ಪರೀಕ್ಷೆಯ ಸಿದ್ಧತೆಗಳು

ಪ್ರತೀ ವರ್ಷದಂತೆಯೇ ವಿದ್ಯಾರ್ಥಿಗಳಿಗೆ ಈ ವರ್ಷದ ಪರೀಕ್ಷೆಯ ಸೀಜನ್ ಬಂತು. ಶೈಕ್ಷಣಿಕ ವರುಷದ ಕೊನೆಗೆ ಬರುವ ಪರೀಕ್ಷೆಗೆ ಶಿಕ್ಷಕರು ಅಥವಾ ಉಪನ್ಯಾಸಕರು ಆ ವರ್ಷದ ಮೊದಲ ದಿನದಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುತ್ತಾರೆ. ಆದರೂ ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಭಯ, ಆತಂಕ ಮತ್ತು ಮಾನಸಿಕ ಒತ್ತಡ ಇರುವುದು ಸಹಜ. ಪರೀಕ್ಷೆಯ ಕುರಿತು ಭಯ ಮತ್ತು ಆತಂಕ ಪಡುವುದು ಬೇಡ.ಇದರಿಂದ ಕಲಿತದ್ದೂ ಮರೆತು ಹೋಗುವ ಸಂಭವವಿದೆ.
ಪರೀಕ್ಷೆ ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ, ಸಾಮರ್ಥ್ಯ ಮತ್ತು ನೆನಪಿನ ಶಕ್ತಿಯೊಂದಿಗೆ ಕಲಿಕೆಯನ್ನು ಅಳೆಯಲು ಉದ್ದೇಶಿಸುವ ಒಂದು ಮೌಲ್ಯಮಾಪನ ಕ್ರಮ ಅಷ್ಟೇ. ಅವರ ಅರ್ಹತೆ, ಯೋಗ್ಯತೆ ಮತ್ತು ವ್ಯಕ್ತಿತ್ವದ ಪರೀಕ್ಷೆ. ಅವರ ಮನಸ್ಸು ಮತ್ತು ಪಠ್ಯವಸ್ತುಗಳ ನಡುವಿನ ಸಂಘರ್ಷ ಹಾಗೂ ಹೋರಾಟ ಎಂದೂ ಹೇಳಬಹುದು. ವರ್ಷವಿಡೀ ಶಿಕ್ಷಕರು / ಉಪನ್ಯಾಸಕರು ತರಗತಿಯಲ್ಲಿ ಬೋಧಿಸಿದ್ದನ್ನು ಏಕಾಗ್ರತೆಯಿಂದ ಆಲಿಸಿ, ಮನನ ಮಾಡಿಕೊಂಡು, ನೆನಪಿನಲ್ಲಿಟ್ಟು ತೇರ್ಗಡೆ ಹೊಂದಲು ಬರೆಯುವ ಅಂತಿಮ ಪ್ರಯತ್ನವೇ ಪರೀಕ್ಷೆ. ಮುಂದಿನ ತರಗತಿಗೆ ಅಥವಾ ವೃತ್ತಿಗೆ ಸೇರಲು ಇರುವ ರಹದಾರಿ.
“ಯುದ್ಧಕಾಲೇ ಶಸ್ತ್ರಾಭ್ಯಾಸ" ಎಂಬಂತೆ ಈಗಿನ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಪರೀಕ್ಷೆಗಷ್ಟೇ ಆ ಸಮಯದಲ್ಲಿ ಮಾತ್ರ ಓದುವ ಅಭ್ಯಾಸ. ಅದೂ ಕೂಡ ಶಿಕ್ಷಕರ ಮತ್ತು ಮನೆಯವರ ಒತ್ತಾಯಕ್ಕೆ ಓದುವವರು. ಇದರಿಂದ ನಿರೀಕ್ಷಿತ ಉತ್ತಮ ಫಲಿತಾಂಶ ಬರುವುದು ಕಷ್ಟ. ಆದ್ದರಿಂದ ಪರೀಕ್ಷೆಗೆ ಹೇಗೆ ತಯಾರಿ ಮಾಡಬೇಕು ಮತ್ತು ಹೇಗೆ ಹೆಚ್ಚು ಅಂಕಗಳನ್ನು ಪಡೆಯಬಹುದು ಎಂಬುದಕ್ಕೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.
