ಪಬ್ಬು ಹಬ್ಬಿಸಿದ ಗಬ್ಬು

ಪಬ್ಬು ಹಬ್ಬಿಸಿದ ಗಬ್ಬು

ಬರಹ

ಇತ್ತೀಚೆಗೆ ಮಂಗಳೂರಿನ ಪಬ್ ಒಂದರ ಮೇಲೆ ಸ್ವಯಂಘೋಷಿತ ದೇಶ-ಸಂಸ್ಕೃತಿ ರಕ್ಷಕರು ದಾಳಿಯಿಟ್ಟದ್ದು ಈಗ ವಿಶ್ವವೇದ್ಯ. ಅನಂತರ ಈ ಕುರಿತು ನಡೆದ ಅಸಂಖ್ಯ ಚರ್ಚೆಗಳಲ್ಲಿ ‘ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು’ ಮತ್ತು ‘ಇದು ನಮ್ಮ ವೈಯಕ್ತಿಕ ಸ್ವಾತಂತ್ರ್ಯ; ಇದನ್ನು ಯಾರೂ ಪ್ರಶ್ನಿಸತಕ್ಕದ್ದಲ್ಲ’ ಎಂಬ ಎರಡು ಸಮಾನಾಂತರ ನಿಲುವುಗಳ ನಡುವೆ ಹಲವಾರು ತರ್ಕಗಳು ಮತ್ತು ಅಭಿಪ್ರಾಯಗಳು ಮಂಡನೆಯಾದವು.

ಪಬ್ ದಾಳಿಯ ಅನಂತರ ಕರ್ನಾಟಕದ ಒಂದು ಸುದ್ದಿವಾಹಿನಿಯಲ್ಲಿ ನಡೆದ ಚರ್ಚೆ ಮತ್ತು ಜನವರಿ ದಿನಾಂಕ 31ರಂದು ಮಂಗಳೂರಿನ ಕದ್ರಿ ಉದ್ಯಾನದಲ್ಲಿ ರಾಷ್ಟ್ರಮಟ್ಟದ ಸುದ್ದಿವಾಹಿನಿಯೊಂದರ ಬೆಳಕಿನಡಿಯಲ್ಲಿ ನಡೆದ ಸಮಾವೇಶಗಳಿಗೆ ನನ್ನ ಪ್ರತಿಕ್ರಿಯೆಗಳನ್ನು ಸೀಮಿತಗೊಳಿಸುತ್ತೇನೆ.

ಕನ್ನಡ ಸುದ್ದಿವಾಹಿನಿಯ ಚರ್ಚೆಯಲ್ಲಿ ಪಾಲ್ಗೊಂಡ ಜನವಾದಿ ಮಹಿಳಾ ಸಂಘಟನೆಯ ಪದಾಧಿಕಾರಿಯವರು ಕೇಳುವ ಒಂದು ಪ್ರಶ್ನೆ `ಕಾನೂನನ್ನು ಕೈಗೆತ್ತಿಕೊಳ್ಳಲು ಇವರ್ಯಾರು?' ಹೌದಲ್ಲಾ? ಯಾಕೆ ಇವರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ?! ಏಕೆಂದರೆ ಕಾನೂನು ತನ್ನ ಕೈಗಳನ್ನು ಉಪಯೋಗಿಸದಿದ್ದರೆ ಯಾರ್ಯಾರೋ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ. ಇಡೀ ಚುನಾವಣಾ ಯಂತ್ರವನ್ನು ಶರಾಬು ಯಾಕೆ ನಿಯಂತ್ರಿಸುತ್ತದೆ ಎಂದು ಯಾವ ಕೋರ್ಟು ಕೂಡಾ ಕೇಳುವುದಿಲ್ಲ.

