ಪರ್ವತವಾಸಿಯ ಷರತ್ತು

ಪರ್ವತವಾಸಿಯ ಷರತ್ತು

ಅದೊಂದು ಹಳ್ಳಿ. ಅಲ್ಲಿ ಒಂದು ದಿನ ಇಬ್ಬರು ನೆರೆಹೊರೆಯವರಿಗೆ ಜಗಳ ಶುರುವಾಯಿತು. ಒಂದು ಗಂಟೆ ಕಳೆದರೂ ಆ ಜಗಳ ನಿಲ್ಲಲಿಲ್ಲ. ಹಳ್ಳಿಯವರೆಲ್ಲ ಅವರ ಜಗಳ ನೋಡಲು ಜಮಾಯಿಸಿದರು.

ಅಲ್ಲಿನ ಮನೆಯೊಂದರ ಕೆಲಸದಾಕೆ ಯುವತಿ ಮಲ್ಲಿಕಾ. ಅವಳಿಗೂ ಈ ಜಗಳ ನೋಡಬೇಕೆಂಬ ಬಯಕೆ. ಅಂತೂ ಮನೆಯ  ಬಾಗಿಲು, ಕಿಟಕಿಗಳನ್ನು ಮುಚ್ಚಿ, ಹೆಬ್ಬಾಗಿಲಿಗೆ ಬೀಗ ಹಾಕಿ, ಬೀಗದಕೈಯನ್ನು ಜೇಬಿನಲ್ಲಿ ಹಾಕಿಕೊಂಡು ಹೊರಟಳು.

ಸ್ವಲ್ಪ ದೂರದಲ್ಲಿ ಒಂದು ತೊರೆಯಿತ್ತು. ಅದನ್ನು ದಾಟಲು ಹಾಕಿದ್ದ ಮರದ ಹಲಗೆ ತೊರೆಯೊಳಗೆ ಬಿದ್ದಿತ್ತು. ಈಗ ತೊರೆಯನ್ನು ಹೇಗೆ ದಾಟುವುದೆಂದು ಯೋಚಿಸುತ್ತಾ ಅಲ್ಲೇ ನಿಂತ ಮಲ್ಲಿಕಾ ಜೇಬಿನೊಳಗೆ ಕೈಹಾಕಿ ತನ್ನ ಕರವಸ್ತ್ರ ಹೊರತೆಗೆದಳು. ಆಗ ಜೇಬಿನಲ್ಲಿದ್ದ ಮನೆಯ ಬೀಗದಕೈ ತೊರೆಯೊಳಗೆ ಬಿದ್ದು ಕಾಣದಾಯಿತು.

ಮಲ್ಲಿಕಾಳಿಗೆ ಅಳುವೇ ಬಂತು. ಯಾಕೆಂದರೆ, ಅವಳಿಗೆ ಬೀಗದಕೈ ಸಿಗದಿದ್ದರೆ, ಮನೆಯೊಡತಿಗೆ ಮಲ್ಲಿಕಾ ಮನೆಯಿಂದ ಹೊರಗೆ ಹೋಗಿದ್ದಾಳೆಂದು ತಿಳಿಯುತ್ತದೆ; ಅದರಿಂದಾಗಿ ಮಲ್ಲಿಕಾ ತನ್ನ ಕೆಲಸ ಕಳೆದುಕೊಳ್ಳುತ್ತಾಳೆ.

