ಪರಹಿತಕಾರಿ ಅಪ್ಪ
ಕವನ
ಬಂಧುಗಳ,
ಪರಿಚಿತರ
ಸುಖ-ದುಃಖಗಳಿಗೆ
ತಾನು ಪಾಲುದಾರನಾಗುವ
ಹುಮ್ಮಸಿನಲಿ
ತಲೆಯ ಮೇಲೆ
ಅನವಶ್ಯಕ ಭಾರ
ಎಳೆದುಕೊಂಡ
ಪರಹಿತಕಾರಿ
ಶುಭ-ಅಶುಭ ಕಾರ್ಯಗಳಲ್ಲಿ
ಮನೆಯ ಮುಂದಿನ ಶಾಮಿಯಾನ,
ಈ ಮನೆಯ ಕಾರ್ಯ ಮುಗಿದೊಡೆ
ಇನ್ನೊಂದು ಮನೆಯ
ಮುಂದೆ ಪ್ರತ್ಯಕ್ಷವಾಗುವಂತೆ,
ಇವರ ಭಾರ ಇಳಿಸಿದೊಡೆ
ಇನ್ನೋರ್ವರ ಭಾರ
ಹೊರುವಲ್ಲಿ ನಿರತ
ಕೃತಜ್ಞತೆಗೆ ಹಿಗ್ಗದ,
ಕೃತಘ್ನತೆಗೆ ಕುಗ್ಗದ,
ಸ್ಥಿತಪ್ರಜ್ಞ ಭಾವ!
ಸ್ವಹಿತ ಕಡೆಗಣಿಸಿ
ಪರರ ಜೀವನದ ಒಳಿತಿಗೆ
ತನ್ನ ದೇಹ ಸವೆಸಿ
ವೃದ್ಧಾಪ್ಯದಲಿ ಬಳಲಿ
ಬೆಂಡಾಗಿರುವ ಜೀವ!