ಪರೂಕಾಳಿ

‘ಪರೂಕಾಳಿ’ ಎನ್ನುವ ವಿಲಕ್ಷಣ ಕಾದಂಬರಿಯ ಲೇಖಕರ ಹೆಸರೂ ಅಷ್ಟೇ ವಿಚಿತ್ರವಾಗಿದೆ. ಈ ಕಾದಂಬರಿಯನ್ನು ಬರೆದ ಯುವ ಲೇಖಕ ಬಂಡು ಕೋಳಿ. ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ಶಾಂತಿನಾಥ ದಿಬ್ಬದ. ಅವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವೊಂದು ಸಾಲುಗಳು ನಿಮ್ಮ ಓದಿಗಾಗಿ…
“ಬಂಡು ಕೋಳಿ ಅವರ 'ಪರೂಕಾಳಿ' ಕಾದಂಬರಿ ಬಗ್ಗೆ ನಾಲ್ಕು ಮಾತು ಬರೆಯುವ ಅವಕಾಶ ನನಗೆ ಸಿಕ್ಕಿದ್ದು ಒಂದು ಆಕಸ್ಮಿಕ ಪ್ರಸಂಗವೇ ಸರಿ. ಸುಮಾರು ಎರಡು ತಿಂಗಳುಗಳ ಹಿಂದೆ ಹಿರಿಯರಾದ ಶ್ರೀ ಅರವಿಂದರಾವ್ ದೇಶಪಾಂಡೆ ಹಾಗೂ ಆತ್ಮೀಯರಾದ ಡಾ. ಬಾಳಾಸಾಹೇಬ ಲೋಕಾಪುರ ಅವರ ಅಪೇಕ್ಷೆಯ ಮೇರೆಗೆ ಅಥಣಿಯ ಶ್ರೀ ದೇಶಪಾಂಡೆ ಅವರ ಕಾಲೇಜಿನಲ್ಲಿ ವಿಶೇಷ ಉಪನ್ಯಾಸವೊಂದನ್ನು ಕೊಡಲು ಹೋದಾಗ ಶ್ರೀ ಬಂಡು ಕೋಳಿ ಅವರ ಪರಿಚಯವಾಯಿತು. ಅವರು ತಮ್ಮ 'ಪರೂಕಾಳಿ' ಕಾದಂಬರಿಗೆ ಮುನ್ನುಡಿಯ ರೂಪದಲ್ಲಿ ನಾಲ್ಕು ಮಾತು ಬರೆದುಕೊಡಿ ಎಂದು ನನ್ನನ್ನು ಕೇಳಿದರು. ಕಾದಂಬರಿಕಾರನಲ್ಲದ ನಾನು ಈ ಕೆಲಸಕ್ಕೆ ಎಷ್ಟರ ಮಟ್ಟಿಗೆ ಯೋಗ್ಯ? ಎಂಬ ನನ್ನ ಮಿತಿಯನ್ನು ಅವರ ಮುಂದೆ ವ್ಯಕ್ತಪಡಿಸಿದೆ. ಆದರೂ 'ನಾನೊಬ್ಬ ಯುವ ಲೇಖಕ, ತಮ್ಮಂಥ ಹಿರಿಯರ ಮಾರ್ಗದರ್ಶನ ನನಗೆ ಬೇಕು' ಎಂದು ಮತ್ತೇ ಒತ್ತಾಯಿಸಿದರು. ಅವರ ಮಾತಿಗೆ ಸೋತು ಒಪ್ಪಿಕೊಂಡೆ. ಅಷ್ಟೇ ಪ್ರೀತಿಯಿಂದ ಈ ನಾಲ್ಕು ಮಾತುಗಳನ್ನು ಬರೆದಿದ್ದೇನೆ.
