ಪರಿಸರಸ್ನೇಹಿ ಗಣಪ ಮನೆಮನಕೆ ಬರಲಿ

ಪರಿಸರಸ್ನೇಹಿ ಗಣಪ ಮನೆಮನಕೆ ಬರಲಿ

ಎರಡು ವರ್ಷಗಳಿಂದ ಕೋವಿಡ್ ಕಾರ್ಮೋಡದಲ್ಲಿ ಮಂಕಾಗಿದ್ದ ಗಣೇಶೋತ್ಸವ ಸಂಭ್ರಮ ಈ ಬಾರಿ ಹಿಂದಿನ ಸಡಗರಕ್ಕೆ ಮರಳಿರುವುದು ಸಂತಸದ ಸಂಗತಿ. ಆದರೆ ಸರಕಾರದ ನಿರ್ಭಂಧದ ನಡುವೆಯೂ ಮಾರುಕಟ್ಟೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣಪನ ಭರಾಟೆ ಸಂಪ್ರದಾಯದಂತೆ ಮಾರಾಟಗೊಳ್ಳುತ್ತಿರುವುದು ಮಾತ್ರ ನಿಜಕ್ಕೂ ಚಿಂತೆಗೀಡು ಮಾಡುವ ವಿಚಾರ. 

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ತೀರ್ಪಿನ ಅನ್ವಯ ೨೦೧೬ರಲ್ಲೇ ರಾಜ್ಯದಲ್ಲಿ ಪಿಒಪಿ ಮೂರ್ತಿಗಳನ್ನು ನಿಷೇಧಿಸಲಾಗಿದೆ. ಇದರ ಬೆನ್ನಲ್ಲೇ ಸ್ಥಳೀಯ ಆಡಳಿತಗಳೂ ಗಣೇಶೋತ್ಸವದ ವೇಳೆಯಲ್ಲಿ ಪಿಒಪಿ ಮೂರ್ತಿಗಳನ್ನು ಮಾರಿದರೆ ಲೈಸೆನ್ಸ್ ರದ್ದುಗೊಳಿಸುವ ಆದೇಶಗಳನ್ನೂ ಹೊರಡಿಸಿವೆ. ಹೀಗಿದ್ದೂ ಪಿಒಪಿ ಗಣೇಶನ ಮೂರ್ತಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮುಕ್ತ ಮಾರುಕಟ್ಟೆ ಸಿಗುತ್ತಿರುವುದು ಹೇಗೆ? ಬೆಂಗಳೂರಿನಂಥ ಮಾರುಕಟ್ಟೆಗಳಿಗೆ ಹೊರರಾಜ್ಯಗಳಿಂದಲೂ ಪಿಒಪಿ ಮೂರ್ತಿಗಳು ಬರಲು ಅವಕಾಶ ಮಾಡಿ ಕೊಡುತ್ತಿರುವುದೇಕೆ? ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು.

ರಾಸಾಯನಿಕ ಬಣ್ಣಗಳ ಲೇಪಿತ ಪಿಒಪಿ ಮೂರ್ತಿಗಳು ಸೃಷ್ಟಿಸುವ ಪರಿಸರ ಮಾಲಿನ್ಯದ ಅವಾಂತರಗಳು ಸಾಕಷ್ಟು ಇವುಗಳನ್ನು ನೀರಿಗೆ ವಿಸರ್ಜಿಸಿದಾಗ ಜಲಚರಗಳ ಜೀವಕ್ಕೆ ಆಪತ್ತು ಎದುರಾಗುವ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ. ಇಂಥಾ ಕಾರಣದಿಂದಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಪಿಒಪಿ ಮೂರ್ತಿಗಳಿಗೆ ನಿರ್ಭಂಧ ವಿಧಿಸಿದೆ. ಈ ನಿರ್ಭಂಧವೇನೋ ಸರಿ. ಆದರೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಹಿನ್ನಡೆಯಾಗುತ್ತಿರುವುದೇಕೆ? ಪಿಒಪಿ ಬದಲಿಗೆ ಮಣ್ಣಿನ ಗಣಪ, ಪರಿಸರ ಸ್ನೇಹಿ ಗಣಪನನ್ನು ತಯಾರಿಸಲು ಸೂಕ್ತ ಮಣ್ಣಿನ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನೇಕೆ ಸರಕಾರ ಮಾಡುತ್ತಿಲ್ಲ?

'ಬೇಡಿಕೆ ಇಲ್ಲದೆ ಯಾವ ವಸ್ತುಗಳೂ ಉತ್ಪಾದನೆಯಾಗದು' ಎನ್ನುವುದು ಅರ್ಥಶಾಸ್ತ್ರದ ವಿವೇಕ, ಪಿಒಪಿ ಗಣಪನ ವಿಚಾರದಲ್ಲಿ ಆಗುತ್ತಿರುವುದೂ ಇದೇ. ಜನ ಥರೇಹವಾರಿ ಬಣ್ಣ ಆಕರ್ಷಕ ಅವತಾರದ ಗಣಪನನ್ನೇ ಇಷ್ಟಪಡುತ್ತಿರುವ ಕಾರಣ, ತಯಾರಕರೂ ಪಿಒಪಿಯ ಗಣಪರೂಪಿಗಳನ್ನು ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ. ಇಲ್ಲಿ ತಪ್ಪು ಯಾರದ್ದು? ಯಾರ ಮನಃಸ್ಥಿತಿ ಬದಲಾಗಬೇಕು? ಜನಸಾಮಾನ್ಯರದ್ದೇ ಅಲ್ಲವೇ!?