"ನನಗಿನ್ನು ಮನೆಯ ಬೀಗದಕೈ ಸಿಗೋದಿಲ್ಲ. ನಾನು ಮನೆಯಲ್ಲೇ ಇರಬೇಕಾಗಿತ್ತು. ಈ ತಲೆಹಿಡುಕರ ಜಗಳ ನೋಡಲಿಕ್ಕಾಗಿ ಮನೆ ಬಿಟ್ಟು ಹೊರಡಬಾರದಾಗಿತ್ತು” ಎಂದು ತನ್ನನ್ನೇ ಹಳಿಯುತ್ತಾ, ಅಳುತ್ತಾ ಅವಳು ತೊರೆಯ ಬದಿಯಲ್ಲಿ ಕುಳಿತಳು. ಆಗ ಅಲ್ಲಿಗೆ ಅಚಾನಕ್ ಪರ್ವತವಾಸಿಯೊಬ್ಬ ಬಂದ. “ಇದ್ಯಾಕೆ ಅಳುತ್ತಿದ್ದಿ” ಎಂದವನು ಕೇಳಿದಾಗ ಮಲ್ಲಿಕಾ ತನ್ನ ಸಮಸ್ಯೆ  ತಿಳಿಸಿದಳು. “ನಿನ್ನ ಬೀಗದಕೈ ನಾನು ಹುಡುಕಿ ಕೊಡ್ತೇನೆ. ಆದರೆ ನನ್ನದೊಂದು ಷರತ್ತಿಗೆ ನೀನು ಒಪ್ಪಬೇಕು” ಎಂದ ಪರ್ವತವಾಸಿ. ಮಲ್ಲಿಕಾ ತನ್ನ ಮೊದಲ ಮಗನ ಹತ್ತನೆಯ ಜನ್ಮದಿನದಂದು, ಮಗನನ್ನು ಅಥವಾ ಒಂದು ಕೈಚೀಲ ತುಂಬ ಚಿನ್ನವನ್ನು ಕೊಡಬೇಕೆಂಬುದೇ ಪರ್ವತವಾಸಿಯ ಷರತ್ತು.

ಮಲ್ಲಿಕಾ ತಕ್ಷಣವೇ ಈ ಷರತ್ತಿಗೆ ಒಪ್ಪಿದಳು. ಯಾಕೆಂದರೆ ಅವಳಿಗೆ ಮದುವೆಯೇ ಆಗಿರಲಿಲ್ಲ. ಈಗ ಅವಳಿಗೆ ಒಂದೇ ಯೋಚನೆ: ಮನೆಯೊಡತಿ ಹಿಂತಿರುಗುವ ಮುಂಚೆ ಮನೆ ಸೇರಬೇಕೆಂಬುದು. ಪರ್ವತವಾಸಿ ತೊರೆಯ ನೀರಿಗಿಳಿದು ಮಲ್ಲಿಕಾಳ ಮನೆಯ ಬೀಗದಕೈ ಹುಡುಕಿ ಕೊಟ್ಟ. ಆ ಕ್ಷಣವೇ ಮಲ್ಲಿಕಾ ಮನೆಗೆ ಓಡಿದಳು.

ಅದಾಗಿ ಒಂದು ವರುಷದಲ್ಲಿ ಮಲ್ಲಿಕಾಳಿಗೆ ಮದುವೆಯಾಯಿತು. ಅನಂತರ ಮಗನೂ ಹುಟ್ಟಿದ. ಆಗ ಅವಳಿಗೆ ತಾನು ಪರ್ವತವಾಸಿಯ ಷರತ್ತಿಗೆ ಒಪ್ಪಿದ್ದು ನೆನಪಾಯಿತು. ಆತನಿಂದ ತನ್ನ ಮಗನನ್ನು ಉಳಿಸಿಕೊಳ್ಳಬೇಕಾದರೆ ತಾನು ಬಹಳ ಕಷ್ಟಪಟ್ಟು ಹಣ ಉಳಿತಾಯ ಮಾಡಬೇಕೆಂದು ಅವಳಿಗೆ ಅರ್ಥವಾಯಿತು.

