ಪರಕಾಯ ಪ್ರವೇಶ

ಪರಕಾಯ ಪ್ರವೇಶ

ಪುಸ್ತಕದ ಲೇಖಕ/ಕವಿಯ ಹೆಸರು
ರಾಧಾಕೃಷ್ಣ ಕಲ್ಚಾರ್
ಪ್ರಕಾಶಕರು
ಸಾಹಿತ್ಯ ಸಿಂಧು ಪ್ರಕಾಶನ, ನೃಪತುಂಗ ರಸ್ತೆ, ಬೆಂಗಳೂರು - 560001
ಪುಸ್ತಕದ ಬೆಲೆ
ರೂ. 130.00, ಮುದ್ರಣ: 2019

ಮಹಾಭಾರತ, ರಾಮಾಯಣದಲ್ಲಿ ಬರುವ ಎಷ್ಟೋ ಪಾತ್ರಗಳ ಮಧ್ಯೆ ಪ್ರಸಿದ್ದಿಯಾಗದೇ ಉಳಿದ ಪಾತ್ರಗಳು ಅವೆಷ್ಟಿವೆ.!!! ಆ ಪಾತ್ರಗಳೇ ತಾವಾಗಿ ಪ್ರತಿ ಪಾತ್ರಗಳ ತುಮುಲವನ್ನು ಲೇಖಕರು ಎಷ್ಟು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ ಎಂದರೆ ಅದನ್ನು "ಪರಕಾಯ ಪ್ರವೇಶ " ಓದಿಯೇ ತಿಳಿಯಬೇಕು. ನಾವೂ ಆ ಪಾತ್ರವಾಗಿ ಓದುವ ಆನಂದವನ್ನು, ಆಗ ಉಂಟಾಗುವ ಭಾವ ವೈವಿಧ್ಯವನ್ನು ಬಣ್ಣಿಸಲು ಅಸಾಧ್ಯ. 

ಓದುಗರೇ ಬನ್ನಿ, ನೀವೆಲ್ಲರೂ ಒಮ್ಮೆ "ರುಮಾ" ಆಗಿ ನನ್ನ ತಳಮಳವನ್ನು ತಿಳಿದುಕೊಳ್ಳಿ. ನಾನು "ರುಮಾ ". ಕಿಷ್ಕಿಂದೆಯ ವಾನರ ರಾಜ "ವಾಲಿ"ಯ ತಮ್ಮ" ಸುಗ್ರೀವ"ನ ಪತ್ನಿ. ರಾಮಾಯಣದ ಮಹಾಕಥನದಲ್ಲಿ ಕಳೆದುಹೋದವಳು. ಹಾಗೆಂದು ನಾನು ದೊಡ್ಡ ಸಾಧನೆ ಮಾಡಿದವಳಲ್ಲ. ಸುಗ್ರೀವನನ್ನು ವರಿಸಿ ಸುಖವಾಗಿದ್ದೆ.ಯಾರೋ "ಮಾಯಾವಿ" ಗಂಧರ್ವ ಕನ್ಯೆಯನ್ನು ಅಪಹರಿಸಿಕೊಂಡು ಹೋಗುವಾಗ ಅವಳನ್ನು ವಾಲಿ-ಸುಗ್ರೀವರು ರಕ್ಷಿಸಿದರು. ಮಾಯಾವಿ ಬೆದರಿ ಗವಿಯೊಳಗೆ ಪ್ರವೇಶಿಸಿದಾಗ, ನನ್ನ ಪತಿಯೂ ಗವಿಯೊಳಗೆ ನುಗ್ಗಲು ಯೋಚಿಸಿದಾಗ ತಮ್ಮನ ಮೇಲಿನ ಪ್ರೀತಿಯಿಂದ ಅವನನ್ನು ತಡೆದ ವಾಲಿ ತಾನೇ ಗವಿಯೊಳಗೆ ನುಗ್ಗಿದ. ಬಹಳ ಸಮಯದ ಬಳಿಕ ಕೇಳಿದ ಆರ್ತನಾದದಿಂದ ನನ್ನ ಪತಿ ಅಣ್ಣ ವಾಲಿ ಸತ್ತನೆಂದು ತಿಳಿದು ಕಿಷ್ಕಿಂದೆಗೆ ಓಡಿಬಂದ.

