ಪರಿಸರದ ಕತೆ

ಪರಿಸರದ ಕತೆ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು
ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು
ಪುಸ್ತಕದ ಬೆಲೆ
ರೂ. 78/-

ಕನ್ನಡ ಸಾಹಿತ್ಯಕ್ಕೆ ಹೊಸ ಲೋಕವೊಂದನ್ನು, ಹೊಸ ತರಹದ ಬರವಣಿಗೆಯನ್ನು ಪರಿಚಯಿಸಿದ ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ “ಪರಿಸರದ ಕತೆ". ಇದರ ಇಪ್ಪತ್ತಕ್ಕಿಂತ ಅಧಿಕ ಮರುಮುದ್ರಣಗಳೇ ಇದರ ಜನಪ್ರಿಯತೆಗೆ ಪುರಾವೆ.

ಇದರಲ್ಲಿರುವ 14 ಅಧ್ಯಾಯಗಳು ಒಂದಕ್ಕಿಂತ ಒಂದು ಕುತೂಹಲಕಾರಿ. ಕಾಡಿಗೆ ನಾವು ಹೋಗಿ ನೋಡಿದರೂ ನಮಗೆ ಕಾಣಿಸದ ಹಲವಾರು ನೋಟಗಳನ್ನು, ಸೂಕ್ಷ್ಮ ವಿವರಗಳನ್ನು ಇದರಲ್ಲಿ ದಾಖಲಿಸಿದ್ದಾರ ತೇಜಸ್ವಿಯವರು - ತಮ್ಮದೇ ಹಾಸ್ಯಭರಿತ ಶೈಲಿಯಲ್ಲಿ. ಹಾಗೆಯೇ ತಮ್ಮ ಒಡನಾಟಕ್ಕೆ ಬಂದ ಮಾಸ್ತಿ, ಬೈರ, ಮಾರ, ಎಂಗ್ಟ, ಕಾಳಪ್ಪ, ಮೇಸ್ತ್ರಿ ಸೀನಪ್ಪ ಹಾಗೂ ಇತರ ಹಳ್ಳಿಗರ ವರ್ತನೆಗಳನ್ನು ‘ಇದ್ದದ್ದು ಇದ್ದ ಹಾಗೆಯೇ" ಬರೆಯುವ ಮೂಲಕ ಮಾನವ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಹೊಸ ದಾರಿಗಳನ್ನೂ ಇಲ್ಲಿ ತೋರಿದ್ದಾರೆ.

ಅವರ ಸಾಕು ನಾಯಿ “ಕಿವಿ" ಹಲವು ಅಧ್ಯಾಯಗಳಲ್ಲಿ ಒಂದು ಪಾತ್ರವೇ ಆಗಿದೆ. ಮೊದಲ ಅಧ್ಯಾಯದಲ್ಲಿ ಅದನ್ನು ತೇಜಸ್ವಿಯವರು ಪರಿಚಯಿಸುವ ಪರಿ: 'ಕರ್ವಾಲೋ ಕಾದಂಬರಿಯಲ್ಲಿ ಬಂದಿರುವ ಕಿವಿ ಎನ್ನುವ ನಾಯಿ ಒಂದು ಕಾಲದಲ್ಲಿ ನನ್ನೊಡನೆ ಇದ್ದ ಅಸಾಧಾರಣ ಬುದ್ಧಿಯ ಶಿಕಾರಿ ನಾಯಿ. ಸ್ಪಾನಿಯಲ್ ಜಾತಿಯ ನಾಯಿ ಆದ ಕಾರಣ ಅದರ ಕಿವಿ ಸುಮಾರು ಅರ್ಧ ಅಡಿಗಿಂತ ಉದ್ದ ಇದ್ದು ತಲೆಯ ಪಕ್ಕದಲ್ಲಿ ವಿಸ್ತಾರವಾಗಿ ಇಳಿ ಬಿದ್ದಿತ್ತು. ಆದ್ದರಿಂದ ಅದಕ್ಕೆ ಕಿವಿ ಎನ್ನುವ ಹೆಸರು ಬಂದಿದ್ದು. …" ಹಾಗೆಯೇ, ಮಾನೀಟರ್ (ಉಡು), ಹಕ್ಕಿಮರಿಗಳು, ಹಾವು, ಕುಕ್ಕುಟ, ಕಪ್ಪೆ, ಆಮೆ, ಕಾಡುಹಂದಿ, ಮಂಗಗಳು ಇತ್ಯಾದಿ ಪ್ರಾಣಿಪಕ್ಷಿಗಳೂ ವಿವಿಧ ಅಧ್ಯಾಯಗಳಲ್ಲಿ ಪಾತ್ರಧಾರಿಗಳಾಗಿವೆ.

