ಪರಿಣಾಮಕಾರೀ ಕೊಳೆ ರೋಗ ನಿಯಂತ್ರಣ


ಈ ವರ್ಷ ಮಳೆಗಾಲ ತಡವಾದರೂ ಸಾಧಾರಣವಾಗಿ ಮಳೆ ಸುರಿಯುತ್ತಿದೆ. ಮಳೆಗಾಲದ ಮೊದಲೇ ಅಡಿಕೆ ಬೆಳೆಗಾರರು ಕೊಳೆರೋಗ ಬಾರದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರತೀ ವರ್ಷ ರೈತರ ಚಿಂತೆ ಕೊಳೆ ಬರದಂತೆ ಅಡಿಕೆಯನ್ನು ರಕ್ಷಣೆ ಮಾಡುವುದು. ಪ್ರತೀ ವರ್ಷ ಅಡಿಕೆಗೆ ಈ ಕೆಲಸ ಮಾಡುತ್ತೇವೆ. ಆದರೆ ಒಂದಷ್ಟು ತಪ್ಪುಗಳನ್ನು ಮಾಡುತ್ತೇವೆ. ಆ ತಪ್ಪುಗಳು ಆಗದ ರೀತಿಯಲ್ಲಿ ಕೊಳೆ ನಿಯಂತ್ರಣ ಮಾಡಿದ್ದೇ ಆದರೆ ರೋಗದಿಂದ ರಕ್ಷಣೆ ಪಡೆಯಬಹುದು.
ಅಡಿಕೆ ಬರುವ ಕೊಳೆ ರೋಗಕ್ಕೆ ಒಂದು ಶಿಲೀಂದ್ರ ಕಾರಣ. ಈ ಶಿಲೀಂದ್ರ ಮಣ್ಣಿನಲ್ಲಿ ಸುಪ್ತಾವಸ್ಥೆಯಲ್ಲಿ ಇದ್ದು ಮಣ್ಣಿನಲ್ಲಿ ತೇವಾಂಶ ಅಧಿಕವಾದಾಗ ಸುಪ್ತಾವಸ್ತೆ ಕಳಚಿಕೊಂಡು ಸಂತಾನಾಭಿವೃದ್ದಿ ಹೊಂದುತ್ತದೆ. ಈ ಶಿಲೀಂದ್ರವು ಎಲೆ ಕಾಯಿಗಳ ಒಳ ಸೇರಿ ಒಳಗಿನ ಕಾಯಿಯನ್ನು ಬಾಧಿಸಿ ಅದನ್ನು ಜೀವ ಕಳೆ ಕಳಕೊಳ್ಳುವಂತೆ ಮಾಡಿ ಉದುರಿಸುತ್ತದೆ ಇಲ್ಲವೇ ಅಲ್ಲೇ ಚುರುಟುವಂತೆ ಮಾಡುತ್ತದೆ.
ಕೊಳೆ ರೋಗಕ್ಕೆ ಶಾಶ್ವತ ಪರಿಹಾರ ಎಂಬುದು ಇಲ್ಲ. ಕಳೆದ ೧೦ ವರ್ಷಗಳ ಹಿಂದಿನ ತನಕ ಮೈಲುತುತ್ತೆ ಮತ್ತು ಸುಣ್ಣಗಳ ನಿರ್ದಿಷ್ಟ ಪ್ರಮಾಣದ ಮಿಶ್ರಣವನ್ನು ಮಾಡಿ ಅಡಿಕೆ ಕಾಯಿಗಳ ಮೇಲೆ ಸಿಂಪಡಿಸಿ ಕೊಳೆ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಕ್ರಮ ಇತ್ತು. ಇದು ಈಗಲೂ ಇದೆ. ಜೊತೆಗೆ ಇತ್ತೀಚೆಗೆ ಪೊಟಾಶಿಯಂ ಫೋಸ್ಫೋನೇಟ್ ಅನ್ನೂ ಸಹ ಬಳಕೆ ಮಾಡುವುದು ಪ್ರಾರಂಭವಾಗಿದೆ. ಈ ವರ್ಷ ಇದನ್ನು ಮಾರಾಟ ಮಾಡಬಾರದು ಎಂಬ ಸುದ್ದಿಗಳು ಇರುವ ಕಾರಣ ಮಾರುಕಟ್ಟೆಯಲ್ಲಿ ಇದು ಲಭ್ಯವಿಲ್ಲ.
