ಪರಮ ಪವಿತ್ರವಾದ ತುಳಸೀ ಪೂಜೆ

ಪರಮ ಪವಿತ್ರವಾದ ತುಳಸೀ ಪೂಜೆ

ಕಾರ್ತಿಕ ಮಾಸಕ್ಕೂ ‘ತುಳಸೀಪೂಜೆ’ಗೂ ಅವಿನಾಭಾವ ಸಂಬಂಧ. ಕಾರ್ತಿಕ ಮಾಸದ ಆರಂಭ ದಿನದಿಂದ ಉತ್ಥಾನ ದ್ವಾದಶಿಯವರೆಗೆ ತುಳಸಿಗೆ ದೀಪ ಇಡುತ್ತೇವೆ. ತುಳಸೀಪೂಜೆ ‘ಉತ್ಥಾನ ದ್ವಾದಶಿ’ ಯೆಂದೇ ಪ್ರಸಿದ್ಧ. ಕಾರ್ತಿಕ ಶುದ್ಧ ದ್ವಾದಶಿಯ ವಿಶೇಷ ದಿನದಂದು ಪ್ರತಿ ಮನೆಯಲ್ಲೂ ತುಳಸೀಕಟ್ಟೆಯನ್ನು ಸಿಂಗರಿಸಿ ಹೂಹಾರ ಗಂಧ ಕುಂಕುಮವಿಟ್ಟು ಅಲಂಕರಿಸುತ್ತಾರೆ. ಜೊತೆಗೆ ನೆಲ್ಲಿ ಕೊಂಬೆಯನ್ನು ಊರುತ್ತಾರೆ. ಕೆಲವು ಕಡೆ ಸಾಲಿಗ್ರಾಮ, ವಿಷ್ಣುವಿನ ಮೂರ್ತಿ, ಕೃಷ್ಣನ ಮೂರ್ತಿಯನ್ನಿಟ್ಟು ತುಳಸೀವಿವಾಹ ಮಾಡುವ ಸಂಪ್ರದಾಯವೂ ಇದೆ. ನೈವೇದ್ಯ ಧೂಪ ದೀಪ ಮಾಡಿ ಅರ್ಚಿಸುವರು. ಸುತ್ತಮುತ್ತಲಿನವರನ್ನು ಬರಹೇಳಿ ಪ್ರಸಾದ ನೀಡುವರು. ಮುತ್ತೈದೆ ಭಾಗ್ಯ, ಸುಖಸೌಖ್ಯ ನೆಮ್ಮದಿಯನ್ನು ಕೇಳಿಕೊಳ್ಳುವರು. ತುಳಸಿಯ ದರುಶನ ಭಾಗ್ಯದಿಂದ ಆರೋಗ್ಯ ಸಹ ವೃದ್ಧಿಯಾಗುವುದೆಂಬ ನಂಬಿಕೆ. ತುಳಸಿಯ ಅಮೂಲಾಗ್ರ ಗಿಡವೇ ಬಹುಪಯೋಗಿ.ರೋಗ ನಿರೋಧಕ. ಆಯುರ್ವೇದದಲ್ಲಿ ತುಳಸಿಗೆ ಮಹತ್ತರ ಸ್ಥಾನವಿದೆ. ಶುಭ-ಅಶುಭ ಎರಡರಲ್ಲೂ ತುಳಸೀದಳಗಳು ಬೇಕೇ ಬೇಕು. ಶಿವನಿಗೆ ಹೇಗೆ ಬಿಲ್ವಪತ್ರೆ ಪ್ರಿಯವೋ ಹಾಗೆ ವಿಷ್ಣುವಿಗೆ ತುಳಸಿ ಇಷ್ಟ. ತುಳಸಿಗಿಡ ಮನೆಯೆದುರು ಇದ್ದಷ್ಟು ಆರೋಗ್ಯ. ಪತಿಯ ಆರೋಗ್ಯ, ಕುಟುಂಬಕ್ಷೇಮ, ಮುತ್ತೈದೆ ಭಾಗ್ಯಕ್ಕಾಗಿ ಶ್ರೀತುಳಸೀ ಮಾತೆಯನ್ನು ಹೆಂಗಳೆಯರು ಶ್ರದ್ಧಾಭಕ್ತಿಗಳಿಂದ ಪೂಜಿಸುತ್ತಾರೆ. ಇದಕ್ಕಿರುವ ಪೌರಾಣಿಕ ಹಿನ್ನೆಲೆ ನೋಡೋಣ.