ಮದ್ಯದ ದೊರೆಗಳು ಯಾಕೆ ಸಂಸದ-ಶಾಸಕರಾಗುತ್ತಾರೆ, ನಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತಾರೆ, ಕ್ರಿಕೆಟ್ ತಾರೆಗಳನ್ನು, ತಂಡಗಳನ್ನು ಪ್ರಾಯೋಜಿಸುತ್ತಾರೆ, ಶರಾಬು ಗುತ್ತಿಗೆದಾರರು ಹೇಗೆ (ಯಾಕೆ) ಆಸ್ಪತ್ರೆ, ದೇವಾಲಯ, ರಕ್ತದಾನ ಶಿಬಿರಗಳನ್ನು ನಡೆಸುತ್ತಾರೆ ಎಂದು ನಾವಾಗಲಿ, ಪೋಲೀಸರಾಗಲಿ, ನಮ್ಮ ಸರಕಾರವಾಗಲಿ ಕೇಳುವುದಿಲ್ಲ. ಕುಡಿಯಲು ನೀರಿಲ್ಲದ ಈ ನಾಡಿನಲ್ಲಿ ಎಷ್ಟು ಬಾರ್‌ಗಳು, ಪಬ್‌ಗಳು ಇವೆ, ಅವುಗಳಲ್ಲಿ ಪರವಾನಗಿ ಯಾರಿಗೆಲ್ಲ, ಯಾವುದಕ್ಕೆಲ್ಲ ಇದೆ ಎಂದು ಪೋಲೀಸರಾಗಲಿ, ಅಬಕಾರಿಯವರಾಗಲಿ ಕೇಳುವುದಿಲ್ಲ. ‘ಕ್ಲಾಸಿಗೆ ಹೋಗದೆ ಪಬ್‌ಗೆ ಯಾಕೆ ಹೋದೆ’ ಎಂದು ಅಪ್ಪ-ಅಮ್ಮ ಕೇಳುವುದಿಲ್ಲ. ಕೇಳಬೇಕಾದವರು ಕೇಳದಿದ್ದಾಗ ‘ಕೇಳಬಾರದವರು’ ಕೇಳುತ್ತಾರೆ ಮತ್ತು ಅಷ್ಟೇ ಸಹಜವಾಗಿ, ಕೇಳಬಾರದ ರೀತಿಯಲ್ಲಿ ಕೇಳುತ್ತಾರೆ. (ಮಾಡಬಾರದವರು ಮಾಡಿದಾಗ ಅದು ಅಪರಾಧವಾಗುತ್ತದೆ. ಹಾಗೆಯೇ, ಅದು ಅಸಹ್ಯವೂ, ಅನಾಹುತಕಾರಿಯೂ ಆಗಿರುತ್ತದೆ. ಹಾಗೆಯೇ, ಅದು ಅಸಹ್ಯವೂ, ಅನಾಹುತಕಾರಿಯೂ ಆಗಿರುತ್ತದೆ. ಶ್ರೀರಾಮಸೇನೆಯವರು ಅಬಕಾರಿ ಕಚೇರಿಯೆದುರು ಧರಣಿ ಕೂರಲಿಲ್ಲ! ಅನಾಹುತವಾದರೆ ಜನ ರೊಚ್ಚಿಗೆದ್ದು ಬಸ್ಸಿಗೆ ಕಲ್ಲೆಸೆದು, ಬೆಂಕಿಯಿಡುತ್ತಾರೆಯೇ ವಿನಃ ದಂಧೆಯಲ್ಲಿ ನಿರತರಾಗಿರುವ ಪ್ರಾದೇಶಿಕ ಸಾರಿಗೆ ಕಚೇರಿಯವರ ವಿರುದ್ಧ ದಾವೆ ಹೂಡುವುದಿಲ್ಲ, ಅವರ ಕಚೇರಿಯ ಮುಂದೆ ಧರಣಿ ಕೂರುವುದಿಲ್ಲ!)

‘ಕಳಬೇಡ, ಕೊಲಬೇಡ’ ಎಂದು ಹೇಳಿ ಕ್ಷಣಾರ್ಧದಲ್ಲಿ ಶಿಕ್ಷೆ ಪ್ರಕಟಿಸಬಹುದಾದ ದಾವೆಗಳ ವಿಲೇವಾರಿಗೆ 3-4 ದಶಕಗಳೇ ನ್ಯಾಯಾಲಯಕ್ಕೆ ಸಾಕಾಗುವುದಿಲ್ಲ ಎಂದಾದರೆ ಏನಾಗುತ್ತದೆ? By line ಕೂಡಾ ಇಲ್ಲದೆ ವರದಿ ಮಾಡಬೇಕಾದ ಪತ್ರಕರ್ತರು ಘಟನೆಯ FIR ದಾಖಲಾಗುವ ಮುನ್ನವೇ ನ್ಯಾಯ ತೀರ್ಮಾನ ನೀಡುತ್ತಾರೆ! DJಗಳು, RJಗಳು, VJಗಳು ಶಾಂಪೂ ರೂಪದರ್ಶಿಗಳು ಸುದ್ದಿವಾಹಿನಿಯ ಕ್ಯಾಮರಾದ ಮುಂದೆ ಕೆಂಡಕಾರುತ್ತಾ ನ್ಯಾಯ ತೀರ್ಮಾನ ಕೊಡುತ್ತಾರೆ! ಹಾದಿಬೀದಿಗಳಲ್ಲಿ ಅಲೆದಾಡುವ ಗೂಂಡಾಗಳು ‘ಪಂಚಾತಿಕೆದಾರ’ರೆನಿಸಿ ಹಫ್ತಾ ವಸೂಲಿ ಮಾಡುತ್ತಾರೆ!
