ಪರ್ಬತಿ ಬರುವ ಎಂಬ ಆನೆಗಳ ಮಾತೆ !

ಪರ್ಬತಿ ಬರುವ ಎಂಬ ಆನೆಗಳ ಮಾತೆ !

ದಸರಾ ಮಹೋತ್ಸವ ಹತ್ತಿರ ಬರುತ್ತಿದೆ. ದಸರಾ ಮಹೋತ್ಸವದಲ್ಲಿ ಎಲ್ಲರ ಗಮನ ಸೆಳೆಯುವುದು ಜಂಬೂ ಸವಾರಿ ಎನ್ನುವ ಗಜ ಪಡೆಗಳ ಮೆರವಣಿಗೆ. ಚಾಮುಂಡೇಶ್ವರಿ ದೇವಿಯನ್ನು ಅಂಬಾರಿಯಲ್ಲಿ ಹೊತ್ತು ಅಭಿಮನ್ಯು ಎಂಬ ಆನೆ ರಾಜ ಗಾಂಭೀರ್ಯದಿಂದ ಸಾಗುವ ಪರಿ, ಅದರ ಜೊತೆ ಇನ್ನೂ ಕೆಲವು ಆನೆಗಳು ಹಾಕುವ ಹೆಜ್ಜೆಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಸ್ವಾತಂತ್ರ್ಯಕ್ಕಿಂತ ಮೊದಲು ಮೈಸೂರು ಮಹಾರಾಜರು ಅಂಬಾರಿಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಈಗ ಬದಲಾದ ಕಾಲ ಘಟ್ಟದಲ್ಲಿ ದೇವಿಯ ವಿಗ್ರಹವನ್ನು ಅಂಬಾರಿಯಲ್ಲಿರಿಸಲಾಗುತ್ತದೆ. ಈ ಎಲ್ಲಾ ಆನೆಗಳ ಉಸ್ತುವಾರಿಯನ್ನು ಹೊರುವವರು ಮಾವುತರು. ಮಾವುತರಿಗೆ ಆನೆ ತಮ್ಮ ಸ್ವಂತ ಮಕ್ಕಳಿದ್ದಂತೆ. ಅಷ್ಟೊಂದು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅದೇ ವಿಶ್ವಾಸದಲ್ಲಿ ಆನೆಯ ಜೊತೆ ಹೆಜ್ಜೆ ಹಾಕುತ್ತಾರೆ, ಆನೆಯ ಮೇಲೇರುತ್ತಾರೆ. ಇದು ಮಾನವ ಮತ್ತು ಪ್ರಾಣಿಯ ನಡುವಿನ ಸ್ನೇಹ ಸಂಬಂಧ ಎಂದರೂ ತಪ್ಪಾಗಲಾರದು.

ಈ ಮಾವುತರು ಅಧಿಕಾಂಶ ಗಂಡಸರೇ ಆಗಿರುತ್ತಾರೆ. ನೀವು ಹೆಂಗಸು ಒಬ್ಬಳು ಮಾವುತಳಾದ ಸಂಗತಿಯನ್ನು ಕೇಳಿರುವಿರಾ? ಅಂತಹ ಅಪರೂಪದ ಮಹಿಳಾ ಮಾವುತಳನ್ನು ನೋಡಲು ನೀವು ಪಶ್ಚಿಮ ಬಂಗಾಳಕ್ಕೆ ಹೋಗಬೇಕು. ಆನೆಗಳ ಪಾಲಿನ ಮಾವುತ ಮಾತ್ರವಲ್ಲ ಮಾತೆಯೂ ಆಗಿರುವ ಪರ್ಬತಿ ಬರುವಾ ಎನ್ನುವ ಹೆಣ್ಣು ಮಗಳ ಕಥೆಯನ್ನು ಕೇಳಲೇ ಬೇಕು.

