ಪರ್ಯಾಯ ರಾಜಕೀಯ ಚಿಂತನೆಗೆ ಈಗ ಕಾಲ ಕೂಡಿ ಬಂದಿದೆ !
ಭ್ರಷ್ಟಾಚಾರದ ವಿರುದ್ಧ ಧರ್ಮಾಂಧ ರಾಜಕೀಯ ಶಕ್ತಿ ಬೆಳವಣಿಗೆ ಹೊಂದಿತು. ಕರ್ನಾಟಕದ ಇತ್ತೀಚಿನ ಚುನಾವಣೆಯಲ್ಲಿ ಧರ್ಮಾಂಧ ಶಕ್ತಿಯ ವಿರುದ್ಧ ಮತ್ತೆ ಭ್ರಷ್ಟ ಶಕ್ತಿ ವಿಜಯ ಸಾಧಿಸಿದೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಮತಾಂಧ ಶಕ್ತಿಯೇ ಮೇಲುಗೈ ಪಡೆಯಬಹುದು. ಏಕೆಂದರೆ ಯಾವುದೇ ಪ್ರಬಲ ಪರ್ಯಾಯ ಶಕ್ತಿ ಇಲ್ಲದೇ ಇಡೀ ವ್ಯವಸ್ಥೆ ಬರಡಾಗಿದೆ. ಜನರಿಗೆ ಸರಿಯಾದ ಆಯ್ಕೆಗಳಿಲ್ಲ. ಇದು ಸಾಂಕೇತಿಕ ಹೋಲಿಕೆ ಮಾತ್ರ. ಭ್ರಷ್ಟಾಚಾರ, ಧರ್ಮಾಂಧತೆ, ಜಾತೀಯತೆ ಎರಡು ಪಕ್ಷಗಳಲ್ಲಿ ಇದ್ದರೂ ಮೇಲುಗೈ ಪಡೆಯುವ ಅಂಶವನ್ನು ಮಾತ್ರ ಹೇಳಲಾಗಿದೆ.
ಹೊಸ ಪಕ್ಷಗಳಾಗಿ ಉದಯಿಸುವ ಸಾಧ್ಯತೆಗಳಿರುವ ಎಎಪಿ, ಪ್ರಜಾಕೀಯ, ಕೆ ಅರ್ ಎಸ್ ಮುಂತಾದ ಪಕ್ಷಗಳು ಅತಿಯಾದ ಆದರ್ಶದಿಂದ ವಾಸ್ತವ ನೆಲೆಯಲ್ಲಿ ಯಾವುದೇ ಪರಿಣಾಮ ಬೀರುತ್ತಿಲ್ಲ. ರೈತ ದಲಿತ ಸಮಾಜವಾದಿ ಕನ್ನಡ ಮತ್ತು ಪ್ರಗತಿಪರ ಚಳವಳಿಗಳು ರಾಜಕೀಯವಾಗಿ ಬೇರೆ ಪಕ್ಷಗಳ ನೆರಳಿನಲ್ಲಿಯೇ ಇನ್ನೂ ಅಸ್ತಿತ್ವ ಉಳಿಸಿಕೊಂಡಿವೆ. ಇಂತಹ ಸನ್ನಿವೇಶದಲ್ಲಿ ನಿಜಕ್ಕೂ ಪರ್ಯಾಯ ರಾಜಕೀಯ ಶಕ್ತಿಯ ಅವಶ್ಯಕತೆ ಇದೆ. ಕೇವಲ ಭ್ರಷ್ಟಾಚಾರ ಅಥವಾ ಕೇವಲ ಸಾಮಾಜಿಕ ನ್ಯಾಯ ಮಾತ್ರವಲ್ಲ ಪರಿಸರವನ್ನು ಉಳಿಸುವ ಮೌಲ್ಯಗಳನ್ನು ಬೆಳೆಸುವ ಅಭಿವೃದ್ಧಿಯನ್ನೂ ಸಾಧಿಸುವ ಮಧ್ಯಮ ಮಾರ್ಗದ ಅವಶ್ಯಕತೆ ಇದೆ.
