ಪರೀಕ್ಷೆಯಲ್ಲಿ ಐಪಾಡ್ ಅಕ್ರಮ ಬಳಕೆ (ಇ-ಲೋಕ-20)(28/4/2007)

ಪರೀಕ್ಷೆಯಲ್ಲಿ ಐಪಾಡ್ ಅಕ್ರಮ ಬಳಕೆ (ಇ-ಲೋಕ-20)(28/4/2007)

ಬರಹ

 ಸೆಲ್ ಪೋನ್‌ಗಳನ್ನು ವಿದ್ಯಾರ್ಥಿಗಳು ಅಕ್ರಮವಾಗಿ ಬಳಸುತ್ತಿದ್ದುದು ಗೊತ್ತಾದ ಮೇಲೆ ಅದರ ಬಳಕೆಯನ್ನು ನಿಯಂತ್ರಿಸುವ ನಿರ್ಧಾರವನ್ನು ಹಲವಾರು ಕಾಲೇಜುಗಳು ವಿಶ್ವವಿದ್ಯಾಲಯಗಳು ಮಾಡಿವೆ. ಈಗ ವಿದ್ಯಾರ್ಥಿಗಳಲ್ಲಿ ಜನಪ್ರಿಯವಾಗಿರುವ ಹಾಡುಗಳ ಧ್ವನಿಮುದ್ರಿಕೆಯನ್ನು ಸಂಗ್ರಹಿಸಿ,ಅದನ್ನು ನುಡಿಸುವ ಐಪಾಡ್ ಕೂಡಾ ದುರ್ಬಳಕೆಯಾಗುತ್ತದೆ ಎನ್ನುವುದು ಕೆಲವೆಡೆ ಬೆಳಕಿಗೆ ಬಂದಿದೆ.ಕಿರುಗಾತ್ರದ ಐಪಾಡನ್ನು ಅಡಗಿಸಿ ಇಡುವುದು ಸುಲಭ. ಕಿವಿಗೆ ಧ್ವನಿ ಆಲಿಸಲು ಇಯರ್ ಫೋನ್ ಸಿಕ್ಕಿಸಿಕೊಂಡು,ಅದರ ತಂತಿಯನ್ನು ಕಾಲರಿನೆಡೆಯಿಂದ ತೆಗೆದುಕೊಂಡರೆ,ಪಕ್ಕನೆ ಯಾರ ಗಮನಕ್ಕೂ ಬಾರದು.ಪ್ರಶ್ನೆಗಳಿಗೆ ಉತ್ತರಗಳನ್ನು ಮೊದಲೆ ಧ್ವನಿಮುದ್ರಿಸಿ ಇಟ್ಟುಕೊಂಡು,ಪರೀಕ್ಷೆಯಲ್ಲಿ ಅದನ್ನು ಆಲಿಸುತ್ತಾ ಉತ್ತರ ಬರೆಯುವ ಭೂಪರು ಅಮೆರಿಕಾದಲ್ಲಿ ಕೆಲವು ಕಾಲೇಜುಗಳಲ್ಲಿ ಹದ್ದಿನ ಕಣ್ಣಿನ ಶಿಕ್ಷಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.ಹಾಡಿನ ಸಾಲಿನ ಲಿಪಿ ಕಡತವನ್ನೂ ದಾಸ್ತಾನು ಮಾಡುವ ಸೌಲಭ್ಯವನ್ನು ಉತ್ತರ ಬರೆದಿಡಲು ಉಪಯೋಗಿಸಿ,ಪರೀಕ್ಷೆಯಲ್ಲಿ ಅದನ್ನು ನೋಡಿ ಉತ್ತರ ಬರೆಯುವುದು ವಿದ್ಯಾರ್ಥಿಗಳು ಬಳಸುತ್ತಿರುವ ಇನ್ನೊಂದು ತಂತ್ರ.ಹಾಗಾಗಿ ಐಪಾಡ್‌ಗೆ ನಿಷೇಧ ಭಾಗ್ಯ ಒದಗಲಿದೆ. ಉತ್ತರ ಕೆರೋಲಿನಾದ ಡ್ಯೂಕ್ ವಿಶ್ವವಿದ್ಯಾಲಯ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿ,ಐಪಾಡ್‌ನಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಸಹಾಯ ಆಗುತ್ತಿದೆ.ಸಂಗೀತ,ತಂತ್ರಜ್ಞಾನದ ವಿದ್ಯಾರ್ಥಿಗಳ ಕಲಿಕೆಗೆ ಇದು ಸಹಕಾರಿ ಎಂದು ಅದರ ಬಳಕೆಗೆ ಮುಕ್ತ ಅನುಮತಿ ನೀಡಿದೆ.