ಅದು ೧೯೮೮ರ ಸಮಯ. ಇಂಗ್ಲೆಂಡ್ ನ ಖ್ಯಾತ ಪರಿಸರವಾದಿ ಮಾರ್ಕ್ ಶಾಂಡ್ ಆನೆಗಳ ಬಗ್ಗೆ ಅಧ್ಯಯನ ನಡೆಸಲು ಭಾರತಕ್ಕೆ ಬರುತ್ತಾರೆ. ಅವರು ಪ್ರಮುಖವಾಗಿ ಅಳಿಯುತ್ತಿರುವ ಆನೆಗಳ ಸಂತತಿಯ ಬಗ್ಗೆ ಹಾಗೂ ಅದರ ಜೀವನ ಶೈಲಿಯನ್ನು ಅರಿಯಲು ಪಶ್ಚಿಮ ಬಂಗಾಳಕ್ಕೆ ತೆರಳುತ್ತಾರೆ. ಆನೆಗಳ ವಲಸೆಗಳ ಅಧ್ಯಯನ ನಡೆಸಲು ಸುಮಾರು ಮುನ್ನೂರು ಮೈಲಿಗಳಷ್ಟು ಸುದೀರ್ಘವಾದ ಪ್ರಯಾಣವನ್ನು ಕೈಗೊಳ್ಳುತ್ತಾರೆ.

ಈ ಸಮಯದಲ್ಲಿ ಶಾಂಡ್ ಗೆ ಆನೆಗಳಿಗಾಗಿಯೇ ತನ್ನ ಜೀವವನ್ನು ಮುಡಿಪಾಗಿಟ್ಟ ದಿಟ್ಟ ಮಹಿಳೆಯೊಬ್ಬಳ ಪರಿಚಯವಾಗುತ್ತದೆ. ಅದು ಬೇರೆ ಯಾರೂ ಅಲ್ಲ, ಪರ್ಬತಿ ಬರುವ. ಆಕೆಯ ಸಾಕು ಆನೆ ‘ಕಾಂಚನ ಮಾಲ' ಮೇಲೆ ಕುಳಿತುಕೊಂಡು ಶಾಂಡ್ ಅಸ್ಸಾಂ ರಾಜ್ಯದೆಡೆಗೆ ಸಾಗುತ್ತಾರೆ. ಈ ಪ್ರಯಾಣದುದ್ದಕ್ಕೂ ಪರ್ಬತಿ ಬರುವಾರ ಸಾಹಸಗಾಥೆಯನ್ನು ಕೇಳುತ್ತಾರೆ ಮತ್ತು ಬಹಳ ಪ್ರಭಾವಿತರಾಗುತ್ತಾರೆ. ಆಕೆಯ ಆನೆಯ ಜೊತೆಗಿನ ಒಡನಾಟ, ಆನೆಯ ಜೀವನ ಕ್ರಮದ ಬಗ್ಗೆ ಆಕೆಗೆ ಇರುವ ಜ್ಞಾನ, ಅವುಗಳನ್ನು ಪಳಗಿಸುವಲ್ಲಿ ಆಕೆಗಿರುವ ಚಾಕಚಕ್ಯತೆ, ಅಲ್ಲಿಯ ಜನರ ಜೊತೆ ಆನೆಯ ಒಡನಾಟ ಈ ಎಲ್ಲಾ ವಿಷಯಗಳನ್ನು ತಿಳಿದು ಬೆರಗಾಗುತ್ತಾರೆ. ಈ ಎಲ್ಲಾ ಸಂಗತಿಗಳನ್ನು ಒಟ್ಟುಗೂಡಿಸಿ ಬಿಬಿಸಿ ಮಾಧ್ಯಮದವರು ಸಾಕ್ಷ್ಯ ಚಿತ್ರವೊಂದನ್ನು ತಯಾರು ಮಾಡುತ್ತಾರೆ. ಅದು ೧೯೯೬ರಲ್ಲಿ ಬಿಡುಗಡೆಯಾಗುತ್ತದೆ. ಅದರ ಹೆಸರೇ “ಕ್ವೀನ್ ಆಫ್ ದಿ ಎಲಿಫೆಂಟ್" (Queen of the Elephant).

ಪರ್ಬತಿ ಬರುವಾ ಅಸ್ಸಾಮಿನ ಗೌರಿಪುರದ ಶ್ರೀಮಂತ ಮನೆತನದಲ್ಲಿ ಜನಿಸಿದವರು. ಅವರ ಕಾಲಘಟ್ಟದಲ್ಲಿ ಆನೆ, ಕುದುರೆಗಳನ್ನು ಸಾಕುವುದು ಶ್ರೀಮಂತರಿಗೊಂದು ಪ್ರತಿಷ್ಟೆಯ ಸಂಗತಿಯಾಗಿತ್ತು. ಆಕೆಯ ತಂದೆ ಪ್ರಕೃತಿಶ್ ಚಂದ್ರ ಬರುವಾ ಹೆಸರಾಂತ ಆನೆ ತಜ್ಞರಾಗಿದ್ದರು. ಈ ಕಾರಣದಿಂದ ಬಾಲ್ಯದಿಂದಲೇ ಪರ್ಬತಿಯವರಿಗೆ ಆನೆಗಳ ಬಗ್ಗೆ ಆಸಕ್ತಿ ಬೆಳೆಯಿತು. ಆನೆಗಳನ್ನು ಮನಸ್ಥಿತಿ ತಿಳಿಯುವಲ್ಲಿ, ಅವುಗಳನ್ನು ಪಳಗಿಸುವಲ್ಲಿ ತಂದೆಯೇ ಆಕೆಗೆ ಮೊದಲ ಗುರು. ಮದವೇರಿದ ಆನೆ ಯಾರ ಮಾತನ್ನೂ ಕೇಳುವುದಿಲ್ಲ. ಅದನ್ನು ಸೆರೆ ಹಿಡಿಯುವುದು ಮತ್ತು ಪಳಗಿಸುವುದು ಬಹಳ ಕಷ್ಟಕರವಾದ ಕೆಲಸ. ಇದಕ್ಕೆ ಬಹಳ ತಂತ್ರಗಾರಿಕೆ, ತಾಳ್ಮೆ ಮತ್ತು ನಿಪುಣತೆ ಅಗತ್ಯ. ಇವೆಲ್ಲವನ್ನೂ ಬಹುಬೇಗನೇ ಕಲಿತುಕೊಂಡ ಪರ್ಬತಿ ತನ್ನ ೧೪ನೇ ವಯಸ್ಸಿನಲ್ಲೇ ಒಂದು ಮದ್ದಾನೆಯನ್ನು ಪಳಗಿಸಿದ್ದು ಆಕೆಯ ಸಾಹಸ ಕಾರ್ಯಕ್ಕೆ ನಿದರ್ಶನ. ಆನೆಯ ಕುರಿತಾದ ಆಕೆಯ ಮಾತೃ ವಾತ್ಸಲ್ಯವನ್ನು ಕಂಡ ಗ್ರಾಮಸ್ಥರು ಆಕೆಗೆ ನೀಡಿದ ಹೆಸರೇ ‘ಪರ್ಬತಿ'. ಗಣೇಶ ದೇವರ ತಾಯಿಯಾದ ಪಾರ್ವತಿಯನ್ನು ಬಂಗಾಳಿ ಭಾಷೆಯಲ್ಲಿ ಪರ್ಬತಿ ಎಂದು ಕರೆಯುತ್ತಾರೆ. ಪುರುಷ ಪ್ರಧಾನ ವೃತ್ತಿಯಾದ ಮಾವುತರ ಕೆಲಸವನ್ನು ಹೆಣ್ಣು ಮಗಳೊಬ್ಬಳು ಮಾಡುತ್ತಿರುವುದು ಅಪರೂಪವೇ ಸರಿ. ಪರ್ಬತಿ ದೇಶದ ಮೊದಲ ಮಹಿಳಾ ಮಾವುತ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ.