“ಮಾನೀಟರ್" ಅಧ್ಯಾಯದಲ್ಲಿ, ನಾಯಿ ಕಿವಿ ಒಂದು ಉಡುವನ್ನು ಕಂಡು ಬೊಗಳತೊಡಗುತ್ತದೆ. ತೇಜಸ್ವಿಯವರು ಅಂತೂ ಉಡುವನ್ನು ಕೈಯಿಂದ ಹಿಡಿದು ಎತ್ತಿಕೊಂಡು ಮನೆಗೆ ತರುತ್ತಾರೆ. ಅದರ ಸೊಂಟಕ್ಕೆ ಹಗ್ಗ ಬಿಗಿದು ಅದನ್ನು ಭದ್ರವಾಗಿ ಮನೆ ಪಕ್ಕದ ವಾಟೆ ಮರಕ್ಕೆ ಕಟ್ಟಿ ಹಾಕುತ್ತಾರೆ. ಮರುದಿನ ಬೆಳಗ್ಗೆ ಉಡು ಪರಾರಿಯಾಗಿದೆ ಎಂದು ಪ್ಯಾರ ತಿಳಿಸುತ್ತಾನೆ. ಮುಂದೇನಾಯಿತೆಂಬುದನ್ನು ತೇಜಸ್ವಿಯವರು ಮಾತುಗಳಲ್ಲೇ ಓದಿ ತಿಳಿಯಬೇಕು.

ಮೂರನೆಯ ಅಧ್ಯಾಯ "ಕಿವಿಯೊಡನೆ ಒಂದು ದಿನ”. ಇದು ತೇಜಸ್ವಿಯವರು ತಮ್ಮ ಒಬ್ಬ ಸ್ನೇಹಿತನೊಂದಿಗೆ ನಡೆಸಿದ ಶಿಕಾರಿಯ ಕತೆ. ಶಿಕಾರಿ ಎಂದರೆ ಹುಲಿ ಅಥವಾ ಚಿರತೆಯ ಶಿಕಾರಿಯಲ್ಲ; ಒಂದು ಕಾಡುಹಂದಿಯ ಶಿಕಾರಿಯ ಕತೆ. "ಅದರಲ್ಲೇನಿದೆ?" ಎಂದು ಯೋಚಿಸುವವರು, ಶಿಕಾರಿಯಲ್ಲಿ ಕಿವಿಯ ಪಾತ್ರವನ್ನೂ, ಬದುಕಿ ಉಳಿಯಲಿಕ್ಕಾಗಿ ಹಂದಿಯ ಪ್ರಯತ್ನಗಳನ್ನೂ, ಸ್ನೇಹಿತನ ವರ್ತನೆಯನ್ನೂ  ಓದಿ ಆಸ್ವಾದಿಸಬೇಕು. ಮುಂದಿನ ಅಧ್ಯಾಯ “ಮಾಸ್ತಿ ಮತ್ತು ಬೈರ” ಕೂಡ ಹಂದಿ ಶಿಕಾರಿಯ ಕತೆ. ಇಲ್ಲಿ ಶಿಕಾರಿ ಆದದ್ದು ಹಂದಿಯಲ್ಲ; ಬದಲಾಗಿ ಬೈರನ ರಾಮ ಹೆಸರಿನ ಕಂತ್ರಿ ನಾಯಿ. ಇದರ ಹನ್ನೊಂದು ಪುಟಗಳ ಓದು ಒಂದು ರಸಗವಳ.