ಪೋಲೀಸರೇಕೆ ಕೇಳುವುದಿಲ್ಲ? ಒಂದು ಚಿಕ್ಕ ಉದಾಹರಣೆ. ನೆರೆಮನೆಯ ನನ್ನ ಸಹೋದ್ಯೋಗಿ ಊರಲ್ಲಿಲ್ಲದಿದ್ದಾಗ ಅವರ ಮನೆಯಲ್ಲಿ ಕಳ್ಳತನವಾಯಿತು. ನಾವು ಮೂವರು ದೂರು ಸಲ್ಲಿಸಲು ಠಾಣೆಗೆ ಹೋದೆವು. ‘ನೋಡಿ, ದೂರು ತೆಗೆದುಕೊಳ್ಳುತ್ತೇವೆ, ಕಳ್ಳರನ್ನು ಹಿಡಿಯುತ್ತೇವೆ ಎಂದು ಹೇಳಲಿಕ್ಕಾಗುವುದಿಲ್ಲ...ಆ ಕಾಲವೆಲ್ಲಾ ಹೋಯಿತು....ಒಬ್ಬ ಕಳ್ಳನನ್ನು ಹಿಡಿದು ತಂದರೆ ಅವನ ಪರವಾಗಿ ವಕೀಲರದ್ದು, ಎಂಪಿ, ಎಂಎಲ್‌ಎಗಳದ್ದು, ಮಂತ್ರಿಗಳದ್ದು ಎಲ್ಲರದ್ದೂ ಫೋನ್ ಬರುತ್ತದೆ; ಮಾನವ ಹಕ್ಕು ಸಂಘಟನೆಗಳು ಬರುತ್ತವೆ. ನಾನು ಸಬ್‌ಇನ್ಸ್‌ಪೆಕ್ಟರ್, ಕಳ್ಳನಿಗೆ ಕುರ್ಚಿ ಕೊಟ್ಟು, ಟೀ ಕೊಟ್ಟು ಮಾತನಾಡಿಸಬೇಕು. ಯಾರ ಬಾಯಿ ಬಿಡಿಸುವುದು ಹೇಳಿ...’ ಎಂದು ನಮ್ಮನ್ನು ಸಾಗಹಾಕಿದರು.
