ಪರಿಶುದ್ಧ ಚರಿತ್ರ-ಝೆನ್ ಕಥೆ
ಜ಼ೆನ್ ಗುರು ಹಕುಇನ್ ಪರಿಶುದ್ಧ ಚರಿತ್ರನೆಂದು ಎಲ್ಲರೂ ಹೇಳುತ್ತಿದ್ದರು . ಹೀಗಿರುವಾಗ ಒಂದು ಘಟನೆ ನಡೆಯಿತು . ಸಮೀಪದಲ್ಲಿ ಇದ್ದ ಒಬ್ಬ ಎಳೆಯ ಅವಿವಾಹಿತ ಹುಡುಗಿ ಗರ್ಭಿಣಿಯಾದಳು . ತಂದೆ ತಾಯಿ ಅವಳನ್ನು ಅದಕ್ಕೆ ಕಾರಣ ಯಾರು ಎಂದು ತಿಳಿಯಲು ಪ್ರಯತ್ನಿಸಿದರು. ಆಕೆ ಮೊದಲು ಬಾಯಿ ಬಿಡಲಿಲ್ಲ . ಅವಳಿಗೆ ಹಿಂಸೆ ಕೊಟ್ಟಾಗ ಗುರು ಹಕುಇನ್ ನ ಹೆಸರು ಹೇಳಿದಳು.
ತಂದೆ ತಾಯಿ ಹಕುಇನ್ ಬಳಿಗೆ ಹೋಗಿ ಅವನ್ನನು ಶಪಿಸಿದರು . ಮರು ಮಾತಾಡದ ಅವನನ್ನು ಕಂಡು ಅವರ ಸಿಟ್ಟು ಇನ್ನೂ ಹೆಚ್ಚಾಯಿತು. ಮಗುವನ್ನು ಒಯ್ದು ಅವನ ಬಳಿಯೇ ಬಿಟ್ಟು ಬಂದರು . ಹಕು ಇನ್ ಅವರಿವರನ್ನು ಬೇಡಿ ದಿನವೂ ಹಾಲನ್ನು ತಂದು ಮಗುವನ್ನು ಸಾಕಿದ .
ಮುಂದೊಂದು ದಿನ ಹುಡುಗಿ ಪಶ್ಚಾತ್ತಾಪ ಪಟ್ಟಳು. ಒಬ್ಬ ಮೀನುಗಾರ ಹುಡುಗ ಮಗುವಿನ ಜನ್ಮಕ್ಕೆ ಕಾರಣ ಎಂದು ತಾಯ್ತಂದೆಗೆ ತಿಳಿಸಿದಳು . ಅವರಿಗೆ ಆಘಾತವಾಯಿತು . ಪಶ್ಚಾತ್ತಾಪದಿಂದ ನರಳಿದರು . ಹಕು ಇನ್ ಹತ್ತಿರ ಹೋಗಿ ಬಗೆಬಗೆಯಲ್ಲಿ ಅವನ ಕ್ಷಮೆ ಯಾಚಿಸಿದರು . ಮಗುವನ್ನು ಹಿಂದಕ್ಕೆ ಒಯ್ಯುವೆವೆಂದು ಬೇಡಿಕೊಂಡರು.
ಎಲ್ಲವನ್ನು ಸಾವಧಾನವಾಗಿ ಕೇಳಿಕೊಂಡ ಹಕುಇನ್ 'ಹೌದಾ?' ಎಂದ , ಮಗುವನ್ನು ಹಿಂದಕ್ಕೆ ಕೊಟ್ಟ.