“ಸುಸ್ಮಿತ ಮತ್ತು ಹಕ್ಕಿ ಮರಿ” ಅಧ್ಯಾಯದಲ್ಲಿ, ತೇಜಸ್ವಿಯವರು ನವಿರಾದ ಭಾಷೆಯಲ್ಲಿ ಹಂಚಿಕೊಳ್ಳುವುದು ಹಕ್ಕಿ ಮರಿಗಳನ್ನು ಸಾಕಿ, ಅವುಗಳ ಫೋಟೋ ತೆಗೆಯುವ ತಮ್ಮ ಯೋಜನೆ ಕೈಗೂಡದೆ ಹೋದದ್ದನ್ನು. ಜೊತೆಗೆ, ಮಗಳು ಸುಸ್ಮಿತಳ ಮುಗ್ಧ ಪ್ರಶ್ನೆಗಳನ್ನೂ ಪ್ರಯತ್ನಗಳನ್ನೂ ತಿಳಿಸುತ್ತಾರೆ.

"ಎಂಗ್ಟನ ಪುಂಗಿ” ಹಾವುಗೊಲ್ಲರವನ ಕಥನ. ಅವನು ಸಂತೆ, ಜಾತ್ರೆಗಳಲ್ಲಿ ಹಾವುಗಳನ್ನು ಪ್ರದರ್ಶಿಸಿ ಜೀವನ ಸಾಗಿಸುವವನು. ಹಾವಿನ ಕಡಿತಕ್ಕೆ ಚಿಕಿತ್ಸೆಗಾಗಿ ನಾರು, ಬೇರು, ಮಣಿ ಇತ್ಯಾದಿ ಮಾರುವವನು. ಅದಲ್ಲದೆ, ಎಲ್ಲಾದರೂ ಮನೆಯ ಹತ್ತಿರ ವಿಷದ ಹಾವು ಕಾಣಿಸಿದರೆ ಅದನ್ನು ಹಿಡಿದು ತನ್ನ ಶುಲ್ಕ ಪಡೆಯುವವನು. ಎಂತಹ ಪ್ರಶ್ನೆಗೂ ತನ್ನದೇ ತರ್ಕದಲ್ಲಿ ಉತ್ತರ ನೀಡುವವನು. ಅವನು ತಾನಾಗಿಯೇ ಮನೆಗಳ ಹತ್ತಿರ ಹಾವು ತಂದು ಬಿಟ್ಟು, ಅನಂತರ ಹಾವು ಹಿಡಿಯುವ ನಾಟಕ ಮಾಡುತ್ತಿದ್ದಾನೋ? ಎಂಬ ಅನುಮಾನ ಹಳ್ಳಿಗರಿಗೂ, ತೇಜಸ್ವಿಯವರಿಗೂ. ಎಂಗ್ಟ ಮಾತಿನಲ್ಲಿ ಚತುರ. ಅವನು ಹೇಳುವ ಹಾವು ಕತೆಗಳು ರೋಚಕ.
“ಸಂಬಳಕ್ಕೆ ಸಿಕ್ಕಿಕೊಂಡ ದೆವ್ವ” ಮಾರ ಗದ್ದೆ ಕಾಯಲು ಚೌಡಿಗೆ ಹರಕೆ ಹೊತ್ತ ಕತೆ. ಮಲೆನಾಡಿನ ಹಲವು ಹಳ್ಳಿಗಳಲ್ಲಿ ಚೌಡಿಯ ಬಗ್ಗೆ ಹಳ್ಳಿಗರಿಗೆ ಅಪಾರ ನಂಬಿಕೆ. ಇದನ್ನೆಲ್ಲ ನಂಬದ ತೇಜಸ್ವಿಯವರಿಂದ ಮುದುಕ ಮಾರ ಹಳ್ಳಿಗರ ನಂಬಿಕೆಯನ್ನು ಹೇಗೆ ದುಡಿಸಿಕೊಂಡ ಎಂಬುದರ ನವಿರಾದ ವರ್ಣನೆಯೇ ಈ ಅಧ್ಯಾಯದ ಹೂರಣ.

