ಪರಂಪರೆ-ಪ್ರವಾಹ-ಪ್ರತಿರೋಧ

ಪರಂಪರೆ-ಪ್ರವಾಹ-ಪ್ರತಿರೋಧ

ಬರಹ

ನೆರೆಯ ಕೆನ್ನೀರಿನ ಮಧ್ಯೆ ಸುಕ್ಕುಗಟ್ಟಿದ ದೇಹ
ಕೈಚಾಚಿ ಕೂಗುತಿದೆ - "ಪ್ರವಾಹ-ಪ್ರವಾಹ"!
ಇಲ್ಲ ಕರನೀಡಿ ಮರುಕ ತೋರುವವರಾರೂ!
ಹರಿದು ಹೋಗುತಿಹರೆಲ್ಲ, ಜಲಧಿಯತ್ತ - ಜಲಸಮಾಧಿಗೆ!

ಅದೇ ದೇಹ ಮತ್ತೆ ಕಾಣಿಸಿತು.... ಕಪ್ಪಗಿದೆ... ಬಡುಕಲು, ಅಶಕ್ತವಾಗಿದೆ; ನೀರಲ್ಲಿ ಮುಳುಮುಳುಗಿ ಏಳುತ್ತಿದೆ. ಇಂಥ ಪ್ರವಾಹದಲ್ಲೂ ಇನ್ನೂ ಬದುಕುವಾಸೆಯದಕ್ಕೆ... ಅರೆ.. ಅರೆ.. ಮತ್ತೆ ಕೈಯೆತ್ತಿ ಕೂಗುತ್ತಿದೆ... ಮತ್ತೆ, ಮತ್ತೆ ಮುಳುಗುತ್ತಿದೆ!

ಕೈ ನೀಡುವವರಾರು? ಅಲ್ಲಲ್ಲಿ ಕೈಕಟ್ಟಿ ನಿಂತು ನೋಡುವವರು ನಾಲ್ಕಾರು ಜನ! ಉಳಿದವರು ಕೆಂಬಣ್ಣದ ಪ್ರವಾಹದೊಂದಿಗೆ ಹರಿದು ಹೋಗಿಯಾಗಿತ್ತು; ಇನ್ನೂ ಹರಿದು ಹೋಗುವವರೂ ಇದ್ದಾರೆ - ಪಡುವಣದ ಪರಂಪರೆಯ ಪ್ರವಾಹಕ್ಕೆ ತಾವಾಗಿಯೇ ಹಾರಿ! ಯಾಕೆಂದರೆ, ನಾವು ಕರಿಯರಲ್ಲವೇ!!!? ಕೆಂಬಣ್ಣ ಮಾತ್ರ ಶ್ರೇಷ್ಠವಲ್ಲವೇ!!!? ಅದು ನಮ್ಮದಾಗಿರದಿದ್ದರೇನು? ‘ಪ್ರವಾಹವೋ, ಪ್ರಪಾತವೋ!!? ಹಾರಿಬಿಟ್ಟರಾಯ್ತು!’; ಎಂಥ ವ್ಯಂಗ್ಯ!!!

ಯಾರದು ..? ನಾನೊಮ್ಮೆ ಇಣುಕಿದೆ; ಅಸ್ಪಷ್ಟ! ಯಾವುದೋ ಶರೀರ ನೆರೆಯಿಂದ ಎದ್ದು ಬರಲು ಹೆಣಗಾಡುವಂತಿದೆ... ಅಗೋ.. ಅಲ್ಲಿ... ಮತ್ತೆ ಕೈಯೆತ್ತುತಿದೆ ಆಸರೆಯರಸಿ... ಛೇ, ಮತ್ತೆ ಮುಳುಗಿತು!!!

ಈಗ ಎದ್ದದ್ದು ಯಾರೂ ಅಲ್ಲ - ಒಂದು ನಿರಾಕಾರ ಆತ್ಮ. ನನ್ನದೋ!? ನಿಮ್ಮದೋ!?... ನಮ್ಮೆಲ್ಲರದೋ?... ಅದಕ್ಕೆ ಬರೀ ಕಣ್ಣುಗಳಿವೆ... ಅದರಲ್ಲೇ ಏನೋ ಆಸೆ... ಏನೋ ನಿರೀಕ್ಷೆಯಿಂದದು ನನ್ನೆಡೆಗೆ - ದಡದೆಡೆಗೆ ನೋಡುತ್ತಿದೆ. ಜೀವಭಯವೇ? ಆತ್ಮಕ್ಕೆಂಥ ಜೀವಭಯ???