ಇವತ್ತಿನ ದಶಕಗಳಲ್ಲಿ ಪ್ರೌಢವಾದ, ಗಂಭೀರ ಸಾಹಿತ್ಯ ರಚನೆ ಮತ್ತು ಚಿಂತನೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿದೆ. ಹಾಗಂತ ನಮ್ಮ ಸಾಹಿತ್ಯಕ್ಷೇತ್ರ ತುಂಬ ಬಡವಾಗಿದೆ ಎಂಬುದು ನನ್ನ ಮಾತಿನ ಅರ್ಥವಲ್ಲ. ಚುಟುಕು, ಕವನ, ಕತೆ, ಕಾದಂಬರಿಗಳ ಮೂಲಕ ನಮ್ಮ ಸಾಹಿತ್ಯಕ್ಷೇತ್ರ ತನ್ನ ವೈವಿಧ್ಯತೆ ಮತ್ತು ಜೀವಂತಿಕೆಯನ್ನು ಪ್ರಕಟಿಸುತ್ತಲೇ ಇದೆ. ಆ ವೈವಿಧ್ಯತೆ ಮತ್ತು ಜೀವಂತಿಕೆಗೆ ಕೈಜೋಡಿಸಿರುವ ವಿಶಿಷ್ಟ ಕೃತಿ ಶ್ರೀ ಬಂಡು ಕೋಳಿ ಅವರ 'ಪರೂಕಾಳಿ' ಕಾದಂಬರಿ.
'ಪರೂಕಾಳಿ' ಒಂದು ದೇಸೀ ಶಬ್ದ. ಕಾದಂಬರಿಯ ಈ ಶೀರ್ಷಿಕೆಯೇ ವಿಶಿಷ್ಟವಾಗಿದೆ. ಮಹತ್ವದ ಸುದ್ದಿ, ಪ್ರಭಾವ ವಲಯ-ಎಂಬುದು ಇದರ ಅರ್ಥವೆಂಬುದು ಕಾದಂಬರಿಯ ಓದಿನ ನಂತರ ತಿಳಿದು ಬರುತ್ತದೆ.
ಶೀರ್ಷಿಕೆಯೊಂದಿಗೆ ಆರಂಭವಾದ ದೇಸೀಪ್ರಜ್ಞೆ ಈ ಕಾದಂಬರಿಯುದ್ದಕ್ಕೂ ಸಮಪ್ರಮಾಣದಲ್ಲಿ ಕೆಲಸ ಮಾಡಿದೆ. 'ಪುರ ಕಹಳೆ' ಎಂದೂ ಈ ಶಬ್ದದ ನಿಷ್ಪತ್ತಿಯನ್ನು ಗುರುತಿಸುವುದು ಸಾಧ್ಯವಿದೆ. ಏನಿದ್ದರೂ ಅಥಣಿ ಮತ್ತು ಸುತ್ತಲಿನ ಪ್ರಾದೇಶಿಕ ಪರಿಸರದಲ್ಲಿ ಈ ಶಬ್ದ ಮತ್ತು ಇದರ ಅರ್ಥ ಜನಜನಿತವೆಂಬುದು ಸ್ಪಷ್ಟ.
ದೇಸೀ ವಸ್ತು ಮತ್ತು ದೇಸೀ ಭಾಷೆ ಈ ಕಾದಂಬರಿಯ ವೈಶಿಷ್ಟ್ಯಗಳು. ಕೃಷ್ಣಾ ತೀರ, ಅದರಂಚಿನ ದೇವಿಪುರ, ಅಲ್ಲಿಯ ಗ್ರಾಮದೇವತೆ, ಊರಿನ ಸಮಾಜೋ-ಧಾರ್ಮಿಕ ಕಾದಂಬರಿಯ ಜೀವದ್ರವ್ಯಗಳು. ಆಚಾರ ವಿಚಾರ, ಜೀವನ ಶೈಲಿ...ಇವೆಲ್ಲ ಕಾದಂಬರಿಯ ಜೀವದ್ರವ್ಯಗಳು.
ದೇವಿಪುರ ಮತ್ತು ಚಂದೂರು ಕ್ರಮವಾಗಿ ಕಥಾನಾಯಕ ಮತ್ತು ನಾಯಕಿಯ ಊರುಗಳು. ರಾಯಪ್ಪ ಈ ಕಾದಂಬರಿಯ ಕಥಾನಾಯಕ, ಕಾಂತಾಬಾಯಿ ನಾಯಕಿ, ಅಲಕಾ ಕಾಂತಾಳ ಗೆಳತಿ. ಈಡೇರದ ರಾಯಪ್ಪ- ಕಾಂತಾ ಇವರ ಪ್ರೇಮ ಸಂಬಂಧ ಈ ಕಾದಂಬರಿಯ ಒಂದು ಪ್ರಮುಖ ವಸ್ತುವಾದರೆ, ಗ್ರಾಮೀಣ ಪರಿಸರದಲ್ಲಿ ಸಾಮಾನ್ಯವಾಗಿರುವ ಮೇಲಾತಿ- ಕೆಳಜಾತಿಯ ನಡುವಿನ ಕಲಹವು ಇನ್ನೊಂದು ಪ್ರಮುಖ ವಸ್ತುವಾಗಿದೆ. ಸೌಹಾರ್ದತೆಯ ಆಶಯ ಈ ಕಾದಂಬರಿಯ ಪ್ರಮುಖ ಸ್ಥಾಯಿಯಾಗಿದೆ.
