ಪರಿಣಾಮಕಾರಿ ಜಾರಿ ಅಗತ್ಯ
![](https://saaranga-aws.s3.ap-south-1.amazonaws.com/s3fs-public/styles/article-landing/public/road.jpeg?itok=ar-ULAEa)
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ನಗದುರಹಿತ ಚಿಕಿತ್ಸೆ ನೀಡಲು ಕೇಂದ್ರ ಸರಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ. ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಗಾಯಾಳುಗಳು ಚಿಕಿತ್ಸೆಗೆ ಪರದಾಡುವ ನಿದರ್ಶನಗಳಿಗೆ ಕೊರತೆ ಇಲ್ಲ. ಅಪಘಾತ ನಡೆದ ೨೪ ಗಂಟೆಯೊಳಗೆ ಪೋಲೀಸರಿಗೆ ಮಾಹಿತಿ ಒದಗಿಸಿದರೆ ತಕ್ಷಣವೇ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆ ನೀಡಲಾಗುವುದು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆತರೆ ಅಪಘಾತದಲ್ಲಿ ಪ್ರಾಣಹಾನಿಯ ಪ್ರಮಾಣವನ್ನು ಖಂಡಿತವಾಗಿಯೂ ತಪ್ಪಿಸಬಹುದು. ಎಷ್ಟೋ ಬಾರಿ ಸೂಕ್ತ ಆಸ್ಪತ್ರೆ ಸಿಗದೇ ಆಗುವ ಪರದಾಟ ಅಷ್ಟಿಷ್ಟಲ್ಲ. ಆಸ್ಪತ್ರೆ ಸಿಕ್ಕರೂ ಗಾಯಾಳುಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸುವ ಇಲ್ಲವೆ ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡುವಂಥ ಬೆಳವಣಿಗೆಗಳಿಗೂ ಕಡಿವಾಣ ಬೀಳಬೇಕಿದೆ. ಈ ಪ್ರಕ್ರೊಯೆಯಲ್ಲಿ ಅಧಿಕ ರಕ್ತಸ್ರಾವ ಅಥವಾ ಗಂಭೀರ ಪೆಟ್ಟಿನಿಂದ ಗಾಯಾಳು ಪ್ರಾಣಕ್ಕೆ ಸಂಚಕಾರ ಬಂದರೆ ಅದಕ್ಕೆ ಹೊಣೆ ಯಾರು?
ನಗದು ರಹಿತ ಚಿಕಿತ್ಸೆ ಯೋಜನೆಯಡಿ ಗಾಯಾಳುಗಳು ಗರಿಷ್ಟ ಏಳು ದಿನಗಳವರೆಗೆ ಆಸ್ಪತ್ರೆಯಲ್ಲಿ ಅಥವಾ ಗರಿಷ್ಟ ೧.೫ ಲಕ್ಷ ರೂಪಾಯಿಗಳವರೆಗಿನ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ. ಹಿಟ್ ಆಂಡ್ ರನ್ ಕೇಸ್ ನಲ್ಲಿ ಮೃತರ ಕುಟುಂಬಸ್ಥರಿಗೆ ತಕ್ಷಣವೇ ೨ ಲಕ್ಷ ರೂ. ಪರಿಹಾರ ದೊರೆಯಲಿದೆ. ಕೆಲ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಿಗೂ ಯೋಜನೆ ವಿಸ್ತರಣೆಯಾಗಲಿದೆ ಎಂದು ಗಡ್ಕರಿಯವರು ತಿಳಿಸಿದ್ದು, ರಸ್ತೆ ಸುರಕ್ಷತೆಗೆ ಆದ್ಯತೆ ನೀಡುವುದು ಸಚಿವಾಲಯದ ಗುರಿ ಆಗಿದೆ ಎಂದಿದ್ದಾರೆ.
೨೦೨೪ರಲ್ಲಿ ದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ೧.೮ ಲಕ್ಷ ಜನರು ಮೃತಪಟ್ಟಿದ್ದಾರೆ. ಇವರಲ್ಲಿ ೩೦ ಸಾವಿರ ಜನರು ಹೆಲ್ಮೆಟ್ ಧರಿಸದ ಕಾರಣದಿಂದ ಮೃತಪಟ್ಟಿದ್ದಾರೆ. ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇಕಡಾ ೬೬ರಷ್ಟು ಜನರು ೧-೩೪ ವಯೋಮಾನದವರು ಎಂಬುದು ಗಮನಾರ್ಹ. ಯುವಕರ ಜೀವನ ಅರಳುವ ಮುನ್ನವೇ, ಅಪಘಾತ ಅವರನ್ನು ಬಲಿ ತೆಗೆದುಕೊಳ್ಳುತ್ತಿರುವುದು ಗಂಭೀರವಾದ ವಿಷಯ. ಶಾಲೆ ಮತ್ತು ಕಾಲೇಜುಗಳ ಬಳಿ ಅವೈಜ್ಞಾನಿಕ ಆಗಮನ ಮತ್ತು ನಿರ್ಗಮನ ದ್ವಾರಗಳಿಂದಾಗಿ ೧೦ ಸಾವಿರ ಮಕ್ಕಳು ಮೃತಪಟ್ಟಿದ್ದಾರೆ. ಈ ಬಗೆಯ ಜೀವಹಾನಿಯನ್ನು ತಪ್ಪಿಸಬೇಕಾಗಿದೆ. ರಸ್ತೆ ಅಪಘಾತಗಳನ್ನು ತಗ್ಗಿಸಲು ಸಾಮೂಹಿಕ ಪ್ರಯತ್ನಗಳು ಆಗಬೇಕಿದೆ. ಸರ್ಕಾರದ ಪ್ರಯತ್ನಗಳ ಜೊತೆಗೆ ಜನರು ಕೂಡ ಸುರಕ್ಷಾ ಕ್ರಮಗಳನ್ನು, ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಗಾಯಾಳುಗಳ ನೆರವಿಗೆ ಬರುವಲ್ಲಿ ನಗದು ರಹಿತ ಚಿಕಿತ್ಸೆ ಮಹತ್ವದ ಯೋಜನೆಯಾಗಿದೆ. ಇದು ಪರಿಣಾಮಕಾರಿಯಾಗಿ ಜಾರಿಗೆ ಬರಲಿ. ಎಲ್ಲ ರಾಜ್ಯಗಳು ಅನುಷ್ಟಾನಕ್ಕೆ ತರಲಿ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾಳಜಿ ವಹಿಸಿದರೆ, ಗಂಭೀರ ಸಮಸ್ಯೆಗೆ ಪರಿಹಾರದ ಮುಲಾಮು ಲಭ್ಯವಾಗುವುದರಲ್ಲಿ ಸಂಶಯವಿಲ್ಲ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೯-೦೧-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