ಪರಿವರ್ತನೆ

ಪರಿವರ್ತನೆ

ಪುಸ್ತಕದ ಲೇಖಕ/ಕವಿಯ ಹೆಸರು
ನೂರ್ ಜಹಾನ್
ಪ್ರಕಾಶಕರು
ಅಚಲ ಪ್ರಕಾಶನ, ನೆಲಮಂಗಲ, ಬೆಂಗಳೂರು-೫೬೨೧೨೩
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ನೂರ್ ಜಹಾನ್ ಅವರು ಬರೆದ ನೂತನ ಕಥಾ ಸಂಕಲನ -ಪರಿವರ್ತನೆ. ೧೩೬ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಕೇಶವ ಮಳಗಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿದೆ...

“ನೂರ್‌ ಜಹಾನ್‌ ಅವರದು ಅದಮ್ಯ ಸಾಹಿತ್ಯ ಪ್ರೀತಿಯ ಜೀವ. ಅವರು ಈಗಾಗಲೇ ಪ್ರಕಟಿಸಿರುವ ಕಥಾ ಸಂಕಲನ, ಕಾವ್ಯ ಸಂಗ್ರಹಗಳು ಈಗ ಪ್ರಕಟಿಸುತ್ತಿರುವ ಹೊಸ ಕಥಾಕೃತಿ ನೂರ್‌ ಜಹಾನ್‌ ಅವರ ಸಾಹಿತ್ಯ ರಚನೆಯ ಉತ್ಸುಕತೆಯನ್ನೇ ತೋರಿಸುತ್ತದೆ. ದಣಿವೇ ಇಲ್ಲದ ಈ ಉತ್ಸಾಹವೇ ಅವರಿಂದ ಹೊಸ ಕಥೆಗಳನ್ನು ಬರೆಯಿಸುತ್ತಿದೆ. ಸಮಾಜದಲ್ಲಿ ತಾವು ನಿತ್ಯ ಕಾಣುವ ಸಾಮಾನ್ಯ ಜನರ ಬದುಕಿನ ಹೋರಾಟ, ನೆಮ್ಮದಿ-ಸುಖಕ್ಕಾಗಿ ಈ ಜನ ಪಡುವ ಕಷ್ಟ, ಸಹಿಸುವ ನೋವು, ಛಲವಂತಿಕೆ ಮತ್ತು ಆತ್ಮವಿಶ್ವಾಸಗಳನ್ನು ನೂರ್‌ ಜಹಾನ್‌ ತಮ್ಮ ಒಟ್ಟಾರೆ ಸಾಹಿತ್ಯ ಕೃತಿಗಳಲ್ಲಿ ಹಿಡಿದಿಡಲು ಯತ್ನಿಸುತ್ತಿದ್ದಾರೆ. ಪ್ರಸ್ತುತ ‘ಪರಿವರ್ತನೆ’ ಕಥಾ ಸಂಕಲನಕ್ಕೂ ಈ ಮಾತು ಅನ್ವಯ.

ಪ್ರಗತಿಶೀಲ ಸಾಹಿತ್ಯದ ವಾಸ್ತವ ಮಾರ್ಗ ನೂರ್‌ ಜಹಾನ್‌ರಿಗೆ ಮೆಚ್ಚುಗೆ ಎಂಬುದು ಅವರ ಕಥೆ-ಕವಿತೆಗಳಿಂದ ತಿಳಿಯುತ್ತದೆ. ತಾವು ನಿರೂಪಿಸುತ್ತಿರುವ ಬಡವರ ಹೋರಾಟದ ಬದುಕಿನಲ್ಲಿ ಒಂದಿಷ್ಟು ನೆಮ್ಮದಿ ದೊರಕಿದರೆ ಸಾಹಿತ್ಯದ ಇರುವಿಕೆಗೆ, ಕಥನಕ್ಕೆ ತಾನೇ ತಾನಾಗಿ ಅರ್ಥ-ಸಾರ್ಥಕತೆ ಒದಗುವುದು ಎಂಬುದು ಈ ಬಗೆಯ ಬರವಣಿಗೆಯ ನಂಬಿಕೆಯಾಗಿರುತ್ತದೆ. ಸಮಾನತೆ, ಸಹಬಾಳ್ವೆ, ಹೋರಾಟದ ಮೂಲಕ ಭವ್ಯ ಭವಿಷ್ಯವನ್ನು ಕಟ್ಟಿಕೊಳ್ಳುವ ಕನಸು ಈ ಬಗೆಯ ಸಾಹಿತ್ಯದ ಬುನಾದಿಯಾಗಿರುವುದು ಕೂಡ ನಾವೆಲ್ಲ ಬಲ್ಲ ವಿಚಾರವೇ. ಸಾಹಿತ್ಯ ಅಧ್ಯಯನದ ಶಿಸ್ತು, ಶಿಷ್ಟಾಚಾರ, ಸಂಹಿತೆಗಳು ಏನೇ ಆಗಿರಲಿ, ಅವೆಲ್ಲಕ್ಕಿಂತ ಮುಖ್ಯವಾದುದು ಮನುಷ್ಯನ ಜೀವ, ಜೀವನ, ಜೀವಿಸುವ ಮುಕ್ತ ಅವಕಾಶ ಮತ್ತು ಅವನ್ನು ಪ್ರತಿನಿಧಿಸುವ ಅನುಭವಜನ್ಯ ಸಾಹಿತ್ಯದ ನಿರ್ಮಿತಿಯೇ ಮುಖ್ಯವೆಂಬುದು ಇಂತಹ ಸಾಹಿತ್ಯದ ಅಲಿಖಿತ ಧೋರಣೆ.