ಸದ್ರಿ ಕದ್ರಿ ಉದ್ಯಾನ ಸಮಾವೇಶದಲ್ಲಿ ಪಾಲ್ಗೊಂಡ ಓರ್ವ ಖ್ಯಾತ ಚಿಂತಕರು ಮಂಗಳೂರಿನ ಯಾವ್ಯಾವ ಗಲಭೆಗಳ ಸಂದರ್ಭಗಳಲ್ಲಿ ಪೋಲೀಸರು ಎಲ್ಲೆಲ್ಲಿ ಎಷ್ಟೆಷ್ಟು ಮನೆಗಳಿಗೆ ನುಗ್ಗಿ ನಗನಾಣ್ಯ ವಸ್ತು ಇತ್ಯಾದಿಗಳನ್ನು ದೋಚಿದರು ಎಂಬ ಪಟ್ಟಿ ನೀಡಿದರು. ಇಂತಹ ಹಾಸ್ಯಾಸ್ಪದ, ಕುತ್ಸಿತ ಆರೋಪಗಳನ್ನು ಎಸೆದರೆ ನಾಳೆದಿನ ನಿಮ್ಮ ಮನೆ ದರೋಡೆಯಾದರೆ ಪೋಲೀಸರು ತನಿಖೆಗೆ ಬರಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ? `ಈಗ ಮಾತನಾಡುತ್ತಿರುವ ವ್ಯಕ್ತಿ ಯಾರು' ಎಂದು ಕೇಳಿ ಅಲ್ಲಿದ್ದ ಕಾನ್‌ಸ್ಟೇಬಲ್‌ನವರ ಬಳಿ `ಅವರನ್ನು ಜಾಗ್ರತೆಯಾಗಿ ಮನೆಗೆ ಎಸ್ಕಾರ್ಟ್ ಮಾಡಿಬಿಡಿ' (ಅವರು ಪೋಲೀಸರ ಮೇಲಲ್ಲದೆ ಈ ಜಗತ್ತಿನ ಅಸಂಖ್ಯ ಜೀವಜಂತುಗಳೆಲ್ಲದರ ಮೇಲೂ ಹರಿಹಾಯ್ದಿದ್ದರು.) ಎಂದು ಆದೇಶ ನೀಡಿದ್ದು ಅಲ್ಲಿದ್ದ ಸಬ್‌ಇನ್ಸ್‌ಪೆಕ್ಟರ್ ಓರ್ವರ ಸಜ್ಜನಿಕೆಯ ಪರಮಾವಧಿ.

ಈ ಸಮಾವೇಶದ ನಡುವೆ ಓರ್ವ ಮಹಿಳೆ ಎದ್ದು ನಿಂತು `ಈ ದಾಳಿಯ ವಿರುದ್ಧ ನಮ್ಮ ನೈತಿಕ ಪ್ರತಿರೋಧ ತೋರಿಸಬೇಕು. ಅದಕ್ಕಾಗಿ ಈಗಲೇ ಆ ಬಾರ್‌ಗೆ ಹೋಗಿ ಕುಡಿಯೋಣ' ಎಂದು ವೀರಾವೇಶದಿಂದ ಕರೆ ಕೊಟ್ಟರು! ಸಮಾಜದ ಗಣ್ಯರು, ಅದರಲ್ಲೂ ಓರ್ವ ವೃದ್ಧ ತಾಯಿ, ಅಪ್ಪಣೆ ಕೊಡಿಸಿದರೆ ಪೋಲೀಸರು ಗಡಂಗು ತನಿಖೆಯ ಕೆಲಸಕ್ಕೆ ಯಾಕೆ ಹೋಗುತ್ತಾರೆ? ಆಗ ಬೇರೆ ಕೆಲಸವಿಲ್ಲದವರು ಅದಕ್ಕೆ ಮುಂದಾಗುತ್ತಾರೆ! ಹೌದಲ್ಲ? ಈ ದಾಳಿಕೋರ ಶ್ರೀರಾಮಸೇನೆ, ವಸಂತಸೇನೆಗಳ ವೀರಾಗ್ರಣಿಗಳು ಹೊಟ್ಟೆಪಾಡಿಗೆ ಏನು ಮಾಡುತ್ತಾರೆ? ಅದು ಆ ಶ್ರೀರಾಮನಿಗೂ ತಿಳಿದಿರಲಾರದು. ‘ಯಾರ್ಯಾರೋ’ ಇಂತಹ ದಾಳಿಗಳನ್ನು ಪ್ರಾಯೋಜಿಸುತ್ತಾರೆ. ಇವರ ದಿನಕಳೆಯುತ್ತದೆ. ಜೈಲು ಸೇರಿದರೆ ಧರ್ಮ, ಸಂಸ್ಕೃತಿಗಳ ಹೆಸರಲ್ಲಿ ಪುಸಲಾಯಿಸಿದವರು ನಾಪತ್ತೆ. ಕೆಮರಾ ಹಿಡಿದು ಉತ್ತೇಜಿಸಿದವರು ಕ್ಷಣಾರ್ಧದಲ್ಲಿ ಬಾವುಟ ಬದಲಿಸಿರುತ್ತಾರೆ!