ಎಸ್ ಎಮ್ ಎಸ್ ಕಳುಹಿಸಿ ಇಪ್ಪತ್ತೈದು ಸಾವಿರ ಡಾಲರು ಬಹುಮಾನ ಗೆದ್ದ ಬಾಲಕಿ supercalifragilisticexpialidocious ಎನ್ನುವ ಉದ್ದ ಸಂದೇಶವನ್ನು ಬರೇ ಹದಿನೈದು ಸೆಕೆಂಡುಗಳಲ್ಲಿ ಮೊಬೈಲ್ ಮೇಲೆ ಟೈಪಿಸಿ,ಹದಿಮೂರು ವರ್ಷದ ಪೋರಿ ಎಲ್‍ಜಿ ಕಂಪೆನಿ ನೀಡಿದ ಇಪ್ಪತ್ತೈದು ಸಾವಿರ ಡಾಲರು ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾಳೆ.ಇನ್ನೂರು ಜನರು ಸ್ಪರ್ಧಿಗಳ ಪೈಕಿ ಆಕೆ ಮೊದಲಿಗಳಾದಳು. ತಾನು ಟೈಪಿಸಿದ ಪದ ಏನೆಂದು ಆಕೆಗೆ ಪ್ರಾಯಶ: ಗೊತ್ತಿರಲಾರದು. ಐರ್‌ಲ್ಯಾಂಡಿನ ವರದಿಯೊಂದು ಮಕ್ಕಳು ಕಿರು ಸಂದೇಶಗಳನ್ನು ಕಳುಹಿಸುವ ಕಾರಣ ಅವರ ಬರವಣಿಗೆ ಸಾಮರ್ಥ್ಯ ಕುಸಿಯುತ್ತಿದೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದೆ.ಅಕ್ಷರ ತಪ್ಪುಗಳ ಜತೆ, ವ್ಯಾಕರಣ ತಪ್ಪುಗಳು ಜತೆಗೆ ವಿರಾಮ ಚಿಹ್ನೆಗಳ ಬಳಕೆಯೂ ಬಾಧಿತವಾಗಿದೆ ಎಂದು ವರದಿ ತಿಳಿಸಿದೆ.

ನಗರಗಳ ನಕಾಶೆ ಅಂತರ್ಜಾಲದಲ್ಲಿ ಲಭ್ಯವಾಗಿಸಿದ ಯಾಹೂ

 ಸಿಇ ಇನ್ಫೋ ಸಿಸ್ಟಮ್ಸ್‌ನ ಜತೆಗೂಡಿ ಯಾಹೂ ಕಂಪೆನಿಯು ಭಾರತದ ಇಪ್ಪತ್ತಕ್ಕೂ ಅಧಿಕ ನಗರಗಳ ನಕಾಶೆಯನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸಿದೆ. ವಾಣಿಜ್ಯೋದ್ದಮಗಳು,ಏಟಿಎಂ,ಸಿನೆಮಾ ಮಂದಿರ,ಹೋಟೆಲುಗಳ ವಿವರಗಳೂ ಲಭ್ಯವಾಗಲಿವೆ.ಹವಾಮಾನ ವರದಿಯೂ ಸಿಗುತ್ತದೆ.ರಸ್ತೆ ನಕಾಶೆ ಮತ್ತು ಉಪಗ್ರಹ ಚಿತ್ರಗಳನ್ನು ಜತೆಗೂಡಿಸಿ ನೋಡುವ ಸೌಲಭ್ಯವನ್ನೂ ಯಾಹೂ ಒದಗಿಸಲಿದೆ. http://in.maps.yahoo.com/ವಿಳಾಸದಲ್ಲಿ ಇದು ಲಭ್ಯವಾಗಿದೆ. ಈಗಿನ್ನೂ ಆರಂಭದ ಹಂತವಾಗಿರುವುದರಿಂದ ಸಮಗ್ರವಾದ ವಿವರಗಳು ಸಿಗದಿರಬಹುದು. ಆದರೆ ಮುಂದಿನ ದಿನಗಳಲ್ಲಿ ಸೇವೆ ಸುಧಾರಿಸಲಿದೆ. ಪ್ಲಿಕ್ರ್, ಡಿಲಿಷಿಯಸ್ ಮುಂತಾದ ಜನಪ್ರಿಯ ಅಂತರ್ಜಾಲ ತಾಣಗಳಲ್ಲಿರುವ ಚಿತ್ರಗಳನ್ನು ಬಳಸಿ, ಯಾಹೂ ವಿಶಿಷ್ಟ ಅನುಭವ ನೀಡಲು ಪ್ರಯತ್ನ ನಡೆಸಿದೆ.