ವಾನರ ಕಟ್ಟಳೆಯಂತೆ ನನ್ನ ಪತಿ ಕಿಷ್ಕಿಂದೆಗೆ ರಾಜನಾದ. ಆದರೆ ವಾಲಿ ಯ ಪತ್ನಿ "ತಾರೆ " ಯನ್ನು ನನ್ನ ಪತಿ ಪತ್ನಿಯಾಗಿಸುವ ಅಗತ್ಯ ಇತ್ತೇ? ನಾನು ಒಳಗೊಳಗೆ ನೊಂದೆ. ಹೀಗಿರಲು ಒಂದು ದಿನ ವಾಲಿ ಕಿಷ್ಕಿಂದೆಗೆ ಮರಳಿದ. ಸುಗ್ರೀವನ ಪಕ್ಕ ಕುಳಿತ ತಾರೆಯ ಮೇಲೆ ಅವನ ದೃಷ್ಟಿ ನೆಟ್ಟಿದ್ದೇ ತಡ ಉರಿಕೆಂಡವಾಗಿ ಹೋದ. ಸುಗ್ರೀವನನ್ನು ಕಿಷ್ಕಿಂದೆಯಿಂದ ಹೊರಗಟ್ಟಿದ. ಅವನ ಮೇಲಿನ ಸೇಡನ್ನು ತೀರಿಸಿಕೊಳ್ಳುವುದಕ್ಕೆ ನನ್ನನ್ನು ಬಳಸಿಕೊಂಡ. ಸುಗ್ರೀವ ಮಾನಸಿಕ ನೋವು ಕೊಟ್ಟರೆ, ವಾಲಿ ದೈಹಿಕ ನೋವು ಕೊಟ್ಟ. ಅಯೋಧ್ಯೆಯಿಂದ ಬಂದ ರಾಮ ವಾಲಿಯನ್ನು ಕೊಂದು ಕಿಷ್ಕಿಂದೆಯನ್ನು ಸುಗ್ರೀವನಿಗೆ ಒಪ್ಪಿಸಿದ.

ಕಲ್ಲಾಗಿ ಬಿದ್ದಿದ್ದ ಅಹಲ್ಯೆಯನ್ನು ಉದ್ದರಿಸಿದ ರಾಮನ ಕಣ್ಣಿಗೆ ಜೀವಂತವಾಗಿದ್ದ ನಾನು ಕಾಣಲೇ ಇಲ್ಲ. ಈ "ರುಮೆ "ಯ ಅಳಲು ಯಾರಿಗೆ ಬೇಕು? ಯಾರಲ್ಲಿ ನನ್ನ ಅಂತರಂಗ ಹಂಚಿಕೊಳ್ಳಲಿ? ವಾಲಿ ತಾರೆಯರ ಮಗ "ಅಂಗದ "ಯುವರಾಜನಾದ ಬಳಿಕ ಅವನೂ ನನ್ನಿಂದ ದೂರವಾದ. ಹೆಣ್ಣಿಗೆ ಯಾರು ಆತ್ಮೀಯರು? ತಂದೆ? ತಾಯಿ? ಸೋದರ? ಸೋದರಿ? ಗಂಡ? ನನ್ನ ಪಾಲಿಗೆ ಮಕ್ಕಳೂ ಇಲ್ಲ. ಬಂಜೆಯಾಗಿಯೇ ಉಳಿದೆ. ನನ್ನ ಕಥೆ ಮುಗಿಯದ ಕಥೆ!ರುಮಾಳ ಕಥೆ ಕೇಳಿದಿರಷ್ಠೆ ?
ಇನ್ನು ರಾಮಾಯಣದಲ್ಲೇ ಬರುವ "ಭದ್ರ" ನ ಕಥೆ ಕೇಳುವಿರಾ? ನಾನು ಭದ್ರ ರಾಮ ಹೊರಿಸಿದಂತಹ ಹೊಣೆಯನ್ನು ಹೊತ್ತೆ. ಕೋಸಲದ ಗ್ರಾಮಗಳಲ್ಲಿ ಸುತ್ತಾಡಿ ರಾಮನ ಆಡಳಿತದ ಕುರಿತು ಜನಾಭಿಪ್ರಾಯ ಅರಿತುಕೊಂಡು ವರದಿ ಮಾಡಲು ಹೇಳಿದ್ದ. ಕ್ಷಯ ರೋಗಿ ಹಾಲು ತನಗೆ ಅಪಥ್ಯವೆಂದು ನಿಂದಿಸಿದರೆ ಹಾಲಿಗೆ ಕಳಂಕ ಉಂಟೆ? ಎಂದು ಯೋಚಿಸಿ ಕಳಂಕಿತೆ ಮೈಥಿಲಿಯನ್ನು ರಾಮನು ಸ್ವೀಕರಿಸಿದ್ದು ತಪ್ಪು ಎಂದು ಜನರಾಡುತ್ತಿದ್ದ ಮಾತನ್ನು ರಾಮನಿಗೆ ನಾನು ಹೇಳಿದ್ದು ತಪ್ಪಾಯಿತೇ?

