ಪರಾಗದಾನಿಗಳನ್ನು ಉಳಿಸೋಣ ಬನ್ನಿ…! (ಭಾಗ ೪)
![](https://saaranga-aws.s3.ap-south-1.amazonaws.com/s3fs-public/styles/article-landing/public/hiney.jpg?itok=HnPidjWW)
ರೋಗಗಳು: ಪರಾಗದಾನಿಗಳಿಗೆ ಶಿಲೀಂದ್ರ ರೋಗ, ವೈರಸ್ ಮತ್ತು ಬ್ಯಾಕ್ಟೀರಿಯಾ ಸೋಂಕು ರೋಗಗಳು ಇರುವ ಕಾರಣ ವಾತಾವರಣದ ಅನನುಕೂಲತೆಯ ಜೊತೆಗೆ ಇವು ಪ್ರಾಬಲ್ಯವನ್ನು ಉಂಟು ಮಾಡಿ ಪರಾಗದಾನಿಗಳ ಸಂತತಿ ಕ್ಷೀಣವಾಗಲು ಕಾರಣವಾಗಿದೆ. ಜೇನು ನೊಣಕ್ಕೆ ಶಿಲೀಂದ್ರ ಸೋಂಕು ಮತ್ತು ಬ್ಯಾಕ್ಟೀರಿಯಾ ಸೋಂಕು ತಗುಲಿದರೆ ಹೆಚ್ಚಿನ ಪ್ರಮಾಣದಲ್ಲಿ ಜೇನಿನ ಭ್ರೂಣಗಳು ನಾಶವಾಗುತ್ತಿವೆ. ಬ್ಯಾಕ್ಟೀರಿಯಾ ಸೋಂಕಿನಿಂದ ಜೇನು ನೊಣಗಳು ವೇಗವಾಗಿ ಸಾಯುತ್ತವೆ. ಶಿಲೀಂದ್ರ ಸೋಂಕಿನಿಂದ ಸಂಖ್ಯೆ ಕಡಿಮೆಯಾಗುತ್ತಾ ಸಂತತಿ ಕ್ಷೀಣಿಸಿ ಸಾಯುತ್ತದೆ. ರಾಣಿ ಬಂಜೆಯಾಗುತ್ತದೆ. ಜೇನು ನೊಣ ಹಾಗೂ ಇನ್ನಿತರ ಪರಾಗದಾನಿಗಳಲ್ಲಿ ರಾಣಿ ನೊಣಕ್ಕೆ ಯಾವುದೇ ಹಾನಿಯಾದರೂ ಸಹ ಅವು ಸಂತಾನ ಕ್ಷೀಣಿಸುತ್ತವೆ. ರೋಗಸೋಂಕು ಬೇರೆ ಬೇರೆ ವಿಧಗಳಿಂದ ಹರಡುತ್ತದೆ. ಇದಕ್ಕೆ ನಿರ್ದಿಷ್ಟ ಔಷಧಿಗಳಿಲ್ಲ. ಸಣ್ಣ ಕುರುವಾಯಿ ತರಹದ ಒಂದು ಕೀಟ ಜೇನು ನೊಣಗಳಿಗೆ ವೈರಿಯಾಗಿದ್ದು ಇದು ಆಫ್ರಿಕಾದಲ್ಲಿ ಮೊದಲಾಗಿ ಕಾಣಿಸಿತ್ತಾದರೂ ಈಗ ಅದು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಕಂಡು ಬರುತ್ತದೆ. ಇದು ಜೇನಿನ ಎರಿಗಳನ್ನು ಹಾಳು ಮಾಡುತ್ತದೆ. ಇದನ್ನು ಎಲ್ಲರೂ ನೋಡಿರಬಹುದು. ಈ ದುಂಬಿಯ ಲಾರ್ವೆಯು ಜೇನ್ನು ತಿಂದು ಅದನ್ನು ಕಲುಶಿತಗೊಳಿಸುತ್ತವೆ. ಎರಿಗಳಲ್ಲಿ ಹುಳ ಇದ್ದರೆ ಇದು ಇದೆ ಎಂದರ್ಥ.
ಸಾಮಾಜಿಕ ಅರಣ್ಯ ಮತ್ತು ಪರಾಗದಾನಿಗಳು
ಗ್ರೀನ್ ಬೆಲ್ಟ್ ಮತ್ತು ಪರಾಗದಾನಿಗಳು: ನಮ್ಮ ಸರಕಾರ ಈ ತನಕ ಲಕ್ಷಾಂತರ ಹೆಕ್ಟೇರು ಭೂಮಿಯನ್ನು ಕೈಗಾರಿಕೆ, ಸೇವಾ ಕ್ಷೇತ್ರಕ್ಕೆ ಕೊಡುತ್ತದೆ. ಕೆಲವು ಕಡೆ ಫಲವತ್ತಾದ ಭೂಮಿಯನ್ನೂ ಇಲ್ಲೂ ಕೆಲವು ಕಡೆ ಸಾಧಾರಣ ಭೂಮಿಯನ್ನೂ ಒಟ್ಟಾರೆಯಾಗಿ ಮೂಲ ಸೌಕರ್ಯ ಉತ್ತಮವಿರುವ ಭೂಮಿಯನ್ನು ಇವುಗಳಿಗೆ ಕೊಡುತ್ತದೆ. ಸುಮಾರು ೨-೩ ಎಕರೆಯಲ್ಲಿ ಕಟ್ಟಡ ಇತ್ಯಾದಿ ನಿರ್ಮಾಣ ಆಗಬೇಕಿದ್ದರೂ ೫೦೦-೧೦೦೦ ಎಕ್ರೆ ಭೂಮಿಯನ್ನು ಕೊಟ್ಟ ನೂರಾರು ನಿದರ್ಶನಗಳಿವೆ. ಇಲೆಲ್ಲಾ ಇವರು ಹಸುರು ಬೆಳೆಸಬೇಕು ಎಂಬ ಶರ್ತಗಳನ್ನು ಸರಕಾರ ವಿಧಿಸುತ್ತದೆ. ಎಂ ಆರ್ ಪಿ ಎಲ್ ನಂತಹ ಉದ್ದಿಮೆ ಸುಮಾರು ೫೦ ಎಕ್ರೆ ಗಳಷ್ಟು ಗ್ರೀ ಬೆಲ್ಟ್ ಏರಿಯ ಅಭಿವೃದ್ದಿ ಮಾಡಲು ಕೊಡಲಾಗಿದ್ದು, ಅದರಲ್ಲಿ ಏನು ಇದೆ ಎಂಬುದು ನೋಡಬೇಕಷ್ಟೇ. ಇಂತಹ ಕಡೆ ಪರಾಗದಾನಿಗಳಿಗೆ ಬೇಕಾಗುವ ಸಸ್ಯ ಸಂಪತ್ತನ್ನು ಬೆಳೆಸಿದರೆ ಒಳ್ಳೆಯದು.
ಪರಾಗದಾನಿಗಳ ಉಳಿವಿಗೆ ಬೆಳೆಸಬೇಕಾದ ಸಸ್ಯಗಳು:
ಚೆರಿ ಸಸ್ಯಗಳು: ಪರಾಗದಾನಿಗಳ ಸಂತತಿ ಉಳಿಸುವುದು ತುಂಬಾ ಅಗತ್ಯವಾದ ಕೆಲಸ. ಜೇನು ಉತ್ಪಾದನೆ ಆಗಲಿ ಬಿಡಲಿ. ಪರಾಗದಾನಿಗಳು ಮಾತ್ರ ನಮ್ಮ ಪರಿಸರದಲ್ಲಿ ಇರಲೇ ಬೇಕು. ಇವುಗಳ ಸಂತತಿ ಕಡಿಮೆಯಾದರೆ ನಾವು ಬೆಳೆಸುವ ಬೆಳೆಗಳು, ನೈಸರ್ಗಿಕವಾಗಿ ಬೆಳೆಯುವ ಸಸ್ಯಗಳು, ಬಳ್ಳಿಗಳ ಸಂತತಿಯೂ ಕಡಿಮೆಯಾಗುತ್ತದೆ. ಅದಕ್ಕಾಗಿ ಪರಾಗದಾನಿಗಳಿಗೆ ಕಾಲಕಾಲಕ್ಕೆ ಆಹಾರವಾಗಿ ಲಭ್ಯವಾಗುವ ಸಸ್ಯಗಳನ್ನು ಸಾರ್ವಜನಿಕ ಸ್ಥಳಗಳು, ಹೊಲದ ಬದುಗಳು ಮುಂತಾದ ಕಡೆ ನೆಟ್ಟು ಬೆಳೆಸಬೇಕು. ಸಾರ್ವಜನಿಕ ಸ್ಥಳಗಳಾದ ಪಾರ್ಕುಗಳು ರಸ್ತೆ ಬದಿಗಳಲ್ಲಿ ಚೆರಿ ಗಿಡಗಳನ್ನು ಬೆಳೆಸುವುದರಿಂದ ವರ್ಷದುದ್ದಕ್ಕೂ ಪರಾಗದಾನಿಗಳಿಗೆ ಆಹಾರ ದೊರೆಯುತ್ತದೆ. ಇದನ್ನು ಬೆಳೆಸುವುದು ಕಷ್ಟವಿಲ್ಲ. ಬೆಳೆಯಲೂ ಹೆಚ್ಚು ಕಾಲಾವಧಿ ಬೇಕಾಗಿಲ್ಲ. ಅನಿವಾರ್ಯ ಸಂಧರ್ಭಗಳಲ್ಲಿ ಅದನ್ನು ತೆಗೆಯುವುದಾದರೂ ಸಹ ಕಷ್ಟವಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರೇತರ ಸ್ಂಸ್ಥೆಗಳು, ಅರಣ್ಯ ಇಲಾಖೆ, ಪಂಚಾಯತುಗಳು ಸರಳವಾಗಿ ತಯಾರಿಸಬಹುದಾದ ಈ ಸಸ್ಯವನ್ನು ಉತ್ಪಾದಿಸಿ ಅಲ್ಲಲ್ಲಿ ನೆಟ್ಟು ಬೆಳೆಸಿ ಪರಾಗದಾನಿಗಳಿಗೆ ಆಹಾರ ಮತ್ತು ನೆರಳನ್ನೂ ಒದಗಿಸಬಹುದು. ಕಳೆದ ಕೆಲವು ವರ್ಷಗಳಿಂದ ಅರಣ್ಯ ಇಲಾಖೆ ಪರಾಗದಾನಿಗಳಿಗೆ ಆಹಾರವಾಗಬಲ್ಲ ಮರಗಿಡ ಬೆಳೆಸಲು ಮುಂದಾಗಿರುವುದು ಶ್ಲಾಘ್ಹನೀಯ ಕೆಲಸ.
ಸೀಗೆ: ಇದು ಮಳೆಗಾಲ ಕಳೆದ ತಕ್ಷಣ ಹೂ ಬಿಡುವ ಸಸ್ಯವಾಗಿದೆ. ಇದರಲ್ಲಿ ಜೇನು ನೊಣಗಳಿಗೆ ಬೇಕಾದಷ್ಟು ಆಹಾರ ದೊರೆತು ಮಳೆಗಾಲದ ಆಹಾರದ ಅಭಾವದ ದಿನಗಳಿಂದ ಒಮ್ಮೆ ವಿಮುಕ್ತಿ ಕೊಡುತ್ತದೆ.
ನೇರಳೆ: ಬೇಸಿಗೆಯ ಕೊನೆ ಭಾಗದಲ್ಲಿ ಹೂ ಬಿಡುವ ಸಸ್ಯ. ಈ ಹೂವಿನಲ್ಲಿ ಯತೇಚ್ಚ ಪ್ರಮಾಣದ ಮಧು ಮತ್ತು ಮಕರಂದ ಇದೆ. ಈಗ ನೈಸರ್ಗಿಕ ನೇರಳೆ ಮರಗಳು ಕಡಿಮೆಯಾಗುತ್ತಾ ಬಂದಿವೆ. ನೇರಳೆಗೆ ವಾಣಿಜ್ಯಿಕ ಮಹತ್ವ ಬಂದ ಕಾರಣ ಈಗ ನೆಟ್ಟು ಬೆಳೆಸುವಿಕೆ ಹೆಚ್ಚಾಗಿದೆ. ನೇರಳೆಮರಗಳು ತೇವಾಂಶ ಇರುವ ಭೂಮಿಯಲ್ಲಿದರೆ ಉತ್ತಮ ಬೆಳೆವಣಿಗೆ ಹೊಂದುತ್ತವೆ. ಇವು ನಾಟಾ ಮರ ಮತ್ತು ಸಾಕಷ್ಟು ನೆರಳನ್ನು ಒದಗಿಸುವ, ಸಾವಯವ ತ್ಯಾಜ್ಯ ಕೊಡುವ ಮರ.
ಅಂಟುವಾಳ: ಇದು ಬೇಡಿಕೆ ಇಲ್ಲದ ಬೆಳೆಯಾದ ಕಾರಣ ನಿರ್ಲಕ್ಷ್ಯಕ್ಕೆ ಒಳಗಾದ ಮರಮಟ್ಟು. ಹಿಂದೆ ಬಟ್ಟೆ ಒಗೆಯಲು ಇರಲಿ ಎಂದು ನೊರೆಕಾಯಿ ಗಿಡ ಬೆಳೆಸುತ್ತಿದ್ದರು. ಈಗ ಅದಕ್ಕೆ ಕಿಲೋ ೩-೪ ರೂ. ಬೆಲೆ ಆದ ಕಾರಣ ಇದನ್ನು ಹೆಕ್ಕಿದ ಮಜೂರಿಯೂ ಹುಟ್ಟದ ಕಾರಣ ಯಾರೂ ಬೆಳೆಸುತ್ತಿಲ್ಲ. ಇದು ಜೇನು ನೊಣಗಳಿಗೆ ಮೊದಲ ಜೇನಿನ ಆಹಾರವಾದ ಕಾರಣ ಅತೀ ಅಗತ್ಯವಾಗಿ ಬೆಳೆಸಬೇಕಾದ ಮರಮಟ್ಟು.ಮಳೆಗಾಲ ಕಳೆದ ತಕ್ಷಣ ಜೇನು ನೊಣ ಮತ್ತು ಪರಾಗದಾನಿಗಳಿಗೆ ಪರಾಗ ಮತ್ತು ಮಕರಂದ ಹೇರಳವಾಗಿ ದೊರೆತರೆ ಅವುಗಳ ಸಂಖ್ಯಾಭಿವೃದ್ದಿಯಾಗುತ್ತದೆ.
ಕುಂಟು ನೇರಳೆ: ಇದು ಅಳಿಯುತ್ತಿರುವ ಸಸ್ಯ ಸಂಪತ್ತು. ಇದರಲ್ಲಿ ಬಹಳ ಉತ್ತಮ ಜೇನು ಇದ್ದು, ಸಾಮಾನ್ಯ ಮಾತ್ರದ ಮರ. ಪೊದರಿನೋಪಾದಿಯಲ್ಲಿದ್ದರೂ ಹೂ ಬಿಡುತ್ತದೆ.
ಶಾಂತಿ ಮರ: ಫೆಬ್ರವರಿ ತಿಂಗಳಲ್ಲಿ ಮರದ ಬುಡದಲ್ಲಿ ಹೋಗುವಾಗಲೇ ಜೇನಿನ ಸುವಾಸನೆ ಕೊಡಬಲ್ಲ ಮರ. ಬಹಳ ಜೇನನ್ನು ಕೊಡುತ್ತದೆ. ಬರೇ ದುಂಬಿ ಜಾತಿಯವುಗಳಿಗೆ ಮತ್ರವಲ್ಲ. ಕೆಲವು ಸಣ್ಣ ಸಣ್ಣ ಪಕ್ಷಿಗಳಿಗೂ ಸಹ ಇದು ಪರಾಗವನ್ನು ಕೊಡುತ್ತದೆ. ದೈತ್ಯ ಗಾತ್ರದ ಮರಮಟ್ಟು. ಸಾಮಾಜಿಕ ಅರಣ್ಯಕ್ಕೆ, ರಸ್ತೆ ಬದಿಯ ಕೊರೆತ ತಡೆಯಲು ಸಹಾಯಕ. ಭೂಮಿಗೆ ನೆರಳನ್ನು ಕೊಡಬಲ್ಲ ಸಸ್ಯ.
ಹಾಲು ಮಡ್ಡಿ: ಗುಗ್ಗುಳ ಎಂಬ ಹೆಸರಿನ ಈ ಮರ ಜನವರಿ ತಿಂಗಳಲ್ಲಿ ಹೂ ಬಿಡುತ್ತದೆ. ಎಲ್ಲಾ ತರಹದ ಪರಾಗದಾನಿಗಳಿಗೆ ಇದು ಆಹಾರ ಕೊಡಬಲ್ಲುದು. ಹೆಚ್ಚು ಮಕರಂದವನ್ನು ಕೊಟ್ಟು ನೊಣಗಳ ಸಂಖ್ಯೆಯನ್ನು ಹೆಚ್ಚಿಸಿಕೊಡಬಲ್ಲ ಆಹಾರ.
ಮದ್ದಾಲೆ ಮರ: ಇದು ಜನವರಿ ತಿಂಗಳಲ್ಲಿ ಹೂ ಬಿಡುವ ಮರವಾಗಿದೆ. ಸಾಕಷ್ಟು ಹೂವಿನ ಜೊತೆಗೆ ಮಕರಂದವನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುತ್ತದೆ
ಗಣಪತಿ ಕಾಯಿ: ಹೂಪದ ಕಾಯಿ ಮರಗಳು ಪ್ರಾದೇಶಿಕವಾಗಿ ಬೇರೆ ಬೇರೆ ಸಮಯಯಲ್ಲಿ ಹೂ ಬಿಡುತ್ತದೆ. ಸಾಮಾನ್ಯವಾಗಿ ಮಾರ್ಚ್ ನಿಂದ ಎಪ್ರೀಲ್ ತನಕ ಹೂ ಬಿಡುತ್ತದೆ. ಮತ್ತು ಜೇನು ನೊಣಗಳಿಗೆ ಮತ್ತು ಇನ್ನಿತರ ದುಂಬಿಗಳಿಗೆ ಗರಿಷ್ಟ ಆಹಾರ ಕೊಡುತ್ತದೆ.
ರಬ್ಬರ್ ಮರದ ಜೇನು : ಈಗ ಮಾರುಕಟ್ಟೆಯಲ್ಲಿ ಬೇಕಾದಷ್ಟು ಜೇನು ಲಭ್ಯವಿದೆ. ನಮ್ಮ ಕಾಲದಲ್ಲಿ ಜೇನು ಸಂತತಿ ಕ್ಷೀಣಿಸುತ್ತಿದೆ, ಇದರಿಂದ ಜೇನಿನ ಉತ್ಪಾದನೆ ಕಡಿಮೆಯಾಗಿದೆ ಎನ್ನುತ್ತೇವೆ. ಜೇನಿನ ಸಂತತಿ ಕಡಿಮೆಯಾಗಿರುವುದೂ ನಿಜ. ಜೇನು ಹೇರಳವಾಗಿ ಲಭವಿರುವುದೂ ನಿಜ. ಜೇನನ್ನು ಬರೇ ಜೇನು ನೊಣಗಳ ಮೂಲಕವೇ ಪಡೆಯಬೇಕೆಂದೇನೂ ಇಲ್ಲ. ಕೃತಕವಾಗಿ ಜೇನು ಉತ್ಪಾದಿಸುವವರೂ ಇದ್ದಾರೆ. ಇಷ್ಟೇ ಅಲ್ಲದೆ ರಬ್ಬರ್ ಮರದಿಂದ ಜೇನಿನ ಉತ್ಪಾದನೆ ಮಾಡಲಾಗುತ್ತದೆ. ರಬ್ಬರ್ ಮರದ ಹೂವಿನಲ್ಲಿ ಮಧು ಇರಲಾರದು. ಅದರಲ್ಲಿ ಬರೇ ಮಕರಂದ ಮಾತ್ರ ಇರುತ್ತದೆ. ಎಲೆಗಳು ಚಿಗುರುವ ಜನವರಿ ತಿಂಗಳಿನಿಂದ ಮಾರ್ಚ್ ತನಕ ಎಲೆಯ ಭಾಗದಲ್ಲಿ ಹನೀ ಡ್ಯೂ ಎಂಬುದಾಗಿ ಕರೆಯುವ ಈ ಜೇನು ಸ್ವಲ್ಪ ಹುಳಿಯಾಗಿರುತ್ತದೆ. ನೈಸರ್ಗಿಕ ಪುಷ್ಪಗಳ ಪುಷ್ಪ ರಸದಿಂದ ಸಂಗ್ರಹಿತವಾದ ಜೇನಿನಷ್ಟು ಔಷಧೀಯ ಗುಣವನ್ನೂ ಪಡೆದಿರುವುದಿಲ್ಲ. ಈಗ ಮಾರುಕಟ್ಟೆಯಲ್ಲಿ ಈ ಜೇನನ್ನು ಸಂಸ್ಕರಿಸಿ ಬೇರೆ ಬೇರೆ ಬ್ರಾಂಡ್ ಮೇಲೆ ಮಾರಾಟ ಮಾಡಲಾಗುತ್ತದೆ. ಈ ಜೇನು ದಿನಬೆಳಗಾಗುವಾಗ ಅರಳಿ ಸಂಜೆಗೆ ಮುಚ್ಚಿಕೊಳ್ಳುವ ಪುಷ್ಪದಲ್ಲಿ ಉತ್ಪಾದನೆಯಾಗುವ ಜೇನಿನಷ್ಟು ಪರಿಶುದ್ಧ ಅಲ್ಲ ಎಂಬುದಾಗಿಯೂ ಹೇಳುತ್ತಾರೆ.
ಯಾವ ಕಾರಣಕ್ಕೆ ನೈಸರ್ಗಿಕ ಸಸ್ಯಗಳು ನಾಶವಾದವು: ಕೃಷಿ ವಿಸ್ತರಣೆ, ನಗರೀಕರಣ, ಮತ್ತು ಅರಣ್ಯ ಇಲಾಖೆಯ ಇಚ್ಚಾಶಕ್ತಿಯ ಕಾರಣದಿಂದಾಗಿ ಈ ಮರಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಗುಗ್ಗುಳ ಮರ ಎಲ್ಲೆಲ್ಲಿ ಇದ್ದರೂ ಹುಡುಕಿ ಕಡಿದು ಒಯ್ಯುತ್ತಾರೆ. ಕಾರಣ ಅದು ಪೇಪರ್ ಬಳಕೆಗೆ ಬೇಕು. ಇದೇ ಸ್ಥಿತಿ ಸುಮಾರು ೧೦-೧೫ ವರ್ಷಕ್ಕೆ ಹಿಂದೆ ಗಣಪತಿ ಕಾಯಿ (ಧೂಪದ) ಮರಕ್ಕೂ ಬಂದಿತ್ತು. ಒಟ್ಟಿನಲ್ಲಿ ನನ್ನ ಸ್ವಾರ್ಥಕ್ಕೆ ಯಾವುದು ಪ್ರಯೋಜನ ಇಲ್ಲವೆಂದು ಕಾಣುತ್ತದೆಯೋ ಅದೆಲ್ಲವೂ ನಾಶವಾಗುತ್ತಾ ಬಂತು.
ಉಳಿಸಲು ಮಾಡಬೇಕಾದುದೇನು: ಮರಮಟ್ಟುಗಳನ್ನು, ಪರಾಗದಾನಿಗಳಿಗೆ ಬೇಕಾಗುವ ಆಹಾರವನ್ನು ಒದಗಿಸಬಲ್ಲ ಸಸ್ಯಗಳು, ಮರಮಟ್ಟುಗಳನ್ನು ಬೆಳೆಸುವುದಕ್ಕೆ ಪ್ರಥಮ ಆದ್ಯತೆಯನ್ನು ಎಲ್ಲರೂ ಕೊಡಬೇಕು. ನಮಗೆ ವೈಯಕ್ತಿಕ ಪ್ರಯೋಜನಕ್ಕಿಂತ ಒಟ್ಟಾರೆ ಸಮಾಜಕ್ಕೆ ಪ್ರಯೋಜನವಾಗಿ, ನಾವೂ ಅದರಲ್ಲಿ ಭಾಗಿಗಳು ಆದಾಗ ಮಾತ್ರ
ಇವೆಲ್ಲಾ ಉಳಿಯಲು ಸಾಧ್ಯ. ಜನರಿಗೆ ನಾವು ತಿನ್ನುವ ಹಣ್ಣು ಹಂಪಲು, ತರಕಾರಿ, ಆಹಾರ ಧಾನ್ಯಗಳು ಎಲ್ಲದಕ್ಕೂ ಪರಾಗಸ್ಪರ್ಶ ಎಂಬ ಕ್ರಿಯೆ ಅಗತ್ಯ. ಅದು ಆಗುವುದು ಕೆಲವು ದುಂಬಿ ಜಾತಿಯ ಜೀವಿಗಳಿಂದ. ಅವು ಅಳಿದರೆ ನಾವು ಸತ್ವ ರಹಿತ ಹಣ್ಣು ತಿನ್ನಬೇಕಾದೀತು. ಬಂಜೆ ಮರಗಳನ್ನು ನೋಡಬೇಕಾದೀತು ಎಂಬ ವಿಚಾರ ಮನವರಿಕೆ ಮಾಡಿಕೊಟ್ಟು ಅದರ ಬಗ್ಗೆ ಸಾಮಾಜಕ್ಕೆ ತಿಳಿಯುವಂತಾದರೆ ಮರಮಟ್ಟು ಉಳಿದೀತು. ಪರಾಗದಾನಿಗಳೂ ಉಳಿಯಬಲ್ಲವು.
(ಮುಗಿಯಿತು)
ಅನುಭವ ಮಾಹಿತಿ: ರಾಧಾಕೃಷ್ಣ ಹೊಳ್ಳ
ಚಿತ್ರಗಳು: ಅಂತರ್ಜಾಲ ತಾಣ