ಪಯಣದ ಮಧ್ಯೆ ಸಿಕ್ಕ ಮಾದರಿ ತೋಟ
ಹಲವು ಬಾರಿ, ಬಸ್ ರೈಲ್ವೆ, ಕಾರು ಮೂಲಕ ಪ್ರಯಾಣದ ಮಧ್ಯೆ ಸುಂದರ, ಕೃಷಿ ಕ್ಷೇತ್ರ, ನದಿ, ಬೆಟ್ಟ, ಗುಡ್ಡಗಳನ್ನು ನೋಡುತ್ತ ಸಾಗುತ್ತಿರುತ್ತೇವೆ. ಅದು ಕೆಲ ದೂರದವರೆಗೆ ಮನಕ್ಕೆ ತಂಪು ಎರಚುತ್ತಿರುತ್ತದೆ. ಕೆಲವನ್ನಾದರೂ ಪ್ರತ್ಯಕ್ಷ ವೀಕ್ಷಣೆ ಮಾಡುವುದುಂಟು. ಅಂತವುಗಳಲ್ಲಿ ಒಂದಾದ ಸುಂದರ ಅಡಿಕೆ ಜೊತೆ ಕಾಳುಮೆಣಸಿನ ತೋಟ. ಇದು ಕಾಣಸಿಗುವುದು ಎಲ್ಲಿ ಗೊತ್ತಾ? ಉತ್ತರ ಕನ್ನಡ ಜಿಲ್ಲೆಯ, ಶಿರಸಿ ಮತ್ತು ಯಲ್ಲಾಪುರ ರಸ್ತೆಯ ಮದ್ಯೆ ಇರುವ “ಚವತ್ತಿ” ಎಂಬ ಊರು. ಹಾಗಾದರೆ ಇದರ ಮಹಿಮೆ ಎನು? ನೋಡೋಣ.
ಇತ್ತಿಚಿಗೆ ಹೊನ್ನಾವರದ ಮಾಗೋಡು ಊರಿನ ನನ್ನ ಕೃಷಿ ಮಿತ್ರರು ಧಾರವಾಡದ ಕೃಷಿ ಮೇಳ ನೋಡಿ ನಿಮ್ಮ ಊರಿನ ಮೂಲಕ ಮರಳುತ್ತಿದ್ದೇವೆ. ಈ ಮಧ್ಯೆ, ಸ್ವಲ್ಪ ಬಿಡುವು ಇದೆ. ಪ್ರಗತಿ ಪರ ರೈತರ ತೋಟ ನೋಡಬೇಕು ಎನ್ನುವ ವಿನಂತಿಗೆ ಸ್ಪಂದಿಸಿದೆ. ಆಗ ನೆನೆಪಾದದ್ದು, ಚವತ್ತಿಯ ಸುಧೀರ ಬಲಸೆಯವರ ಅಡಿಕೆ ತೋಟ.
ಸುಮಾರು ೫೦೦೦ ಅಡಿಕೆ ಮರ-ಗಿಡಗಳಿವೆ, ಎಲ್ಲವಕ್ಕೂ ಕಾಳುಮೆಣಸಿನ ಬಳ್ಳಿಗಳಿವೆ. ಭೂಗತ ಬಸಿಕಾಲುವೆಗಳನ್ನು ಮಾಡಲಾಗಿದೆ, ಜೊತೆಗೆ, ಕಾಳು ಮೆಣಸಿನ ಬೇಸಾಯಕ್ಕೆ ಸಹಕಾರಿಯಗಲಿ ಎನ್ನುವ ದೃಷ್ಠಿಯಲ್ಲಿ, ತೆರೆದ ಕಾಲುವೆ ಇದೆ. ಈ ಕುರಿತಾದ ನನ್ನ ಮಿತ್ರರು ಕೇಳಿದ ಪ್ರಶ್ನೆಗಳಿಗೆ ಬಲಸೆಯವರು ಉತ್ತರಿಸಿದ್ದು ಹೀಗಿತ್ತು.