ಪ್ರತಿ ವ್ಯಕ್ತಿಯ ವ್ಯಕ್ತಿತ್ವದ ಗುಣಮಟ್ಟ ಹೆಚ್ಚಿಸುವ ಕೆಲಸ ಮೊದಲು ಆಗಬೇಕಾಗಿದೆ. ಆ ಉನ್ನತ ಮಟ್ಟದ ಮಾನವ ಸಂಪನ್ಮೂಲವೇ ರಾಜ್ಯದ ಪ್ರಗತಿಯ ಬಹುದೊಡ್ಡ ಆಸ್ತಿಯಾಗುತ್ತದೆ. ಏಕೆಂದರೆ ವ್ಯಕ್ತಿ ವೈಯಕ್ತಿಕವಾಗಿ ಉತ್ತಮನಾಗದೇ ಯಾವ ಯೋಜನೆಗಳು ಫಲ ಕೊಡುವುದಿಲ್ಲ.
ಎರಡನೆಯದಾಗಿ ಪ್ರಾಕೃತಿಕ ಸಂಪನ್ಮೂಲಗಳನ್ನು ಸಾಧ್ಯವಾದಷ್ಟು ಅದರ ಮೂಲ ಸ್ವರೂಪದಲ್ಲೇ ಉಳಿಸಿ ಅನಿವಾರ್ಯ ಮತ್ತು ಅವಶ್ಯಕತೆ ಇರುವಷ್ಟು ಮಾತ್ರ ಉಪಯೋಗಿಸಿಕೊಳ್ಳಬೇಕು. ಆಗ ಬಹಳಷ್ಟು ನೈಸರ್ಗಿಕ ವಿಕೋಪಗಳನ್ನು ತಡೆಯಬಹುದು.
ಮೂರನೆಯದಾಗಿ ಈಗಿನ ಆಧುನಿಕ ಮತ್ತು ತಂತ್ರಜ್ಞಾನದ ಕಾಲಕ್ಕೆ ತಕ್ಕಂತೆ ಅನೇಕ ನೀತಿ ನಿಯಮಗಳನ್ನು ಪುನರ್ ರೂಪಿಸಬೇಕು. ವೇತನ ಶ್ರೇಣಿಯನ್ನು ಶ್ರಮಕ್ಕೆ ತಕ್ಕ ಫಲ ಎಂಬ ಮೂಲ ಅಂಶಗಳ ಆಧಾರದ ಮೇಲೆ ಪರಿಷ್ಕರಣೆ ಮಾಡಬೇಕು. ಈಗಿನ ವೇತನ ಪದ್ದತಿ ತುಂಬಾ ಅವೈಜ್ಞಾನಿಕವಾಗಿದೆ. ಬಹಳಷ್ಟು ತಾರತಮ್ಯ ಸಹ ಇದೆ. ಜಾತಿ ಧರ್ಮಗಳ ಕಟ್ಟುಪಾಡುಗಳು ಮೇಲೆ ಸ್ವತಃ ಸರ್ಕಾರವೇ ನಿಯಂತ್ರಣ ಹೇರಬೇಕು. ತೀರಾ ಖಾಸಗಿಯಾಗಿ ಹೊರತುಪಡಿಸಿ ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಸಮಾನತೆಯನ್ನು ಜಾರಿ ಮಾಡಬೇಕು. ಆಗ ಸಮಾಜದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಸಾಧ್ಯವಾಗುತ್ತದೆ.
