ಪರಿಸರ ಸ್ನೇಹಿ ಬಿದಿರಿನ ಉತ್ಪನ್ನಗಳು

ಪರಿಸರ ಸ್ನೇಹಿ ಬಿದಿರಿನ ಉತ್ಪನ್ನಗಳು

ಪರಿಸರ ಮಾಲಿನ್ಯ ನಮ್ಮ ದೇಶದ ಅತೀದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪ್ಲಾಸ್ಟಿಕ್ ಎಂದರೆ ತಪ್ಪಾಗಲಾರದು. ನಾವಿನ್ನೂ ಈ ಪ್ಲಾಸ್ಟಿಕ್ ಪೆಡಂಭೂತಕ್ಕೆ ಪರ್ಯಾಯವನ್ನು ಕಂಡುಹುಡುಕಿಲ್ಲ. ಮಣ್ಣಿನಲ್ಲಿ ಕರಗುವ ಪ್ಲಾಸ್ಟಿಕ್ ಕಂಡು ಹಿಡಿದರೆ ಬಹಳಷ್ಟು ಉಪಕಾರವಿದೆ. ಆದರೆ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯವಾಗಿ ನಾವು ಬಿದಿರು ಬಳಸಬಹುದು. ಕಳೆದ ವರ್ಷ ‘ಸಂಪದ’ದಲ್ಲಿ ಶ್ರೀ ಅಡ್ಡೂರು ಕೃಷ್ಣ ರಾವ್ ಇವರು ಬಿದಿರಿನ ಬಾಟಲಿ ಬಗ್ಗೆ ಒಂದು ಲೇಖನ ಬರೆದಿದ್ದರು. ಅದು ಅಸ್ಸಾಂನ ಡಿಬಿ ಇಂಡಸ್ಟ್ರೀಸ್ ನ ಸ್ಥಾಪಕರಾದ ಧೃತಿಮಾನ್ ಬೋರಾ ಸಾಧನೆ ಬಗ್ಗೆ ಬೆಳಕು ಚೆಲ್ಲಿದ ವಿಷಯವಾಗಿತ್ತು. ಅವರು ತಯಾರಿಸಿದ ಬಿದಿರಿನ ಬಾಟಲಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಅರ್ಥಪೂರ್ಣ ಲೇಖನ. ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಬಿದಿರಿನ ಬಾಟಲಿಗಳನ್ನು ಬಳಸಿದರೆ,  ಉಪಯೋಗಿಸಿ ಬಿಸಾಕುವ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಬಹಳಷ್ಟು ಕಮ್ಮಿ ಮಾಡಿಕೊಳ್ಳಬಹುದು. ಈಗ ಸರಕಾರವೂ ಅರಣ್ಯ ಕಾಯಿದೆಗೆ ತಿದ್ದುಪಡಿ ತಂದು ಬಿದಿರನ್ನು ಮರ ಅಲ್ಲವೆಂದು ಪರಿಗಣಿಸಿದೆ ಮತ್ತು ಇದರ ಮುಕ್ತ ಬೆಳವಣಿಗೆ ಹಾಗೂ ಕಟಾವಿಗೆ ಅನುವು ಮಾಡಿಕೊಟ್ಟಿದೆ ಎಂದು ಸುದ್ದಿಯಿದೆ. 

ನಿಜವಾಗಿ ನೋಡಿದರೆ ಬಿದಿರು ಒಂದು ಹುಲ್ಲಿನ ಜಾತಿಗೆ ಸೇರಿದ ಸಸ್ಯ. ಆ ಕಾರಣದಿಂದ ಇದು ಬಹಳ ವೇಗವಾಗಿ ಬೆಳೆಯುತ್ತದೆ. ಕೆಲವೇ ದಿನಗಳಲ್ಲಿ ಬಿದಿರು ಆಳೆತ್ತರಕ್ಕೆ ಬೆಳೆದು ನಿಲ್ಲುತ್ತದೆ. ಒಂದು ದಿನದಲ್ಲಿ ಮೂರು ಅಡಿ ಬೆಳೆಯಬಲ್ಲ ಬಿದಿರು ತಳಿಗಳೂ ಇವೆ. ಆ ಕಾರಣದಿಂದ ಬಿದಿರನ್ನು ನಾವು ಅನೇಕ ಪರ್ಯಾಯ ಉತ್ಪನ್ನಗಳ ತಯಾರಿಕೆಗೆ ಬಳಸಿಕೊಳ್ಳಬಹುದಾಗಿದೆ. ಬಿದಿರು ಮಣ್ಣಿನಲ್ಲಿ ಮಿಶ್ರವಾಗಲು ಎಷ್ಟು ಸಮಯ ಬೇಕಾಗಬಹುದು? ಪ್ಲಾಸ್ಟಿಕ್ ನಂತೆ ಸುದೀರ್ಘವಾದ ಸಮಯ ತೆಗೆದುಕೊಳ್ಳಬಹುದೇ? ಖಂಡಿತಾ ಇಲ್ಲ. ಬಿದಿರು ಸಸ್ಯವಾದುದರಿಂದ ಬೇಗನೆ ಕೊಳೆತು ಮಣ್ಣಿಗೆ ಸೇರುತ್ತದೆ.  