“ನನ್ನ ತಂದೆಯವರ ಕಾಲದಿಂದ ೫ ಎಕರೆ ತೋಟಗಳಲ್ಲಿ ಅಲ್ಲಲ್ಲಿ ಕಾಳುಮೆಣಸು ಇತ್ತು. ಅದನ್ನೆ ವಿಸ್ತರಿಸಲಾಗಿದೆ. ೫ ವರ್ಷದ ಹಿಂದೆ ಮೆಣಸಿಗೆ ಉತ್ತಮ ದರ ಬಂತು. ಜೊತೆಗೆ ಉನ್ನತ ವಿಧ್ಯಾಭ್ಯಾಸ ಮುಗಿಸಿ ಬಂದ ನನ್ನ ಮಗ ಗೌರವ ಈ ಎಲ್ಲಾ ೮ ಎಕರೆ ತೋಟದ ಬೆನ್ನೆಲುಬಾಗಿ ನಿಂತಿರುವುದು, ಮರೆಯುವಂತಿಲ್ಲ. ನಮ್ಮ ಸುತ್ತಲಿನ ಕಾಳುಮೆಣಸು ಬೆಳೆಸಿದ ರೈತರ ಸಾಹಸವನ್ನು ಗಮನಿಸಿದೆವು. ಹಂತ ಹಂತವಾಗಿ ನಮ್ಮ ಎಲ್ಲಾ ತೋಟಗಳಿಗೂ ಕಾಳುಮೆಣಸಿನ ಬಳ್ಳಿ ಬೆಳೆಸುವಲ್ಲಿ ಸಫಲರಾಗಿದ್ದೇವೆ. ಈಗ ಇವುಗಳಿಂದ ಹೆಚ್ಚಿನ ಇಳುವರಿ ಪಡೆಯುವದು, ರೋಗದ ಬಾಧೆ ಕಡಿಮೆ ಇರಬೇಕೆನ್ನುವ ಸಾಗುವಳಿ ಬಯಕೆಯಲ್ಲಿ ಸಾಗಿದ್ದೇವೆ. ” ಎಂದು ಹೇಳುತ್ತ ತೋಟ ಸುತ್ತು ಹಾಕಿಸಿದರು. ಕಾಳುಮೆಣಸಿನ ಬೇಸಾಯದ ಕುರಿತಾದ ಹೆಚ್ಚಿನ ಮಾಹಿತಿ ಕೇಳಲಾಗಿ, ಅವರ ಅನುಭವದ ಧ್ವನಿಯಲ್ಲಿ ಆಲಿಸೋಣ.
* ರೋಗ ರಹಿತ ನರ್ಸರಿ ಗಿಡಗಳನ್ನು ತರುವುದು. ಒಂದು ಕೊಟ್ಟಯಲ್ಲಿ ೩, ೪ ಕಟಿಂಗ್ಸ್ ಇರಬೇಕು. ಹೆಚ್ಚಿನವು ಪಣಿಯೂರು ತಳಿ ಆಗಿರುತ್ತದೆ.
* ಅಡಿಕೆ ಮರದಿಂದ ೧.೫ ಅಡಿ(೨ ಪಾದ) ದೂರದಲ್ಲಿ ೧.೫ ಅಡಿ ಅಗಲ ಘಿ ೧ ಅಡಿ ಆಳದ ಗುಂಡಿ ತೋಡಿ ನೆಡುವುದು.
* ಪ್ರತಿ ಅಡಿಕೆಮರದ ೨ ವಿರುದ್ದ ದಿಕ್ಕಿನಲ್ಲಿ ೨ ಕುಣಿ ತೆಗೆಯುವದು. ಈ ಕುಣಿಗೆ ೩ ಕಿಲೋ ಮಾರುಕಟ್ಟೆಯಲ್ಲಿ ಸಿಗುವ ಸಾವಯವ ಗೊಬ್ಬರ ಮತ್ತು ಹೊಸ ಮಣ್ಣು ಹಾಗೂ ೨೦ ಗ್ರಾಮ್ ತಿಮೇಟ್ ಹಾಕಿ ಜೂನ್ ತಿಂಗಳಲ್ಲಿ ನೆಡಲಾಗುವುದು.
ಬಳ್ಳಿಗಳನ್ನು ನೆಟ್ಟ ೧ ವರ್ಷ ದವರೆಗೆ ೪ ಅಡಿ ಉದ್ದದ ಅಡಿಕೆ ದಬ್ಬೆಯನ್ನು ರಕ್ಷಣೆಗಾಗಿ ಒರೆಯಾಗಿ ನಿಲ್ಲಿಸಲಾಗುವುದು.
ಮತ್ತು ಪ್ರತಿ ತಿಂಗಳೂ ಹೆಚ್ಚಿನ ಅರೈಕೆ ಮಾಡುತ್ತೇವೆ..