ತಾನು ಉಳಿಸಿದ ಒಂದೊಂದು ನಾಣ್ಯವನ್ನೂ ಮಲ್ಲಿಕಾ ಒಂದು ದೊಡ್ಡ ಚೀಲದೊಳಗೆ ಹಾಕತೊಡಗಿದಳು. ವರುಷಗಳು ದಾಟಿದವು. ಮಲ್ಲಿಕಾ ಯಾವುದೇ ಒಳ್ಳೆಯ ಉಡುಪು ಖರೀದಿಸಲಿಲ್ಲ; ಯಾವುದೇ ಅನಗತ್ಯ ವೆಚ್ಚ ಮಾಡಲಿಲ್ಲ. ಆದರೂ ಮಗನಿಗೆ ಒಂಭತ್ತು ವರುಷ ದಾಟಿದಾಗ, ಆ ದೊಡ್ಡ ಚೀಲದ ಅರ್ಧವೂ ತುಂಬಿರಲಿಲ್ಲ. ಅದರಲ್ಲಿದ್ದ ಹಣದಿಂದ ಅವಳು ಹತ್ತು ಗ್ರಾಮ್ ಚಿನ್ನ ಖರೀದಿಸಲಿಕ್ಕೂ ಸಾಧ್ಯವಿರಲಿಲ್ಲ. ಹಾಗಾಗಿ ಅವಳು ಅಳುತ್ತಾ ತನ್ನ ಮಗನಿಗೆ ಎಲ್ಲ ಸಂಗತಿಯನ್ನೂ ತಿಳಿಸಿದಳು. ಅವನು ಧೈರ್ಯದಿಂದ ಹೇಳಿದ, “ನೀನೇನೂ ಚಿಂತೆ ಮಾಡಬೇಡಮ್ಮಾ. ನಾನು ಪರ್ವತವಾಸಿಯೊಂದಿಗೆ ಹೋಗ್ತೇನೆ.”

ಆ ದಿನ ಬಂದೇ ಬಂತು. ಮಲ್ಲಿಕಾಳ ಮಗನಿಗೆ ಹತ್ತು ವರುಷ ತುಂಬಿದಾಗ, ಪರ್ವತವಾಸಿ ಬಂದೇ ಬಂದ. ಷರತ್ತಿನ ಅನುಸಾರ ಮಲ್ಲಿಕಾ ತನ್ನ ಮಗನನ್ನು ಅವನಿಗೆ ಒಪ್ಪಿಸಿದಳು. ಅವನನ್ನು ಕರೆದೊಯ್ದ ಪರ್ವತವಾಸಿ, ಆ ಪುಟ್ಟ ಹುಡುಗನಿಗೆ ಮಾಡಲಾಗದಷ್ಟು ಕೆಲಸ ಕೊಡಲು ಶುರು ಮಾಡಿದ.
ಒಂದು ದಿನ ಪರ್ವತವಾಸಿ ಮಲ್ಲಿಕಾಳ ಮಗನಿಗೆ ದನದ ಕೊಟ್ಟಿಗೆ ಶುಚಿ ಮಾಡಲು ಹೇಳಿದ. "ನಾನು ಬೆಟ್ಟಕ್ಕೆ ಹೋಗಿ ಹಿಂದೆ ಬರುವಷ್ಟರಲ್ಲಿ ಈ ಕೆಲಸ ಮುಗಿಸಿರಬೇಕು. ಇಲ್ಲವಾದರೆ ಒಂದೇಟಿಗೆ ನಿನ್ನ ತಲೆ ಕಡಿಯುತ್ತೇನೆ” ಎಂದು ಆ ಪುಟ್ಟ ಹುಡುಗನನ್ನು ಹೆದರಿಸಿದ. “ನೆನಪಿರಲಿ, ನೀನು ಅಲ್ಲಿರುವ ದೊಡ್ಡ ಹುಲ್ಲಿನ ಬಣವೆಯ ಹಿಂಬದಿಗೆ ಯಾವತ್ತೂ ಹೋಗಬಾರದು” ಎಂದೂ ಹೇಳಿದ ಪರ್ವತವಾಸಿ.

ಆತ ಅತ್ತ ಹೋದೊಡನೆ ಮಲ್ಲಿಕಾಳ ಮಗ ಹುಲ್ಲಿನ ಬಣವೆಯ ಹಿಂಬದಿಗೆ ಹೋಗಲು ನಿರ್ಧರಿಸಿದ. ಯಾಕೆಂದರೆ ದನದ ಕೊಟ್ಟಿಗೆಯನ್ನು ಒಂದೆರಡು ಗಂಟೆಗಳಲ್ಲಿ ಶುಚಿಗೊಳಿಸಲು ಸಾಧ್ಯವೇ ಇಲ್ಲ. ಹಾಗಾಗಿ ತನ್ನ ತಲೆ ಬಲಿಯಾಗೇ ಆಗುತ್ತದೆ; ಮತ್ಯಾಕೆ ಭಯ ಎಂಬುದವನ ಯೋಚನೆ.

