ಪಯಣದ ಹಾಡುಗಳು ೩

ಪಯಣದ ಹಾಡುಗಳು ೩

ಕವನ

ಹೂ ಹಸಿರೆ  ಸಿರಿಯು ಇಲ್ಲಿ

     ನಿಲ್ಲು ನಿಲ್ಲೆಲೆ ಗೆಳೆಯ!

 

ಬಣ್ಣಬಣ್ಣದ ಕನಸ

ತುಂಬಿ ಬಗೆ ಬಾನೊಳಗೆ

        ಧಾವಿಸುವ ಜೀವ ಗೆಳೆಯ!

        ಆಲಿಸಿದೊ ತೆರೆದು ಎದೆಯ!

 

ತಂದಿರುವೆನಿಂದು ನಿನಗೆ

ಪಯಣಕೀ ಒಲುಮೆಯೊಸಗೆ!

 

ತಂದಿರುವೆ ನೋಡು ನಗು

ನಗುವ ಹೂ ಗೊಂಚಲಿದು

   ದಿವದೊಲುಮೆ ಮಿಡಿವ‌ ಮುರಲಿ!

ಹಸಿರು ಹಿಗ್ಗಿನ   ಚಿಲುಮೆ

ಒಡಲೊಳರಳಿದ ಒಲುಮೆ!

   ಜೊತೆಗಿರಲಿ    ಪಯಣದಲ್ಲಿ!

 

ಬಲ್ಲೆ ಕೆಳೆಯನೆ ನಿನ್ನ

ಹೂವಿಗರಳುವ ಎದೆಯ

    ತಂದೆನದಕಾಗಿ  ನಿನಗೆ

ನೋಡು ನಲಿ ಹಾಡು ನೆಲ-

ದೆಲ್ಲ ಬದುಕರಳಿರಲಿ

    ಇದೆ ಹೂವು ಕಂಪಿನೊಸಗೆ!

 

ಹೂವಿಗೊಲಿಯುವ ಬದುಕೆ

ಹೂವಾಗಿ  ಅರಳೀತು

    ಒಲುಮೆ ಪರಿಮಳವ ಚೆಲ್ಲಿ!

ಇರವರಳಿ ನಲಿಯುತಿರೆ

ಒಲವಾಗಿ ಹರಿಯಲದೆ

    ನಲವು ನಿಜದರಿವಿನಲ್ಲಿ!

 

ಹೂವ ಕಾಣುವ ಕಣ್ಣು

ಹುಲ್ಲಿಗೂ ನಲಿವೆದೆಯು

   ಇರಲಿ ನಮಗೆಲ್ಲ ಇಲ್ಲಿ!

ಕಲ್ಲು ಮುಳ್ಳಿನ ಕಣಿವೆ

ಕೊರಕಲಲಿ ಏರಿಳಿವ

    ಬದುಕಿನೀ ಹಾದಿಯಲ್ಲಿ!

 

ಹೇಗು ಹೊರಟಿಹೆ ನೀನು

ಹಿಡಿದು ಮಣ್ಣಿನ  ದಾರಿ

    ಪಯಣವೆಲ್ಲಿಗೆಯೆ ಇರಲಿ!

ಗುರಿಯ ಸೇರುವ ಭರದಿ

ಮರೆಯದಿರು ಹಾದಿಯಲಿ

    ನಲಿವ ಹೂ ಹಸಿರು ಬಳ್ಳಿ!

 

ಜೀವ ಜೀವದ ಜಗದ

ಭಾವ ಬಳ್ಳಿಗಳರಳಿ

    ಕೋಟಿ ಬಗೆ ಬಣ್ಣಗಳಲಿ!

ಹೂ ಹೂವು ಕಂಪಿಲ್ಲಿ

ಬೇರು ಬದುಕಿನಗಾಧ

    ಅಜ್ಞಾತದಾಳದಲ್ಲಿ!

 

ಅಂತರಾಳದ ಬೆರಗು

ಬೆಳಕನರಳಿಸುವೆಲ್ಲ

    ಹೂ ಹಸಿರೆ ಸಿರಿಯು ಇಲ್ಲಿ!

ತಂದೀತು ಧನ್ಯತೆಯ

ಪುಳಕ ಪಯಣಕ್ಕೆ ಒಳ

    ಬೆಳಕಿನಲಿ ಇರವೆ ಅರಳಿ!

 

ಬಗೆಯ ಮೀರಿದ ಬೆರಗು

ಅರಳಿ ಬೆಳಕಾದೆದೆಯೆ

    ಸಂತ‌ಸದನಂತ ಬಯಲು!

ತೆರೆದೆದೆಯ ಮೌನದಲಿ

ಕಾಡು ಹಕ್ಕಿಯ ಹಾಡೆ

    ದಿವದೊಲುಮೆ ಮಿಡಿವ ಕೊಳಲು

 

ಬಾಳ ಪಯಣದೊಳಿಲ್ಲಿ

ತೆರದಿರಲು ಕ್ಷಣಕ್ಷಣವು

    ನಮ್ಮೆದೆಯ ಮೌನ ಮುರಲಿ

ಹೊಮ್ಮೀತು ಬದುಕೆ

ನಮ್ಮೊಡಲ  ಸಿರಿ ಹಾಡಾಗಿ

   ಒಲುಮೆ ಹೊಂಬೆಳಕೊಳರಳಿ!

 

ಒಲವೆ ಇದು ಈ ಹೂವು

ಹ‌ಸಿರು ಹಿಗ್ಗಿನ ಹಾಡು

    ನಿನ್ನೆದೆಯ ಮಿಡಿಯುತಿರಲಿ

ಹೆಜ್ಜೆ ಹೆಜ್ಜೆಯ ಪ್ರೀತಿ 

ಪರಿಮಳದ ಜಾಡಿನಲಿ

   ನಿತ್ಯ ನಡೆಸುತ್ತಲಿರಲಿ!

 

ಒಡಲ ಹಿಗ್ಗಿನ ಹಾಡೆ

ನಡೆಗೆ ನಯ ಲಯ ನೀಡಿ

    ಪಯಣಕ್ಕೆ ಶುಭವಾಗಲಿ!

 

   ಇದೆ ಹೂವು ಕಂಪಿನೊಸಗೆ

   ಬಾಳ ಪಯಣಕ್ಕೆ ನಮಗೆ!

   ತೆರೆದೆದೆಯ ಬೆಳಕಿನೊಳಗೆ

   ಕ್ಷಣ ಕ್ಷಣದ ನಲ್ಮೆ ನಡಿಗೆ!

    

ಚಿತ್ರ : ಅಂತರ್ಜಾಲ ತಾಣ

ಚಿತ್ರ್