ಪ್ರತಿ ಚೌತಿ ವೇಳೆ ಟ್ರೇಡಿಂಗ್ ಗಳನ್ನು ಜತೆಗಿಟ್ಟುಕೊಂಡೇ ಗಣೇಶ ಮಾರುಕಟ್ಟೆ ಪ್ರವೇಶಿಸುತ್ತಾನೆ. ಗಣಪ ಪ್ರತಿ ವರ್ಷ ಧರಿಸದ ವೇಷವಿಲ್ಲ. ತಾಳುವ ರೂಪವಿಲ್ಲ, ಕ್ರಿಕೆಟ್ ಗೆದ್ದರೆ ತೆಂಡೂಲ್ಕರ್ ಆಗುತ್ತಾನೆ, ಕಾರ್ಗಿಲ್ ಕಾರ್ಯಾಚರಣೆಯ ವೇಳೆ ವೀರನಾಗುತ್ತಾನೆ. ಪುನೀತ್ ನೆನಪಿನಲ್ಲಿ ಅವರೊಟ್ಟಿಗೆ ಅವತಾರ ಎತ್ತುತ್ತಾನೆ. ಹೀಗೆ ಆಯಾ ಕಾಲಧರ್ಮಕ್ಕೆ ತನ್ನ ರೂಪ ಹೊಂದಿಸಿಕೊಳ್ಳುವ ಏಕೈಕ ದೇವರು ಗಣಪ. ಪ್ರಸ್ತುತ ಜಗತ್ತಿನಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಟ್ರೆಂಡಿಂಗ್ ವಿಚಾರ ಯಾವುದು? ಹವಾಮಾನ ವೈಪರಿತ್ಯ. ಈ ಅರ್ಥದಲ್ಲಿ ಜಾಗತಿಕ ತಾಪಮಾನದ ವಿರೋಧಿ ರೂಪದಲ್ಲಿ ಗಣಪ ಬರಬೇಕಾಗಿತ್ತು. ಹಾಗಿದ್ದೂ ನಾವು ಪರಿಸರ ಮಾರಕ ಮೂರ್ತಿಗಳನ್ನು ತಯಾರಿಸುತ್ತಿರುವುದು, ಕೊಳ್ಳುತ್ತಿರುವುದರಲ್ಲಿ ಅರ್ಥವೇ ಇಲ್ಲ.

ಇಂಗ್ಲೆಂಡಿನಿಂದ ಚೀನಾದವರೆಗೆ ಅನೇಕ ರಾಷ್ಟ್ರಗಳಲ್ಲಿ ಹವಾಮಾನ ವೈಪರಿತ್ಯವೇ ಪೆಡಂಭೂತವಾಗಿ ಕಾಡುತ್ತಿದೆ. ನದಿಗಳು ಬತ್ತಿವೆ, ಎಷ್ಟೋ ಕಡೆ ಮುಳುಗಿದ್ದ ದ್ವೀಪಗಳು ಕಾಣಿಸಿವೆ. ಹಿಮನದಿಗಳ ಪ್ರವಾಹವೆದ್ದಿವೆ. ಉಷ್ಣಗಾಳಿಯ ತಾಪಕ್ಕೆ ಜಗತ್ತೇ ನಲುಗುತ್ತಿದೆ. ಇದೆಲ್ಲವೂ ಪರಿಸರ ಮುನಿಸಿಕೊಂಡಿರುವ ದ್ಯೋತಕ.

ಗಣಪನನ್ನು ಸಾಂಪ್ರದಾಯಿಕವಾಗಿ ಮಣ್ಣಿನಿಂದಲೇ ಮಾಡುವ ಪದ್ಧತಿ ನಮ್ಮ ಸಮಾಜದಲ್ಲಿ ಪರಂಪರೆಯಾಗಿತ್ತು. ಪಿಒಪಿ ನುಸುಳಿ ಹಿಂದೆ ಹಿರಿಯರು ರೂಪಿಸಿಕೊಟ್ಟಿದ್ದ ತಯಾರಿಕೆಯ ಸಂಪ್ರದಾಯವೇ ಮಾರ್ಪಾಡು ಮಾಡಿದೆ. ಮಣ್ಣನ್ನು ಹದಗೊಳಿಸಿ ಕೈಯಿಂದ ಮಾಡುವ ಗಣಪನಿಗಿಂತ, ಪಿಒಪಿ ಅಚ್ಚುಗಳ ಆಕರ್ಷಣೆಯೇ ಮೇಲುಗೈಯಾಗಿರುವುದು ವಿಪರ್ಯಾಸ. ನಮ್ಮ ನಂಬಿಕೆಗಳು ಪರಿಸರಸ್ನೇಹಿಯಾದರೆ ಅಂಥ ಆಚರಣೆಗಳಿಗೆ ಮೌಲ್ಯ ಹೆಚ್ಚು. ಮಣ್ಣಿನ ಗಣಪನನ್ನೇ ಮನೆಗೆ ತರುವುದು ಪ್ರತಿ ಚೌತಿಯ ಸಂಕಲ್ಪವಾದರೆ, ಮುಂದಿನ ಪೀಳಿಗೆ ಮಾಲಿನ್ಯ ಮುಕ್ತ ಪರಿಸರ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ವಿವೇಕ ಬಳಸಿ, ಎಲ್ಲರೂ ಹೆಜ್ಜೆ ಇಡೋಣ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೨೬-೦೮-೨೦೨೨