“ಕುಕ್ಕುಟ ಪಿಶಾಚ” ಅಧ್ಯಾಯದಲ್ಲಿದೆ ಮೊಟ್ಟೆಯಿಟ್ಟ ಅಥವಾ ಗೂಡಿನಲ್ಲಿ ಮರಿಗಳನ್ನು ಸಲಹುವ ಕೆಲವು ಹಕ್ಕಿಗಳ ವಿಚಿತ್ರ ವರ್ತನೆಯ ಬಗ್ಗೆ ಹಳ್ಳಿಗರ ಮೂಢನಂಬಿಕೆಗಳು ಮತ್ತು ತೇಜಸ್ವಿಯವರ ವೈಜ್ನಾನಿಕ ವಿವರಣೆಗಳು. ಮುಂದಿನ ಅಧ್ಯಾಯ “ಕಾಳಪ್ಪನ ಕೋಬ್ರ”. ಒಂದು ನಾಗರ ಹಾವಿನಿಂದಾದ ಫಜೀತಿಗಳ ವರ್ಣನೆ.

“ಗಾಡ್ಲಿ" ಅದೇ ಹೆಸರಿನ ಕಾಫಿತೋಟದ ಮೆನೇಜರ್ ಒಬ್ಬನ ಫಜೀತಿಗಳ ಕತೆ. ಮಂಗಗಳ ಕಾಟ ತಾಳಲಾಗದೆ, ಆತ ಪಂಜರ ತರಿಸಿ, ಅವುಗಳೊಳಗೆ ಸಿಕ್ಕಿ ಬಿದ್ದ ಮಂಗಗಳನ್ನು ಬೇರೊಂದು ಕಾಡಿನಲ್ಲಿ ಬಿಟ್ಟು ಬರಲು ಹೋದಾಗ ತಾನೇ ಪಂಜರದಲ್ಲಿ ಸಿಕ್ಕಿ ಬಿದ್ದು, ಎರಡು ದಿನ ಅನ್ನನೀರಿಲ್ಲದೆ ಒದ್ದಾಡಿದ್ದನ್ನು ನಂಬಲಾದೀತೇ?

“ಮೂಲಿಕೆ ಬಳ್ಳಿಯ ಸುತ್ತ” ಕಾಡಿನಲ್ಲಿ ಬೆಳೆಯುವ ಮೂಲಿಕೆಯೊಂದರ ಔಷಧೀಯ ಗುಣಗಳು ತೇಜಸ್ವಿಯವರ ಗಮನಕ್ಕೆ ಹೇಗೆ ಬಂತೆಂಬುದನ್ನು ತಿಳಿಸುತ್ತದೆ. “ಹೀಗೊಂದು ಪ್ರಕರಣ ನಡೆಯಲು ಸಾಧ್ಯವೇ?” ಎಂಬ ಅಚ್ಚರಿ ಮೂಡಿಸುತ್ತಲೇ “ಇದ್ದದ್ದನ್ನು ಇದ್ದಂತೆ ಬರೆದರೆ ಎಂತಹ ಪರಿಣಾಮಕಾರಿ ಬರಹವಾಗುತ್ತದೆ" ಎಂಬುದಕ್ಕೊಂದು ಉತ್ತಮ ಉದಾಹರಣೆ "ಪ್ಯಾರನಿಗೆ ಸೈತಾನ್ ಕಾಟ” ಅಧ್ಯಾಯ.

