ಪಯಣದ ಹಾಡುಗಳು

ಪಯಣದ ಹಾಡುಗಳು

ಕವನ

ಕ್ಷಣ ಕ್ಷಣದ ಬದುಕೆ ಹಾಡು

ಹಾಡು ಹಾಡು ಹಾ- 

ಡಾಗಿ ಸರಿವೆ ನಾ

     ಬಾಳ ಬೆಳಕ ಹಾಡು

ಎಲ್ಲೆ ಇರದೆ ನೆಲ

ಬಾನೊಳೆಲ್ಲ ಹಿಡಿ-

   ದೊಲುಮೆ ಬೆಳಕ ಜಾಡು!

 

ಎದೆ ತೆರೆದು ಸರಿಯೆ

ಒಳ ಬೆಳಕೊಳರಳಿ

   ಕ್ಷಣ ಕ್ಷಣದ ಬದುಕೆ ಹಾಡು

ಒಡಲಾಳದಲ್ಲಿ ಶ್ರುತಿ

ಹಿಡಿದು ಮೌನ ಘನ

   ಶಾಂತಿಯೊಲುಮೆ ಬೀಡು!

 

ಆ ಹಾಡ ಸೆಲೆಯೆ

ಸಂಗಾತಿ ನನಗೆ

    ಬಾಳೊಂಟಿ ಪಯಣದಲ್ಲಿ

ಕಣಿವೆ ಇರಲಿ 

ಕಾದಿರುವೆ ಬರಲಿ

   ಎದೆ ಹಾಡು ಒಲುಮೆ ಮುರಲಿ!

 

ಬಗೆ ಮಬ್ಬಿನೊಳಗೆ

ಕಳೆದೆಲ್ಲೊ ನಾನು

    ಮರ ಮರಳಿ ತಡಕುತಿರಲು

ತೋರೀತು ಹಾಡೆ

ಹುಸಿ ಮುಸುಕ ಹರಿದು

   ಚಿರ ತೆರೆದ ಬದುಕ ಬಯಲು!

 

ಚಿತ್ರ್