ಕೊಳೆ ರೋಗಕ್ಕೆ ಕಾರಣವಾದ ಫೈಟೋಪ್ಥೆರಾ ಶಿಲೀಂದ್ರಕ್ಕೆ ತಾಮ್ರ ಒಂದು ಹತ್ತಿಕ್ಕುವ ಔಷಧಿ. ತಾಮ್ರ ಲೋಹವಾದ ಕಾರಣ ಇದನ್ನು ಬಳಕೆ ಮಾಡಲಿಕ್ಕಾಗುವುದಿಲ್ಲ.ಅದರನ್ನು ನೀರಿನಲ್ಲಿ ಕರಗುವ ರೂಪಕ್ಕೆ ತಂದು ಬಳಸಬೇಕು. ತಾಮ್ರವನ್ನು (ಸಾಮಾನ್ಯವಾಗಿ ತಾಮ್ರದ ಅದಿರು ಇಲ್ಲವೇ ಗುಜುರಿ ತಾಮ್ರ) ಸಲ್ಫ್ಯೂರಿಕ್ ಅಸಿಡ್‌ನಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಹಾಕಿದಾಗ ಅದು ನೀಲಿ ಹರಳು ರೂಪದ ತಾಮ್ರದ ಸಲ್ಫೇಟ್ ಆಗುತ್ತದೆ. ಈ ತಾಮ್ರದ ಸಲ್ಫೇಟ್ ನೀರಿನಲ್ಲಿ ಕರಗುವ ರೂಪದಲ್ಲಿರುತ್ತದೆ. ಇದರಲ್ಲಿ ತಾಮ್ರ ಮತ್ತು ಸಲ್ಫ್ಯೂರಿಕ್ ಆಮ್ಲವನ್ನು ಸೇರಿಸಿದ ಪ್ರಮಾಣದಂತೆ ತಾಮ್ರ ಮತ್ತು ಸಲ್ಫರ್ ಒಳಗೊಂಡಿರುತ್ತದೆ. ಇದು ಬರೇ ಶಿಲೀಂದ್ರ ನಿಯಂತ್ರಣ ಮಾತ್ರವಲ್ಲದೆ, ಬ್ಯಾಕ್ಟೀರಿಯಾಗಳಿಗೂ, ಸಣ್ಣ ಪುಟ್ಟ ರಸ ಹೀರುವ ಕೀಟಗಳಿಗೂ ಪರಿಣಾಮಕಾರಿಯಾಗಿರುತ್ತದೆ.
ಪೊಟ್ಯಾಶಿಯಂ ಫೋಸ್ಫೋನೇಟ್ ಎಂಬುದು ಒಂದು ಬೆಳವಣಿಗೆ ಪ್ರಚೋದಕ. ಇದರ ಇನ್ನೊಂದು ಗುಣ ಎಂದರೆ ಶಿಲೀಂದ್ರ ರೋಗದ ವಿರುದ್ಧ ಕೆಲಸಮಾಡುವಿಕೆ. ಸಸ್ಯಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಡುವ ಮೂಲಕ ಕೊಳೆ ರೋಗ ಬರದಂತೆ ಮಾಡುತ್ತದೆ. ಪೊಟ್ಯಾಶಿಯಂ ಫೋಸ್ಫೋನೇಟ್ ಅಲ್ಲದೆ ಇನ್ನೂ ಮೂರು ನಾಲ್ಕು ಸಂಯೋಜನೆಗಳು ಶಿಲೀಂದ್ರ ರೋಗ ನಿಯಂತ್ರಿಸುವ ಕೆಲಸ ಮಾಡುತ್ತವೆ. ಇವು ಒಮ್ಮೆ ಮಾರುಕಟ್ಟೆಗೆ ಪ್ರವೇಶಿಸಿದ್ದವು. ಆದರೆ ಈಗ ಕಂಡು ಬರುತ್ತಿಲ್ಲ. ಇದರ ಒಂದು ಅವಗುಣ ಎಂದರೆ ನಿರೋಧಕ ಶಕ್ತಿ ಕಡಿಮೆಯಾದ ತರುವಾಯ ಇದು ಫಲಕಾರಿಯಾಗುವುದಿಲ್ಲ.
ಕೊಳೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದೇ ಬೆಳೆಗಾರರ ಪ್ರಮುಖ ಕೆಲಸ. ಅದು ಪೊಟ್ಯಾಶಿಯಂ ಫೋಸ್ಫೋನೇಟ್ ಆಗಿರಲಿ ಅಥವಾ ಮೈಲುತುತ್ತೆ ದ್ರಾವಣ ಆಗಿರಲಿ ಅದನ್ನು ಸರಿಯಾದ ಕ್ರಮದಲ್ಲಿ ತಯಾರಿಸಿ ಸರಿಯಾದ ರೀತಿಯಲ್ಲಿ ಸಿಂಪಡಿಸಿದಾಗ ಕೊಳೆ ರೊಗವನ್ನು ಹದ್ದುಬಸ್ತಿನಲ್ಲಿ ಇಡಬಹುದು. ಹಾಗೆಂದು ಇದು ವಾತಾವರಣ ಸಂಬಂಧಿತ ರೋಗ ಅದ ಕಾರಣ ೧೦೦% ನಿಯಂತ್ರಣಕ್ಕೆ ವಾತಾವರಣವೇ ಅನುಕೂಲ ಕಲ್ಪಿಸಿಕೊಡಬೇಕು.
ಮೈಲುತುತ್ತೆ ಬಳಸುವವರು ತಿಳಿದಿರಬೇಕಾದ ಸಂಗತಿ: ಮೈಲು ತುತ್ತೆ ಮತ್ತು ಸುಣ್ಣದ ಮಿಶ್ರಣದಲ್ಲಿ ಸುಣ್ಣ ಮೈಲುತುತ್ತೆಯ ಆಮ್ಲೀಯ ಗುಣವನ್ನು ತಗ್ಗಿಸುವ ಕೆಲಸವನ್ನು ಮಾತ್ರ ಮಾಡುತ್ತದೆ. ತಾಮ್ರ ಅಥವಾ ತಾಮ್ರದ ಸಂಯುಕ್ತಗಳು ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾ, ಮತ್ತು ವೈರಸ್ ಮೂರಕ್ಕೂ ವಿಷಕಾರಿಯಾಗಿ ಕೆಲಸ ಮಾಡುತ್ತದೆ. ಯಾವುದೇ ಘನ ಲೋಹಗಳೂ ನಿರ್ದಿಷ್ಟ ಸಾಂದ್ರತೆಯಲ್ಲಿ ಶಿಲೀಂದ್ರಗಳ ಬೆಳವಣಿಗೆಗೆ ಅನನುಕೂಲವೊಡ್ಡುತ್ತದೆ. ತಾಮ್ರವನ್ನು ಮಾನವ ಅನಾರೋಗ್ಯ ಚಿಕಿತ್ಸೆಯಲ್ಲೂ ಬಳಕೆ ಮಾಡುವುದುಂಟು.
ತಾಮ್ರ ಮತ್ತು ಸುಣ್ಣಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಿದಾಗ ಅದು ಬೋರ್ಡೋ ದ್ರಾವಣ ಎಂದಾಗುತ್ತದೆ. ಈ ಬೋರ್ಡೋ ದ್ರಾವಣವನ್ನು ಸಸ್ಯದ ಹಸಿರು ಭಾಗಕ್ಕೆ ಸಿಂಪಡಿಸಿದಾಗ ಅದು ಸಸ್ಯ ಶರೀರದ ಒಳ ಸೇರಿಕೊಂಡು ಶಿಲೀಂದ್ರಗಳ ನುಸುಳುವಿಕೆಗೆ ಪ್ರತಿರೋಧ ಒಡ್ಡುತ್ತವೆ. ಸುಣ್ಣವು ತಾಮ್ರದ ಸಲ್ಫೇಟಿನ ಆಮ್ಲೀಯ ಗುಣವನ್ನು ತಗ್ಗಿಸಿ ಅದನ್ನು ತಟಸ್ಥ ಅಥವಾ ಕ್ಷಾರೀಯ ಸ್ಥಿತಿಗೆ ಮುಟ್ಟಿಸುತ್ತದೆ. ಅದಕ್ಕಾಗಿಯೇ ತಾಮ್ರದ ಸಲ್ಫೇಟಿಗೆ ಸುಣ್ಣವನ್ನು ಮಿಶ್ರಣ ಮಾಡಲಾಗುತ್ತದೆ. ಆಮ್ಲೀಯ ಸ್ಥಿತಿಯು ಶಿಲೀಂದ್ರಗಳಿಗೆ ಬೆಳವಣಿಗೆಗೆ ಅನುಕೂಲಕರ ಸನ್ನಿವೇಶವಾಗಿರುತ್ತದೆ.
