ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೧)
ಹೂವಿನ ಮೂಲಕ ಕಾಯಿ ಕಚ್ಚಿ ಬೀಜವಾಗಿ ಸಸ್ಯ ಸಂಪತ್ತು ನೂರ್ಮಡಿಸಲು ಬೇಕಾಗಿರುವುದು ಪರಾಗದಾನಿಗಳ ಕೃಪೆ. ಅವುಗಳಿಲ್ಲದ ಇಲ್ಲದ ಪ್ರಪಂಚ ಶೂನ್ಯ. ಈಗ ಕೆಲವೆಡೆ ಪರಾಗದಾನಿಗಳು ಕಡಿಮೆಯಾಗಿವೆ. ಕೆಲವು ಕಡೆ ಇವೆ ಎನ್ನುತ್ತಾರೆ. ಪರಾಗದಾನಿಗಳು ಕಡಿಮೆಯಾದವೋ - ಪಲಾಯನಗೈದವೋ ತಿಳಿಯುತ್ತಿಲ್ಲ.ಆದರೆ ಇವಿಲ್ಲದೆ ನಾವೂ ಇಲ್ಲ ಎಂಬುದಂತೂ ಸತ್ಯ.
ಸಸ್ಯವೊಂದು ಹೂ ಬಿಟ್ಟು ಕಾಯಿಯಾಗಬೇಕಿದ್ದರೆ ಅದರಲ್ಲಿ ಗಂಡು ಮತ್ತು ಹೆಣ್ಣು ಹೂವುಗಳ ಸಮ್ಮಿಲನ ಆಗಬೇಕು. ಇದಕ್ಕೆ÷ ಪರಾಗ ಸ್ಪರ್ಶ ಎನ್ನಲಾಗುತ್ತದೆ. ಪರಾಗ ಸ್ಪರ್ಶವೆಂಬ ಸೂಕ್ಷ್ಮ ಕಾರ್ಯವು ಸುಲಲಿತವಾಗಿ ನಡೆದು ಅಲ ಫಲಗಳು ಹೇರಳವಾಗಬೇಕೆಂದು ಪ್ರಕೃತಿ ಕೆಲವು ಪರಾಗದಾನಿ ಜೀವಿಗಳನ್ನು ಸೃಷ್ಟಿಸಿದೆ. ಈ ಪರಾಗದಾನಿಗಳಿಗೆ ಆಹಾರ ಇಲ್ಲದಾಗಿ ಇಂದು ಅವು ಮಾಯವಾದವೋ – ಓಡಿ ಹೋದವೋ ತಿಳಿಯುತ್ತಿಲ್ಲ. ಅದು ಸುಮಾರು ೩೦ ವರ್ಷಕ್ಕೆ ಹಿಂದೆ. ಆಗ ನಮ್ಮ ಮನೆಯ ಎದುರಿಗೆ ದೊಡ್ದ ಕಾಡು ಇತ್ತು. ಅದೆಂತಹ ಹೆಬ್ಬಲಸಿನ ಮರಗಳು, ರೆಂಜೆ ಮರಗಳು, ನಾಣೀಲು (ಹಿಪ್ಪೆ) ಮರಗಳು, ಶಾಂತಿ ಮರಗಳು, ಹಲಸು, ಮಾವು ಒಂದೋ ಎರಡೋ ಹಲವಾರು ಜಾತಿಯ ಮರಮಟ್ಟುಗಳು ಕುರುಚಲು ಗಿಡಗಳು ಇದ್ದವು. ಮೇಯಲು ಬಿಟ್ಟ ದನಕರುಗಳು ಬೆಳಗ್ಗಿನಿಂದ ಸಂಜೆ ತನಕವೂ ಹೆಬ್ಬಲಸಿನ ಮರದ ಬುಡದಲ್ಲೇ ಸುತ್ತುತ್ತಿದ್ದವು. ಒಂದೊಂದು ಮರದ ಸುತ್ತ ನಾಲ್ಕಾರು ದನ ಕರುಗಳು. ಮರದಲ್ಲಿ ಮಾರ್ಚ್ ತಿಂಗಳು ಬಂದರೆ ನಂತರ ಮಳೆ ಬರುವ ತನಕವೂ ಹೆಬ್ಬಲಸಿನ ಕಾಯಿಗಳು ಹಣ್ಣಾಗಿ ಉದುರುತ್ತಿದ್ದವು. ಕೆಲವು ಪಕ್ಷಿಗಳು ತಿಂದು ಕೆಳಗೆ ಹಾಕುತ್ತಿದ್ದವು ಮತ್ತೆ ಕೆಲವು ಕೋತಿಗಳೂ ಈ ಕೆಲಸವನ್ನು ಮಾಡುತ್ತಿದ್ದವು. ತಮ್ಮ ಸ್ವಾರ್ಥಕ್ಕಾಗಿ ಹಣ್ಣು ತಿಂದರೂ ಅದರಲ್ಲಿ ಪರಹಿತ ಇರುತ್ತಿತ್ತು. ಹಣ್ಣು ಹೆಬ್ಬಲಸನ್ನು ಹಕ್ಕಿ ಮುಟ್ಟಿದರೆ ಸಾಕು ಅದು ಕೆಳಕ್ಕೆ ಬೀಳುತಿತ್ತು. ಅದೇ ರೀತಿ ಕೋತಿಗೂ ಅದು ಪೂರ್ತಿಯಾಗಿ ಸಿಗುತ್ತಿರಲಿಲ್ಲ. ಅದರ ನಿಜವಾದ ಪಾಲುದಾರರು ಹಸು ಕರುಗಳೇ ಎಂದರೂ ತಪ್ಪಾಗಲಾರದು. ಹಸು ಕರುಗಳಿಗೆ ಭೂರೀ ಭೋಜನಕ್ಕೆ ಹಣ್ಣುಗಳು ದೊರೆಯುತ್ತಿದ್ದವು. ನಾವು ಆ ಸಮಯದಲ್ಲಿ ಪರೀಕ್ಷೆಗೆ ಓದಲು ಪ್ರಶಾಂತವಾದ ತಂಪು ವಾತಾವರಣ ಎಂದು ಹೋಗುತ್ತಿದ್ದುದು ಕಾಡುಗಳಿಗೆ. ಅಲ್ಲಿ ಪುಸ್ತಕ ಓದುವುದರ ಜೊತೆಗೆ ಈ ದೃಶ್ಯವನ್ನೂ ಕಾಣುತ್ತಿದ್ದೆವು. ನಮ್ಮ ಮನೆಯ ಹಸುಗಳಿದ್ದರೆ ಬೇರೆ ಹಸುಗಳು ಬರುವಾಗ ಅದನ್ನು ಓಡಿಸಿ ನಮ್ಮ ಮನೆಯ ಹಸುಗಳು ತಿನ್ನುವಂತೆ ಅನುಕೂಲ ಮಾಡಿಕೊಡುತ್ತಿದ್ದೆವು. ಪರೀಕ್ಷೆಯ ಓದಿನ ಜೊತೆಗೆ ಹಿಪ್ಪೆ ಹಣ್ಣುಗಳನ್ನು ಹುಡುಕಿ ತಿನ್ನುತ್ತಿದ್ದುದುಂಟು. ಅದೇ ರೀತಿಯಲ್ಲಿ ಎಟಕಿದ ಹೆಬ್ಬಲಸಿನ ಹಣ್ಣುಗಳನ್ನು ತಿಂದುದುಂಟು. ಕುಂಟು ನೇರಳೆ, ನೇರಳೆ, ಬೆಳ್ಳರೆ ಹಣ್ಣು ತಿಂದುದಕ್ಕೆ ಲೆಕ್ಕವೇ ಇಲ್ಲ. ಕಾಟು ಮಾವಿನ ಹಣ್ಣು ತಿನ್ನುವುದಷ್ಟೇ ಅಲ್ಲದೆ ಮನೆಗೂ ಒಂದಷ್ಟು ತಂದು ಮನೆಯವರ ಪ್ರೀತಿ ಗಿಟ್ಟಿಸಿಕೊಳ್ಳುತ್ತಿದ್ದೆವು.