 ಇ-ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಐವತ್ತನಾಲ್ಕನೇ ಸ್ಥಾನಕ್ಕೆ ಕುಸಿತ

 ಭಾರತದಲ್ಲೂ ಅಂತರ್ಜಾಲ ಬಳಕೆ ಹೆಚ್ಚುತ್ತಿದ್ದರೂ, ಇ-ಸಿದ್ಧತೆ ಪರಿಗಣಿಸಿ ನೀಡಿದ ಶ್ರೇಣಿಯಲ್ಲಿ ಕಳೆದವರ್ಷದ ಐವತ್ತಮೂರನೇ ಸ್ಥಾನದಿಂದ ಐವತ್ತನಾಲ್ಕನೇ ಸ್ಥಾನಕ್ಕೆ ಕುಸಿದಿದೆ.ಅಂತರ್ಜಾಲದ ಸುಲಭ ಲಭ್ಯತೆ, ಅದರ ಬಳಕೆಗೆ ಇರುವ ನಿಯಮಾವಳಿಗಳು ಮತ್ತು ಸರಕಾರದ ಸೇವೆಗಳನ್ನು ಪಡೆಯಲು ಅಂತರ್ಜಾಲದಲ್ಲಿ ಇರುವ ಅವಕಾಶಗಳನ್ನು ಆಧರಿಸಿ, ಈ ರ್‍ಯಾಂಕಿಂಗ್ ನೀಡಲಾಗಿದೆ.ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದ್ದರೆ ಅಮೆರಿಕಾ ದ್ವಿತೀಯ ಸ್ಥಾನದಲ್ಲಿದೆ.ಹಾಂಕಾಗ್ ನಾಲ್ಕನೇ, ಸಿಂಗಾಪುರ್ ಆರನೇ ಮತ್ತು ದಕ್ಷಿಣ ಕೊರಿಯ ಹದಿನಾಲ್ಕನೇ ಸ್ಥಾನದಲ್ಲಿವೆ.ಬ್ರಾಡ್‌ಬ್ಯಾಂಡ್ ಈಗ ಜನರು ಅಂತರ್ಜಾಲ ಜಾಲಾಟಕ್ಕೆ ಬಳಸುವ ಸಾಮಾನ್ಯ ಮಾಧ್ಯಮವಾಗಿ ಹೊರಹೊಮ್ಮಿದೆ.ಇಂಗ್ಲೆಂಡ್ ಐದನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದು ಅಚ್ಚರಿ ಮೂಡಿಸಿದೆ.

ಅಡೋಬ್‌ನ ಫ್ಲೆಕ್ಸ್ ತಂತ್ರಾಂಶ ಅಗಲಿದೆ ಮುಕ್ತ,ಮುಕ್ತ..ಮುಕ್ತ!

 ಅಡೋಬ್ ಕಂಪೆನಿಯು ತನ್ನ ತಂತ್ರಾಂಶಗಳ ಮೂಲ ಕ್ರಮವಿಧಿಗಳನ್ನು ಮುಕ್ತವಾಗಿ ಒದಗಿಸುವ ತೀರ್ಮಾನ ಮಾಡಿದೆ.ಫ್ಲೆಕ್ಸ್ ಎನ್ನುವ ಅಂತರ್ಜಾಲದಲ್ಲಿ ಬಳಸಬಹುದಾದ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವ ಸಾಧನವೀ ವರ್ಷದೊಳಗೆ ಮುಕ್ತವಾಗಲಿದೆ. ಮೈಕ್ರೋಸಾಫ್ಟ್ ಅಡೋಬ್ ಕಂಪೆನಿಯ್ ಫ್ಲಾಶ್ ತಂತ್ರಾಂಶಕ್ಕೆ ಸ್ಪರ್ಧೆಯನ್ನೊಡಲು ಸಿಲ್ವರ್ ಲೈಟ್ ಎನ್ನುವ ತಂತ್ರಾಂಶವನ್ನು ಬಿಡುಗಡೆ ಮಾಡುವ ಸಿದ್ಧತೆಯಲ್ಲಿರುವಾಗಲೇ ಈ ತೀರ್ಮಾನ ಬಂದಿದೆ. ಮುಕ್ತ ತಂತ್ರಾಂಶವಾದ ಕಾರಣ,ಅ ಅದನ್ನು ಅಭಿವೃದ್ಧಿ ಪಡಿಸಲು ಕೈ ಸೇರಿಸಲು ಟೆಕಿಗಳಿಗೆ ಅವಕಾಶ ಸಿಗುತ್ತದೆಯಾದರೂ,ಅದರ ಹೊಸ ಆವ್ರುತ್ತಿಯನ್ನು ಬಿಡುಗಡೆ ಮಾಡಲು ಅವಕಾಶವಿಲ್ಲ. ಅದೇನಿದ್ದರೂ ಕಂಪೆನಿಯೇ ಮಾಡಲಿದೆ.

*ಅಶೋಕ್‍ಕುಮಾರ್ ಎ