ನನ್ನ ವರದಿಯ ಪರಿಣಾಮ ಸೀತೆಗೆ ಸಂಕಟ ತಂದೀತು ಎಂದು ನಾನೇಕೆ ಊಹಿಸಲಿಲ್ಲ?? ಒಂದು ವೇಳೆ ನಾನು ಹೇಳದಿದ್ದರೆ ನಾನು ತಿಳಿದೂ ಹೇಳಲಿಲ್ಲವೆಂಬ ಅಪರಾಧೀ ಭಾವ ನನ್ನನ್ನು ಕಾಡದೇ ಬಿಡುತ್ತಿರಲಿಲ್ಲ. ಭದ್ರ ತನ್ನಿಂದ ವಿಷಯ ಮುಚ್ಚಿಟ್ಟ ಎಂದು ರಾಮನಿಗೂ ಬೇಸರವಾಗುತ್ತಿತ್ತು.

ನನ್ನ ಮಾತನ್ನು ಆಲಿಸಿದ ರಾಮ ಸೀತೆಯನ್ನು ಪರಿತ್ಯಜಿಸಿದ. ಸೀತೆಯನ್ನು ಅಗಲಿದ ರಾಮ ನಗುವುದನ್ನು ಮರೆತ. ಕೊನೆಗೆ ಸೀತೆ ಸಿಕ್ಕಿದಳು. ಆದರೆ ಮತ್ತದೇ ಜನಾಪವಾದದ ಭೀತಿ! ಸೀತೆ ತನ್ನ ಪಾವಿತ್ರ್ಯವನ್ನು ನಿರೂಪಿಸಬೇಕೆಂದು ರಾಮ ಬಯಸಿದ. ತನ್ನ ಅಕಳಂಕ ಚಾರಿತ್ರ್ಯವನ್ನು ನಿರೂಪಿಸುವುದು ಮಾತ್ರವಲ್ಲ ಇನ್ನೊಮ್ಮೆ ತನ್ನ ಬಾಳಿನಲ್ಲಿ ಇಂತಹ ಸನ್ನಿವೇಶ ಬರಬಾರದು ಎಂದು ಭೂದೇವಿಯನ್ನು ಸೀತೆ ಪ್ರಾರ್ಥಿಸಿದಳು.

ನಾನಿನ್ನೂ ಸೀತೆಯನ್ನು ನೆನೆದು ಕಣ್ಣೀರು ಹಾಕುತ್ತಾ, ಬದುಕಿದ್ದೇನೆ.ಲೋಕಕ್ಕೆ ಬೆಳಕಾಗಿ ಬಾಳಿದ ಸೀತಾರಾಮರ ಬದುಕು ಏಕೆ ಸುಖಮಯವಾಗಲಿಲ್ಲ? ಸರಿ ತಪ್ಪುಗಳ ಅಂದೋಲನಕ್ಕೆ ಸಿಕ್ಕಿ ನನ್ನ ಮನಸ್ಸೇ ಛಿದ್ರವಾಗುತ್ತಿದೆ. ಹೇಗೆ ಈ ಮನೋವ್ಯಾಧಿಯಿಂದ ಪಾರಾಗಲಿ? ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ರಾಮನ ಕಥೆ ಮಾತ್ರವಲ್ಲ ನಮ್ಮದೂ ಉಂಟಂತೆ. ನನ್ನ ಒಳ ಸಂಕಟ ಎಲ್ಲರೂ ಅರಿತರೆ ನನಗಷ್ಟೇ ಸಾಕು.

ನಾನು "ರುರು "ಪ್ರಮತಿ ಋಷಿಯ ಕುವರ. ನನ್ನ ಮತ್ತು ಸ್ಥೂಲಕೇಶ ಮಹರ್ಷಿಗಳ ಪಾಲಿತ ಪುತ್ರಿ "ಪ್ರಮದ್ವರಾ "ವಿವಾಹಕ್ಕೆ ಕೆಲವೇ ದಿನಗಳಿರುವಾಗ ಅವಳು ಸರ್ಪ ಕಚ್ಚಿ ಸತ್ತಳು. ನಾನು ನನ್ನ ಅರ್ಧ ಆಯಸ್ಸನ್ನು ನೀಡಿ ಅವಳನ್ನು ಬದುಕಿಸಿಕೊಂಡೆ. ಆದರೆ ಸರ್ಪ ದ್ವೇಷದಿಂದ ನಾನು ಕೊಂದ ಹಾವುಗಳಿಗೆ ಲೆಕ್ಕ ಉಂಟೇ? ಇದಕ್ಕೆ ಕೊನೆ ಹೇಗಾಯಿತು.?