ಬಿದಿರು ಸಸ್ಯ ಬೇರೆ ಗಿಡ, ಮರಗಳಿಗೆ ಹೋಲಿಸಿದರೆ ವಾತಾವರಣಕ್ಕೆ ೩೫% ದಷ್ಟು ಅಧಿಕ ಪ್ರಮಾಣದಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಬಿದಿರು ಬೆಳೆಸುವುದು ಸುಲಭ. ಏಕೆಂದರೆ ೧-೫ ವರ್ಷಗಳಲ್ಲಿ ಅದು ಬೆಳೆದು ಮರವಾಗಿ ಬಿಡುತ್ತದೆ. ಓಕ್, ತೇಗ ಮುಂತಾದ ಮರಗಳು ಬೆಳೆದು ಉಪಯುಕ್ತವಾಗಬೇಕಾದರೆ ಕನಿಷ್ಟ ೪೦ ವರ್ಷಗಳು ಬೇಕು. ಬಿದಿರಿನ ವೈಶಿಷ್ಟ್ಯತೆ ಏನೆಂದರೆ ಯಾವುದಾದರೂ ಭೂಮಿ ಬಂಜರು ಆಗಿದ್ದರೆ ಅವುಗಳಲ್ಲೂ ಬಿದಿರಿನ ಸಸ್ಯವನ್ನು ಬೆಳೆಯ ಬಹುದು. ಬಿದಿರು ಮತ್ತೆ ಆ ಭೂಮಿಯನ್ನು ಹಸಿರಾಗುವಂತೆ ಮಾಡುತ್ತದೆ. ಪರಿಸರಕ್ಕೆ ಮಾರಕವಾಗುವ ಯಾವುದೇ ಅಂಶ ಬಿದಿರಿನ ಗಿಡದಲ್ಲಿ ಇಲ್ಲದೇ ಇರುವುದರಿಂದ ಇದನ್ನು ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಗೆ ಬಳಸಬಹುದಾಗಿದೆ. ಸಣ್ಣ ಪ್ರಮಾಣದಲ್ಲಾದರೂ ಸರಿಯೇ, ನಾವು ಇಂತಹ ಉತ್ಪನ್ನಗಳನ್ನು ಬಳಸಿದರೆ ಅಷ್ಟು ಪಟ್ಟಾದರೂ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ, ಮರದ ಬಳಕೆ ಕಮ್ಮಿಯಾಗುತ್ತದೆ. ಬನ್ನಿ, ಯಾವೆಲ್ಲಾ ಉತ್ಪನ್ನಗಳನ್ನು ಬಿದಿರು ಸಸ್ಯದಿಂದ ತಯಾರಿಸಬಹುದು ಅಂತ.