1.ಪರೀಕ್ಷೆಯ TENSIONS ಇದೆಯಾ? ಇದ್ದರೆ ನೀವು ಪೂರ್ತಿಯಾಗಿ ಓದಿ ಸಿದ್ಧರಾಗಿಲ್ಲ ಎಂದರ್ಥ. ಕೆಲವೊಮ್ಮೆ ಪರೀಕ್ಷೆ ಬಗ್ಗೆ ಯೋಚಿಸದೇ ಇರುವವರಿಗೆ TENSIONS ಇರುವುದೇ ಇಲ್ಲ.
2. ಇನ್ನೂ ದ್ವಿತೀಯ ಪಿಯುಸಿ / SSLC ವಾರ್ಷಿಕ ಪರೀಕ್ಷೆಗೆ ಕೆಲವು ದಿವಸಗಳು ಮಾತ್ರ ಇವೆ. ಕಷ್ಟಪಟ್ಟು ಅಲ್ಲ ಇಷ್ಟಪಟ್ಟು, ಏಕಾಗ್ರತೆಯಿಂದ, ದೃಢನಿರ್ಧಾರಮಾಡಿ ಓದಿದರೆ ಒಳ್ಳೆಯ ಅಂಕಗಳೊಂದಿಗೆ ಪಾಸ್ ಆಗಬಹುದು.
3. ಮೊಬೈಲ್, ಟಿವಿ ಬಳಕೆಯಿಂದ ದೂರವಿರಿ.
4. ಗುಂಪು ಕಲಿಕೆ ಅಂದರೆ ( Group Study) ಪ್ರತಿಭಾವಂತ ಸಹಪಾಠಿಗಳೊಂದಿಗೆ ಓದಿಕೊಳ್ಳಿರಿ. ಅನಾವಶ್ಯಕ ಮಾತನಾಡಿ, ಆಟವಾಡಿ ಸಮಯ ಕಳೆಯಬೇಡಿ.
5. ಓದುವಾಗ ಪ್ರತೀ ವಿಷಯಕ್ಕೆ ಪ್ರತ್ಯೇಕವಾಗಿ ಟಿಪ್ಪಣಿ (note) ಮಾಡಿಕೊಳ್ಳಿ. ಪರೀಕ್ಷೆಯ ಹಿಂದಿನ ದಿನ ಅದನ್ನೂ ಓದಿ. ಪರೀಕ್ಷಾ ಕೊಠಡಿಗೆ ಮಾತ್ರ ಕೊಂಡು ಹೋಗ್ಬೇಡಿ.
6.ಕಲಿತದ್ದನ್ನು ಬರೆದು ಮತ್ತೆ ಓದುವ ಅಭ್ಯಾಸ ಮಾಡುವುದರಿಂದ ಪರೀಕ್ಷೆಯಲ್ಲಿ ಅಕ್ಷರ ದೋಷಗಳಿಲ್ಲದೆ, ಸರಿಯಾಗಿ, ಎಷ್ಟು ಅಗತ್ಯವೋ ಅಷ್ಟು ಮಾತ್ರ , ನಿಗದಿತ ಅವಧಿಯೊಳಗೆ ಪ್ರಶ್ನೆಗಳಿಗೆ ಉತ್ತರಗಳನ್ನು ನಿರಾಳವಾಗಿ ಬರೆಯಲು ಸಾಧ್ಯವಾಗುತ್ತದೆ.
7. ನಿಮ್ಮ ಮನಸ್ಥಿತಿ, ಮನೆಸ್ಥಿತಿ ಮತ್ತು ಪರಿಸ್ಥಿತಿ ಗೆ ಹೊಂದಿಕೊಂಡು ಬೆಳಿಗ್ಗೆ ಬೇಗ ಎದ್ದು ಓದಲು ಶುರುಮಾಡಿ. ತಡರಾತ್ರಿವರೆಗೆ ಓದಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಉತ್ತಮ ಆಹಾರವನ್ನು ಸೇವಿಸಿ.
8. ಧ್ಯಾನ, ವ್ಯಾಯಾಮ ಮಾಡಿ ಮನಸ್ಸು ಶಾಂತವಾಗಿರಿಸಿ ಓದಿ. ನಾಳೆಯಿಂದ ಓದಲು ಆರಂಭಿಸುತ್ತೇನೆ ಎಂದು ಕಾಯದೇ ಈಗಲೇ ಪ್ರಾರಂಭಿಸಿ.
