ಪರಮೇಶ್ವರಪ್ಪ ಕುದರಿಯವರ ‘ಶಾಯರಿಗಳು'
ಶಾಯರಿ ೧
ಕತ್ಲ ಎಷ್ಟರ ಯಾಕ್ ಇರ್ಲಿ, ಸ್ವಲ್ಪಾದ್ರೂ
ಚಂದ್ರನ ಬೆಳಕಿದ್ರ ಧೈರ್ಯ ಬಂದ ಬರತೈತಿ !
ಜೀವನದಾಗ ಎಷ್ಟರ ಕಷ್ಟ ಬರ್ಲಿ, ಸ್ವಲ್ಪಾದ್ರೂ
ನಿನ್ನ ಮುಖದಾಗ ನಗಿ ಇದ್ರ ಖುಷಿ ಅನ್ನಸತೈತಿ!!
*
ಶಾಯರಿ ೨
ಗಾಳಿ ಬೀಸಲಿ ಬೀಸದೇ ಇರಲಿ
ಕಿಟಕಿ ತಗದಿದ್ರ ಒಂಥರಾ ಹಿತ ಅನ್ನಸತೈತಿ!
ಆದ, ನೀ ಊರಾಗ ಇರಲಿ ಇರದೇ ಇರಲಿ
ನೆನಸಗೊಂಡ್ರ ಸಾಕು ಒಂಥರಾ ಸುಖ ಅನ್ನಸತೈತಿ!!
*
ಶಾಯರಿ ೩
ನನ್ನ ಒಂದೊಂದು ಹಾಡಿನ ಸಾಲಿನ್ಯಾಗೂ
ನಿನ್ನ ಪ್ರೀತೀನ ಹರದ ಹರದ ಬರತೈತಿ!
ನಿನ್ನ ನೋಡ ಬೇಕೆನ್ನಿಸಿದಾಗ ನಾ ಒಮ್ಮೆ
ಹಾಡಿದ್ರ ಸಾಕು, ನಿನ್ನ ದರ್ಶನ ನನಗಾಗತೈತಿ!!
*
ಶಾಯರಿ ೪
ನೀ ನನ್ನ ಜೊತಿಗೆ ಇರ್ತೀ ಅನ್ನುವಂಗಿದ್ರ
ಬಳ್ಳಾರಿ ಬಿಸಿಲನ್ಯಾಗೂ ತಣ್ಣಗ ಅನ್ನಸತೈತಿ!
ಆದ್ರ, ಜೊತಿಗಿದ್ದೂ ನೀ ಮಾತಾಡಲಿಲ್ಲಾಂದ್ರ
ಹಿಮಾಲಯದಾಗಿದ್ರೂ ಬಳ್ಳಾರಿ ಬಿಸಿಲ ಕಾಣಸತೈತಿ!!
*
ಶಾಯರಿ ೫
ನೀ ಹಂಗ ನನ್ನ ದಿಟ್ಟಿಸಿ ನೋಡಬ್ಯಾಡ
ನಿನ್ನ ದೃಷ್ಟಿಗೆ ನಾ ಕರಗಿ ಹೋಗತೇನಿ!
ನೋಡುವಂಗಿದ್ರ ಒಮ್ಮೆ ಕಣ್ಣು ಹೊಡದು
ನೋಡು, ನಾ ಇನ್ನೂ ಗಟ್ಟಿ ಆಗತೇನಿ!
*
ಶಾಯರಿ ೬
ನಿನ್ನ ಮುದ್ದಾದ ಮುಖ ನೋಡಾಕ ಹತ್ತಿದ್ರ
ಬರೇ ಕದ್ದ ಕದ್ದ ನೋಡತಿರಬೇಕನ್ನಸತೈತಿ!
ಬರೇ ಕದ್ದ ನೋಡುದರಾಗ ಏನ ಸುಖ ಐತಿ
ಜೀವನಪೂರ್ತಿ ನಿನ್ನ ಮುದ್ದ ಮಾಡಬೇಕನ್ನಸತೈತಿ!!
*
ಶಾಯರಿ ೭
ನೀ ನಕ್ಕಾಗ ನಿನ್ನ ಮಾರ್ಯಾಗ
ಪೂರ್ಣ ಚಂದ್ರ ದರ್ಶನ ಆಗತೈತಿ ನನಗ!
ಹುಣ್ಣಂವಿಗೊಮ್ಮೆ ತನ್ನ ಮಾರಿ ತೋರ್ಸೋ
ಆ ಪೂರ್ಣ ಚಂದ್ರನ್ನ ತಗೊಂಡ ನಾ ಏನ್ಮಾಡ್ಲಿ!!
*
ಶಾಯರಿ ೮
ಘಮ ಘಮ ಅನ್ನೂ ಮಲ್ಲಿಗೆ ಮಾಲಿ ಮಾಡಿ
ನಿನ್ನ ಉದ್ದನ ಕೂದಲದಾಗ ಮುಡಸಬೇಕನ್ನಸತೈತಿ!
ಆದ್ರ ಹೂವಿನ ವಾಸನ್ಯಾಗ ನೀ
ನನ್ನೆಲ್ಲಿ ಮರ್ತ ಬಿಡ್ತಿಯೋ ಅಂತ ಹೆದರ್ಕಿ ಆಗಾಕಹತ್ತೈತಿ!!
*
ಶಾಯರಿ ೯
ನಿನ್ನ ಕೆಂಪನ್ನ ತುಟಿಯಾಗ ಜೇನೈತಿ
ಅದರ ಸವಿ ನನಗೊಬ್ಬಂವಗ ಗೊತ್ತಾಗತೈತಿ!
ನನ್ನ ಎರಡೂ ಕಣ್ಣಾಗ ಪ್ರೀತಿ ಬೆಳಕೈತಿ
ಅದು, ಬರಿ ನಿನಗೊಬ್ಬಕಿಗೇ ಗೊತ್ತಾಗತೈತಿ!!
*
ಶಾಯರಿ ೧೦
ಹುಡುಗೀ, ಫಳ ಫಳ ಹೊಳಿಯೋ ನಿನ್ನ
ಕಣ್ಣ ಕನ್ನಡಿಯೊಳಗ ನಾ ಕರಗಿ ಹೋಗ್ತೀನಿ !
ಆದ, ನೀ ನಕ್ಕಗೆಲ್ಲಾ ನಿನ್ನ ಗಲ್ಲದ ಮ್ಯಾಲೆ ಬೀಳೋ
ಗುಳ್ಯಾಗಿಂದ ಮತ್ತ ನಾ ಎದ್ದ ಹೊರಗ ಬರ್ತೇನಿ!!
*
-ಪರಮೇಶ್ವರಪ್ಪ ಕುದರಿ, ಚಿತ್ರದುರ್ಗ
ಚಿತ್ರ: ಇಂಟರ್ನೆಟ್ ತಾಣ