ಮೈಲುತುತ್ತೆ ಸುಣ್ಣವನ್ನು ಮಿಶ್ರಣ ಮಾಡುವಾಗ ಅಧಿಕ ಸುಣ್ಣ ಹಾಕಿದಷ್ಟು ಅದು ಕ್ಷಾರೀಯವಾಗುತ್ತಾ ಹೋಗುತ್ತದೆ. ಆಗ ಬೋರ್ಡೋ ದ್ರಾವಣದ ತಾಮ್ರದ ಅಂಶವನ್ನಾಗಲೀ ಸುಣ್ಣದ ಅಂಶವನ್ನಾಗಲೀ ಸಸ್ಯಗಳು ಶರೀರದ ಒಳಕ್ಕೆ ಹೀರಿಕೊಳ್ಳಲು ಅನನುಕೂಲವಾಗುತ್ತದೆ. ಬರೇ ಲೇಪನ ಮಾತ್ರ ಆಗುತ್ತದೆ. ಬರೇ ಲೇಪನ ಒಂದರಿಂದಲೇ ಕೊಳೆ ರೋಗ ನಿಯಂತ್ರಣವಾಗಲಾರದು. ಅದು ಸಸ್ಯಾಂಗದ ಒಳಗೆ ಸೇರಿದಾಗ ಅದರ ಪರಿಣಾಮ ಜಾಸ್ತಿ. ಒಂದು ಕಿಲೋ ಮೈಲುತುತ್ತೆಗೆ ೭೫೦ ಗ್ರಾಂ ನಿಂದ ೧ ಕಿಲೋ ತನಕ ಸುಣ್ಣ ಶಿಫಾರಸು ಮಾಡಿರುವುದು ಇದಕ್ಕಾಗಿಯೇ.
ಮೈಲು ತುತ್ತೆ ಮತ್ತು ಸುಣ್ಣದ ದ್ರಾವಣಕ್ಕೆ ಹವಾಮಾನದ ಅನುಕೂಲತೆ ಇದ್ದರೆ ಮಾತ್ರ ೪೦ ದಿನ ವಾಯ್ದೆ. ಮಳೆ ಹೆಚ್ಚು ಬಂದರೆ ಸಿಂಪರಣೆಯನ್ನು ೩೦ ದಿನಕ್ಕೂ ಮಾಡಬೇಕಾಗಬಹುದು. ಆಧಿಕ ಲೋಹ ಬಳಕೆ ಸಸ್ಯಗಳಿಗೆ ವಿಷಕಾರಿಯೂ ಹೌದು. ಅದಕ್ಕಾಗಿ ತಾಮ್ರದ ಸಲ್ಫೇಟನ್ನು ಗೊನೆಗಳಿಗೆ ಮಾತ್ರ ಬೀಳುವಂತೆ ಸಿಂಪಡಿಸಲಾಗುತ್ತದೆ. ಆ ಭಾಗದಲ್ಲಿ ಹೀರಲ್ಪಟ್ಟುದೇ ಸಾಕಾಗುತ್ತದೆ. ಎಲೆಗಳಿಗೆ ತಗಲಿದ ದ್ರಾವಣದ ಸಾರವನ್ನೂ ಮರ ಹೀರಿಕೊಳ್ಳುತ್ತದೆ.
