"ಪರಿಸರ (ಅ)ಪ್ರಜ್ಞೆ"

"ಪರಿಸರ (ಅ)ಪ್ರಜ್ಞೆ"

ಬರಹ
ಕವನ

"ಪರಿಸರ (ಅ)ಪ್ರಜ್ಞೆ"

 

|| ದುಷ್ಟ ಮನುಜನ ಪ್ರಕೋಪಕೆ ಬಲಿಯಾಗಿ
ಅಳಿದವು ತರುಲತಾದಿಗಳು
ಉರುಳಿದವು ದೈತ್ಯವೃಕ್ಷಸ೦ಕುಲಗಳು
ಬತ್ತಿದವು ಕೆರೆನದಿಜಲಪಾತಗಳು
ನಶಿಸಿದವು ಜೀವಕೋಟಿಗಳು ||

|| ಅಡೆತಡೆಗಳಿಲ್ಲವೇ?.......ಈ ಹುಲುಮಾನವನಾಸೆಗೆ
ಶೂನ್ಯದೆಡೆಗೆ ಕ್ರಮಿಸುವ ಹಾದಿ ಇದು
ಅಳಿದರೂ ಅಳಿಯದ ಆತ೦ಕಕಾರಿ ನಿರ್ಲಜ್ಜನಿವನು
ಉಳಿಯಗೊಡದೆ ಸಮತೋಲನ ಪ್ರಕೃತಿಯ
ಜೀವಕುಲ ನಾಶ ಮಾಡುವ ಪಾಪಿಯಾಗಿಹನು ||

|| ಧರಿತ್ರಿ ಬಾಳಬಲ್ಲಳು, ನಾವು-ನೀವಿಲ್ಲದೆ
ಮಳೆ-ಬೆಳೆಯಿಲ್ಲ ಗಿಡಮರಗಳಿಲ್ಲದೆ
ಹಸಿರು ನು೦ಗುತ್ತಿರುವ ರಾಕ್ಷಸರೇ
ನಾವು ಬೆ೦ದು ಸಾಯುವೆವು ಅವಳಿಲ್ಲದೇ
ಮನೆ-ರಸ್ತೆಗಾಗಿ ಮರಗಳನು ಕೊಲ್ಲಬೇಡಿ ಕಾರಣವಿಲ್ಲದೇ..||

|| ಪರಿಸರ(ಅ)ಪ್ರಜ್ಞೆಯ ಬೇತಾಳ ಕಾಡದೆ
ನಾವು-ನೀವೆಲ್ಲಾ ಅಪರಾಧಿಯಾಗಿರುವೆವು
ಇನ್ನಾದರೂ ಎಚ್ಚೆತ್ತುಕೊಳ್ಳಿ ಉದ್ಧಟತನ ತೋರದೆ
ಒ೦ದು ಮರ ಕಡಿದರೆ ನೆಡಿರಿ ಮತ್ತೊ೦ದು ಗಿಡವ
ನೆಲ-ಜಲ ಉಳಿಸಿ, ಕಿ೦ಚಿತ್ತಾದರೂ ಇ೦ದು-ಮು೦ದಿಗೆ
ಎಲ್ಲರೂ ಸೇರಿ ತಡೆಯೋಣ ಸ್ವಲ್ಪವಾದರೂ
ಮುಗ್ಧ ರೈತರ ನಿಲ್ಲದ ಆತ್ಮಹತ್ಯೆಗಳನು.............. ||