ಪರ್ಬತಿ ಬರುವಾ ಇವರ ಈ ಕಾಯಕಕ್ಕೆ ಈಗ ಸುಮಾರು ನಾಲ್ಕು ದಶಕಗಳೇ ಸಂದಿವೆ. ಇಷ್ಟೊಂದು ದೀರ್ಘ ಕಾಲ ಓರ್ವ ಮಹಿಳೆಯಾಗಿ ಪರ್ಬತಿಯವರು ಹಲವಾರು ಮದ್ದಾನೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಪಳಗಿಸಿದ್ದಾರೆ. ಒಮ್ಮೆ ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ಕಾಡಾನೆಗಳ ಹಿಂಡೊಂದು ಗ್ರಾಮಗಳಿಗೆ ಬಂದು ದಾಂಧಲೆ ಮಾಡಿ, ಜನರ ಸ್ವತ್ತು, ಬೆಳೆಗಳನ್ನು ನಾಶ ಮಾಡುತ್ತಿತ್ತು. ಈ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟಲು ಪರ್ಬತಿ ಬರುವಾ ಅವರಿಗೆ ಕರೆ ಹೋಯಿತು. ಅವರು ತಕ್ಷಣ ತನ್ನ ಮೂರು ಸಾಕಾನೆಗಳು ಮತ್ತು ಸಹಾಯಕ ಮಾವುತರೊಂದಿಗೆ ಆ ಸ್ಥಳಕ್ಕೆ ತೆರಳಿ ಕೇವಲ ಹದಿನೈದು ದಿನಗಳಲ್ಲೇ ಕಾಡಾನೆಗಳ ಹಿಂಡನ್ನು ಶಾಂತಗೊಳಿಸಿ, ಪಳಗಿಸಿ ಮರಳಿ ಕಾಡಿಗೆ ಹಿಂದಿರುಗುವಂತೆ ಮಾಡುತ್ತಾರೆ. ಇದು ಪರ್ಬತಿ ಬರುವಾ ಅವರ ತಾಕತ್ತು. 

ಈಗ ಪರ್ಬತಿ ಬರುವಾ ಅವರ ವಯಸ್ಸು ೭೦ ದಾಟಿದೆ. ಆದರೂ ಆನೆಗಳ ಕಲ್ಯಾಣ ಕಾರ್ಯಗಳಿಗೆ ಮತ್ತು ಉಳಿವಿಗಾಗಿ ಇವರು ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಸರಳವಾಗಿ ಜನರ ಜೊತೆ ಬೆರೆಯುತ್ತಾರೆ. ಅವರ ಕಷ್ಟಗಳನ್ನು ಆಲಿಸುತ್ತಾರೆ, ಆನೆಗಳನ್ನು ಪ್ರೀತಿಸುತ್ತಾರೆ. ಇವರ ಈ ಅಪರೂಪದ ವೃತ್ತಿಜೀವನವನ್ನು ಗಮನಿಸಿದ ಕೇಂದ್ರ ಸರಕಾರ ೨೦೨೪ರಲ್ಲಿ ಪ್ರತಿಷ್ಟಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಸಾಧನೆಗಳನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿವೆ. ೧೯೮೯ರಲ್ಲಿ ಯುನೈಟೆಡ್ ನೇಷನ್ಸ್ ನ ಪರಿಸರ ಸಂರಕ್ಷಣಾ ಕಾರ್ಯಕ್ರಮದ ಗೌರವ, ೨೦೦೩ರಲ್ಲಿ ಅಸ್ಸಾಂ ಸರಕಾರ ನೀಡಿದ ‘ಚೀಫ್ ಎಲೆಫೆಂಟ್ ವಾರ್ಡನ್ ಆಫ್ ಅಸ್ಸಾಂ’ ಪ್ರಶಸ್ತಿಗಳು ಪ್ರಮುಖವಾದುವುಗಳು. ಪ್ರಸ್ತುತ ಪರ್ಬತಿ ಬರುವಾ ಅವರು ಆನೆ ಸಂರಕ್ಷಣೆಗೆ ಪಣತೊಟ್ಟು ಅವಿರತವಾಗಿ ಕೆಲಸ ಮಾಡುತ್ತಿರುವ ಪ್ರತಿಷ್ಟಿತ ಐ ಯು ಸಿ ಎನ್ ನ ‘ಏಷ್ಯನ್ ಎಲಿಫೆಂಟ್ ಎಕ್ಸ್ ಪರ್ಟ್ ಬಳಗ’ದ ಸದಸ್ಯರಾಗಿ ನೇಮಕವಾಗಿದ್ದಾರೆ. ಆನೆಗಳ ಮಾತೆಯಾಗಿರುವ ಪರ್ಬತಿ ಬರುವಾ ಇನ್ನಷ್ಟು ವರ್ಷ ಅವುಗಳ ಸೇವೆ ಮಾಡಿಕೊಂಡಿರಲಿ ಎನ್ನುವುದೇ ಎಲ್ಲರ ಆಶಯ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