ಕೊನೆಯ ಅಧ್ಯಾಯ “ಅವಾಂತರದ ಸೀನಪ್ಪ". ಗಾರೆ ಕೆಲಸ ಮಾಡುವವನೊಬ್ಬ ಸೃಷ್ಟಿಸುವ ಅವಾಂತರಗಳನ್ನು ತೆರೆದಿಡುತ್ತದೆ. ನಾವು “ಹಳ್ಳಿ ಗುಗ್ಗುಗಳು" ಎಂದು ಭಾವಿಸುವ ಹಳ್ಳಿ ಜನರಲ್ಲಿರುವ ಚಾಲಾಕಿತನ; ಶಾಲೆಕಾಲೇಜುಗಳಲ್ಲಿ ಕಲಿತು ಬಂದವರನ್ನೂ ಅವರು ಬೇಸ್ತು ಬೀಳಿಸುವ ಪರಿ; ಇವನು ಮೋಸ ಮಾಡುತ್ತಾನೆ ಎಂದು ತಿಳಿದವರನ್ನೂ ಮತ್ತೆ ಅವನ ವಂಚನೆಯ ಜಾಲದಲ್ಲಿ ಸಿಲುಕಿಸುವ ನಮೂನೆ - ಇವನ್ನೆಲ್ಲ ಕಣ್ಣೆದುರೇ ನಡೆದಂತೆ ವಿವರಿಸುವ ಅಧ್ಯಾಯ ಇದು.   

ಪರಿಸರದ ಬಗ್ಗೆ ಬರೆಯಬೇಕು ಎಂಬ ಆಸಕ್ತಿ ಇರುವ ಎಲ್ಲರೂ ಓದಲೇ ಬೇಕಾದ ಅಧ್ಯಾಯ "ಕೆರೆಯ ದಡದಲ್ಲಿ”. ಅಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ತೇಜಸ್ವಿಯವರು ಬಣ್ಣಿಸುವ ಪರಿ ಅನನ್ಯ. ಮುಖ್ಯವಾಗಿ ಒಂದು ಕಪ್ಪೆ, ಒಂದು ಆಮೆ ಮತ್ತು ಒಂದು ಕಾಡುಹಂದಿ ಮರಿಯ ಆತ್ಮರಕ್ಷಣಾತಂತ್ರಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಅವರ ಸೂಕ್ಷ್ಮ ವೀಕ್ಷಣೆ, ಕಾಡುಪ್ರಾಣಿಗಳ ಬಗೆಗಿನ ಅಪಾರ ಆಸಕ್ತಿ, ಕಾಡಿನ ವಿದ್ಯಮಾನಗಳನ್ನು ತಿಳಿಯಲು ಗಂಟೆಗಟ್ಟಲೆ ಕಾಯುವ ತಾಳ್ಮೆ, ಪರಿಣಾಮಕಾರಿ ವಿಶ್ಲೇಷಣೆಯಿಂದಾಗಿ ದಕ್ಕುವ ಒಳನೋಟಗಳು ಮತ್ತು ಯಾವುದೇ ಅತಿರೇಕವಿಲ್ಲದೆ ಕಂಡದ್ದನ್ನು ಕಂಡಂತೆ ಬರಹಕ್ಕಿಳಿಸುವ ಶೈಲಿ - ಇವೆಲ್ಲವೂ ಸೇರಿದಾಗ ಎಂತಹ ರಸಪಾಕ ಸಿದ್ಧವಾಗುತ್ತದೆ ಎಂಬುದಕ್ಕೊಂದು ಅಪರೂಪದ ಉದಾಹರಣೆ ಈ ಅಧ್ಯಾಯ.