ಪರಿಮಳದ ಸುಗ್ಗಿ
'ಪರಿಮಳದ ಸುಗ್ಗಿ' ಎಂಬ ಕವಿತೆಗಳ ಸಂಗ್ರಹವನ್ನು ಸಂಪಾದಿಸಿದ್ದಾರೆ ಬಿ ಶ್ರೀನಿವಾಸ ರಾಜು ಅವರು. 'ಹೊಸತು' ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂಗಡಿಸಿ 'ಹೊಸತು ವಾಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದು ಈ ವಾಚಿಕೆಗಳ ಪ್ರಕಟಣೆಯ ಹಿಂದಿರುವ ಉದ್ದೇಶ.
ಈ 'ಪರಿಮಳದ ಸುಗ್ಗಿ' ೯೬ ಕವಿತೆಗಳ ಸಂಕಲನ. ಹೊಸತು ಪತ್ರಿಕೆಯ ಆರಂಭದ ಐದು ವರ್ಷಗಳ ಅರವತ್ತು ಸಂಚಿಕೆಗಳಿಂದ ಈ ಕವಿತೆಗಳನ್ನು ಆಯ್ದುಕೊಳ್ಳಲಾಗಿದೆ.
'ಪರಿಮಳದ ಸುಗ್ಗಿ' ಸಂಪುಟವನ್ನು ಪ್ರೊ.ಜಿ.ಶ್ರೀನಿವಾಸರಾಜು ಸಂಪಾದಿಸಿಕೊಟ್ಟಿದ್ದಾರೆ. ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕವಿ, ನಾಟಕಕಾರ, ವಿಮರ್ಶಕ. ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕರ್ನಾಟಕ ಸಂಘದ ಉಸಿರಾಗಿ ಇವರು ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಈ ಪೈಕಿ ಅನೇಕ ಪ್ರತಿಭಾವಂತ ಯುವ ಬರಹಗಾರರ ಕಥೆ-ಕವನ ಸಂಕಲನಗಳು ಸೇರಿವೆ. ನವಕರ್ನಾಟಕ 'ವಿಶ್ವ ಕಥಾಕೋಶ' ಮಾಲಿಕೆಯ 'ಬಾವಿಕಟ್ಟೆಯ ಬಳಿ' (ಯುಗೋಸ್ಲಾವಿಯ, ಅಲ್ಜೇರಿಯಾ, ಬಲ್ಗೇರಿಯಾ ಕಥೆಗಳು) ಸಂಪುಟದ ಅನುವಾದಕರು. ಶ್ರೀನಿವಾಸರಾಜು ಅವರು 'ಹೊಸತು' ಪತ್ರಿಕೆಯ ಸಹ-ಸಂಪಾದಕರೂ ಆಗಿದ್ದರು. ಇದು ಪುಸ್ತಕದ ಬೆನ್ನುಡಿಯಲ್ಲಿ ಕಂಡ ಬರಹ.