ಪರಸ್ಪರ

ಪರಸ್ಪರ

ಪುಸ್ತಕದ ಲೇಖಕ/ಕವಿಯ ಹೆಸರು
ಹಾ ಮ ಸತೀಶ
ಪ್ರಕಾಶಕರು
ಸವಿ ಪ್ರಕಾಶನ, ಮೊಗರ್ನಾಡು, ಬಂಟ್ವಾಳ ತಾಲೂಕು
ಪುಸ್ತಕದ ಬೆಲೆ
ರೂ. ೩೫.೦೦, ಮುದ್ರಣ : ೧೯೯೯

ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ (ಹಾಲುಮಜಲು ಸತೀಶ) ಇವರ ಪುಸ್ತಕ *ಪರಸ್ಪರ* ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆ. ಒಟ್ಟು *೨೭* ಲೇಖನಗಳು ಶ್ರೀಯುತರ ಕೈಯಿಂದ ಬರೆಯಲ್ಪಟ್ಟಿದೆ. *ಮಾನವ* -ಮೊದಲು ಮಾನವನಾಗು, ಮನಸ್ಸನ್ನು ನಿರ್ಮಲವಾಗಿಟ್ಟುಕೊ, ಮೂರು ದಿನದ ಬಾಳ್ವೆಯಲಿ ಹಗರಣವೇತಕೆ? ರಗಳೆ ಬಾರದಿರಲಿ. ಮನುಜಾ ವಿಶ್ವ ಮಾನವನಾಗು, ಜಗದಗಲ ಪಸರಿಸು ಎಂಬ ಸಂದೇಶ ಮನಸೆಳೆಯಿತು, ಎಲ್ಲರಿಗೂ ಮಾದರಿ.

ಮಾ ಎಂದರೆ ತಾಯಿ, ನವ ಎಂದರೆ ಹೊಸ. ತಾಯ ಗರ್ಭದಿಂದ ನವ ಮೂಡಿ, ಬುವಿಗೆ ಬಿದ್ದು, ಅಲ್ಲಿಯೂ ನವ, ಹೊಸ ಬೆಳಕನ್ನು ನೋಡಿ, ಪ್ರಕೃತಿಯ ತಾಯ ಎರಡೂ ಮಡಿಲಲ್ಲಿ ಆಡಿ, ಕೂಡಿ ಬೆಳೆದು ಮಾನವತ್ವವ ಪ್ರತಿಪಾದಿಸಿ ಬದುಕು ಮಾನವ ಎಂಬ ಸಂದೇಶ.

ಹೇಗೆ ಗಿಡದಲ್ಲಿ ಮೊಗ್ಗರಳಿ ಹೂವಾಗಿ ನಳನಳಿಸಿ ಸೌಂದರ್ಯ ಹಾಗೂ ಕಂಪನ್ನು ಹೊರಸೂಸುವುದೋ ಹಾಗೆ, ಮಾತು ಬದುಕಲಿ ಘಮಘಮಿಸುವ ಮೂಲಕ ಹೊರಬರಲಿ. ಶುದ್ಧಚಿತ್ತ ಉಳ್ಳವನಾಗಿ ವ್ವವಹರಿಸಿ.ಯಾವುದೂ ಶಾಶ್ವತವಲ್ಲ,ನಮ್ಮ ಗುಣನಡತೆ ಮಾತ್ರ ಶಾಶ್ವತ. ನೈತಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿ, ದುಶ್ಚಟಗಳಿಗೆ ಜೋತು ಬೀಳದಿರಿ, ದುಷ್ಟ ಪದ್ಧತಿಗಳ ಖಂಡಿಸಿ, ಮಾನವೀಯ ಗುಣಗಳನ್ನು ಅಳವಡಿಸಿ ಸಾಧಿಸೋಣ.

ದಾರಿತಪ್ಪುತ್ತಿರುವ ನಮ್ಮ ಮಕ್ಕಳನ್ನು ಸುಸಂಸ್ಕೃತ ರನ್ನಾಗಿಸೋಣ, ಮುಂದಿನ ಪೀಳಿಗೆಯಿಂದ ದೇಶ ಸುಭಿಕ್ಷವಾಗಲಿ ಎಂಬ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಸ್ವಾರ್ಥ ರಹಿತ ಸೇವೆ ಬಾಳಿನ ಧ್ಯೇಯವಾಗಿರಲಿ, ಸಾಧ್ಯವಾದಾಗಲೆಲ್ಲ ರಕ್ತದಾನವನ್ನು ಮಾಡೋಣ, ರಕ್ತದ ಮಹತ್ವವನ್ನು ತಿಳಿಯ ಪಡಿಸೋಣ ಎಂಬ ಕಿವಿ ಮಾತು ಇದೆ. ಸಾಮಾಜಿಕ ಕಳಕಳಿ ಇದೆ.