ದೇವಿಪುರದ ಗೌಡರ ಮನೆಯ ಸುತ್ತ ಇಲ್ಲಿನ ಪ್ರಸಂಗಗಳು ಹರಿದಾಡಿವೆ. ನಂಜಪ್ಪಗೌಡ ಹಿಂದಿನ ತಲೆಮಾರಿನ ಗೌಡ, ಅಕ್ಕಾಸಾಬತಾಯಿ ಹಿರೇಗೌಡತಿ. ವೆಂಕಣ್ಣಗೌಡ ಈಗಿನ ಗೌಡ, ಪದವ್ವ ಈಗಿನ ಗೌಡತಿ, ಶಿವಲಿಂಗ ಗೌಡರ ಮನೆಯ ನಿಷ್ಠಾವಂತ ಸೇವಕ. ರಾಯಪ್ಪನ ತಂದೆ ಈ ಶಿವಲಿಂಗ. ಮಾಲೋಜಿ ರಾಯಪ್ಪನ ಬಾಲ್ಯದ ಗೆಳೆಯ. ಪಟೇಲರ ರಾಜಾರಾಂ, ಜೋಗತೇರ ಬಾಳ್ಯಾ, ಜೋಗ್ತಿ ಸಾತವ್ವ, ದಲಿತ ನಾಯಕ ಸಾವಂತ ಅವನ ಮಕ್ಕಳಾದ ಶಿವಕಾಂತ ಮತ್ತು ಶಶಿಕಾಂತ ಮತ್ತು ಜಂಗ್ಲೀಸಾಬ ಮುಂತಾದವು ಈ ಕಾದಂಬರಿಯ ಇತರ ಪಾತ್ರಗಳು. ಇವರಲ್ಲಿ ಜಂಗ್ಲೀಸಾಬನೊಬ್ಬ ವೃದ್ಧ, ಊರಿನ ಸಾಕ್ಷಿಪ್ರಜ್ಞೆಯಂತೆ ಇದ್ದವ.
ಪ್ರತಿ ವರ್ಷ ನಡೆಯುವ 'ಹೊಳಿಪೂಜಿ' ಊರಿನ ಎಲ್ಲರನ್ನೂ ಬೆಸೆಯುವ ಧಾರ್ಮಿಕ ಪ್ರಸಂಗ. ದೈವಶ್ರದ್ಧೆಯ ಹೆಸರಿನಲ್ಲಿ ಯಾವುದೇ ಮೂಢನಂಬಿಕೆ ಅಥವಾ ಕಂದಾಚಾರಗಳಿಗೆ ಅವಕಾಶ ನೀಡಿಲ್ಲದಿರುವುದು ಕಾದಂಬರಿಕಾರರ ಪ್ರಗತಿಪರ ನಿಲುವಿಗೆ ಸಾಕ್ಷಿಯಾಗಿದೆ.
ಕಾದಂಬರಿಯ ಆರಂಭದಲ್ಲಿ ವೃದ್ಧ ರಾಯಪ್ಪ ಹಾಗೂ ಕಾಂತಾಬಾಯಿಯ ಚಿತ್ರಣ ಬಂದಿದ್ದು, ಕಾದಂಬರಿ ಬೆಳೆದಂತೆ ಅವರ ಕಳೆದುಹೋದ ಪ್ರಾಯದ ದಿನಗಳನ್ನು ನೆನಪಿಸಿಕೊಡುವ ಕ್ರಮ ಸೊಗಸಾಗಿದೆ. ಅದನ್ನು ಸಿಂಹಾವಲೋಕನ ಕ್ರಮ ಅಥವಾ ಹಿನ್ನೋಟ ಕಥನಕ್ರಮ ಎಂದು ಕರೆಯಬಹುದು.
