ಪರೀಕ್ಷೆ ಬಗ್ಗೆ ಅನಗತ್ಯ ಒತ್ತಡ ಸಲ್ಲದು
ರಾಜ್ಯದಲ್ಲಿ ಮೊನ್ನೆಯಷ್ಟೇ ಪಿಯುಸಿ ಪರೀಕ್ಷೆ ಮುಗಿದಿದೆ. ನಿನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದೆ. ಪರೀಕ್ಷೆಯ ಮೊದಲ ದಿನವೇ ಬೆಳಿಗ್ಗೆ ಶಿವಮೊಗ್ಗ ಜಿಲ್ಲೆಯ ಪರೀಕ್ಷಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಎದುರಾಗಿದೆ. ಇನ್ನೊಂದೆಡೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಪರೀಕ್ಷಾ ಅಕ್ರಮ ಎಸಗಲು ಪ್ರಯತ್ನಿಸಿದ ಇಬ್ಬರು ಶಿಕ್ಷಕರನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೊದಲ ದಿನವೇ ಅಮಾನತುಗೊಳಿಸಿದೆ.
ಈ ಎರಡೂ ಘಟನೆಗಳು ಸಮಾಜ ಪರೀಕ್ಷೆಯನ್ನು ಪರಿಭಾವಿಸುವ ರೀತಿಯನ್ನು ತೋರಿಸುತ್ತದೆ. ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಬದುಕಿನಲ್ಲಿ ಅತ್ಯಂತ ಮಹತ್ವದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪರೀಕ್ಷೆ ಫಲಿತಾಂಶವೇ ಬದುಕಿನ ಮಾನದಂಡ ಅಲ್ಲ ಎನ್ನುವುದನ್ನು ಮರೆಯಬಾರದು. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಶಿಕ್ಷಕರು ಪರೀಕ್ಷೆ ಮತ್ತು ಫಲಿತಾಂಶವನ್ನು ಪ್ರತಿಷ್ಟೆಯ ಪ್ರಶ್ನೆಯನ್ನಾಗಿ ತೆಗೆದುಕೊಂಡಾಗ ಇಂಥ ಘಟನೆಗಳು ನಡೆಯುತ್ತವೆ. ಹಲವು ಪೋಷಕರು ಮಕ್ಕಳಿಗೆ ಪರೀಕ್ಷೆ ಬಂತೆಂದರೆ ಭಯ ಹುಟ್ಟಿಸುವ ವಾತಾವರಣವನ್ನು ಸೃಷ್ಟಿಸುತ್ತಾರೆ. ಇದು ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಉಂಟಾಗುವ ಒತ್ತಡದ ಬಗ್ಗೆ ಹೆಚ್ಚಿನ ಗಮನ ನೀಡುವುದಿಲ್ಲ.
ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ಎಂದಾಕ್ಷಣ ಆಯಾ ಜಿಲ್ಲಾಡಳಿತಗಳು ಸಹ ಇದನ್ನು ಪ್ರತಿಷ್ಟೆಯನ್ನಾಗಿ ಸ್ವೀಕರಿಸಿ ತಮ್ಮ ಜಿಲ್ಲೆಯೇ ಮೊದಲಿಗೆ ಬರಬೇಕು ಎಂಬ ಹಠಕ್ಕೆ ಬೀಳುತ್ತವೆ. ಇದಕ್ಕೆ ವರ್ಷವಿಡೀ ಬೇಕಾದ ಪೂರಕ ವ್ಯವಸ್ಥೆಯನ್ನು ಸೃಷ್ಟಿಸದೆ, ಅಗತ್ಯವಾದ ಮೂಲಸೌಕರ್ಯವನ್ನು ಕಲ್ಪಿಸದೆ ಇದ್ದಾಗ ಹಲವು ಶಾಲೆಗಳಲ್ಲಿ ನಕಲು ಮಾಡಿಸುವಂಥ ಅಡ್ಡದಾರಿಗೆ ಹಿಡಿಯುವ ಸಂದರ್ಭವೂ ವರದಿಯಾಗಿದೆ. ಫಲಿತಾಂಶದ ಬಗ್ಗೆ ಜಿಲ್ಲೆ-ಜಿಲ್ಲೆಗಳಲ್ಲಿ ಸ್ಪರ್ಧೆ ಅಸಹಜವೇನಲ್ಲ. ಆದರೆ ಅದಕ್ಕೆ ಅಗತ್ಯವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ ಪರೀಕ್ಷೆಗೆ ಹಲವು ತಿಂಗಳುಗಳಿರುವ ಮೊದಲೆ ಶಿಕ್ಷಣಾಧಿಕಾರಿಗಳು ವಿವಿಧ ಕ್ರಮಗಳ ಮೂಲಕ ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಾರೆ. ನಾವಿನ್ಯ ಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ತೆರೆಯುವಂತೆ ಮಾಡಬೇಕೇ ಹೊರತು, ಅನಗತ್ಯ ಒತ್ತಡ ಸಲ್ಲದು.
ಈಗಾಗಲೇ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಒತ್ತಡವನ್ನು ನೀಗಿಸಲು ಸಹಾಯವಾಣಿ ಮತ್ತಿತರ ಕ್ರಮಗಳನ್ನು ಕೈಗೊಂಡಿದೆ. ಇವುಗಳು ಸಮರ್ಪಕವಾಗಿ ಬಳಕೆಯಾದಾಗ ಮಾತ್ರ ಪರೀಕ್ಷೆ ಎನ್ನುವುದು ಕಬ್ಬಿಣದ ಕಡಲೆ ಅಲ್ಲ ಎನ್ನುವ ಭಾವನೆ ಮಕ್ಕಳಲ್ಲಿ ಬೆಳೆಯುತ್ತದೆ. ಈ ವರ್ಷ ಶಿಕ್ಷಣ ಇಲಾಖೆ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷಾ ಅಕ್ರಮಗಳನ್ನು ತಡೆಯಲು ಮುಂದಾಗಿದೆ. ಸಿಸಿಟಿವಿಯಡಿ ಪರೀಕ್ಷೆ ಬರೆಯುವ ಒತ್ತಡವನ್ನು ಸೃಷ್ಟಿಸಬೇಕೇ ಎಂಬ ವಾದಗಳ ನಡುವೆಯೂ ಸರಕಾರ ಇದನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರ ಮೊದಲ ಫಲಶ್ರುತಿ ಅನ್ನುವಂತೆ ಯಾದಗಿರಿಯಲ್ಲಿ ನಕಲು ನಡೆಯುತ್ತಿರುವುದನ್ನು ವೆಬ್ ಕಾಸ್ಟಿಂಗ್ ಮೂಲಕವೇ ಪತ್ತೆ ಹಚ್ಚಲಾಗಿದೆ. ಪರೀಕ್ಷೆ ಬಗ್ಗೆ ಶಿಸ್ತಿನ ವಾತಾವರಣ ಸೃಷ್ಟಿಸುವುದನ್ನು ತಪ್ಪು ಎಂದು ವಾದ ಮಾಡುವುದು ಅಸಮಂಜಸವಾದೀತು. ಆದರೆ ಅನಗತ್ಯ ಸ್ಪರ್ಧೆ, ಭೀತಿ ಹುಟ್ಟಿಸುವ ಕೆಲಸ ಆಗಬಾರದು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೬-೦೩-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