ಬಳಕೆದಾರರ ಶೋಷಣೆ ಹಿಂದು-ಇಂದು-ಮುಂದು ನಡೆಯುತ್ತಲೇ ಇದೆ, ವಿರುದ್ಧ ಧ್ವನಿಯೆತ್ತಿ, ಜಾಗೃತಿ ಮೂಡಿಸೋಣ. ಒಗ್ಗಟ್ಟು ಎಂಬುದು ಪುಸ್ತಕದ ಬದನೆಕಾಯಿ, ಬಾಯಿ ಮಾತು ಆಗದೆ, ಬಲವಿದೆ ಎಂಬುದನ್ನು ಸಾಬೀತು ಪಡಿಸೋಣ. ಇಲ್ಲಿ ಸಾಮೂಹಿಕ ಜಾಗೃತಿ ಇದೆ. ಶೋಷಣೆಯ ವಿರುದ್ಧ ಧ್ವನಿ ಇದೆ.

ಹೆಣ್ಣಿಗೆ ಸನ್ಮಾನ ಬೇಡ, ಅವಳ ಸ್ವಾಭಿಮಾನವ ಕೆಣಕಬೇಡ, ಸಮಾಜದ ಬಹು ಮುಖ್ಯ ಜೀವಿ ಆಕೆ, ಗೌರವ ಮರ್ಯಾದೆ ನೀಡು ಎಂಬ ಸಂದೇಶ. ಸಮರಸ ಜೀವನ, ಸಂಘರ್ಷ ರಹಿತ  ಬದುಕು, ಪ್ರಾಮಾಣಿಕತೆ, ಸ್ನೇಹಿತರು, ಹೇಗಿರಬೇಕು ನಮ್ಮ ನಡತೆ, ನಾನು ಎಂಬುದು ಬೇಡ, ಅತಿ ಬುದ್ಧಿವಂತಿಕೆಯ ದಡ್ಡರು, ವಿದ್ಯಾರ್ಥಿ ಜೀವನ, ಶೈಕ್ಷಣಿಕ ಪ್ರವಾಸ, ಸಾಹಿತ್ಯದಲ್ಲಿ ರಾಜಕೀಯ, ಭಾವೈಕ್ಯತೆ, ಶಿಕ್ಷಣವೆಂಬ ದೊಡ್ಡ ಗೋಲ, ಆತ್ಮಪರಮಾತ್ಮ, ಆರೋಗ್ಯ ಈ ಮುಂತಾದವುಗಳ ಮೇಲೆ ಬೆಳಕು ಚೆಲ್ಲಿದ ಹಲವಾರು ವಿಷಯಗಳು ಓದುಗರನ್ನು ಯೋಚಿಸಿ, ಹಿಡಿದಿಡುವಂತಿದೆ.ಮೌಲ್ಯಗಳ ಸಾಗರವೇ ಅಡಗಿದೆ. ನಿತ್ಯ ನೀತಿಯೊಳಗೆ ಬೆಸೆಯುವಂತಿದೆ.

ನಮ್ಮ ಬದುಕಿನ ಹಾದಿಯಲ್ಲಿ ಅರ್ಧ ತುಂಬಿದ ಕೊಡವಾಗದೆ, ಪೂರ್ಣ ತುಂಬಿದ ಕೊಡವಾಗೋಣ ಎಂಬ ನೀತಿಯ ಸಾರುತ್ತಿದೆ. ಕವಿ, ಅಧ್ಯಾಪಕ, ಪತ್ರಕರ್ತ, ಸಾಹಿತ್ಯದ ಎಲ್ಲಾ ಹೆಚ್ಚಿನ ಮಜಲುಗಳಲ್ಲಿ ಕೃಷಿ ಮಾಡುತ್ತಿರುವ ಸತೀಶ್ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.ಶುಭವಂದನೆಗಳು.

-ರತ್ನಾ ಕೆ.ಭಟ್, ತಲಂಜೇರಿ