ಇಷ್ಟು ಮಾತ್ರವಲ್ಲ ನಾವು ಕಾಡಿನಲ್ಲಿ ಮಿಸಿರಿ ಜೇನು ಎಷ್ಟು ಕಂಡಿದ್ದೇವೋ ಲಕ್ಕವೇ ಇಲ್ಲ. ಎಲ್ಲಾ ಟೊಳ್ಳು ಮರಗಳ ಎಡೆಯಲ್ಲಿ ಮಿಸಿರಿ ಜೇನು ಕುಟುಂಬ ನೆಲೆಸಿರುತ್ತಿತ್ತು. ಅನುಕೂಲ ಇರುವ ಮಿಸಿರಿ ಜೇನು ಗೂಡನ್ನು ಕತ್ತಿ, ಉಳಿಯಲ್ಲಿ ತೂತು ಮಾಡಿ ತೆರೆದು ಅದರ ಜೇನು ತಿಂದುದ ನೆನಪುಗಳು ಈಗಲೂ ಮಾಸಿಲ್ಲ. ಆಗ ಕಾಡಿನಲ್ಲಿ ನಿರಂತರ ಹೂವು ಬಿಡುವ ಮರಗಳು ಇದ್ದವು. ಮೊದಲಾಗಿ ಡಿಸೆಂಬರ್ ತಿಂಗಳಿಗೆ ರೆಂಜೆ ಹೂವು, ಹಿಪ್ಪೆ ಹೂವು, ಸೊರಗೆ ಹೂವು, ಅದೇ ರೀತಿ ಅಂಟುವಾಳದ ಹೂವಾಗುತ್ತಿತ್ತು. ಆ ನಂತರ ಶಾಂತಿಮರ, ಮಾವಿನಮರ ಹೂ ಬಿಡುತ್ತಿತ್ತು. ಕೊನೆಗೆ ನೇರಳೆ ಮರ, ಕುಂಟು ನೇರಳೆ ಹೀಗೆ ಮಳೆಗಾಲ ಬರುವ ತನಕವೂ ಹೂವುಗಳಿದ್ದವು. ನಮ್ಮ ಮನೆಯಲ್ಲಿ ಆಗ ಸುಮಾರು ೧೦ ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳದ್ದವು. ನಮ್ಮ ತಂದೆ ಜೇನು ಹಿಡಿಯುವುದರಲ್ಲಿ ಪಳಗಿದವರು. ಆಗ ಮೊದಲಾಗಿ ಜನವರಿ ತಿಂಗಳಲ್ಲಿ ಜೇನು ತೆಗೆಯುವ ಕೆಲಸ ಪ್ರಾರಂಭವಾಗುತ್ತಿತ್ತು. ಆಗ ಬರುವ ಜೇನು ಹಳದಿ ಬಣ್ಣದ್ದಾಗಿರುತ್ತಿತ್ತು. ತುಂಬಾ ದಪ್ಪದ ಈ ಜೇನು ತೆಗೆಯುವಾಗ ಯಂತ್ರದಿಂದ ಇಳಿಯುವುದೇ ಕಷ್ಟವಾಗಿರುತ್ತಿತ್ತು. ಕೊನೆಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಜೇನು ತೆಗೆಯುವ ಯಂತ್ರವನ್ನು ಓರೆಯಾಗಿ ಇಟ್ಟು ಜೇನು ಪೂರ್ತಿ ಇಳಿಯಲು ಕಾಯಲಾಗುತ್ತಿತ್ತು. ಅದು ಮೊದಲ ಜೇನಿನ ಉತ್ಪತ್ತಿ. ಅದು ನೊರೆಕಾಯಿ (ಅಂಟುವಾಳ) ಮರದಹೂವಿನ ಜೇನು ಎಂದು ಹೇಳಿ ಅದನ್ನು ಬಾಟಲಿಗೆ ತುಂಬಿಸಿ ಇಡುತ್ತಿದ್ದರು. ತಂದೆಯವರು ಹೂ ಬಿಡುವ ಯಾವ ಮರ, ಬಳ್ಳಿಗಳನ್ನೂ ಅನವಶ್ಯಕ ಕಡಿಯಲು ಬಿಡುತ್ತಿರಲಿಲ್ಲ. ಮಳೆಗಾಲ ಮುಗಿದಾಕ್ಷಣ ಜೇನು ನೊಣಗಳಿಗೆ ಆಹಾರದ ಅವಶ್ಯಕತೆ ಹೆಚ್ಚು. ಆಗ ಹೂ ಬಿಡುವ ಮರ ಮಟ್ಟುಗಳು ಕಡಿಮೆ. ಮಳೆಗಾಲ ಮುಗಿಯುತ್ತಿದ್ದಂತೆ ಹೂ ಬಿಡುವ ಕಾಡು ಬಳ್ಳಿಯಲ್ಲಿ ಮನೆ ಬೀಳು ಒಂದು. ಅದಕ್ಕೆ ಜೇನು ನೊಣಗಳು ಸುತ್ತುವುದೆಂತು. ಅದೇ ರೀತಿಯಲ್ಲಿ ಕಮರಕದ ಹಣ್ಣಿನ ( ದಾರೆಹುಳಿ) ಮರವೂ ಸಹ ಮಳೆಗಾಲ ಮುಗಿದ ತಕ್ಷಣ ಹೂ ಬಿಡಲಾರಂಭಿಸುತ್ತದೆ.
ಈ ಬಳ್ಳಿ, ಈ ಮರ ನಮ್ಮಲ್ಲಿ ಯಾವಾಗಲೂ ಕಡಿಯುವ ಮರಗಳಾಗಿರಲಿಲ್ಲ. ಒಂದೇ ಒಂದು ಕಮರಕದ ಹಣ್ಣು ಬಳಕೆ ಮಾಡಿದ್ದು ಇರಲಿಕ್ಕಿಲ್ಲ. ಅದರೆ ಮರವನ್ನು ಮಾತ್ರ ಉಳಿಸಿಕೊಂಡಿದ್ದೆವು. ಆ ನಂತರ ಫೆಬ್ರವರಿ ತಿಂಗಳಲ್ಲಿ ಒಂದು ಹೂ ದೊರೆಯುತ್ತಿತ್ತು. ಈ ಹೂವಿನ ಜೇನು ಸ್ವಲ್ಪ ವಾಸನೆಯಿಂದ ಕೂಡಿರುತ್ತಿತ್ತು. ಅದೇ ರೀತಿ ಅದೇ ಸಮಯಕ್ಕೆ ಇನ್ನೊಂದು ಬಾರಿ ಸ್ವಲ್ಪ ಜೇನು ದೊರೆಯುತ್ತಿತ್ತು. ಆ ಜೇನು ಸ್ವಲ್ಪ ಕಹಿಯಿಂದ ಕೂಡಿರುತ್ತಿತ್ತು. ವಾಸನೆಯ ಜೇನು ಗುಗ್ಗುಳ ಮರದ್ದು, ಕಹಿ ಜೇನು ಕಾಸರಕನ ಹೂವಿನದ್ದು ಎನ್ನುತ್ತಿದ್ದರು. ಈ ಸಮಯದಲ್ಲಿ ಜೇನು ಎರಿಗಳಲ್ಲಿ ಮಕರಂದವೂ ಸಾಕಷ್ಟು ಇರುತ್ತಿತ್ತು. ಬಹುಷಃ ಆ ಸಮಯದಲ್ಲಿ ಹೂ ಬಿಡುವ ಸಸ್ಯಗಳಲ್ಲಿ ಮಧು – ಮಕರಂದ ಹೆಚ್ಚಾಗಿ ಇರುತ್ತಿತ್ತೇನೋ? ಮಕರಂದ ಹೆಚ್ಚು ದೊರೆಯುವ ಸಮಯದಲ್ಲಿ ಜೇನು ನೊಣಗಳು ಪಾಲಾಗುವುದು ಹೆಚ್ಚು ಎಂಬ ಸಂಗತಿಯನ್ನೂ ಹೇಳುತ್ತಿದ್ದರು. ಆ ಸಮಯದಲ್ಲಿ ಚಳಿಗಾಲ ಕಳೆದು ವಸಂತ ಋತು ಆಗಮನವಾಗುತ್ತಿತ್ತು . ಮರಗಳು, ಸಸ್ಯಗಳು ಹೂ ಬಿಡುವ ಸಮಯ. ವೈವಿಧ್ಯಮಯ ಸುವಾಸನೆ. ಆಗ ಜನ ಇಲ್ಲಿ ಇಂತಹ ಮರ ಹೂ ಬಿಟ್ಟಿದೆ. ಅದರ ಪರಿಮಳ ಹೀಗೆ ಎನ್ನುವಷ್ಟು ಪಳಗಿದ್ದರು.
(ಇನ್ನೂ ಇದೆ)
ಅನುಭವ ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರಗಳು: ಅಂತರ್ಜಾಲ ತಾಣ