ಮೈಲು ತುತ್ತೆ ಪರೀಕ್ಷೆ ಅಗತ್ಯ: ಮಾರುಕಟ್ಟೆಯಲ್ಲಿ ಹಲವಾರು ಬ್ರಾಂಡ್ ನ ತುತ್ತೆ ಲಭ್ಯವಿದ್ದು, ರೈತರಿಗೆ ಯಾವುದು ಒಳ್ಳೆಯದು, ಯಾವುದು ಬೇಡ ಎಂದು ತಿಳಿಯುವುದು ಕಷ್ಟ. ಇದನ್ನು ಮಳೆಗಾಲಕ್ಕೆ ಮುಂಚೆ ಸಮೀಪದ ಕೃಷಿ ಇಲಾಖೆಯಲ್ಲಿ ಅಥವಾ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ನಾಲ್ಕಾರು ರೈತರು ಒಟ್ಟು ಸೇರಿ ಒಯ್ದು ಪರೀಕ್ಷಿಸಿದರೆ ಒಳ್ಳೆಯದನ್ನು ಆಯ್ಕೆ ಮಾಡುವುದಕ್ಕೆ ಅನುಕೂಲವಾಗುತ್ತದೆ. ರೈತರು ಸ್ಯಾಂಪಲ್ ಒಯ್ಯುವಾಗ ತಾವು ನಂಬರ್ ಕೊಟ್ಟು ಸ್ಯಾಂಪಲ್ ಕೊಡಿ. ಯಾವ ಬ್ರಾಂಡ್ ಎಂಬುದು ನಿಮಗೆ ಮಾತ್ರ ತಿಳಿದಿರಲಿ. ಯಾವುದೇ ಕಾರಣಕ್ಕೂ ಬ್ರಾಂಡ್ ಅನ್ನು ಪರೀಕ್ಷೆ ಮಾಡುವವರಿಗೆ ತಿಳಿಸಬೇಡಿ. ತುತ್ತೆಯಲ್ಲಿ ಕನಿಷ್ಟ ೨೫ % ತಾಮ್ರ ಇರಬೇಕು. ಅದು ಶುದ್ಧ ತಾಮ್ರ ಆಗಿರಬೇಕು.
ಪರಿಣಾಮಕಾರಿಯಾಗಿ ಕೊಳೆ ನಿಯಂತ್ರಣ ಮಾಡುವ ವಿಧಾನ: ಕೊಳೆ ರೋಗಕ್ಕೆ ಅನುಕೂಲಕರ ಸನ್ನಿವೇಶವನ್ನು ನಿಯಂತ್ರಿಸಲು ಅಸಾಧ್ಯ. ಆದರೆ ಕೊಳೆ ರೋಗಕ್ಕೆ ಕಾರಣವಾಗುವ ಶಿಲೀಂದ್ರಗಳ ಬೆಳವಣಿಗೆಯನ್ನು ಸ್ವಲ್ಪ ಮಟ್ಟಿಗೆ ಹತ್ತಿಕ್ಕಬಹುದು. ಮಳೆಗಾಲ ಬರುವ ಸಮಯದಲ್ಲಿ ಮಣ್ಣಿನ ಆಮ್ಲೀಯ ಸ್ಥಿತಿ- ಕ್ಷಾರೀಯ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಬಹುತೇಕ ಅಧಿಕ ಮಳೆಯಾಗುವ ಪ್ರದೇಶಗಳ ಮಣ್ಣು ಆಮ್ಲೀಯವೇ ಆಗಿರುತ್ತದೆ. ಇಂತಹ ಮಣ್ಣಿಗೆ ಆಮ್ಲೀಯತೆ ಕಡಿಮೆ ಮಾಡುವ ಸುಣ್ಣದ ಅಂಶವನ್ನು ಕೊಡುವುದರಿಂದ ಶಿಲೀಂದ್ರಗಳ ಬೆಳವಣಿಗೆಗೆ ತೊಂದರೆಯಾಗುತ್ತದೆ. ಇದರಿಂದ ಕೊಳೆ ರೋಗ ಸ್ವಲ್ಪ ಹತೋಟಿಯಾಗುತ್ತದೆ. ಆಮ್ಲೀಯತೆ ಮಣ್ಣು+ ಮನುಷ್ಯ+ ಪ್ರಾಣಿ ಎಲ್ಲದಕ್ಕೂ ಕೆಲವು ರೋಗ ಪ್ರವೇಶಕ್ಕೆ ಅನುಕೂಲ ಸ್ಥಿತಿಯಾಗಿರುತ್ತದೆ. (Raising the pH of Iss from its native 4.5 to 7.0 and 9.0 decreased mean