ಜಲಂಧರನೆಂಬ ರಾಕ್ಷಸ ಗುಣವಂತನಾದರೂ ದೇವತೆಗಳಿಗೆ, ಋಷಿಮುನಿಗಳಿಗೆ, ಸಾತ್ವಿಕರಿಗೆ ಕೀಟಲೆ ಕೊಡುತ್ತಿದ್ದನಂತೆ. ಅತ್ಯಂತ ಪ್ರಬಲನಾಗಿದ್ದ ಈತನಿಗೆ ವರಬಲವಿತ್ತು. ವೃಂದಾ(ಬೃಂದಾ) ಎನ್ನುವ ಪರಮಪವಿತ್ರೆ ಆತನ ಪತ್ನಿಯ ಪಾವಿತ್ರ್ಯ ಕೆಡದೆ ಅವನಿಗೆ ಮರಣವಿಲ್ಲವೆಂಬುದಾಗಿ. ಆತ ಶಿವಭಕ್ತ. ಈಕೆ ವಿಷ್ಣು ಭಕ್ತೆ. ವರಬಲದಿಂದ ಕೊಬ್ಬಿದವನಾದ ಜಲಂಧರನು ದಿಗ್ವಿಜಯ ಗೈದ. ಅಟ್ಟಹಾಸದಿಂದ ಮೆರೆದ. ಎಲ್ಲರನ್ನೂ ಸೋಲಿಸಿದ. ಸುರರೆಲ್ಲ ವಿಷ್ಣುವಿನ ಮೊರೆಹೊಕ್ಕರು. ಸಕಲರ ಪೊರೆವ ಕರುಣಾಸಾಗರನಾದ ವಿಷ್ಣು ಜಲಂಧರನ ರೂಪದಲ್ಲಿ ರಾಣಿಯೆದುರು ಕಾಣಿಸಿ ಪಾತಿವ್ರತ್ಯ ಭಂಗಗೊಳಿಸಿದನಂತೆ. ಪರಶಿವನಿಂದ ಜಲಂಧರನ ವಧೆಯಾಯಿತು. ಆದರೆ ವಿಷಯ ಗ್ರಹಿಸಿದ ವೃಂದಾ ಶೋಕತಪ್ತಳಾಗಿ ಕರಿಯವರ್ಣದವನಾಗೆಂದೂ, ನಿನ್ನ ಪತ್ನಿಯಿಂದ ಬೇರ್ಪಟ್ಟು ವಿರಹಿಯಾಗೆಂದು ವಿಷ್ಣುವನ್ನು ಶಪಿಸಿ, ಸತಿಸಹಗಮನ ಮಾಡಿದಳಂತೆ. ಪ್ರಾಯಶ್ಚಿತ್ತವಾಗಿ ವಿಷ್ಣುವೇ ವೃಂದಾಳ ಆತ್ಮವನ್ನು ತುಳಸಿಯಾಗಿ ಮಾಡಿ ಕೈಹಿಡಿದನೆಂಬ ಕಥೆಯಿದೆ. ಇನ್ನೊಂದೆಡೆ ಸಮುದ್ರಮಥನ ಕಾಲದಲ್ಲಿ ಮೇಲ್ಬಂದ ಅಮೃತ ಕಲಶದೊಳಗೆ ವಿಷ್ಣುವಿನ ಆನಂದಭಾಷ್ಪ ಬಿದ್ದು ತುಳಸಿಗಿಡ ಹುಟ್ಟಿತೆಂಬ ಉಲ್ಲೇಖವಿದೆ.