ಹೀಗಾಗಿ, ಬೌದ್ಧಿಕ ವಲಯ ಭಾಷೆ-ಸಾಹಿತ್ಯವನ್ನು ಗ್ರಹಿಸುವ-ಸ್ವೀಕರಿಸುವ ಮತ್ತು ವ್ಯಾಖ್ಯಾನಿಸುವ ವಿಧಾನಕ್ಕೂ; ಜೀವನ ಸಿದ್ಧಾಂತವೇ ಎಲ್ಲ ಎಂದು ನಂಬುವ ವರ್ಗ ಸಾಹಿತ್ಯವನ್ನು ಅರ್ಥೈಸುವುದಕ್ಕೂ ನೆಲಮುಗಿಲುಗಳ ವ್ಯತ್ಯಾಸ. ಈ ಅಂಶಗಳನ್ನು ಬರೆಯುತ್ತಿರುವುದಕ್ಕೆ ಕಾರಣ ಬಹು ಸಮುದಾಯಗಳು ಅತ್ಯುತ್ಸಾಹದಲ್ಲಿ ಭಾಷೆ-ಸಾಹಿತ್ಯ ಕಟ್ಟೋಣದಲ್ಲಿ ನಿರತವಾಗಿರುವ ಬೃಹತ್‌ ನಾಡಿನಲ್ಲಿ ಇನ್ನೂ ಕೆಲವರ ಹಿತಾಸಕ್ತಿಗೆ ಪೂರಕವಾಗಿ ವಿಮರ್ಶೆ-ಮೀಮಾಂಸೆಗಳು ಕೆಲಸ ಮಾಡುತ್ತಿರುವುದು. ಹಾಗೆಂದು ನೂರ್‌ ಜಹಾನ್‌ರಂಥ ಬರಹಗಾರರು ಕಟ್ಟುತ್ತಿರುವ ಸಾಹಿತ್ಯ ಸಮಾಜವನ್ನು ವಿನಾಯಿತಿ ನೀಡಿ ನೋಡಬೇಕೆಂದೇನೂ ಇಲ್ಲ. ಬದಲಿಗೆ ಇವು ಯಾವ ಸನ್ನಿವೇಶದಲ್ಲಿ, ಯಾವ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹುಟ್ಟಿತ್ತಿವೆ, ಎಂಥ ಅನುಭವವನ್ನು ಹೇಳಲು ಪ್ರಯತ್ನಿಸುತ್ತಿವೆ? ಎಂದು ಪೂರ್ವಗ್ರಹ ಪೀಡನೆಯಿಲ್ಲದೆ ನೋಡುವ ಕಣ್ಣುಗಳನ್ನು ಪಡೆಯಬೇಕಿದೆ.