9. ಸಾಮರ್ಥ್ಯವಿದ್ದವರು ನೂರಕ್ಕೆ ನೂರು ಅಂಕ ಪಡೆಯಲು ಗುರಿ ಇಟ್ಟುಕೊಳ್ಳಿ. ಸ್ವಲ್ಪ ಕಡಿಮೆ ಸಾಮರ್ಥ್ಯ ಇರುವವರು 35 - 40 ಅಂಕ ಗಳನ್ನಾದರೂ ಪಡೆಯಲು ಯಾಕೆ ಪ್ರಯತ್ನಿಸಬಾರದು. ಒಂದು ವರ್ಷವಿಡೀ ಗುರುಗಳ ಪಾಠ ಕೇಳಿದ್ದೀರಲ್ವಾ?
10. ತರಗತಿಯಲ್ಲಿ ಪ್ರತೀ ವಿಷಯದ ಉಪನ್ಯಾಸಕರು/ ಶಿಕ್ಷಕರು ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂದು ನೀಡಿದ ಮಾರ್ಗದರ್ಶನದಂತೆ ಓದಿರಿ.
11. ಅರ್ಥವಾಗದ ಮತ್ತು ಕಷ್ಟವೆನಿಸಿದ ವಿಷಯಗಳನ್ನು ಅವರಿಂದ ಕೇಳಿ ಅರ್ಥ ಮಾಡಿಕೊಳ್ಳಿ.
12..ಪೋಷಕರು, ಗುರುಗಳು , ಬಂಧುಬಾಂಧವರು, ಕಾಲೇಜು ಅಭಿವೃದ್ಧಿಸಮಿತಿ, ಶಿಕ್ಷಣ ಇಲಾಖೆ , ಸರಕಾರ ಹೀಗೆ ಇಷ್ಟೊಂದು ಜನರು ನಿಮ್ಮನ್ನು ಬೆಂಬಲಿಸುವಾಗ ಛಲತೊಟ್ಟು ಎದ್ದೇಳಿ. ನನ್ನಿಂದ ಆಗದು ಎಂಬ ಚಿಂತೆ ಬೇಡ. ನಾನು ಪಾಸಾಗಲೇ ಬೇಕು ಎಂಬ ಸಂಕಲ್ಪ ಮಾಡಿ. ಗೆದ್ದೇ ಗೆಲ್ಲುತ್ತೀರಿ.
13. ಕೈಯಿಲ್ಲದವರೂ ಕಾಲಲ್ಲಿ ಬರೆದು ಉತ್ತಮ ಅಂಕ ಪಡೆದು ಪಾಸಾಗುತ್ತಾರೆ. ಅಂತಹ ದಾಖಲೆಗಳಿವೆ. ಹಾಗಿರುವಾಗ ನಮಗೆ ದೇವರು ಎಲ್ಲವನ್ನೂ ಕೊಟ್ಟು ಪಾಸ್ ಆಗದೇ ಹೋದರೆ ಯಾರ ತಪ್ಪು.?
ಆಸಕ್ತಿ, ಶ್ರದ್ಧೆ , ಪರಿಶ್ರಮ , ಪ್ರಯತ್ನ , ದೃಢನಿರ್ಧಾರ ಮತ್ತು ಆತ್ಮವಿಶ್ವಾಸ ಗಳೆಂಬ ಅಸ್ತ್ರ ಗಳೊಂದಿಗೆ ಏಕಾಗ್ರತೆಯೆಂಬ ಬಾಣವನ್ನು ಹೂಡಿದಾಗ ಬಯಸಿದ ಜಯ, ಯಶಸ್ಸು ಸಿಕ್ಕೇ ಸಿಗುತ್ತದೆ.“ಧೈರ್ಯಂ, ಆತ್ಮಸ್ಥೈರ್ಯಂ ಸರ್ವತ್ರ ಸಾಧನಂ”. ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ , ಜಯವಾಗಲಿ ಎಂದು ಹಾರೈಸುತ್ತೇನೆ..... All the Best dear Students, Study well do Good
-ಎ. ಪೂರ್ಣಿಮಾ ಕಾಮತ್, ಸುರತ್ಕಲ್
ಚಿತ್ರ ಕೃಪೆ: ಇಂಟರ್ನೆಟ್ ತಾಣ