ಪರಿಸರ ಸಂರಕ್ಷಣೆ ಎಂಬುದು ಸಾಮೂಹಿಕ ಹೊಣೆಗಾರಿಕೆ

ಪರಿಸರ ಸಂರಕ್ಷಣೆ ಎಂಬುದು ಸಾಮೂಹಿಕ ಹೊಣೆಗಾರಿಕೆ

ಪ್ರತಿ ವರ್ಷ ಜೂನ್ ೫ರಂದು ಜಾಗತಿಕವಾಗಿ ಪರಿಸರ ದಿನವನ್ನು ಆಚರಿಸುವುದು ಗೊತ್ತಿರುವಂತದ್ದೇ. ಪರಿಸರ ಜಾಗೃತಿಯ ಉದ್ದೇಶದೊಂದಿಗೆ ವರ್ಷವೂ ಬೇರೆ ಬೇರೆ ಧ್ಯೇಯ ವಾಕ್ಯಗಳೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಪರಿಸರದ ಮಹತ್ವದ ಬಗ್ಗೆ ಹೊಸದಾಗಿ ಅರಿವು ಮೂಡಿಸುವ ಪ್ರಮೇಯವೇನು ಇರದಿದ್ದರೂ, ವರ್ಷವರ್ಷವೂ ಹೊಸ ಹೊಸ ಪರಿಸರ ಸಮಸ್ಯೆಗಳನ್ನು ಮನುಕುಲ ಸೃಷ್ಟಿಸಿಕೊಳ್ಳುತ್ತಿರುವುದು ಮತ್ತು ಅದರ ಪರಿಹಾರೋಪಾಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಚೋದ್ಯವೇ ಸರಿ. ಒಟ್ಟಾರೆಯಾಗಿ ಜನರ ಜೀವನಶೈಲಿ, ಇದರಿಂದಾಗಿ ಹೆಚ್ಚುತ್ತಿರುವ ಮಾಲಿನ್ಯ, ನಿಸರ್ಗದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಒಂದೆಡೆಯಾದರೆ, ಸರ್ಕಾರಗಳ ಆಡಳಿತಾತ್ಮಕ ನೀತಿ ನಿರ್ಣಯಗಳು, ಅಭಿವೃದ್ಧಿ ಯೋಜನೆಗಳ ಪರಿಣಾಮ- ಇವೆಲ್ಲ ಮತ್ತೊಂದೆಡೆ. ಕೈಗಾರಿಕೆಗಳ ಕಾರಣದಿಂದ ಆಗುವ ವಿವಿಧ ಬಗೆಯ ಮಾಲಿನ್ಯ ಮಗದೊಂದೆಡೆ-ಹೀಗೆ ಪರಿಸರದ ಮೇಲೆ ಬಹುವಿಧ ಆಘಾತ ನಿರಂತರವಾಗಿ ಆಗುತ್ತಿರುವುದರಿಂದಾಗಿ ಸಮಸ್ಯೆಗಳು ಸಹ ಹೊಸ ರೂಪ ಪಡೆದು ಮನುಜನನ್ನು ಕಾಡುತ್ತಿವೆ ; ಆರೋಗ್ಯ ಸಮಸ್ಯೆಗಳು, ಸಾಮಾಜಿಕ-ಆರ್ಥಿಕ ಪರಿಣಾಮಗಳು ಭಿನ್ನ ಆಯಾಮ ಪಡೆಯುತ್ತಿವೆ. ನಿಸರ್ಗದ ಆರೋಗ್ಯ ದೃಷ್ಟಿಯಿಂದ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸುವ ಅಥವಾ ಹೊಸ ಯೋಜನೆ ರೂಪಿಸದಿರುವ ಸಾಧ್ಯತೆ ಬಹುದೂರದ ಮಾತು. ಇದು ವಾಸ್ತವ. ಈ ನೆಲೆಗಟ್ಟಿನ ಮೇಲೆಯೇ, ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಸಾಧಿಸಬಲ್ಲ ಮಾರ್ಗೋಪಾಯಗಳನ್ನು ಕಂಡುಕೊಳ್ಳುವತ್ತ ಹೆಚ್ಚೆಚ್ಚು ಚಿಂತನೆ ನಡೆಯಬೇಕಿದೆ. ಹಾಗಂತ ಈ ನಿಟ್ಟಿನಲ್ಲಿ ಏನೂ ಕೆಲಸಗಳೇ ಆಗಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಸರ್ಕಾರಗಳು ವಿವಿಧ ಬಗೆಯ ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ, ನವೀಕರಿಸಬಹುದಾದ ಇಂಧನ ಮೂಲಗಳಿಗೆ ಒತ್ತು-ಇವು ಒಂದೆರಡು ಉದಾಹರಣೆಗಳು. ಇನ್ನು ಜಾಗತಿಕವಾಗಿ ಪ್ಯಾರಿಸ್ ಒಡಂಬಡಿಕೆ ಏರ್ಪಟ್ಟಿದ್ದು, ಭಾರತವೂ ಇದಕ್ಕೆ ಸಹಿದಾರ.