ನಿಮಗೆ ತಿಳಿದೇ ಇರುವಂತೆ ಅರಣ್ಯ ನಾಶವು ಈಗ ನಮ್ಮ ಭೂಮಿಯು ಎದುರಿಸುತ್ತಿರುವ ಅತೀ ದೊಡ್ಡ ಸಮಸ್ಯೆ. ದೊಡ್ಡ ದೊಡ್ಡ ಮರಗಳನ್ನು ನಾವು ಬೃಹತ್ ಪ್ರಮಾಣದಲ್ಲಿ ಕಡಿಯುತ್ತಿದ್ದೇವೆ. ನಾವು ಮರಗಳ ಬಳಕೆಯನ್ನು ಬಿದಿರು ಬಳಸುವುದರ ಮೂಲಕ ಬದಲಾಯಿಸಬಹುದು. ಮರದಿಂದ ನಾವು ಏನೆಲ್ಲಾ ಸಾಮಾನುಗಳನ್ನು ಮಾಡಬಹುದೋ ಅವುಗಳಲ್ಲಿ ಬಹುತೇಕವನ್ನು ಬಿದಿರಿನಿಂದ ತಯಾರಿಸಬಹುದು. ಕೆಲವೊಂದು ಪೀಠೋಪಕರಣಗಳು, ಪೇಪರ್, ಇದ್ದಿಲು, ನೆಲಹಾಸು ಹಾಗೂ ಕಟ್ಟಡ ಸಾಮಾಗ್ರಿಗಳನ್ನೂ ತಯಾರಿಸಬಹುದಾಗಿದೆ. ಮರದಲ್ಲಿರುವ ನಾರಿನ ಅಂಶವು ಬಿದಿರಿನಲ್ಲಿರುವ ನಾರಿನ ಅಂಶಕ್ಕೆ ಸರಿಯಾಗಿರುತ್ತದೆ. ಆದುದರಿಂದ ಬಿದಿರು ಅಷ್ಟು ಬೇಗನೇ ಹಾಳಾಗುವುದಿಲ್ಲ. ಆ ಕಾರಣದಿಂದಾಗಿ ಮರಕ್ಕೆ ಪರ್ಯಾಯವಾಗಿ ಬಹಳಷ್ಟು ಕಡೆ ನಾವು ಬಿದಿರನ್ನು ಬಳಸಬಹುದು. 

ಬಿದಿರನ್ನು ಉಪಯೋಗಿಸಿ ಪ್ಲಾಸ್ಟಿಕ್ ಬಳಕೆಯನ್ನು ಕಮ್ಮಿ ಮಾಡುವುದು ಹೇಗೆ?

ನಾವು ದಿನಂಪ್ರತಿ ಬಳಸುವ ಬಹಳಷ್ಟು ವಸ್ತುಗಳು ಪ್ಲಾಸ್ಟಿಕ್ ನಿಂದಲೇ ತಯಾರಾಗಿರುತ್ತದೆ. ಉದಾಹರಣೆಗೆ ಬಾಟಲ್, ಹಲ್ಲು ಉಜ್ಜುವ ಬ್ರಷ್, ಪಾನೀಯಗಳನ್ನು ಸೇವಿಸುವ ನಳಿಕೆ (ಸ್ಟ್ರಾ) ಇತ್ಯಾದಿ. ಬಿದಿರು ಮೂರು ತಿಂಗಳಿಂದ ಒಂದು ವರ್ಷದೊಳಗೆ ಮಣ್ಣಿನಲ್ಲಿ ಕೊಳೆಯುತ್ತದೆ. ಆದರೆ ಪ್ಲಾಸ್ಟಿಕ್ ನೂರು ವರ್ಷಗಳಾದರೂ ಕೊಳೆಯುವುದಿಲ್ಲ. ನಾವು ದಿನಾಲೂ ಹಲ್ಲು ಉಜ್ಜಲು ಉಪಯೋಗಿಸುವ ಬ್ರಷ್ ಪ್ಲಾಸ್ಟಿಕ್ ಆಗಿರುತ್ತದೆ. ಅವುಗಳ ಬ್ರಷ್ ಭಾಗವನ್ನು ಹೊರತು ಪಡಿಸಿ ಅದರ ಹಿಡಿಕೆಯನ್ನು ಬಿದಿರಿನಿಂದ ತಯಾರಿಸಬಹುದಾಗಿದೆ. ಒಬ್ಬ ವ್ಯಕ್ತಿ ವರ್ಷಕ್ಕೆ ಕನಿಷ್ಟ ೫ -೭ ಬ್ರಷ್ ಆದರೂ ಬಳಸುತ್ತಾನೆಂದು ಅಂದಾಜು ಮಾಡಿದರೆ ಎಷ್ಟು ಪ್ಲಾಸ್ಟಿಕ್ ತ್ಯಾಜ್ಯ ಕೇವಲ ಬ್ರಷ್ ನಿಂದಲೇ ತಯಾರಾಗುತ್ತದೆ? ಪೈಂಟಿಂಗ್ ಹಾಗೂ ಮೇಕಪ್ ಮಾಡಲು ಬಳಸುವ ಬ್ರಷ್ ಹಿಡಿಯನ್ನು ಬಿದಿರಿನಿಂದ ಸುಲಭವಾಗಿ ಮಾಡಬಹುದಾಗಿದೆ.