ಪ್ರಸ್ತುತ ‘ಪರಿವರ್ತನೆ’ ಕಥಾ ಸಂಕಲನದ ಕಥೆಗಳನ್ನು ನಾನು ಹೆಚ್ಚುಕಡಿಮೆ ಎಂಟು ತಿಂಗಳುಗಳಿಂದ ಓದುತ್ತಿದ್ದೇನೆ. ಸದ್ಯ ನಾನು ಓದುತ್ತಿರುವುದು ಅವರ ಮೂರನೆಯ ಪರಿಷ್ಕೃತ ಪ್ರತಿಯಾಗಿದೆ. ಪ್ರತಿ ಸಲವೂ ನಾನು ಚರ್ಚಿಸಿದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ನೂರ್‌ ಜಹಾನ್‌ ಅವರು ತಿದ್ದಿತೀಡಿ ಮತ್ತೆ ಕಳಿಸಿದ್ದಾರೆ. ಇದರಿಂದ ಎರಡು ವಿಷಯಗಳನ್ನು ನಾನು ಕಲಿತಿರುವೆ. ಒಂದು: ನೂರ್‌ ಜಹಾನ್‌ ಅವರಿಗೆ ಸಾಹಿತ್ಯವು ಜೀವನ್ಮರಣದ ಪ್ರಶ್ನೆಯಾಗಿದೆ. ಎರಡು: ತಮ್ಮ ಕಥನಗಾರಿಕೆಯನ್ನು ಮತ್ತಷ್ಟು ನೇರ್ಪುಗೊಳಿಸಲು ಅವರು ಎಷ್ಟು ಸಲ ಬೇಕಾದರೂ ನಿರ್ಮಮಕಾರದಿಂದ ತಿದ್ದುವ, ತೆಗೆದು ಹಾಕುವ ಶ್ರದ್ಧಾವಂತ ಸಾಹಿತ್ಯ ವಿದ್ಯಾರ್ಥಿಯಾಗಿದ್ದಾರೆ. ತಾವು ನಂಬಿದ್ದರಲ್ಲಿ ಅಚಲ ವಿಶ್ವಾಸವನ್ನು ಹೊಂದಿದವರು ಮಾತ್ರ ಇದನ್ನು ಮಾಡಬಲ್ಲರು.

ಪರಿವರ್ತನೆ ಸಂಕಲನದಲ್ಲಿರುವ ಹತ್ತೂ ಕಥೆಗಳು ಸಾಮಾನ್ಯರ ವರ್ತಮಾನದ ಇತಿಹಾಸವನ್ನು ಯಾವ ಅಲಂಕಾರಿಕ ಭಾಷೆ, ಥಳಕುಗಳಿಲ್ಲದೆ ವಾಸ್ತವ ಮಾರ್ಗದ ನಿರೂಪಣೆಯಲ್ಲಿ ತೆರೆದಿಡುತ್ತವೆ. ಇವುಗಳ ವಿನ್ಯಾಸ ಸರಳ. ನಿರೂಪಣೆ ನೇರ. ಭಾಷೆ ಸಹಜ. ಒಂದರ್ಥದಲ್ಲಿ ನಿರಾಭರಣ. ಈ ಕಥೆಗಳಲ್ಲಿ ಇರುವುದೆಂದರೆ ಬದುಕು, ಅನುಭವ ಮತ್ತು ಬದುಕಿನಲಿ ಏನು ಮಾಡಿದರೆ ಏನು ಪಡೆಯಬಹುದು ಎಂಬ ಫಲಿತ. ಇಲ್ಲಿನ ಎಲ್ಲ ಕಥೆಗಳನ್ನೂ ಪ್ರಯೋಗಾಲಯದ ಪ್ರಾಣಿಯಂತೆ ಛೇದಿಸಿ ನಿಮ್ಮ ಮುಂದಿಡುವುದಿಲ್ಲ. ಹೊರತಾಗಿ, ಕಥೆಗಳ ಮನೋಧರ್ಮ ಮತ್ತು ಅವನ್ನು ಬರೆದವರ ಬದುಕಿನ ದೃಷ್ಟಿಕೋನಗಳ ಕುರಿತು ನಾಲ್ಕಾರು ಮಾತುಗಳನ್ನು ಬರೆಯುವೆ.

