ಪರಿಸರ ಸಂರಕ್ಷಣೆ ಕಾರ್ಯ ಅನನ್ಯ


ಕರುನಾಡು ಕಂಡ ಶ್ರೇಷ್ಠ ಸಾಮಾಜಿಕ ಸೇವಕರು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವೈಚಾರಿಕ ಚಿಂತಕ ಬರಹಗಾರರು. ಮಾಧ್ಯಮ ಲೋಕದಲ್ಲಿ ವಿಶಿಷ್ಟ ರೀತಿಯಲ್ಲಿ ಛಾಪು ಮೂಡಿಸಿ, ಸತ್ಯ ನಿಷ್ಠ ವರದಿಗಳಿಗೆ ಹೆಸರು ಮಾಡಿದವರು. ನಿಷ್ಕಲ್ಮಶ - ನಿಷ್ಕಳಂಕ - ಪ್ರಾಮಾಣಿಕ ಸೇವೆಗೆ ಪ್ರಸಿದ್ಧಿ ಪಡೆದವರು. ನೇರ ನುಡಿ,ದಿಟ್ಟ ನಡೆಗೆ ಹೆಸರಾದವರು ನಮ್ಮ ಕಲ್ಯಾಣ ಕರ್ನಾಟಕ ಭಾಗದ ಹೋರಾಟಗಾರರು ಎಂದೇ ಮನೆ ಮಾತಾದವರು ಶ್ರೀಯುತ ಸಂಗಮೇಶ ನಾಗಶೆಟ್ಟಿ ಜವಾದಿ ರವರು.
ಮೂಲತಃ ಜವಾದಿ ರವರು ಬೀದರ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಕೊಡಂಬಲ ಗ್ರಾಮದ ನಾಗಶೆಟ್ಟಿ ಜವಾದಿ ಮತ್ತು ಸರಸ್ವತಿ ಜವಾದಿ ರವರ ಸುಪುತ್ರರಾಗಿದ್ದಾರೆ. ಸ್ನಾತಕೋತ್ತರ ಪದವಿ ಪಡೆದುಕೊಂಡು, ಕೆಲವು ಕಡೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವ ಸಹ ಹೊಂದಿರುತ್ತಾರೆ. ಸಧ್ಯ ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಂಘಟನೆ, ಪರಿಸರ, ಕೃಷಿ, ಹೋರಾಟ, ಮಕ್ಕಳ - ಮಹಿಳೆಯರ - ವಿಕಲಚೇತನರ, ಮಾಧ್ಯಮ ಕ್ಷೇತ್ರ ಸೇರಿದಂತೆ ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಂಸ್ಕೃತಿಯ ರಕ್ಷಣೆಗಾಗಿ ನಿಸ್ವಾರ್ಥ ಮನೋಭಾವದಿಂದ ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.
ಪರಿಸರ ಸಂರಕ್ಷಣೆಗಾಗಿ ಟೊಂಕಕಟ್ಟಿಕೊಂಡು ಹಗಲಿರುಳೆನ್ನದೆ ದುಡಿಯುತ್ತಿರುವ ಜವಾದಿ ರವರು ಪರಿಸರ ಸಂರಕ್ಷಣೆ ಇಂದಿನ ಸಮಾಜದ ಅವಿಭಾಜ್ಯ ಅಂಗವಾಗಿದೆ, ಆದರೆ ನಮ್ಮ ಪರಿಸರವನ್ನು ರಕ್ಷಿಸಲು ಏನು ಮಾಡಬಹುದು ಎಂಬುದರ ಕುರಿತು ಇತ್ತಿಚಿನ ಅನೇಕ ಜನರಿಗೆ ಮೂಲಭೂತ ಜ್ಞಾನವೂ ಇಲ್ಲ. ತಿಳುವಳಿಕೆಯಂತೂ ಮೊದಲೇ ಇಲ್ಲ ಎನ್ನುತ್ತಾರೆ. ಜೊತೆಗೆ ಇತ್ತೀಚಿನ ದಶಕಗಳಲ್ಲಿ ಪರಿಸರದ ಮೇಲೆ ಮಾನವನ ಒತ್ತಡಗಳು ಘಾತೀಯವಾಗಿ ಹೆಚ್ಚಿರುವುದರಿಂದ ಪರಿಸರ ಸಂರಕ್ಷಣೆ ವ್ಯಾಪಕ ಸಮಸ್ಯೆಯಾಗಿದೆ ಎಂಬುದು ಇವರ ನೇರ ನುಡಿ.