* ೩ ನೇ ವರ್ಷಕ್ಕೆ ಇಳುವರಿ ಪ್ರಾರಂಭವಾಗಿದೆ. ಜೂನ್ ತಿಂಗಳಿನಲ್ಲಿ ಹೆಚ್ಚಿನ ಎಲ್ಲಾ ಬಳ್ಳಿಗಳು ಚಿಗುರುತ್ತದೆ. ಈ ಭಾಗವನ್ನು ಬೋರ್ಡೊ ದ್ರಾವಣದ ಸ್ಪ್ರೇ ಮಾಡುವುದು.
* ವರ್ಷಕ್ಕೆ ೨ ಬಾರಿ ರಾಸಾಯನಿಕ ಗೊಬ್ಬರ (ಎನ್ ೧೦೦:ಪಿ ೪೦: ಕೆ ೧೪೦ರಂತೆ ) ಅಡಿಕೆ ಹಾಗೂ ಮೇಣಸು ಬಳ್ಳಿಗಳಿಗೆ ಪ್ರತ್ಯೇಕವಾಗಿಯೇ ನೀಡುವುದು. ಪ್ರತಿ ಬಾರಿ ಈ ಎರಡು ಸೇರಿದಾಗ ಸುಮಾರು ೭೦೦ ಗ್ರಾಂ ಆಗುತ್ತದೆ.
* ಇದಲ್ಲದೇ ಮಾರುಕಟ್ಟೆಯಲ್ಲಿ ಸಿಗುವ ೪ ಕಿಲೊ ಸಾವಯವ ಗೊಬ್ಬರವನ್ನು ಸಹ ಅಡಿಕೆ ಮರದ ಸುತ್ತ ಜೂಲೈ ತಿಂಗಳಲ್ಲಿ ಹಾಕುವುದು.
ಪ್ರತಿ ತಿಂಗಳು ಆರೈಕೆಯ ಪಟ್ಟಿ ಸ್ವಲ್ಪ ಉದ್ದ ಇದೆ. ಪೋಲಿಯರ್ ಸ್ಪ್ರೇ, ಹಾರ್ಮೋನ್ ಸ್ಪ್ರೇ, ಪೆಪ್ಪರ್ ಸ್ಪೆಶಲ್ ಸ್ಪ್ರೇ, ಬೋರ್ಡೊ ಸ್ಪ್ರೇ, ಈ ಎಲ್ಲವೂ ಆಯಾ ಕಾಲಕ್ಕೆ ತಜ್ಞರ ಸಲಹೆ ಮೆರೆಗೆ ಮಾಡಲಾಗುತ್ತದೆ.
ಪ್ರತಿ ವರ್ಷ ೧ ಕಿಲೋ ಡೈನಮೈಟ್ ಸುಣ್ಣವನ್ನು ಅಡಿಕೆ ಮರದ ಸುತ್ತ ಜೂನ್ ತಿಂಗಳಲ್ಲಿ ಹಾಕುವುದು. ಈ ವರ್ಷ ಹೆಚ್ಚು ಮಳೆಯಾದ ಕಾರಣ ಪುನಃ ಎರಡನೇ ಬಾರಿ ಈಗ ನೀಡಲಾಗಿದೆ. ಬಳ್ಳಿ ಕಟ್ನ ಪ್ರತಿ ವರ್ಷದ ಅರೈಕೆಯಲ್ಲಿ ಒಂದಾಗಿದೆ. ಪ್ರತಿ ಬಳ್ಳಿಯನ್ನು ೨ ಬಾರಿ ಕೊಯ್ಲು ಮಾಡಲಾಗುವುದು. ಫೆಬ್ರುವರಿ ಮತ್ತು ಮಾರ್ಚ್ ಅಂತರದಲ್ಲಿ ಮುಗಿಯುತ್ತದೆ. ಇಂದಿಗೂ ೫% ಸೊರಗುರೋಗ ಇದೆ. ಕಾರಣ ಜವಳು ಭೂಮಿಯ ೩ ಎಕರೆ ಹಳೆ ತೋಟದಲ್ಲಿದೆ.
