುಡಿ ಸ್ವಲ್ಪ
ಚೆನ್ನಾಗಿ ಹಣ್ಣಾದ ಪಪ್ಪಾಯಿಯ ಸಿಪ್ಪೆ ಮತ್ತು ಬೀಜವನ್ನು ತೆಗೆದು ಸಣ್ಣ ಸಣ್ಣ ಹೋಳುಗಳಾಗಿ ತುಂಡರಿಸಿ. ಅದರ ಜೊತೆ ಹಾಲು ಬೆರೆಸಿ ಒಲೆಯ ಮೇಲಿಟ್ಟು ತುಸು ಮೆದುವಾಗುವವರೆಗೆ ಬೇಯಿಸಿ. ಅದನ್ನು ನುಣ್ಣಗೆ ಮಿಕ್ಸಿಯಲ್ಲಿ ರುಬ್ಬಿರಿ. ನಂತರ ಟೊಮೆಟೊ ಹಣ್ಣನ್ನು ಮಿಕ್ಸಿಗೆ ಹಾಕಿ ರಸವನ್ನು ತೆಗೆದು ಇಟ್ಟುಕೊಂಡಿರಿ. ನಂತರ ಬಾಣಲೆಗೆ ರುಬ್ಬಿದ ಮಿಶ್ರಣ ಮತ್ತು ಟೊಮೆಟೋ ರಸವನ್ನು ಜೊತೆಯಾಗಿ ಹಾಕಿ ಕಲಡಿಸಿ. ಅದಕ್ಕೆ ಸಕ್ಕರೆಯನ್ನು ಸೇರಿಸಿ. ಹದವಾದ ಉರಿಯ ಮೇಲೆ ಈ ಮಿಶ್ರಣ ತಳ ಹಿಡಿಯದಂತೆ ಕಲಡಿಸುತ್ತಾ ಇರಬೇಕು. ಸರಿಯಾಗಿ ಬೆಂದು ಮುದ್ದೆಯಾಗುವ ಸಮಯದಲ್ಲಿ ತುಪ್ಪ ಬೆರೆಸಿ ಇನ್ನಷ್ಟು ಮಗುಚಿರಿ. ಸ್ವಲ್ಪ ಹಲ್ವವನ್ನು ಒಂದು ಸಣ್ಣ ಪ್ಲೇಟಿಗೆ ಹಾಕಿ, ತಣಿದ ನಂತರ ಅದು ಬೆರಳಿಗೆ ಅಂಟುವುದೋ ಎಂದು ಗಮನಿಸಿ. ಅಂಟದೇ ಹೋದರೆ ಏಲಕ್ಕಿ ಬೆರೆಸಿ ಒಲೆಯಿಂದ ಕೆಳಗಿಳಿಸಿ. ಅದನ್ನು ಬೌಲ್ ನಲ್ಲಿ ಹಾಕಿ ಕ್ಯಾರೆಟ್ ಹಲ್ವದಂತೆ ತಿನ್ನಬಹುದು. ಸ್ವಲ್ಪ ಗಟ್ಟಿ ಆದರೆ ಅದನ್ನು ತುಪ್ಪ ಸವರಿದ ಬಟ್ಟಲಿಗೆ ಹಾಕಿ ಬರ್ಫಿಯಂತೆ ಕತ್ತರಿಸಿಯೂ ತಿನ್ನಬಹುದು. (ಕೆಲವು ಜಾತಿಯ ಪಪ್ಪಾಯಿಯ ಗುಣ ಲಕ್ಷಣದಿಂದ ಕೆಲವು ಸಲ ಮಿಶ್ರಣ ಗಟ್ಟಿಯಾಗುವುದಿಲ್ಲ)
ಮಾವಿನ ಹಣ್ಣಿನ ಸಮಯದಲ್ಲಿ ಟೊಮೆಟೊ ಬದಲು ಮಾವಿನ ಹಣ್ಣಿನ ರಸವನ್ನು ಬಳಸಿದರೆ ಹಲ್ವವು ಇನ್ನಷ್ಟು ರುಚಿಕರವಾಗಿರುತ್ತದೆ.