ಇನ್ನು ಪರಿಸರ ಮಾಲಿನ್ಯದ ವಿಷಯಕ್ಕೆ ಬಂದರೆ, ಮುಖ್ಯ ಅಂಶಗಳು ವಾಯುಮಾಲಿನ್ಯ, ಮಣ್ಣಿನ ಮಾಲಿನ್ಯ, ನೀರಿನ ಮಾಲಿನ್ಯ, ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ದೃಶ್ಯ ಮಾಲಿನ್ಯ ಸೇರಿದಂತೆ ಕೆಲಸದ ಸ್ಥಳಗಳ ಬಿಸಿ, ಕೈಗಾರಿಕಾ ಉತ್ಪಾದನಾ ಚಟುವಟಿಕೆಗಳು, ಶಕ್ತಿ ಉತ್ಪಾದನೆ ಮತ್ತು ಸಾರಜನಕ ಆಕ್ಸೈಡ್‌ಗಳು, ಇಂಗಾಲದ ಮಾನಾಕ್ಸೈಡ್, ಸೀಸ ಮತ್ತು ಮೋಟಾರು ವಾಹನಗಳಿಂದ ಹೊರಸೂಸುವ (ಅನಿಲಗಳಿಂದ) ವಾಯುಮಾಲಿನ್ಯ
ಗಳಿಂದ ಪರಿಸರ ಮಾಲಿನ್ಯ ಪ್ರಮುಖವಾಗಿ ಆಗುತ್ತಿದೆ ಎನ್ನುತ್ತಾರೆ. ಮತ್ತೊಂದೆಡೆ, ನೀರಿನ ಮಾಲಿನ್ಯವು ಸಂಸ್ಕರಣೆ ಇಲ್ಲದೆ ಪ್ರಕೃತಿಗೆ ಬಿಡುಗಡೆಯಾಗುವ ದೇಶೀಯ ಮತ್ತು ಕೈಗಾರಿಕಾ ತ್ಯಾಜ್ಯನೀರಿನಿಂದ ಉಂಟಾಗುವ ಮೇಲ್ಮೈ ನೀರು, ಸಮುದ್ರಗಳು ಮತ್ತು ಅಂತರ್ಜಲವನ್ನು ಮಾಲಿನ್ಯಗೊಳಿಸುತ್ತದೆ. ದುರದೃಷ್ಟವಶಾತ್, ನಗರದ ಜೀವನ, ಕೈಗಾರಿಕಾ ಚಟುವಟಿಕೆಗಳು ಮತ್ತು ತಪ್ಪು ಕೃಷಿ ಪದ್ಧತಿಗಳಿಂದಾಗಿ ಮಣ್ಣು ಕಲುಷಿತಗೊಂಡಿದೆ ಎಂಬುದು ಸಂಗಮೇಶ ಜವಾದಿ ರವರ ಆತಂಕವಾಗಿದೆ.
ಇವುಗಳಲ್ಲದೆ ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ಕೂಡ ಅಷ್ಟೇ ಸತ್ಯ ಅನ್ನುತ್ತಾರೆ. ಈ ಬಗ್ಗೆ ಕಾಳಜಿ, ಚಿಂತೆ ಇರುವವರನ್ನೂ ಗಾಢವಾಗಿ ಕಾಡುತ್ತಿರುವ ಪ್ರಶ್ನೆ ಎಂದರೆ – ಈ ನಿಟ್ಟಿನಲ್ಲಿ ನಾವೇನು ಮಾಡಬಹುದು ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದು ಬಿಟ್ಟಿದೆ ಎನ್ನುತ್ತಾರೆ.
ಈ ನಿಟ್ಟಿನಲ್ಲಿ ಪರಿಸರವನ್ನು ರಕ್ಷಿಸಲು , ಮಾಲಿನ್ಯವನ್ನು ತಡೆಗಟ್ಟಲು ಮತ್ತು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಇಂದಿನ ದಿನಗಳಲ್ಲಿ ಬಹಳಷ್ಟು ಅಗತ್ಯತೆ ಮತ್ತು ಅನಿವಾರ್ಯತೆ ಇದೆ. ಇದಕ್ಕೆ ಸಂಬಂಧಿಸಿದಂತೆ ಇಂದಿನ ನಾಗರಿಕ ಸಮಾಜ ಸಹ ಸ್ವ ಇಚ್ಛೆಯಿಂದ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗಿದೆ. ಪರಿಸರಕ್ಕೆ ಹಾನಿಕಾರಕವಾದ ಎಲ್ಲಾ ಚಟುವಟಿಕೆಗಳನ್ನು ಆದಷ್ಟು ಬೇಗನೆ ತಡೆಯುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ದೃಢವಾದ ಕಾನೂನುಗಳನ್ನು ಜಾರಿಗೆ ತರುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ ಎನ್ನುತ್ತಾರೆ ಜವಾದಿ ರವರು.