ಅಡಿಕೆ ತೋಟದಲ್ಲಿ,ಕಾಳುಮೆಣಸಿನ ಉಪ ಬೆಳೆಯಾಗಿ ಬೆಳೆದಾಗ, ಬಾಳೆ ಕೃಷಿ ಹೊಂದಿಕೆ ಆಗುವದಿಲ್ಲ. ರಾಸಾಯನಿಕ ಗೊಬ್ಬರ ಮತ್ತು ಸಾವಯವ ಗೊಬ್ಬರ ನೀಡುವಾಗ ಅಡಿಕೆ ಮತ್ತು ಕಾಳು ಮೆಣಸಿನ ಬಳ್ಳಿಗಳ ಬುಡ ಬಿಡಿಸದೇ (ಸ್ವಚ್ಛಮಾಡದೇ) ನೀಡುತ್ತೇವೆ. ಇದರಿಂದ ಕೂಲಿ ಉಳಿತಾಯ ಆಗುತ್ತದೆ. ಮಣ್ಣಿನಲ್ಲಿ ಅಲ್ಪ-ಸ್ವಲ್ಪ ತೇವಾಂಶ ಇದ್ದರೂ ಸಾಕು.
“ ಮೆಣಸಿನ ಬಳ್ಳಿ ಕಟ್ಟಲು ಮತ್ತು ಕೊಯ್ಲು ಮತ್ತು ಸಂಸ್ಕರಣ, ಗೊಬ್ಬರ, ಇತರೆ ಎಲ್ಲಾ ಆರೈಕೆ ಸೇರಿ, ಪ್ರತಿ ಮೆಣಸಿನ ಬಳ್ಳಿಗೆ ರೂ ೨೫೦ ಖರ್ಚು ಬರುತ್ತಿದೆ. ಪ್ರತಿ ಬಳ್ಳಿಯಿಂದ ಸರಾಸರಿ ೨.೫ ಕಿಲೊ ಒಣಗಿದ್ದು ಕಾಳು ಮೆಣಸು ಫಸಲು ಇದೆ. ಇಂದಿನ ಮಾರುಕಟ್ಟೆ ದರಕ್ಕಿಂತ ೩ ಪಟ್ಟು ದರ ಸಿಕ್ಕರೆ ಬಿಳಿ ಕಾಳುಮಾಣಸು (ಬೋಳಕಾಳು) ಮಾಡಿದಾಗ ಲಾಭ ಇದೆ. ಈ ದೃಷಿಯಲ್ಲಿ ಬಿಳೆ ಕಾಳುಮೆಣಸಿನ ಉತ್ಪಾದನೆ ಮಾಡಲಾಗುತ್ತಿಲ್ಲ. ಪ್ರತಿವರ್ಷ ಎಕರೆಗೆ ೧೭ ಕ್ವಿಂಟಲ್ (೩ ವರ್ಷದ ಸರಾಸರಿ) ಚಾಲಿ ಅಡಿಕೆ ಸಿಗುತ್ತಿದೆ ” ಎನ್ನುವ ಸುಧೀರರವರ ವಿವರಣೆ, ಸಂದರ್ಶಿಸಿದವರಿಗೆ ಸ್ಪೂರ್ತಿದಾಯಕವಾಗಿತ್ತು.
ತೆರೆ ಮರೆಯಲ್ಲಿ ಕಾಯಿ ಹಣ್ಣು ಇದ್ದಹಾಗೆ, ಇವರ ಎಲ್ಲಾ ಸಾಧನೆಗೆ ಸುಧೀರ ಬಲಸೆಯವರ ಪತ್ನಿ ಸಂಗೀತಾ ಬಲಸೆ ಇವರ ಸಹಕಾರ ಇದೆ ಎಂಬದು ತಿಳಿದು ಬಂತು. ನಮ್ಮ ಸುತ್ತ-ಮುತ್ತ ಕೆಲ ಪ್ರಗತಿಪರ ರೈತರು ಇದ್ದೇ ಇರುತ್ತಾರೆ. ಇಂತವರ ಸಾಹಸವನ್ನು ನೋಡುವ ಹಂಬಲ ಹೆಚ್ಚಬೇಕಿದೆ. ಇಂತವರಿಂದ, ಕಲಿಯ ತಕ್ಕ ಆಂಶಗಳು ಬಹಳಷ್ಟಿವೆ ಎಂಬುದು ಇಲ್ಲಿ ಮುಖ್ಯ ಮತ್ತು ಗಮನಾರ್ಹ.
ಚಿತ್ರ - ಲೇಖನ: ವಿ. ನರಸಿಂಹಮೂರ್ತಿ.ಹೆಗಡೆ ಅಶೀಸರ,