ತುಳಸಿ ಎಂದರೆ ಗುಣದಲ್ಲಿ ತುಲನೆ ಮಾಡಲಾಗದ ಒಂದು ಅದ್ಭುತ ಶಕ್ತಿ ಎನ್ನಬಹುದು. ತುಳಸಿಗೆ ನೀರೆರೆದು, ಪ್ರದಕ್ಷಿಣೆ ಹಾಕುವ ಸಂಪ್ರದಾಯ ಪ್ರತಿ ಹಿಂದೂಗಳ ಮನೆಯಲ್ಲಿದೆ. ಅರಿತೋ ಅರಿಯದೆಯೋ ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ತುಳಸೀಪೂಜೆಯಿಂದ ಲಭ್ಯವಂತೆ. ನಮ್ಮಲ್ಲಿರುವ ರಾಗ ದ್ವೇಷಗಳು ನಶಿಸುತ್ತವೆ. ಒಂದು ತುಳಸೀ ಎಸಳಲ್ಲಿ ಸಹ ಭಗವಂತ ತೃಪ್ತಿ ಹೊಂದುತ್ತಾನಂತೆ. ಶ್ರೀಮನ್ನಾರಾಯಣನಿಗೆ ಪ್ರಿಯವಾದ ತುಳಸೀ ಮಾತೆಯನ್ನು ‘ವಂದೇ ವಂದ್ಯಂ ಸದಾ ವಂದ್ಯಂ ತುಳಸಿ ದೇವ್ಯಂ ಪ್ರಣಾಮ್ಯಹಂ’ ಎಂದು ಹೇಳಿ ಅರ್ಚಿಸುವರು.

ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೆ/

ಕ್ಷೀರೋದ ಮಥನೋದ್ಭೂತೆ ತುಳಸೀತ್ವಾಂ ನಮಾಮ್ಯಹಮ್//

ತುಳಸೀಮಾತೆಯ ಪೂಜೆಯಿಂದ ಬ್ರಹ್ಮಹತ್ಯಾದೋಷಗಳು ಸಹ ನಿವಾರಣೆಯಾಗುವುದೆಂಬ ಉಲ್ಲೇಖವನ್ನು ಕಾಣಬಹುದು. ಭಾರತದಾದ್ಯಂತ ತುಳಸಿ ಮಂದಿರಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಮಥುರಾದಲ್ಲಿರುವ ವೃಂದಾವನದಲ್ಲಿ ವಿಶೇಷವಾಗಿ ತುಳಸೀ ಮಾತೆಯನ್ನು ‘ವೃಂದಾದೇವಿ’ ಯೆಂದೇ ಹೇಳುವುದು ವಾಡಿಕೆ.

ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೇ/

ನಮೋ ಮೋಕ್ಷಪ್ರದೇ ದೇವಿ ನಮ: ಸಂಪತ್ಪ್ರದಾಯಿಕೇ//

ತುಳಸೀಮಾತೆಯನ್ನು ಭಕ್ತಿ,ನಂಬಿಕೆಯಿಂದ ಪೂಜಿಸಿ ಕೃತಾರ್ಥರಾಗೋಣ.

-ರತ್ನಾ ಕೆ ಭಟ್,ತಲಂಜೇರಿ*

(ಆಕರ ಗ್ರಂಥ: ಭಾಗವತ, ಸ್ಕಂದ, ನಿತ್ಯ ಸ್ತೋತ್ರ ಸಂಗ್ರಹ.)

ಚಿತ್ರ ಕೃಪೆ: ಇಂಟರ್ನೆಟ್ ತಾಣ