ಇಲ್ಲಿನ ಮೊದಲ ಕಥೆ ‘ಪುಣ್ಯ’ವನ್ನೇ ತೆಗೆದುಕೊಂಡರೆ ಅದು ತೆರೆದಿಡುವ ಮೌಲ್ಯ ಇಸ್ಲಾಂ ಧರ್ಮ ಸೂಚಿಸುವ ಸಹಬಾಳ್ವೆ, ಮನುಷ್ಯಧರ್ಮದ ಅಗತ್ಯ ಮತ್ತು ಪುಣ್ಯದ ಪರಿಕಲ್ಪನೆಯ ವ್ಯಾಖ್ಯಾನ. ಇಲ್ಲಿನ ಪಾತ್ರಗಳು ಆ ನಂಬಿಕೆಗಳನ್ನೇ ಅಭಿಯಯಿಸುತ್ತವೆ. ಇಂಥವರು ಸ್ವರ್ಗದಲ್ಲಿರದೆ ಕಣ್ಣು ತೆರೆದು ನೋಡಿದರೆ ನಮ್ಮ ಸುತ್ತಮುತ್ತಲೇ ಕಾಣಿಸುತ್ತಾರೆ. ‘ಆಸರೆ’ ಎಂಬ ಕಥೆಯ ಪಾತ್ರಧಾರಿಗಳು ಅದರಲ್ಲೂ ಹೆಂಗಸರು ಕಡು ಬಡತನದಲ್ಲಿಯೇ ಘಟನೆಯಿಂದ ಜೀವನವನ್ನು ಕಟ್ಟಿಕೊಳ್ಳುವ ಜಾಣ್ಮೆಯನು ಅರಿತವರು. ಹಿಡಿ ನೆಮ್ಮದಿಗಾಗಿ ಸದಾ ಇರುವೆಗಳಂತೆ ದುಡಿಯುವ ಛಲವಂತೆಯರು. ಸಂಕಲನದ ಪರಿವರ್ತನೆ ತಮ್ಮ ಮಹತ್ವಾಕಾಂಕ್ಷೆಯ ಕಥೆ ಎಂದು ನೂರ್‌ ಜಹಾನ್‌ ನನಗೆ ಹೇಳಿದ್ದರು. ಆಸ್ಪತ್ರೆಯೊಂದರಲ್ಲಿ ಕೌನ್ಸಿಲರ್‌ ಆಗಿ ಕೆಲಸ ಮಾಡುವ ರೇಶ್ಮಾಳ ಮೂಲಕ ಅನೇಕರ ಬದುಕಿನ ನೋವು-ನಲಿವುಗಳನ್ನು ಅನಾವರಣಗೊಳಿಸುವ ತಂತ್ರವನ್ನು ಹೊಂದಿರುವ ಕಥೆ.

ಉಳಿದ ಕಥೆಗಳೂ ಒಂದಲ್ಲ ಒಂದು ಬಗೆಯಲ್ಲಿ ಸಾಮಾನ್ಯರ ಬದುಕಿನ ಸಂಗತಿಗಳನ್ನು ತೆರೆದಿಡುವ ಕಥೆಗಳೇ ಆಗಿವೆ. ಈ ಕಥೆಗಳನ್ನು ಓದಲು ಮುಖ್ಯ ಕಣ್ಣನ್ನು ತೇವಗೊಳಿಸಬಲ್ಲ ಭಾವುಕ ಮನಸ್ಸು ಮುಖ್ಯ. ಎಲ್ಲವನ್ನೂ ಅಳೆದು-ತೂಗಿ ಸಾಹಿತ್ಯವನ್ನು ವ್ಯಾವಹಾರಿಕ ಲೋಕದ ಸರಕಾಗಿ ಮಾಡುವ ಬುದ್ಧಿಯಲ್ಲ. ಈಗಂತೂ ಕನ್ನಡ ಸಾಹಿತ್ಯದಲ್ಲಿ ಎರಡನೆಯ ಬಗೆಯ ತಾಂಡವವೇ ನಡೆಯುತ್ತಿದೆ. ಇರಲಿ. ಎಲ್ಲ ಅಟಾಟೋಪಗಳ ನಂತರವೂ ಮನುಷ್ಯರು, ಬದುಕು, ಅವರ ಪ್ರೇಮಕಾಮ, ನೋವುನಲಿವು, ವಿಫಲತೆ-ಸಫಲತೆಗಳು ಉಳಿದೇ ಉಳಿಯುತ್ತವೆ.

ಅಂತೆಯೇ, ನೂರ್‌ ಜಹಾನ್‌ರು ಹಾಡಲು ಯತ್ನಿಸುತ್ತಿರುವ ದನಿಯಿಲ್ಲದವರ ರಾಗಗಳು ಕೇಳುವ ಗುಣವನ್ನು ಪಡೆಯುತ್ತವೆ. ಮುಗ್ಧತೆ, ನಿಷ್ಕಲ್ಮಶ ಮನಸ್ಸು, ಸಾಹಿತ್ಯದ ಕುರಿತು ನಿರಪೇಕ್ಷಿತ ಪ್ರೀತಿಯನ್ನೇ ಉಸಿರಾಡುವ ನೂರ್‌ ಜಹಾನರ ಕಥೆಗಳನ್ನು ನಾನು ಓದಿ ಸಂತೋಷ ಪಟ್ಟಿದ್ದೇನೆ. ಹೃದಯವಂತ ಓದುಗರ ಇಂತಹ ಸಂತಸವನ್ನು ಪಡೆಯಬಲ್ಲರು.”