ಮತ್ತೆ ಅದೇ ನೋಟ... ಏನೋ ಕಳೆದುಕೊಂಡವರಂತೆ; ಏನನ್ನೋ ಹುಡುಕುತ್ತಿರುವಂತೆ; ದಡದಲ್ಲಿ ಹರಡಿದ್ದ ವಿನಾಶದಳಿವುಗಳಲ್ಲಿ ತನ್ನಸ್ಥಿತ್ವವನ್ನರಸುತ್ತಿರುವಂತೆ!

ದಡದಲ್ಲಿದ್ದ ಚಿಂದಿಗಳನ್ನೆಲ್ಲ ನಾನು ಸೇರಿಸತೊಡಗಿದೆ. ತಪಿತ ಶಿಲಾಬಾಲೆ, ತೊಯ್ದ ನೂಲಿನ ಬಟ್ಟೆ, ಒಡೆದ ಗಾಜಿನ ಬಳೆ, ಮುರಿದ ಚರಕದ ಗಾಲಿ, ಉಪ್ಪಿನಕಾಯಿಯ ಭರಣಿ, ಹದಗೊಂಡ ಚರ್ಮದ ಎಕ್ಕಡ, ಒಡೆದ ಅಂಬಲಿ ಗಡಿಗೆ, ಬೆಣ್ಣೆ ಮೆತ್ತಿದ ಕೃಷ್ಣ, ಒಗ್ಗಾಲಿಯ ಬಂಡಿ... ಮತ್ತೆ ಅಲ್ಲಲ್ಲಿ, ನಮ್ಮ-ನಿಮ್ಮ ಹೃದಯದ ತುಣುಕುಗಳು.

"ನನ್ನ ಮನೆ, ನನ್ನ ಪರಂಪರೆಯ ಮನೆ", ಅದು ಕೂಗಿತು... ಮುರಿದು ಬಿದ್ದ ರೆಂಬೆಗಳ ನಡುವೆ ಒಂದು ಹಳೇ ಗುಬ್ಬಚ್ಚಿ ಗೂಡು... ಭಗ್ನವಾಗಿದೆ, ಬಿರಿದುಹೋಗಿದೆ. ಆದರೂ, ಆಸೆಯದಕೆ, - "ಯಾರಾದರೂ ಬಂದಾರು, ಮತ್ತೆ ಮನೆ ಕಟ್ಯಾರು, ಮನೆಯೊಳಗೇ ಇದ್ದಾರು".

ಕೆದಕೆದಕಿ ತೆಗೆದಂತೆ ಸಾವಿರ ಗುಬ್ಬಚ್ಚಿಗೂಡು, ಸಾವಿರ ಆತ್ಮದ ಕೂಗು, ಸಾವಿರ ಜೊತೆ ಕಣ್ಣುಗಳ ಬೆಳಗು - ನಿರೀಕ್ಷೆ, ನಿಂತಿವೆ ನೆರೆಯ ಪರಿವಿಲ್ಲದಂತೆ. ನಾನು ಮಣ್ಣುಕಲಸಿ ಮನೆಯೊಂದಕ್ಕೆ ಮೆತ್ತತೊಡಗಿದೆ. ನಿರಾಕಾರಿಯ ಕಣ್ಣುಗಳು ತುಂಬಿ ಬಂದವು... ಅದು ತಾನಾಗಿಯೇ ಮೇಲೆದ್ದಿತು.. ನೆರೆಯ ನೀರನ್ನೇ ನೆಲದಂತೆ ತುಳಿದು ನಿಂತಿತು... ನೆರೆಯೇನು ಮಾಡೀತು ನರ ಗಟ್ಟಿಯಾದಾಗ? ಮತ್ತೆ ಕೂಗಿತು - "ನಮ್ಮ ನಿಮ್ಮೆಲ್ಲರ ಪರಂಪರೆಯ ಗೂಡುಗಳಿವು. ನಾವಿದ್ದ ಮನೆಗಳಿವು- ಮರೆತುಹೋಗುವ ಮುನ್ನ ಮತ್ತೆ ಕಟ್ಟಿ; ಹರಿದುಹೋಗುವ ಮುನ್ನ ನೀವ್, ನೆರೆ ಮೆಟ್ಟಿ ನಿಲ್ಲಿ".