ಕದ್ರಿ ಉದ್ಯಾನದ ಸಮಾವೇಶದಲ್ಲಿ ಮಾತನಾಡಿದ ಓರ್ವ ನಿವೃತ್ತ ಪೋಲೀಸ್ ಅಧಿಕಾರಿಗಳು ಪಬ್ ಮಾಲೀಕರಿಗೆ, ನೌಕರರಿಗೆ ನೀಡಿದ ಸಲಹೆ ಅಮೋಘವಾಗಿತ್ತು! `ಬಿಸಿಬಿಸಿ ಎಣ್ಣೆ ಕಾಯಿಸಿ ಇಟ್ಟುಕೊಳ್ಳಿ. ಶ್ರೀರಾಮಸೇನೆಯ ಪುಂಡರು ಬಂದರೆ ಎರಚಿ ಸುಟ್ಟುಬಿಡಿ’ ಎಂದು ಪರವಾನಗಿ ಕೊಟ್ಟರು! (ಇವರು ವೃತ್ತಿಯಲ್ಲಿದ್ದಾಗ ಏನು ಮಾಡಿದ್ದರೋ?! ಈ ಸಮಾವೇಶಕ್ಕೆ ಭದ್ರತೆ ನೀಡಲು ಬಂದ ಹತ್ತಾರು ಮಂದಿ ಪೋಲೀಸರು ಈ ಮಾತಿಗೆ ದಂಗಾಗಿ ತಲೆಚಚ್ಚಿಕೊಂಡರು.) ಓರ್ವ ಪೋಲೀಸ್ ಅಧಿಕಾರಿ ಈ ಮಾತನ್ನು ಹೇಳಬಹುದಾದರೆ ನಿಜವಾದ ಪುಂಡರೇ ಹೇಗೆ ವರ್ತಿಸಬೇಕು? ಬಾರ್ ಮಾಲೀಕರು ಕಾನೂನನ್ನು ಕೈಗೆತ್ತಿಕೊಳ್ಳಬಹುದಾದರೆ ‘ವಾನರಸೇನೆ’ ಕಾನೂನನ್ನು ಏಕೆ ಕೈಗೆತ್ತಿಕೊಳ್ಳಬಾರದು? ಇಲ್ಲಿ ಇನ್ನೊಂದು ಸತ್ಯವಿದೆ. ಅದೆಂದರೆ, ಅಬಕಾರಿಗಳು ಮತ್ತು ಪೋಲೀಸರೆಂದೂ ಪಬ್, ಬಾರ್ ಇತ್ಯಾದಿಗಳ ಪರವಾನಗಿ ಇತ್ಯಾದಿಗಳನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ ಈ ನಾಡಿನ ಕಾನೂನುಗಳೆಲ್ಲ ಪೋಲೀಸರಿಗಿಂತ ಹೆಚ್ಚಾಗಿ ಬಾರ್, ಪಬ್ ಮಾಲೀಕರ ಕೈಗಳಲ್ಲೇ ‘ಭದ್ರ’ವಾಗಿವೆ!

ಚರ್ಚೆಯಲ್ಲಿ ಪಾಲ್ಗೊಂಡ ಶ್ರೀಮತಿ ದೇಶಪಾಂಡೆಯವರು ವಾನರಸೇನೆಗೆ ‘ಪಬ್‌ಗೆ ಹೋಗಿ ಕುಡಿಯುವುದು ನಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಹಕ್ಕು. ನಿಮಗೆ ತಾಕತ್ತಿದ್ದರೆ ಇಡೀ ರಾಜ್ಯದಲ್ಲಿ ಪಾನನಿಷೇಧ ಜಾರಿಗೆ ತನ್ನಿ’ ಎಂದು ಪಂಥಾಹ್ವಾನ ನೀಡಿದರು. ಅಂದರೆ ಪಾನನಿಷೇಧವಾಗಬೇಕು. ಆಗ ಕುಡುಕರ ಸ್ವಾತಂತ್ರ್ಯಹರಣವಾಗಲಿಲ್ಲವೇ?