ನಾನು "ರಥಕಾರ ". ನನ್ನ ತಮ್ಮ ಚಿತ್ರಕ. ಜೊತೆಯಾಗಿ ರಥಗಳನ್ನ ನಿರ್ಮಿಸುವ ವೃತ್ತಿ ನಮ್ಮದು. ಚನ್ನ ಮತ್ತು ಗುಹ ನನ್ನ ಮಕ್ಕಳಾದರೆ, ಕ್ರತು ಸೇರಿ ಚಿತ್ರಕನಿಗೆ 3 ಮಕ್ಕಳು. ದೊಡ್ಡವನೇ "ಕ್ರತು". ಸಂಸಾರ ಬೆಳೆದಂತೆ ಚಿತ್ರಕ ನನ್ನಲ್ಲಿ ಪಾಲು ಕೇಳಿದ. ಕೊಡಲು ನನ್ನ ಬಳಿ ಏನೂ ಇರಲಿಲ್ಲ. ಇದರಿಂದ ಕುಪಿತನಾದ ಚಿತ್ರಕ ನನ್ನ ಕಿರಿಯ ಸೊಸೆಯನ್ನು ಅಪಹರಿಸಿದ. ಆಚಾರ್ಯ ಭೀಷ್ಮ ಪಿತಾಮಹರ ಚಕ್ರ ರಕ್ಷಕ ಭದ್ರನಿಂದ ನನ್ನ ಸೊಸೆ ಸುರಕ್ಷಿತವಾಗಿ ಮನೆಗೆ ಬಂದಳು.
"ಅಶ್ವಸೇನ" ನಾನು. ಕರ್ಣ ಮತ್ತು ಅರ್ಜುನರ ಮಧ್ಯೆ ನಿರ್ಣಾಯಕ ಹೋರಾಟ ನಡೆಯುತ್ತಿದೆ. ಈ ಯುದ್ಧದಲ್ಲಿ ನನ್ನ ಪ್ರವೇಶದ ಸಂದರ್ಭದ ನಿರೀಕ್ಷೆಯಲ್ಲಿ ನಾನು ಕಾದು ಕುಳಿತ್ತಿದ್ದೇನೆ.ಏಕೆ ಗೊತ್ತೇ? ನನ್ನ ಭೂತಕಾಲಕ್ಕೊಮ್ಮೆ ಬನ್ನಿ.

ನಾನು ಸರ್ಪರಾಜ "ತಕ್ಷಕ"ನ ಮಗ.ನಾವು ದೇವೇಂದ್ರನ ಖಾಂಡವ ವನದಲ್ಲಿದ್ದೆವು.ನನ್ನ ತಂದೆ ತಕ್ಷಕ ಮತ್ತು ದೇವೇಂದ್ರನಿಗೆ ಆತ್ಮೀಯ ಗೆಳೆತನವಿತ್ತು. ನನಗೆ ತಂದೆಯ ಸಂಪರ್ಕ ಅಷ್ಟೇನೂ ಇರಲಿಲ್ಲ. ತಾಯಿಯೇ ನನಗೆ ಹತ್ತಿರ. ಒಂದು ದಿನ ಇಂದ್ರನಿಂದ ರಕ್ಷಿತವಾದ ವನಕ್ಕೆ ಇದ್ದಕ್ಕಿದ್ದಂತೆ ಕಿಚ್ಚು ಹತ್ತಿಕೊಂಡಿತು.ನಮಗೆ ಪ್ರಾಣ ರಕ್ಷಣೆಯ ಆತಂಕ. ಸುಡುವ ಅಗ್ನಿಯೇ ಇಂದ್ರನ ಆಜ್ಞಾಪಾಲಕ. ಹಾಗಾದರೆ ಇದು ಹೇಗೆ ಸಾಧ್ಯ? ಆದರೆ ನನ್ನ ಪ್ರಶ್ನೆಗೆ ಉತ್ತರಿಸುವವರು ಯಾರು.?