ಪರಿಸರ ದಿನದ ಘೋಷವಾಕ್ಯ ‘ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸೋಣ' ಎಂದು. ಪ್ಲಾಸ್ಟಿಕ್ ನಿಂದ ಆಗುವ ಅಪಾಯ-ಅನಾಹುತಗಳ ಬಗ್ಗೆ ಬಹಳ ಜನರಿಗೆ ಗೊತ್ತಿದೆ. ಆದರೂ ಪರಿಣಾಮಕಾರಿಯಾಗಿ ಇದರ ಬಳಕೆಯನ್ನು ನಿಯಂತ್ರಿಸಲು ಆಗುತ್ತಿಲ್ಲ. ಪ್ಲಾಸ್ಟಿಕ್ ನಿಷೇಧ ಕಾನೂನು ಸಹ ಜಾರಿಗೆ ಬಂದಿದೆ. ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸುವುದು ಒಂದು ವಿಚಾರ. ಆದರೆ, ಪ್ಲಾಸ್ಟಿಕ್ ನ ಕೆಲ ಉತ್ಪಾದನೆಗಳನ್ನು ಸರಕಾರ ಏಕೆ ನಿಷೇಧಿಸುವುದಿಲ್ಲ ಎಂಬುದು ಜನ ಸಾಮಾನ್ಯರ ಪ್ರಶ್ನೆ. ಅಷ್ಟಕ್ಕೂ ಪರಿಸರ ರಕ್ಷಣೆ ಎಂಬುದು ಸಾಮೂಹಿಕ ಬದ್ಧತೆ ಮತ್ತು ಹೊಣೆಗಾರಿಕೆ. ರಾಮಸೇತುವನ್ನು ನಿರ್ಮಿಸುವಾಗ ಅಳಿಲು ತನ್ನಿಂದಾದ ಸೇವೆಯನ್ನು ಸಲ್ಲಿಸಿದಂತೆ ಇದು ಸಹ ಜನರ ಕೈಸೇರುವಿಕೆಯಿಂದಾಗುವ ಕೆಲಸ. ದಿನನಿತ್ಯದ ಜೀವನದಲ್ಲಿ ಮಾಲಿನ್ಯವನ್ನು ಆದಷ್ಟು ತಗ್ಗಿಸುವ ಉಪಾಯಗಳ ಅನುಸರಣೆ. ನೀರಿನ ಪೋಲು ಆಗದಂತೆ ಎಚ್ಚರವಹಿಸುವುದು. ಅನಗತ್ಯವಾಗಿ ವಾಹನ ಬಳಸದಿರುವುದು, ಹಸಿರೀಕರಣಕ್ಕೆ ಕೈಜೋಡಿಸುವುದು ಇತ್ಯಾದಿ ಜೀವನ ಶೈಲಿ ಅಳವಡಿಸಿಕೊಂಡಾಗ ಬದಲಾವಣೆಯನ್ನು ಕಾಣಬಹುದು. ಮತ್ತೊಂದೆಡೆ, ಸರ್ಕಾರಗಳು ಸಹ ವಿವೇಚನಾಯುಕ್ತವಾಗಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಪರಿಸರ ಸಂರಕ್ಷಣೆಯಲ್ಲಿ ಸರ್ಕಾರ-ಸಮಾಜ ಎರಡೂ ಚಕ್ರಗಳಿದ್ದಂತೆ.

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೫-೦೬-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