ಸುದ್ದಿವಾಹಿನಿ ಚರ್ಚೆಯಲ್ಲಿ ಮತ್ತು ಸಮಾವೇಶದ ಮಂಡನೆಗಳಲ್ಲಿ ವ್ಯಕ್ತವಾದ ಒಂದು ಮುಖ್ಯ ಅಭಿಪ್ರಾಯವೆಂದರೆ ‘ಪಬ್‌ಗೆ ಹೋಗಿ ಕುಡಿಯುವುದು ನನ್ನ ವೈಯಕ್ತಿಕ ಆಯ್ಕೆ ಮತ್ತು ಹಕ್ಕು; ಇದು ಸಂವಿಧಾನದತ್ತ ವ್ಯಕ್ತಿಸ್ವಾತಂತ್ರ್ಯ.’ ಸಂವಿಧಾನ ಮತ್ತು ವ್ಯಕ್ತಿಸ್ವಾತಂತ್ರ್ಯ. ಸಂವಿಧಾನ ಮತ್ತು ವ್ಯಕ್ತಿಸ್ವಾತಂತ್ರ್ಯಗಳನ್ನು ಶರಾಬು ಮತ್ತು ಮಹಿಳಾ ಶರಾಬುಸೇವನೆಗೆ ಇವರು ಗಂಟುಹಾಕಿದ್ದು ನೋಡಿದರೆ ಸಂವಿಧಾನ ಮತ್ತು ವ್ಯಕ್ತಿಸ್ವಾತಂತ್ರ್ಯ ಬಗ್ಗೆ ಇವರು ಎಷ್ಟು ಕಡಿಮೆ ತಿಳಿದುಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ‘ನಾವೇನಾದರೂ ಮಾಡಿಕೊಳ್ಳುತ್ತೇವೆ. ಅದನ್ನು ಸಂವಿಧಾನ ಒಪ್ಪಿದೆ. ಕೇಳಲು ನೀವ್ಯಾರು’ ಎಂಬುದು ಅವರ ವಾದ. (‘ನೀವ್ಯಾರು’ ಎನ್ನುವುದು ಸರಿ ಇರಬಹುದು. ಆದರೆ ‘ಏನು ಬೇಕಾದರೂ ಮಾಡುತ್ತೇನೆ’ ಎನ್ನುವುದು ಸರಿಯಿರಲಾರದು.) ಸಂವಿಧಾನ ಮತ್ತು ಸಂವಿಧಾನ ಒಪ್ಪಿದ ಅಪರಾಧ ಸಂಹಿತೆ ಮತ್ತು ವೈದ್ಯಶಾಸ್ತ್ರಗಳು ಶರಾಬುಕುಡಿತವನ್ನು ವ್ಯಕ್ತಿಸ್ವಾತಂತ್ರ್ಯವೆಂದು ಪರಿಗಣಿಸಿಲ್ಲ. ಅವೆರಡೂ ಕುಡಿತವನ್ನು ಗೀಳು, ವ್ಯಸನ ಮತ್ತು ರೋಗ ಎಂದು ಪರಿಗಣಿಸಿವೆಯೇ ವಿನಃ ಸಂಸ್ಕೃತಿ, ಆಧುನಿಕತೆ, ಪ್ರಗತಿಶೀಲತೆ ಎಂದೇನೂ ಪರಿಗಣಿಸಿಲ್ಲ. (ದುರಂತವೆಂದರೆ ದಾಳಿಗೊಳಗಾದ ಮಂಗಳೂರಿನ ಪಬ್ ಪ್ರಭಾವಶಾಲಿಗಳಾದ ವೈದ್ಯರಿಗೆ ‘ಸಂಬಂಧಿ’ಸಿದ್ದು!) ಧೂಮಪಾನ ಮತ್ತು ಮದ್ಯಪಾನ ವ್ಯಸನ ನಿವಾರಣೆಗೆ ಸಂವಿಧಾನಮಾನ್ಯ ಸರಕಾರ (ರಾಜಕೀಯ ಪಕ್ಷವೆಂದರೆ ಸರಕಾರವಲ್ಲ) ಅಗಾಧ ಪ್ರಮಾಣದ ಹಣವನ್ನು ವ್ಯಯಿಸುತ್ತದೆ. ಅಂದರೆ ಇವರು ವ್ಯಕ್ತಿಸ್ವಾತಂತ್ರ್ಯ ಎಂದು ಸಮರ್ಥಿಸುವ ಕುಡುಕತನವನ್ನು ಗುಣಪಡಿಸಲು ಅದ್ಯಾವ ವ್ಯಸನಗಳಿಲ್ಲದ ಬಡತೆರಿಗೆದಾರನಾದ ನನ್ನ ಹಣವೂ ಸಂದಾಯವಾಗುತ್ತದೆ. ಏಕೆಂದರೆ ನಮ್ಮ ಸಂವಿಧಾನವನ್ನು ರಚಿಸಿದವರು ಮೂರ್ಖರಲ್ಲ. ವ್ಯಸನವನ್ನು, ವ್ಯಸನಿಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ.