ಇನ್ನು ವಿಶೇಷವಾಗಿ ಹೇಳಬೇಕೆಂದರೆ, ಪರಿಸರ ನಾಶ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸವಕಳಿಯು ಸದಾ ಇರುವ ಪ್ರಮುಖ ಸಮಸ್ಯೆಗಳಾಗಿವೆ. ಇವುಗಳನ್ನು ಹದ್ದುಬಸ್ತಿನಲ್ಲಿ ಇಡುವುದು ಬಹಳಷ್ಟು ಅವಶ್ಯಕತೆ ಇದೆ. ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಪ್ರಥಮ ಆದ್ಯತೆಯ ಕರ್ತವ್ಯವಾಗಬೇಕು ಎಂಬುದು ಇವರ ಅಂತರಾಳದ ಕಳಕಳಿ ಧ್ವನಿಯಾಗಿದೆ. ಇದಕ್ಕಾಗಿ ಸರ್ಕಾರ ಶಿಕ್ಷಣ ವ್ಯವಸ್ಥೆ ಮೂಲಕ ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಕಡ್ಡಾಯವಾಗಿ ಪರಿಸರ ಶಿಕ್ಷಣದ ನೀತಿಯ ಪಾಠಗಳು ಮಕ್ಕಳಿಗೆ - ವಿಧ್ಯಾರ್ಥಿಗಳಿಗೆ ಭೋದನೆ ಮಾಡಿಸಬೇಕು. ಮಕ್ಕಳಿಗೆ ವಾರಕ್ಕೆ ಒಮ್ಮೆಯಾದರೂ ಪ್ರಾಕ್ಟಿಕಲ್ ಆಗಿ ಸಸಿಗಳು ನೆಡುವ, ಸಸಿಗಳನ್ನು ರಕ್ಷಿಸುವಂತಹ ಕೆಲಸಗಳು ಮಾಡಿಸಬೇಕು. ಈ ತನ್ಮೂಲಕವಾದರೂ ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಯಲು ಸಾಧ್ಯ.ಹಾಗೂ ನಾಗರಿಕರಿಗೆ ಪರಿಸರ ಪ್ರೇಮ ಮತ್ತು ಪರಿಸರ ನಾಶದಿಂದಾಗುವ ದುಷ್ಟರಿಣಾಮಗಳ ಬಗೆ ತಿಳಿಸುವ ನೈತಿಕತೆಯ ಚಿಂತನೆಗಳು, ವಿಚಾರ ಸಂಕಿರಣಗಳು, ವಿಚಾರ ಮತ್ತು ಚಿಂತನಾ ಗೋಷ್ಠಿಗಳು ಏರ್ಪಡಿಸುವ ಕಾರ್ಯ ಆಗಬೇಕು. ಆದಾಗಲೇ ಮಕ್ಕಳ ಹಾಗೂ ನಾಗರಿಕರ ಮನಸ್ಸುಗಳ ಮೇಲೆ ಪರಿಸರ ಸಂರಕ್ಷಣೆ ಬಗ್ಗೆ ಖಂಡಿತವಾಗಿಯೂ ಪ್ರಭಾವ ಬೀರುತ್ತದೆ ಎನ್ನುತ್ತಾರೆ.
ವಿಶೇಷವಾಗಿ ರೈತರು, ಯುವಕರು, ವಿದ್ಯಾರ್ಥಿಗಳ ಬಳಿಗೆ ತೆರಳಿ, ಅವರಿಗೆಲ್ಲಾ ತಿಳಿ ಹೇಳುವ ಕೆಲಸವನ್ನು ಚಾಚೂ ತಪ್ಪದೆ ಜವಾದಿ ರವರು ಮಾಡಿಕೊಂಡು ಬರುತ್ತಿದ್ದಾರೆ. ಜೊತೆಗೆ ಪರಿಸರ ಸಂರಕ್ಷಣೆ ಕುರಿತು ಘೋಷ ವಾಕ್ಯಗಳನ್ನು ಬರೆದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. ಆದರೆ ಪರಿಸರ ರಕ್ಷಣೆಯ ಘೋಷಣೆಗಳು ಒಂದು ದಿನದ ಮಟ್ಟಿಗೆ ಮಾತ್ರ ಸೀಮಿತವಾಗಿರದೆ ಅಂದರೆ ಘೋಷಣೆಗಳಾಗಿಯೇ ಉಳಿಯದೆ, ಕಡ್ಡಾಯವಾಗಿ ಆಚರಣೆಗೂ ಬರುವಂತಾಗಬೇಕು ಎಂಬುದು ಇವರ ಆಶಯ ದನಿಯಾಗಿದೆ.