fungal CFU numbers by 50 % alkalinisation has been shown to stimulate bacterial growth very strongly) ಇನ್ನು ಸಿಂಪರಣೆ ಮಾಡುವಾಗ ಮಳೆ ಬಂದು ತೊಳೆದು ಹೋದಾಗ ಮತ್ತು ಕಾಯಿಗಳು ಎಳೆ ಮಿಡಿಯಾಗಿದ್ದಾಗ ಸಿಂಪಡಿಸಿದಾಗ ಸುಮಾರು ೩೦ ದಿನಕ್ಕೆ ಮತ್ತೊಮ್ಮೆ ಸಿಂಪರಣೆ ಮಾಡಬೇಕು. ಕಾಯಿ ಬೆಳೆದ ಮೇಲೆ ಸಿಂಪಡಿಸುವಾಗ ಅಧಿಕ ಸ್ಥಳಕ್ಕೆ ಔಷಧಿ ತಾಗುವ ಕಾರಣ ನಂತರ ಅದರ ಕ್ಷಮತೆ ಹೆಚ್ಚು ಇರುತ್ತದೆ. ಆಗ ೫೦ ದಿನಗಳ ತನಕವೂ ಅದರ ಪರಿಣಾಮ ಇರುತ್ತದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಸಿಂಪರಣೆ ಮಾಡಿದರೆ ನಂತರ ೧ ತಿಂಗಳು ಬಿಟ್ಟು ಆನಂತರ ಸಿಂಪಡಿಸಿದಾಗ ೫೦ ದಿನಗಳ ನಂತರ ಅಗತ್ಯ ಬಿದ್ದರೆ ಸಿಂಪರಣೆ ಮಾಡಿದರೆ ಸಾಕಾಗುತ್ತದೆ. ಕೊಳೆ ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಮರವನ್ನು ಸ್ವಚ್ಚವಾಗಿ ಇಡಬೇಕು. ಒಣ ಹೂ ಗೊಂಚಲು, ಹಾಳೆಗಳನ್ನು ಮಳೆಗಾಲಕ್ಕೆ ಮುಂಚೆ ತೆಗೆದು ಸ್ವಚ್ಚವಾಗಿಡಬೇಕು. ಸಿಂಪರಣೆ ಮಾಡುವಾಗ ಗೊನೆಗಳಿಗೆ ಬೀಳುವಂತೆ ಸಿಂಪಡಿಸಬೇಕು. ಅಲ್ಪ ಸ್ವಲ್ಪ ಗರಿಗಳಿಗೆ ಬಿದ್ದರೂ ತೊಂದರೆ ಇಲ್ಲ. ಬೋರ್ಡೋ ದ್ರಾವಣಕ್ಕೆ ಬೇರೆ ಏನನ್ನೂ ಸೇರಿಸಬೇಡಿ. ಅಂಟು ಅಥವಾ ಪ್ರಸರಕವನ್ನು ಸೇರಿಸಿ. ಪ್ರಸರಕ- ಅಂಟು ಆಮ್ಲೀಯ - ಕ್ಷಾರೀಯ ಆಗಿರದೆ, ತಟಸ್ಥ ಆಗಿದ್ದರೆ ಒಳ್ಳೆಯದು. ಬೋರ್ಡೋ ದ್ರಾವಣ ಅನವಶ್ಯಕ ಮಣ್ಣಿಗೆ ಬೀಳದಿರಲಿ.
ಪೊಟ್ಯಾಶಿಯಂ ಫೋಸ್ಫೋನೇಟ್ ಸಿಂಪಡಿಸುವವರು ಮಳೆಗಾಲಕ್ಕೆ ಮುಂಚೆ ಸಿಂಪಡಿಸಬೇಕು. ನಂತರ ಸಿಂಪಡಿಸುವುದಿದ್ದರೆ ಸಿಂಪಡಿಸಿ ಕನಿಷ್ಟ ೫-೬ ಗಂಟೆ ಕಾಲ ಅದನ್ನು ಸಸ್ಯವು ಹೀರಿಕೊಳ್ಳಬೇಕು. ಇದನ್ನು ಶಿಫಾರಿತ ಪ್ರಮಾಣಕ್ಕಿಂತ ಹೆಚ್ಚು ಬಳಕೆ ಮಾಡಬೇಡಿ. ಇದರಿಂದ ತೊಂದರೆ ಉಂಟಾಗಬಹುದು.
ಚಿತ್ರ - ಮಾಹಿತಿ: ರಾಧಾಕೃಷ್ಣ ಹೊಳ್ಳ