ಪ್ರಾಣ ನನ್ನದೆಂದುಕೊಂಡರೂ ‘ಆತ್ಮಹತ್ಯೆ’ ನನ್ನ ವ್ಯಕ್ತಿಸ್ವಾತಂತ್ರ್ಯವಲ್ಲ; ಅದು ಅಪರಾಧ. ಆತ್ಮಹತ್ಯೆಯಲ್ಲಿ ಅವನ ಅಪರಾಧವೆಂದರೆ ಶಿಕ್ಷೆಗಾಗಿ ಎಂದೇನೂ ಅರ್ಥವಲ್ಲ. ತನಿಖೆಯ ಕೇಂದ್ರಬಿಂದು ಆತ. ಅವನ ಆತ್ಮಹತ್ಯೆಗೆ ಕೌಟುಂಬಿಕ, ಸಾಮಾಜಿಕ ಕುಮ್ಮಕ್ಕುಗಳಿರಬಹುದು. ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ಬಂದದ್ದಕ್ಕೆ ಸಿಗರೇಟ್ ರೂಪದರ್ಶಿಗಳ ಮೇಲೆ ದಾವೆ ಹೂಡಿದ, ಆ ದಾವೆಯನ್ನು ಕೋರ್ಟ್ ಮಾನ್ಯ ಮಾಡಿದ ನಿದರ್ಶನಗಳಿವೆ. (ನಮ್ಮಲ್ಲಿ ಅಲ್ಲ, ವಿದೇಶಗಳಲ್ಲಿ.) ವ್ಯಕ್ತಿಸ್ವಾತಂತ್ರ್ಯಕ್ಕೆ ಸಾಮಾಜಿಕ ಆಯಾಮವಿದೆ.

ಇಡೀ ತಿಕ್ಕಾಟದಲ್ಲಿ ಭಯಹುಟ್ಟಿಸುವ ಲಕ್ಷಣವೆಂದರೆ ‘ನಾವು ಕುಡಿಯುತ್ತೇವೆ, ಏನು ಬೇಕಾದರೂ ಮಾಡುತ್ತೇವೆ; ಅದು ನಮ್ಮ ಹಕ್ಕು, ಆಯ್ಕೆ, ವ್ಯಕ್ತಿಸ್ವಾತಂತ್ರ್ಯ’ ಎಂಬ ಧಾರ್ಷ್ಟ್ಯ. ಇನ್ನೊಂದು, ಸುದ್ದಿವಾಹಿನಿ ಚರ್ಚೆಯಲ್ಲಿ ಪಾಲ್ಗೊಂಡ ಶ್ರೀರಾಮಸೇನೆಯ ನೇತಾರನ ತಣ್ಣಗಿನ ಮುಖಭಾವ. ‘ಇದೇ ಸರಿಯಾದ, ಸಂವಿಧಾನಬದ್ಧ ಮಾರ್ಗ. ಈ ಮಾರ್ಗದಲ್ಲಿಯೇ ನಮ್ಮ ಸಂಸ್ಕೃತಿಯನ್ನು, ಮಹಿಳೆಯರ ಮಾನ ಮರ್ಯಾದೆಗಳನ್ನು ಉಳಿಸಿಕೊಳ್ಳುತ್ತೇವೆ’ ಎಂಬ ಹಠ. ಇವೆರಡು, ನಮ್ಮ ನೈತಿಕ ಮತ್ತು ಕಾನೂನುಪಾಲನಾ ಸಂಸ್ಥೆಗಳು ನಿಷ್ಕ್ರಿಯವಾಗಿವೆ ಎಂಬುದನ್ನು ತೋರಿಸುತ್ತವೆ. ಪೊಗರಿನಲ್ಲಿ ಇಬ್ಬರೂ ಸಮಾನರು.