ಇದ್ದಕ್ಕಿದ್ದಂತೆ ಬೆಂಕಿ ಆರತೊಡಗಿತು. ಆಗಸದಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಇದು ಇಂದ್ರನ ಆಜ್ಞೆ ಎಂದು ತಿಳಿಯಿತು. ಆದರೆ ನಮ್ಮ ಆನಂದ ಹೆಚ್ಚು ಸಮಯ ಉಳಿಯಲಿಲ್ಲ. ವನ ಪ್ರದೇಶದ ಮೇಲೆ ಬಾಣಗಳ ಚಪ್ಪರವೇ ನಿರ್ಮಾಣವಾಯಿತು. ಮಳೆಯ ಒಂದು ಹನಿಯೂ ಕೆಳಗೆ ಬೀಳದಂತೆ ಆ ಬಾಣಗಳ ಚಪ್ಪರ ತಡೆಯಿತು.

ಈಗ ತಿಳಿಯಿತು ಅಗ್ನಿದೇವನಿಗೆ ವನವನ್ನು ದಹಿಸುವುದಕ್ಕೆ ಬಾಣಗಳ ಚಪ್ಪರ ನಿರ್ಮಿಸಿ ಸಹಾಯ ಮಾಡಿದ್ದು ಅರ್ಜುನ ಎಂದು.ಇದರಿಂದ ನಾನು ಮತ್ತು ನನ್ನ ತಾಯಿ ತಪ್ಪಿಸಿಕೊಳ್ಳುವಾಗ ನನಗೆಂದು ಅರ್ಜುನ ಬಿಟ್ಟ ಬಾಣ ನನ್ನ ತಾಯಿಗೆ ತಗಲಿ ಆಕೆ ಅಸುನೀಗಿದಳು. ಆಗಿನಿಂದ ನನಗೆ ಅರ್ಜುನನ ಮೇಲೆ ದ್ವೇಷ.

ನನ್ನ ತಾಯಿಯ ದಾರುಣ ಸಾವಿನ ಸೇಡು ತೀರಿಸಿಕೊಳ್ಳುವ ಅವಕಾಶ ಈಗ ಅಂದರೆ ಅರ್ಜುನ ಕರ್ಣರ ಯುದ್ಧದ ಸಮಯದಲ್ಲಿ ಸಿಕ್ಕಿತು ನನಗೆ. ಕರ್ಣನ ಗುರುಗಳು ಅರ್ಜುನನ ವಧೆಗಾಗಿಯೇ ಕರುಣಿಸಿದ ಸರ್ಪದ ಆಕೃತಿಯ ಅಸ್ತ್ರದಲ್ಲಿ ಹೋಗಿ ನಾನು ಕುಳಿತಿದ್ದೆ.ಕರ್ಣ ಬತ್ತಳಿಕೆಯಿಂದ ನನ್ನನ್ನು ಹೊರ ತೆಗೆದ.

ಆದರೆ ಕೃಷ್ಣನ ಕೌಶಲ್ಯದಿಂದ ಕರ್ಣನ ಗುರಿ ತಪ್ಪಿತು. ನಾನು ಅರ್ಜುನನ ಕುತ್ತಿಗೆಯ ಬದಲಾಗಿ ಅವನ ಕಿರೀಟವನ್ನು ಕಚ್ಚಿದೆ. ಅರ್ಜುನನ ಪ್ರಾಣ ಉಳಿಯಿತು. ಕೊನೆಗೆ ಅವನ ಬಾಣಕ್ಕೆ ನನ್ನ ಉಸಿರು ನಿಂತಿತು. ನನ್ನ ಕಥೆ ಮುಗಿಯಿತು.

ಇವರೆಲ್ಲರ ಕಥೆಯ ಜೊತೆ ನಮ್ಮ ಅಂದರೆ...ದಂಡಕ, ವಿಕರ್ಣ, ಸುದೇಷ್ಣಾ, ಪ್ರಾತಿಕಾಮಿ, ಸಾರಥಿ, ಸಾಲ್ವ, ಪರೀಕ್ಷಿತನ ಮನದ ತುಮುಲವನ್ನು ನೀವೂ ಕೇಳಬೇಕೇ? ಹಾಗಾದರೆ "ರಾಧಾಕೃಷ್ಣ ಕಲ್ಚಾರ್ " ಅವರ "ಪರಕಾಯ ಪ್ರವೇಶ"ದಲ್ಲಿ ನಾವೆಲ್ಲಾ ನಿಮಗೆ ಸಿಗುತ್ತೇವೆ.

-ರಜನಿ ಭಟ್ ಪೆರ್ವೊಡಿ