ಮಾನವರ ಹಲವು ಚಟುವಟಿಕೆಗಳಿಂದ ಹೊರಸೂಸುವ ಇಂಗಾಲದ ಡೈಆಕ್ಸೈಡ್ ತಗ್ಗಿಸುವ ನಿಟ್ಟಿನಲ್ಲಿ ಪ್ರಕೃತಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ಇಂಗಾಲದ ಡೈಆಕ್ಸೈಡ್ ಹೆಚ್ಚಾಗಿ ಹೊರಸೂಸುವ ವಾಹನಗಳು ನಿಷೇಧ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ. ಅಂತೆಯೇ ಈ ನಿಟ್ಟಿನಲ್ಲಿ ಹೋರಾಟಗಳು ಸಹ ನಿರಂತರವಾಗಿ ಮಾಡುತ್ತಿದ್ದಾರೆ. ಹಾಗೆ ಪ್ಲಾಸ್ಟಿಕ್ ನಿಷೇಧ ಅಭಿಯಾನ ಆಗಬೇಕು. ಪ್ರಥಮವಾಗಿ ಮನೆಗಳಿಂದಲೇ ಪ್ಲಾಸ್ಟಿಕ್ ನಿಷೇಧ ಆರಂಭಿಸಬೇಕು ಎನ್ನುವುದು ಇವರ ಮನದ ಮಾತಾಗಿದೆ. ಪ್ಲಾಸ್ಟಿಕಗಳಿಂದ ಮಾನವರ ಆರೋಗ್ಯದ ಮೇಲೆ ಆಗುತ್ತಿರುವ ಅನಾಹುತಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ಅಂದಾಗಲೇ ಮಾತ್ರ ಜನರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿಕೊಳ್ಳಬಹುದು. ಈ ಮೂಲಕ ಅವರುಗಳೂ ಆರೋಗ್ಯವಂತರಾಗಿ, ಯಾವುದೇ ರೋಗಗಳಿಗೂ ಬಲಿಯಾಗದೆ ಸದೃಢವಾಗಿ ಜೀವನ ಸಾಗಿಸಬಹುದು ಎಂಬುದು ಇವರ ಕಳಕಳಿಯಾಗಿದೆ.
ಇವುಗಳಲ್ಲದೆ ಪ್ರಕೃತಿಯನ್ನು ಸಂರಕ್ಷಿಸುವಲ್ಲಿ ಅರಣ್ಯ ಸಂಪತ್ತು ಸಂರಕ್ಷಣೆ ಮಾಡುವುದು ಬಹಳ ಅವಶ್ಯಕತೆ ಇದೆ. ಮರಗಳನ್ನು ಕಡಿದ ಸ್ಥಳದಲ್ಲಿ ಸಸಿಗಳನ್ನು ನೆಡುವುದು. ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಸಹಾನುಭೂತಿಯುಳ್ಳ ಸುಸ್ಥಿರ ಕೃಷಿ ಪದ್ಧತಿಗಳತ್ತ ಗಮನ ಹರಿಸುವುದು. ಬೆಳೆ ತಿರುಗುವಿಕೆ, ಕೃಷಿ ಅರಣ್ಯೀಕರಣ ಮತ್ತು ಸಾವಯವ ಕೃಷಿಯಂತಹ ತಂತ್ರಗಳು ಬಳಸಿಕೊಂಡು ಮಣ್ಣಿನ ಸವೆತ, ನೀರಿನ ಬಳಕೆ ಮತ್ತು ರಾಸಾಯನಿಕ ಮಾಲಿನ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವುದು ಸೇರಿದಂತೆ ಮನುಷ್ಯ ಪ್ರಕೃತಿಯೊಂದಿಗೆ ಸಾಮರಸ್ಯದ ಸಂಬಂಧವನ್ನು ಹೊಂದಬೇಕು ಎನ್ನುತ್ತಾರೆ. ಅದಕ್ಕಾಗಿಯೇ ಮನೆಗೊಂದು ಮರಗಳನ್ನು ಬೆಳೆಸಬೇಕು ಎಂಬುದು ಇವರ ಮನದಾಳದ ಮಾತುಗಳು.
ಚಿತ್ರ ಮತ್ತು ಬರಹ : ಬಸವರಾಜ ಮಂಕಲ್, ಬೀದರ ಜಿಲ್ಲೆ