ಚುನಾವಣಾ ಸುಧಾರಣೆಗಳು ಇದರಲ್ಲಿ ಬಹುಮುಖ್ಯ ಪಾತ್ರ ವಹಿಸುವಂತಾಗಬೇಕು. ಒಬ್ಬ ಅಭ್ಯರ್ಥಿ ಕೇವಲ ಎರಡು ಅವಧಿಗೆ ಮಾತ್ರ, ಚುನಾವಣಾ ಆಯೋಗವೇ ಎಲ್ಲಾ ಅಭ್ಯರ್ಥಿಗಳ ಪರ ಪ್ರಚಾರ, ಜನ ಪ್ರತಿನಿಧಿಗಳಾಗಿ ಆಯ್ಕೆಯಾದವರು ಅಧಿಕಾರದಲ್ಲಿ ಇರುವವರೆಗೆ ತಮ್ಮ ಎಲ್ಲಾ ಸಂಪತ್ತನ್ನು ಸರ್ಕಾರ ಬಳಿ ಒತ್ತೆ ಇಡುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕು. ಇಡೀ ರಾಜ್ಯದಲ್ಲಿ ನೂರಾರು ಗ್ರಂಥಾಲಯಗಳು, ಸಾವಿರಾರು ಕ್ರೀಡಾಂಗಣಗಳು, ಲಕ್ಷಾಂತರ ಕಲೆ ವಿಜ್ಞಾನ ಸಾಹಿತ್ಯ ಸಂಘಟನೆಗಳನ್ನು ಸ್ಥಾಪಿಸಿ ಯುವ ಸಮೂಹ ಮಹತ್ವದ ಸಾಧನೆ ಮಾಡಲು ಒಂದು ಹೊಸ ಸಂಸ್ಕೃತಿಯನ್ನೇ ಹುಟ್ಟು ಹಾಕುವ ಪ್ರಯತ್ನ ಮಾಡುವಂತಹ ವೇದಿಕೆ ಕಲ್ಪಿಸುವುದು ಮತ್ತು ಅದೇ ಸಮಯದಲ್ಲಿ ಸಂಪೂರ್ಣ ಧೂಮಪಾನ ಮತ್ತು ಮದ್ಯಪಾನ ನಿಷೇಧಿಸುವುದು, ಆನ್ ಲೈನ್ ಜೂಜಾಟ ಜಾಲತಾಣಗಳ ಸಂಪೂರ್ಣ ರದ್ದುಪಡಿಸುವುದು ಮುಂತಾದ ಕ್ರಮಗಳನ್ನು ಕೈಗೊಂಡು ಒಳ್ಳೆಯ ನಡತೆ ಕೇವಲ ನುಡಿಯಿಂದ ಮಾತ್ರವಲ್ಲ ನಡೆಯಿಂದ ಸಹ ಮಾಡುವಂತ ವಾತಾವರಣ ಸೃಷ್ಟಿಸುವುದು ಪರ್ಯಾಯ ಸರ್ಕಾರದ ಮುಖ್ಯ ಆದ್ಯತೆಯಾಗಿರಬೇಕು.
ಕೃಷಿ ಮತ್ತು ರೈತರು, ಆರೋಗ್ಯ ಮತ್ತು ಶಿಕ್ಷಣ, ರಕ್ಷಣೆ ಮತ್ತು ಭದ್ರತೆ ವಿಷಯಗಳು ಸರ್ಕಾರದ ಅತ್ಯಂತ ಪ್ರಮುಖ ದಿನನಿತ್ಯದ ಆಡಳಿತದ ಭಾಗವಾಗಿರಬೇಕು. ಈ ರೀತಿಯ ಅನೇಕ ವಿಭಿನ್ನ ಕಾರ್ಯಯೋಜನೆಗಳನ್ನೇ ಮುಖ್ಯವಾಗಿಟ್ಟುಕೊಂಡು ಹೊಸ ರಾಜಕೀಯ ಶಕ್ತಿಯನ್ನು ಹುಟ್ಟುಹಾಕಬೇಕು. ಏಕೆಂದರೆ ಈ ಸಾಂಪ್ರದಾಯಿಕ ಶಕ್ತಿಗಳಿಂದ ಇಂತಹ ಕ್ರಾಂತಿಕಾರಕ ಬದಲಾವಣೆ ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ಸಾಧ್ಯವಾದಷ್ಟು ಒಂದು ಪರ್ಯಾಯ ರಾಜಕೀಯ ವಾತಾವರಣ ನಿರ್ಮಿಸುವ ದಿಕ್ಕಿನಲ್ಲಿ ಯೋಚಿಸಬೇಕು. ಜನರಿಗೆ ಮತ್ತೊಂದು ಆಯ್ಕೆ ನೀಡಬೇಕು..
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ.