ಪರಾಗಸ್ಪರ್ಶಿಗಳ ಅಳಿವಿನ ಆತಂಕ

ಪರಾಗಸ್ಪರ್ಶಿಗಳ ಅಳಿವಿನ ಆತಂಕ

ಪರಾಗಸ್ಪರ್ಶ ಯಾಕೆ ಬೇಕು? ಹೂ ಹಣ್ಣಾಗಿ ಬೀಜಕಟ್ಟಲಿಕ್ಕಾಗಿ. ಇದಕ್ಕೆ ಪರಾಗಸ್ಪರ್ಶಿಗಳು ಬೇಕೇ ಬೇಕು - ಜೇನ್ನೊಣಗಳು, ದುಂಬಿಗಳು, ಚಿಟ್ಟೆಗಳು, ಪತಂಗಗಳು, ಬಾವಲಿಗಳು, ಹಮ್ಮಿಂಗ್ ಹಕ್ಕಿಗಳು ಇತ್ಯಾದಿ.

ಸಸ್ಯಗಳು ಮತ್ತು ಪರಾಗಸ್ಪರ್ಶಿಗಳ ನಡುವಣ ಸಂಬಂಧ ಬೆಳೆದು ಬಂದದ್ದು ಸಾವಿರಾರು ವರುಷಗಳಲ್ಲಿ. ಆದರೆ ೧೯೭೦ರಿಂದೀಚೆಗೆ ಈ ಸೂಕ್ಷ್ಮ ಸಂಬಂಧವನ್ನು ಮನುಷ್ಯ ಹದಗೆಡಿಸಿದ್ದಾನೆ.

ಭೂಮಿಯಲ್ಲಿರುವ ಸಸ್ಯಪ್ರಭೇದಗಳ ಸಂಖ್ಯೆ ಎರಡೂವರೆ ಲಕ್ಷ. ಇವುಗಳಲ್ಲಿ ಶೇಕಡಾ ೮೦ರಲ್ಲಿ ಹಣ್ಣು ಅಥವಾ ಬೀಜ ಕಟ್ಟಬೇಕಾದರೆ ಪರಾಗಸ್ಪರ್ಶ ಆಗಲೇ ಬೇಕು. ವಿಕಾಸಪಥದಲ್ಲಿ ಕೆಳಮಟ್ಟದಲ್ಲಿದ್ದ ಸಸ್ಯಗಳು ಪರಾಗಸ್ಪರ್ಶವಿಲ್ಲದೆ ಪುನರುತ್ಪತ್ತಿ ಮಾಡಬಲ್ಲವು. ಆದರೆ, ಉಳಿದವಕ್ಕೆ ಪರಾಗಸ್ಪರ್ಶಿಗಳ ಸಹಾಯ ಅಗತ್ಯ.

ಸುಮಾರು ಎರಡು ಲಕ್ಷ ಕಶೇರುಕ ಮತ್ತು ಅಕಶೇರುಕ ಜೀವಿಗಳು ಪರಾಗಸ್ಪರ್ಶದಲ್ಲಿ ಸಹಕರಿಸುತ್ತವೆ. ಒಂದು ನೂರರಷ್ಟು ಮುಖ್ಯ ಬೆಳೆಗಳ ಪರಾಗಸ್ಪರ್ಶ ನಡೆಯುವುದು ಜೇನ್ನೊಣಗಳಿಂದ. ಹಮ್ಮಿಂಗ್ ಹಕ್ಕಿಗಳು ಮತ್ತು ಮಂಗಗಳೂ ಭೂಮಿಯ ವಿವಿಧ ಪ್ರದೇಶಗಳಲ್ಲಿ ಪರಾಗಸ್ಪರ್ಶದಲ್ಲಿ ಪಾತ್ರ ವಹಿಸುತ್ತವೆ. ಇವೆಲ್ಲವೂ ಉಳಿದರೆ ಮಾತ್ರ ನಮಗೆ ಬೆಳೆಗಳ ಫಸಲು ದಕ್ಕೀತು ಮತ್ತು ಜೀವವೈವಿಧ್ಯ ಉಳಿದೀತು.

ಕಳೆದ ಮೂರು ದಶಕಗಳಲ್ಲಿ ಪರಾಗಸ್ಪರ್ಶಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈಗ ಒಂದು ಕ್ಷಣ ಯೋಚಿಸಿ: ಪರಾಗಸ್ಪರ್ಶಿಗಳು ಇಲ್ಲದಿದ್ದರೆ ಏನಾಗುತ್ತಎ? ಗಿಡಮರಬಳ್ಳಿಗಳೆಲ್ಲ ಪಳೆಯುಳಿಕೆ ಆಗಿ ಬಿಡುತ್ತವೆ. ಯಾಕೆಂದರೆ, ಅವು ವಂಶಾಭಿವೃದ್ಧಿ ಮಾಡಲು ಸಾಧ್ಯವೇ ಇಲ್ಲ. ಖಾದಿ ಮತ್ತು ಗ್ರಾಮೋದ್ಯೋಗ ಕಮಿಷನ್ ಪುಣೆಯಲ್ಲಿ ಜೇನ್ನೊಣಗಳ ಬಗ್ಗೆ ನಡೆಸಿರುವ ಸಂಶೋಧನೆಗಳ ಫಲಿತಾಂಶಗಳೇ ಇದಕ್ಕೆ ಪುರಾವೆ.

ಪರಾಗಸ್ಪರ್ಶಿಗಳ ನಾಶಕ್ಕೆ ಕಾರಣ ಹೊಲತೋಟಗಳಲ್ಲಿ ವಿವೇಚನೆಯಿಲ್ಲದೆ ಸಿಂಪಡಿಸುವ ಕೀಟನಾಶಕಗಳು. ಪೀಡೆಕೀಟಗಳನ್ನು ಕೊಲ್ಲಲು ಪ್ರಯೋಗಿಸುವ ಕೀಟನಾಶಕಗಳು ಉಪಕಾರಿ ಕೀಟಗಳಾದ ಪರಗಸ್ಪರ್ಶಿಗಳನ್ನೂ ಕೊಲ್ಲುತ್ತವೆ - ಮುಖ್ಯವಾಗಿ ಜೇನ್ನೊಣಗಳನ್ನು. ಆಲ್ಡ್ರೀನ್, ಮಲಾಥಿಯಾನ್-ಡಿ ಮತ್ತು ಮಿಥೊಮಿಲ್-ಡಿ ಇಂತಹ ಮಾರಕ ಕೀಟನಾಶಕಗಳು, ಜೇನ್ನೊಣಗಳು ಹಾಗೂ ಇತರ ಪರಾಗಸ್ಪರ್ಶಿಗಳನ್ನು ಅನೇಕ ದೇಶಗಳಲ್ಲಿ ನಿರಂತರವಾಗಿ ಬಲಿತೆಗೆದುಕೊಳ್ಳುತ್ತಿವೆ.

ಭಾರತದಲ್ಲಿ ಬಳಕೆಯಾಗುವ ಕೀಟನಾಶಕಗಳ ಶೇಕಡಾ ೪೫ರಷ್ತು ಹತ್ತಿ ಬೆಳೆಗೆ ಸಿಂಪಡಣೆ ಆಗುತ್ತಿದೆ. ಇದುವೇ ಜೇನ್ನೊಣಗಳ ಮುಖ್ಯ ಕೊಲೆಗಡುಕ! ಹತ್ತಿ ಬೆಳೆಗೆ ಧಾಳಿ ಮಾಡುವ ಕೀಟಗಳನ್ನು ಕೊಲ್ಲಲು ಬೆಳೆಗಾರರು ಕೀಟನಾಶಕಗಳನ್ನು ಸಿಂಪಡಿಸುವುದು - ಪ್ರತಿಯೊಂದು ಬೆಳೆಗೆ ಒಂದೆರಡು ಬಾರಿಯಲ್ಲ, ಬದಲಾಗಿ ೧೦ರಿಂದ ೧೮ ಬಾರಿ! ಇದು ಜೇನ್ನೊಣ ಮತ್ತು ಇತರ ಪರಾಗಸ್ಪರ್ಶಿಗಳ ಮಾರಣಹೋಮಕ್ಕೆ ಕಾರಣ ಎಂಬುದರ ಬಗ್ಗೆ ಅವರಿಗೆ ನಿರ್ಲಕ್ಷ್ಯ.

ಬಿಹಾರದಲ್ಲಿಯೂ ಇದೇ ಪರಿಸ್ಥಿತಿ. ಮಾವು ಮತ್ತು ಲಿಚಿ ಅಲ್ಲಿನ ಮುಖ್ಯ ಹಣ್ಣಿನ ಬೆಳೆಗಳು. ಇವುಗಳ ಹೂಗಳು ಜೇನ್ನೊಣಗಳಿಗೆ ಇಷ್ಟ. ಆದರೆ ಈ ಹಣ್ಣಿನ ಮರಗಳಿಗೆ ಸಿಂಪಡಿಸುವ ಕೀಟನಾಶಕಗಳು ಹಿಂಡುಹಿಂಡು ಜೇನ್ನೊಣಗಳ ಜೀವ ಹಿಂಡುತ್ತವೆ. ಅದಲ್ಲದೆ, ಕೀಟನಾಶಕಗಳನ್ನು ಹಗಲು ಸಿಂಪಡಿಸುವುದು, ಆಗ ಹಾರಾಟ ನಡೆಸುವ ಜೇನ್ನೊಣಗಳಿಗೆ ಇನ್ನಷ್ಟು ಅಪಾಯಕಾರಿ.

ಇವೆಲ್ಲದರ ಒಟ್ಟು ಪರಿಣಾಮ ಏನು? ಭೂಮಿಯಲ್ಲಿ ಮಾನವ ಕೃಷಿ ಮಾಡುತ್ತಿರುವುದು ೧,೩೩೦ ಸಸ್ಯ ಪ್ರಭೇದಗಳನ್ನು. ಇವುಗಳಲ್ಲಿ ಬಹುಪಾಲಿನಲ್ಲಿ ಫಲ ಸಿಗಬೇಕಾದರೆ ಪರಾಗಸ್ಪರ್ಶಿಗಳು ಅತ್ಯವಶ್ಯ. ಅವುಗಳ ಸಂಖ್ಯೆ ಕ್ಷೀಣಿಸಿದಾಗ ಫಸಲಿನಲ್ಲಿ ತೀವ್ರ ಕುಸಿತ. ಈಗಾಗಲೇ ಇದು ಹಲವು ದೇಶಗಳ ಅನುಭವಕ್ಕೆ ಬಂದಿದೆ. ಉದಾಹರಣೆಗೆ, ಉತ್ತರ ಬೋರ್ನಿಯೋದಲ್ಲಿ ಗೇರು ಕೃಷಿ ಮತ್ತು ಕೆನಡಾದ ಒಂಟಾರಿಯೋದಲ್ಲಿ ಚೆರ್ರಿ ಕೃಷಿ ನೆಲಕಚ್ಚಿತು. ಸೇಬು, ಬೆರ್ರಿ, ಆಲ್ಪಾಲ್ಫಾ, ಪಿಯರ್, ಚೀನಿಕಾಯಿ, ಕುಂಬಳಕಾಯಿ ಇತ್ಯಾದಿ ಹಲವು ಹಣ್ಣುತರಕಾರಿಗಳ ಕೃಷಿ ಜಗತ್ತಿನ ಹಲವೆಡೆ ಮಣ್ಣುಪಾಲಾಗಲು ಇದೇ ಕಾರಣ.
ಇಂತಹ ಬೆಳೆನಷ್ಟ ಯಾವುದೇ ಸರಕಾರಕ್ಕೆ ಆಘಾತಕಾರಿ. ಯುಎಸ್‌ಎ ದೇಶವೊಂದರಲ್ಲೇ ಪರಾಗಸ್ಪರ್ಶಿಗಳ ಆರ್ಥಿಕ ಕೊಡುಗೆ ವಾರ್ಷಿಕ ನಾಲ್ಕು ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಅಗಾಧ ಮೊತ್ತ. ಪರಾಗಸ್ಪರ್ಶಿಗಳು ಇದೇ ರೀತಿ ಕೀಟನಾಶಕಗಳಿಂದಾಗಿ ನಾಶವಾಗುತ್ತಿದ್ದರೆ, ಅದರಿಂದಾಗುವ ಬೆಳೆನಷ್ಟದ ಮೌಲ್ಯ ಕೋಟಿಗಟ್ಟಲೆ ರೂಪಾಯಿಗಳು.

ಈ ಸಮಸ್ಯೆಗೆ ಪರಿಹಾರ ಏನು? ಹೂ, ಹಣ್ಣು, ತರಕಾರಿ, ಎಣ್ಣೆಬೀಜ, ತೋಟಗಾರಿಕಾ ಬೆಳೆಗಳು ಇತ್ಯಾದಿಗಳ ಕೃಷಿಯಲ್ಲಿ ಕೇವಲ ಜೇನ್ನೊಣಗಳಿಂದಾಗಿ ಇಳುವರಿ ಎಷ್ಟು ಪಟ್ಟು ಹೆಚ್ಚಾಗುತ್ತದೆ? ಈ ಮಾಹಿತಿಯನ್ನು ಕೃಷಿಕರಿಗೆ ಮನದಟ್ಟಾಗುವಂತೆ ತಿಳಿಸುವುದು ಒಂದು ಮುಖ್ಯ ಪರಿಹಾರ. ಈ ನಿಟ್ಟಿನಲ್ಲಿ, ಪತ್ರಿಕೆಗಳು, ಆಕಾಶವಾಣಿ, ಟಿವಿ ಚಾನೆಲ್‌ಗಳು ಅಂತರ್ಜಾಲದ ಮಾಹಿತಿ ವೆಬ್-ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಹತ್ವದ ಪಾತ್ರ ವಹಿಸಬಲ್ಲವು.

ಆದ್ದರಿಂದ, ಸಾವಿರಾರು ವರುಷಗಳಿಂದ ಸಸ್ಯಗಳು ಮತ್ತು ಪರಾಗಸ್ಪರ್ಶಿಗಳ ನಡುವೆ ಇರುವ “ಪರಸ್ಪರ ಸಂರಕ್ಷಣೆ”ಯ ಸಮೀಕರಣವನ್ನು ರಕ್ಷಿಸುವುದು ಅಗತ್ಯ. ಅವುಗಳ ಉಳಿವಿಗಾಗಿ ಮತ್ತು ಮಾನವಕುಲದ ಉಳಿವಿಗಾಗಿ, ಅಲ್ಲವೇ?