ಆಹಾರದ ಪಾರ್ಸೆಲ್ ತರಲು ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ಡಬ್ಬಿ ಅಥವಾ ಪೊಟ್ಟಣಗಳ ಬದಲು ಬಿದಿರಿನಿಂದ ತಯಾರಿಸಿದ ಉತ್ಪನ್ನಗಳ ಬಳಕೆ ಮಾಡ ಬಹುದು. ಪ್ಲಾಸ್ಟಿಕ್ ಗಿಂತಲೂ ಸ್ವಲ್ಪ ದುಬಾರಿಯಾದರೂ ನಾವು ಇವುಗಳನ್ನು ಹಲವಾರು ಸಲ ಬಳಸಬಹುದು. ಆಹಾರ ತಿನ್ನಲು ಬಳಸುವ ಚಮಚ, ಮುಳ್ಳು ಚಮಚ (ಫೋರ್ಕ್), ಕಡ್ಡಿ ಎಲ್ಲವನ್ನೂ ಬಿದಿರು ಬಳಸಿ ತಯಾರಿಸಬಹುದು. ವರ್ಷದಲ್ಲಿ ಪ್ರಪಂಚದಾದ್ಯಂತ ೮.೫ ಬಿಲಿಯನ್ ಪ್ಲಾಸ್ಟಿಕ್ ಸ್ಟ್ರಾಗಳು ಉಪಯೋಗಿಸಲ್ಪಟ್ಟು ತ್ಯಾಜ್ಯ ಸೇರುತ್ತವೆ. ಸಮುದ್ರಕ್ಕೆ ಸೇರಿ ಜಲಮಾಲಿನ್ಯಕ್ಕೆ ಕಾರಣವಾಗಲೂ ಬಹುದು. ಇವೆಲ್ಲವೂ ನಮ್ಮ ಪರಿಸರವನ್ನು ಹಾಳು ಮಾಡುತ್ತವೆ. ಪ್ಲಾಸ್ಟಿಕ್ ಸ್ಟ್ರಾ ಬದಲು ಬಿದಿರು ನಳಿಕೆಗಳನ್ನು ಧಾರಾಳವಾಗಿ ಉಪಯೋಗಿಸಬಹುದು. ಅದರಲ್ಲಿ ಪಾನೀಯವನ್ನು ಕುಡಿಯುವಾಗ ಒಂದು ವಿಭಿನ್ನ ಅನುಭವವೂ ಸಿಗುತ್ತದೆ.

ನಾವು ಈಗ ಹೋಟೇಲ್ ಸಂಸ್ಕೃತಿಗೆ ಒಗ್ಗಿ ಹೋಗಿದ್ದೇವೆ. ಹೋಟೇಲಿಗೆ ಹೋದಾಗ ಅಲ್ಲಿ ಕೈ ಒರೆಸಲು ಟಿಷ್ಯೂ ಪೇಪರ್ ಬಳಸುತ್ತೇವೆ. ಇವುಗಳನ್ನು ಯಥೇಚ್ಛವಾಗಿ ಬಳಕೆ ಮಾಡುವುದರಿಂದ ಮರಗಳ ಸಂಖ್ಯೆಯೂ ಕಮ್ಮಿಯಾಗುತ್ತವೆ. ಈ ಪೇಪರ್ ತಯಾರಿಕೆಗೆ ಮರಗಳ ಬದಲು ಬಿದಿರನ್ನು ಬಳಸಬಹುದಾಗಿದೆ. ಬಿದಿರು ಬಹುಬೇಗನೇ ಬೆಳೆಯುತ್ತದೆ. ಆ ಕಾರಣದಿಂದ ಪ್ಲಾಸ್ಟಿಕ್ ಎಲ್ಲೆಲ್ಲಿ ಬಳಕೆಯಾಗುತ್ತದೆಯೋ ಅಲ್ಲಿ ನಾವು ಬಿದಿರಿನ ಉತ್ಪನ್ನಗಳನ್ನು ಉಪಯೋಗಿಸಬಹುದು.

(ಹಾಳೆ ತಟ್ಟೆಗಳಿಗೆ ಅಡಿಕೆಯ ಹಾಳೆಗಳನ್ನೂ ಈಗ ಅಧಿಕವಾಗಿ ಉಪಯೋಗಿಸುತ್ತಾರೆ.) ನಾವು ಪರಿಸರ ನಾಶಕ್ಕೆ ಕಾರಣವಾಗುವ ವಸ್ತುಗಳ ಬಳಕೆಯನ್ನು ಆದಷ್ಟು ತ್ಯಜಿಸಿ ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆಯತ್ತ ಮನಸ್ಸು ಮಾಡಬೇಕಾಗಿದೆ.

ಚಿತ್ರಗಳ ಕೃಪೆ: ಅಂತರ್ಜಾಲದ ವಿವಿಧ ಜಾಲತಾಣಗಳು