ಪರೀಕ್ಷಾ ಸಮಯದಲ್ಲೊಂದು ಚಿಂತನೆ

ಪರೀಕ್ಷಾ ಸಮಯದಲ್ಲೊಂದು ಚಿಂತನೆ

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಗಳು ಇಂದು ಒಂದು ರೀತಿಯ ಹೊಸ ಶಿಕ್ಷಣ ಪದ್ದತಿಯ ಪ್ರಯೋಗಶಾಲೆಗಳಾಗಿದ್ದು ಅಲ್ಲಿ ಕಲಿಸುವ ಶಿಕ್ಷಕ ವರ್ಗಗಳು ಅದರ ಬಲಿಪಶುಗಳಾಗಿವೆ ಎಂದರೆ ತಪ್ಪಾಗಲಾರದು. ಪ್ರಾಥಮಿಕ ಶಿಕ್ಷಣ ಪದ್ದತಿಯಲ್ಲಿ ಪರೀಕ್ಷಾ ಪದ್ದತಿ ಬದಲಾಗಿ ಒಂದರಿಂದ ಏಳರವರೆಗೆ ಅನುತ್ತೀರ್ಣತೆಯಿಲ್ಲದೆ ಎಲ್ಲರೂ ಶಿಕ್ಷಣವನ್ನು  ಸಲೀಸಾಗಿ ಮುಗಿಸಿ ಮಾಧ್ಯಮಿಕ ಶಾಲೆಗಳಿಗೆ ಸಾರಾಸಗಟಾಗಿ ತಳ್ಳಲ್ಪಡುವರು. ಮಾಧ್ಯಮಿಕ ಶಾಲೆಗಳಲ್ಲಿ ಎಂಟು ಹಾಗೂ ಒಂಬತ್ತನೆಯ ತರಗತಿಗಳಲ್ಲಿ ಪರೀಕ್ಷೆಗಳಿದ್ದರೂ ಅಲ್ಲಿ ಅನುತ್ತೀರ್ಣರಾದವರ ಬಗ್ಗೆ ವಿಶೇಷ ಲಕ್ಷ್ಯ ವಹಿಸಿ ಅದೇ ವರ್ಷದಲ್ಲಿ ಮರುಬೋಧನೆ ಮರು ಪರೀಕ್ಷೆಗಳನ್ನು ನಡೆಸಿ ಒಟ್ಟಿನಲ್ಲಿ ಅದೇ ತರಗತಿಗಳಲ್ಲಿ ಕುಳಿತುಕೊಳ್ಳದಂತೆ ಮಾಡಿ ಮೇಲೇರುತ್ತ ಹತ್ತನೆಯ ತರಗತಿಗೆ ಬರುವರು. ಈಗ ಶುರುವಾಯಿತು ನಿಜವಾದ ಸಂಕಷ್ಟ. ಶಾಲಾ ಮುಖ್ಯೋಪಾಧ್ಯಾಯರಿಗೆ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಶಾಲೆಯಲ್ಲಿ ನೂರಕ್ಕೆ ನೂರು ಫಲಿತಾಂಶ ತರುವ ಗುರುತರ ಜವಾಬ್ದಾರಿಯಾದರೆ ಶಿಕ್ಷಣ ಇಲಾಖೆಗಳ ಮುಖ್ಯಸ್ಥರಿಗೆ ತಮ್ಮ ತಾಲೂಕು ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶ ನಿಡುವ ಹೊಣೆಗಾರಿಕೆಯನ್ನು ಸರಕಾರ ಮೌಖಿಕ ಆದೇಶದ ರೂಪದಲ್ಲಿ ಕೊಟ್ಟು ವಾರ್ಷಿಕ ಪರೀಕ್ಷೆ ಬಂತೆಂದರೆ ಎಲ್ಲೆಲ್ಲೂ ಶಿಬಿರ, ತರಬೇತಿ ವರ್ಗಗಳು ಪ್ರಾರಂಭವಾಗುವುವು. ನಿಜವಾದ ದೈಹಿಕ, ಮಾನಸಿಕ ಒತ್ತಡ ವಿಷಯ ಶಿಕ್ಷಕರ ಮೇಲೆ ಬೀಳುವುದು. ವಿಷಯದಲ್ಲಿ ಶೇಕಡಾವಾರು ಕಡಿಮೆಯಾದರೆ ಇಲಾಖೆಯ ಶಿಕ್ಷೆಗೆ ಒಳಪಡುವ ಭಯ ! ಭದ್ರ ಬುನಾದಿ ಇಲ್ಲದೆ ಮೇಲೇರಿ ಬಂದ ಸಾಮಾನ್ಯ ವಿದ್ಯಾರ್ಥಿಗಳನ್ನು ಉತ್ತೀರ್ಣರನ್ನಾಗಿಸುವ ಮಾನಸಿಕ ಒತ್ತಡ ಶಿಕ್ಷಕರ ಮೇಲೆ ಬಿದ್ದಾಗ ಹಗಲಿರುಳೆನ್ನದೆ, ಬಳಲಿಕೆ, ಬೇಸರಗಳನ್ನು ಬದಿಗೊತ್ತಿ ವಿಶೇಷ ತರಬೇತಿ, ಬೊಧನೆಗಳನ್ನು ನಡೆಸಿ ತಮ್ಮ ಆರೋಗ್ಯ ಕೆಡಿಸಿಕೊಂಡ ಹಾಗೂ ನಿವೃತ್ತಿಯ ಮೊದಲೇ ಹೃದಯಾಘಾತದಿಂದ ಅಸು ನೀಗುವ ಶಿಕ್ಷಕರು ಹೆಚ್ಚಾಗುತ್ತಿದ್ದಾರೆ. ಇಲ್ಲವೆ ಉತ್ತಮ ಫಲಿತಾಂಶ ಪಡೆಯಲು ಪರೀಕ್ಷೆಗಳಲ್ಲಿ ಅಕ್ರಮ ಎಸಗುವ ಹೇಯ ಕೃತ್ಯಕ್ಕೂ ಸಹ ಕೈ ಹಾಕುವಂತೆ ಪ್ರೆರೇಪಿತರಾಗುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲದಕ್ಕೂ ಶಿಕ್ಷಕರೇ ಹೊಣೆ ಗಾರರು ಎಂಬಂತೆ ಬಿಂಬಿಸುತ್ತಿರುವುದು ಇಂದಿನ ಘೋರ ದುರಂತವಾಗಿದೆ. ಈಗಾಗಲೆ ಹಲವು ಪ್ರಾಮಾಣಿಕ ಶಿಕ್ಷಕರು ಅತಿ ಒತ್ತಡ ಸಹಿಸಲಾರದೆ ಜೀವತೆತ್ತಿರುವುದು, ಅಥವಾ ಪರೀಕ್ಷೆಗಳಲ್ಲಿ ಅಕ್ರಮವೆಸಗಿ ಶಿಕ್ಷೆಗೆ ಗುರಿಯಾಗಿರುವುದು ಕಂಡುಬರುವುದು. ಈ ಪರೀಕ್ಷೆಗಳೆನ್ನುವುದು ಶಿಕ್ಷಕರಿಗೊಂದು ಶಾಪವಾಗದಿರಲಿ‌. ಇದಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಹದಗೆಡುವುದರಲ್ಲಿ ಎರಡು ಮಾತಿಲ್ಲ. ಹಾಗಾಗುವುದರೊಳಗೆ ಇಲಾಖೆ ಎಚ್ಚರಗೊಳ್ಳಲಿ ಎಂದು ಶಿಕ್ಷಕರ ಕಷ್ಟಗಳ ಸಂಪೂರ್ಣ ಪರಿಚಯವಿರುವ ನಿವೃತ್ತ ಶಿಕ್ಷಕನಾದ ನನ್ನ ಕಳಕಳಿಯ  ಹಾರೈಕೆ. 

-ಶ್ರೀಧರ ಭಟ್ಟ ಶಿರಸಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