ಕದ್ರಿ ಸಮಾವೇಶವು (ಅಂತೆಯೇ ಇನ್ನು ಹಲವು) ಕೊನೆಗೂ ‘ನಮ್ಮ ಮಕ್ಕಳು ಕುಡಿಯುತ್ತಾರೆ, ಏನಾಯ್ತೀಗ?’ ಎಂದು ಕೇಳುವ ಪಾಲಕರ ಸಮ್ಮೇಳನವಾಯಿತೇ ವಿನಃ ಸಾಂವಿಧಾನಿಕ ಯಂತ್ರಗಳು ನಿಷ್ಕ್ರಿಯವಾಗಿ ಅವುಗಳ ಜಾಗವನ್ನು ಅನಾಮಧೇಯ, ಬೇಜವಾಬ್ದಾರ ಸಂಘಟನೆಗಳು ಆಕ್ರಮಿಸಿಕೊಳ್ಳುವಂತಾಗದಿರಲು ಸಾಮಾಜಿಕ, ನೈತಿಕ ಹೊಣೆಗಾರಿಕೆ ಬಲಗೊಳ್ಳಬೇಕು ಎಂಬ ಅಭಿಪ್ರಾಯ ಮೂಡಿಬರಲಿಲ್ಲ. ಮಹಿಳೆಯರ ಕುಡುಕತನದ ಸಮರ್ಥನೆಯಾಯಿತೇ ವಿನಃ ಕುಡುಕತನದಿಂದ ಅವೆಷ್ಟು ಸಂಸಾರಗಳು ನಾಶವಾಗಿವೆ, ಪತಿಯ, ತಂದೆಯ, ಅಣ್ಣತಮ್ಮಂದಿರ, ಮಕ್ಕಳ ಕುಡಿತದಿಂದ ಅದೆಷ್ಟು ಮಂದಿ ಹೆಂಗಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮದುವೆಯಾಗದೆ ಅಥವಾ ಗಂಡನಿದ್ದೂ ಮುಂಡೆಯಾಗಿ ಮಾನಸಿಕ ರೋಗಿಗಳಾಗಿದ್ದಾರೆ, ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ, ಮಕ್ಕಳು ಉಡಲು, ಉಣ್ಣಲು ಇಲ್ಲದೆ ನವೆಯುತ್ತಿದ್ದಾರೆ...ಎಂಬ ಅರಿವು ಮತ್ತು ಪರಿಜ್ಞಾನ ಮೂಡಲಿಲ್ಲ. ಏಕೆಂದರೆ ಕರಾವಳಿಯಲ್ಲಿ ಅಂತಹ ಸಾವಿರಾರು ಮನೆಗಳ ಓಣಿಗಳು ಬಲು ಕಿರಿದು. ಅಲ್ಲಿಗೆಲ್ಲಾ 24x7 ವಾಹಿನಿಗಳ ಮಜಬೂತು ವಾಹನಗಳು ಪ್ರವೇಶಿಸುವುದಿಲ್ಲ. ಆ ಮನೆಗಳ ಪಕ್ಕದಲ್ಲಿ ಉದ್ಯಾನಗಳಿರುವುದಿಲ್ಲ, ಪಬ್ಬುಗಳಿರುವುದಿಲ್ಲ. (ದೆಹಲಿಯಿಂದ ಬಂದ ಮಹಿಳಾ ಆಯೋಗ ತಮ್ಮನ್ನು ಸಮರ್ಥಿಸಲಿಲ್ಲ ಎಂದು ಹರಿಹಾಯ್ದದ್ದು ಬೇರೆ.) ಪಬ್‌ನ ಶರಾಬಿನಲ್ಲಿ ವಿವಿಧ ಸಂಘಟನೆಗಳು, ಸುದ್ದಿವಾಹಿನಿಗಳು, ರಾಜಕೀಯ ಪಕ್ಷಗಳು, ಪುಡಿನೇತಾರರು ತಮ್ಮ ಬೇಳೆ ಬೇಯಿಸಿಕೊಂಡರು. ಅದನ್ನು ತಿನ್ನಬೇಕಾದವರು ನಾವು. ಅಮ್ನೇಸಿಯಾ ಪಬ್ ಅಲ್ಲ, ಇದು social amnesia; ಸಾಮಾಜಿಕ ಮತಿ ನಿಷ್ಕ್ರಿಯತೆ.

(ಉದಯವಾಣಿ ದಿನಪತ್ರಿಕೆಯಲ್ಲಿ ದಿನಾಂಕ 2-2-2009 ರಂದು ಪ್ರಕಟವಾದ ಲೇಖನ)