ಒಳಗೊಳಗೇ ಹೊಗೆಯಾಡುತ್ತಿದ್ದ ಊರಿನ ಮೇಲ್ಮಾತಿ-ಕೆಳಜಾತಿಯವರ ಸಂಘರ್ಷ ಕೊನೆಗೊಮ್ಮೆ ಕುಡಿಯುವ ನೀರಿನ ವಿಷಯವಾಗಿ ಸ್ಪೋಟಗೊಂಡು ಬಿಡುತ್ತದೆ. ಅದರ ಬಿಸಿ ಗೌಡರ ವಾಡೇಗೂ ತಟ್ಟುತ್ತದೆ. ಹಿರೇಗೌಡ್ತಿಯ ಕಾಲಕ್ಕಿದ್ದ ಸಾಮಾಜಿಕ ಸೌಹಾರ್ದ ತಪ್ಪಿದ್ದೇ ಈ ಪ್ರಸಂಗಕ್ಕೆ ಕಾರಣವಾಯಿತು. ಕೊನೆಗೆ ಅಂತೂ ಇಂತೂ ಪದವ್ವ ಮತ್ತೆ ಊರಿನ ಎರಡೂ ವರ್ಗಗಳ ನಡುವೆ ಸೌಹಾರ್ದಕ್ಕೆ ಪ್ರಯತ್ನಿಸುತ್ತಾಳೆ. ಅದರಲ್ಲಿ ರಾಯಪ್ಪನ ಅಭಿಪ್ರಾಯದ ಪಾತ್ರವೂ ಇರುತ್ತದೆ. ಇದು ಕಾದಂಬರಿಕಾರರ ಉದ್ದೇಶದ ಗೆಲುವಾಗಿ ಕಾಣಿಸುತ್ತದೆ. ಊರೇನೋ ಒಂದಾಯಿತು. ಆದರೆ ರಾಯಪ್ಪ ಮತ್ತು ಕಾಂತಾಬಾಯಿ? ಎಂಬ ಪ್ರಶ್ನೆ ಕಾದಂಬರಿಯ ಕೊನೆಯ ಹಂತದಲ್ಲಿ ಓದುಗರಿಗೆ ಮೂಡುತ್ತದೆ.
ಕಾದಂಬರಿಯ ಹದಿನಾಲ್ಕನೇ ಪ್ರಕರಣದ ಕೊನೆಯ ಪ್ಯಾರಾ ತುಂಬ ಮಹತ್ವದ್ದಾಗಿದೆ: ರಾಯಪ್ಪನಿಗೆ ಕಾಂತಾಬಾಯಿ ಹೇಳಿದ ಮಾತು ಅದು. ರಾಯಪ್ಪನಿಗೆ ಬುದ್ದಿವಾದ ಮಾಡಿದ ಕಾಂತಾಬಾಯಿ ತಾನು ಒಂಟಿಯಾಗಿ ತನ್ನ ಮಡ್ಡಿ ಗುಡಸಲಿನಲ್ಲಿ ಇರುವುದಾಗಿ ತಿಳಿಸಿದ ಸಂದರ್ಭ ಅದು.
"ಊರ ಸೇವಾಕ, ಕೆಳಗೇರಿ ಮಂದಿ ತ್ರಾಸಗೋಳಿ ಕಿವಿ ಆಗ್ತುನ. ಅವ್ರ ಕಷ್ಟಗೋಳಿ ಕೈ ಆಗ್ತುನ. ಅವ್ರ ದುಡಿಮಿಗಿ ಹೆಗ್ಗ ಆಗ್ತುನ. ಅವ್ರ ನೋವಗೋಳಿ ಕಣ್ಣೀರ ಆಯ್ತುನ. ಅವ್ರ ಶಾಪದ ಬದಿಕಿಗೆ ಭರವಸೀ ತುಂಬೂ ಜೀವ ಆಗಿ ಈ ಜಲ್ಮಕ ಖರೇ ಅರ್ಥಾ ಕಂಡ್ಕೊಳ್ಳಾಕ ಮನ್ಸ ಮಾಡೇನಿ. ನಾ ಬರೀ ನಾಕ್ಷೆತ್ತಾ ಸಾಲಿ ಕಲ್ತನ, ನಂಗ ಗೊತ್ತಿದ್ದಷ್ಟ ಅಕ್ಷರಾ ಕೇರಿ ಮಕ್ಕ ಜೋಡಿ ಹಂಚ್ಯತುನ. ಇದೊಳ್ಳ ನನ್ನ ಜಲ್ಮಾ ಕಳೀಬೇಕ ಅನ್ನೂ ಆಸೇ ಆಗೇತಿ. ನಿನ ಕೈಲೆ ಶಕ್ಯ ಆದ್ರ ದಮ್ಮಾಡಿ ನನ ಕ್ಷಮಾ ಮಾಡು" ಎಂಬ ಕಾಂತಾಬಾಯಿಯ ಮಾತು ಇಡೀ ಕಾದಂಬರಿಯ ಒಳಮಾತು ಆಗಿದೆ. ಒಟ್ಟಾರೆ ಸಮಾನತೆ ಮತ್ತು ಸೌಹಾರ್ದತೆಯನ್ನು ಬಯಸುವ ಶೂದ್ರ ಪ್ರಜ್ಞೆಯ ಗೆಲುವಿನ ಸಂಕೇತವಾಗಿ ಈ ಕಾದಂಬರಿ ಮೂಡಿ ಬಂದಿದೆ.
ಈ ಕಾದಂಬರಿಯ ಸಂವಹನ ಪರಿಣಾಮದ ಬಗ್ಗೆ ಒಂದು ಮಾತು ಹೇಳಲೇ ಬೇಕು. ಅಪ್ಪಟ ಪ್ರಾದೇಶಿಕ ಭಾಷೆ ಮತ್ತು ಶಬ್ದಗಳ ಬಳಕೆಯು ಈ ಕಾದಂಬರಿಯ ವೈಶಿಷ್ಟ್ಯವಾಗಿರುವಂತೆ, ಒಂದು ಹಂತದ ಮಿತಿಯಾಗುವ ಸಾಧ್ಯತೆಯೂ ಇದೆ. ಉತ್ತರ ಕರ್ನಾಟಕದ ಓದುಗರಿಗೆ ನಿಲುಕಿದಷ್ಟು ಸುಲಭವಾಗಿ ಇದು ಹಳೇ ಮೈಸೂರು ಪ್ರಾಂತದ ಓದುಗರಿಗೆ ನಿಲುಕುವುದು ಕಷ್ಟ. ಹಾಗೆಂದು ಕಾದಂಬರಿಕಾರರು ಹಿಂಜರಿಯಬೇಕಾಗಿಲ್ಲ. ದೇಸೀಯ ಜೊತೆಗೆ ಮಾರ್ಗ ಶೈಲಿಯನ್ನೂ ಅಳವಡಿಸಿಕೊಂಡರೆ ಇಡೀ ಕರ್ನಾಟಕದ ಓದುಗರಿಗೆ ನಿಲುಕುವುದು ಸುಲಭವಾದೀತು.
ಇಂಥ ದೇಸೀ ಪ್ರಜ್ಞೆ, ದೇಸೀ ಬದುಕು, ದೇಸೀ ಭಾಷೆಯನ್ನು ಬಳಸಿ ಈ ಮೊದಲು ಯಶಸ್ಸು ಕಂಡಿರುವ ರಾವಬಹಾದ್ದೂರ, ಮಿರ್ಜಿ ಅಣ್ಣಾರಾಯ, ಚದುರಂಗ, ಕುಂ.ವೀರಭದ್ರಪ್ಪ, ಬಾಳಾಸಾಹೇಬ ಲೋಕಾಪುರ, ರಾಘವೇಂದ್ರ ಪಾಟೀಲ ಮುಂತಾದವರ ಮುಂದುವರಿಕೆಯಾಗಿ ಶ್ರೀ ಬಂಡು ಕೋಳಿ ಅವರು ಕಂಡು ಬರುತ್ತಾರೆ. ಬಹುಶ: ಈ ಕಾದಂಬರಿ ಅವರ ಮೊದಲನೆಯ ಪ್ರಯತ್ನವೆಂದು ನಾನು ಭಾವಿಸಿದ್ದೇನೆ.”