ಮಲ್ಲಿಕಾಳ ಮಗ ಬಣವೆಯ ಹಿಂದೆ ಹೋಗಿ ನೋಡಿದಾಗ ಅಲ್ಲೊಬ್ಬಳು ಚಂದದ ಹುಡುಗಿ ಮತ್ತು ಮೂರು ನಾಯಿಗಳಿದ್ದವು. ಅವಳು ಚರಕದಲ್ಲಿ ನೂಲು ಸುತ್ತುತ್ತಿದ್ದಳು. ಮಲ್ಲಿಕಾಳ ಮಗ ಅವಳಿಗೆ ತನ್ನ ಕತೆ ಹೇಳಿದ. “ನೀನೇನೂ ಚಿಂತೆ ಮಾಡಬೇಡ. ಈ ನಾಯಿಗಳು ನಿನ್ನ ಕೆಲಸ ಮುಗಿಸುತ್ತವೆ” ಎಂದವಳು ಸಮಾಧಾನ ಮಾಡಿದಳು. ಅವಳ ಆಣತಿಯಂತೆ ನಾಯಿಗಳು ದನದ ಕೊಟ್ಟಿಗೆಯನ್ನು ಶುಚಿ ಮಾಡಿದವು. ಬೆಟ್ಟದಿಂದ ಹಿಂತಿರುಗಿದ ಪರ್ವತವಾಸಿ ದನದ ಕೊಟ್ಟಿಗೆ ನೋಡಿ, ತಲೆಯಾಡಿಸುತ್ತ ಹೋದ.

ಮರುದಿನವೂ ಪರ್ವತವಾಸಿ ಬೆಟ್ಟಕ್ಕೆ ಹೋದ. ಹೋಗುವ ಮುನ್ನ, ಮಲ್ಲಿಕಾಳ ಮಗನಿಗೆ ಮಾಲ್ಟ್ ಇತ್ಯಾದಿ ವಸ್ತುಗಳನ್ನಿತ್ತು, ಅವುಗಳಿಂದ ಬಿಯರ್ ತಯಾರಿಸಬೇಕೆಂದು ಆದೇಶಿಸಿದ. ಅವನು ಅತ್ತ ಹೋದೊಡನೆ, ಮಲ್ಲಿಕಾಳ ಮಗ ಪುನಃ ಹುಲ್ಲಿನ ಬಣವೆಯ ಹಿಂಬದಿಗೆ ಹೋಗಿ ಅಲ್ಲಿದ್ದ ಹುಡುಗಿಯ ಸಹಾಯ ಕೇಳಿದ. ಅವಳು ಅವನಿಗೆ ಪುನಃ ಸಹಾಯ ಮಾಡಿದಳು.

ಬೆಟ್ಟದಿಂದ ಹಿಂತಿರುಗಿದ ಪರ್ವತವಾಸಿ, ಹುಡುಗ ಮಾಡಿದ್ದ ಬಿಯರನ್ನು ಕಂಠಪೂರ್ತಿ ಕುಡಿದು ಮಲಗಿದ. ಆಗ, ಆ ಹುಡುಗಿ ಮಲ್ಲಿಕಾಳ ಮಗನನ್ನು ಕರೆದು ಹೇಳಿದಳು, “ಸರಿಯಾಗಿ ಕೇಳು. ನಾವಿನ್ನು ಇಲ್ಲಿ ಒಂದು ಕ್ಷಣವೂ ಇರಬಾರದು. ನಮ್ಮ ಜೀವಕ್ಕೇ ಅಪಾಯವಿದೆ.” "ನಮ್ಮ ಸಹಾಯಕ್ಕೆ ನಾಯಿಗಳಿವೆಯಲ್ಲವೇ? ಅವನು ಎಂತಹ ಕಷ್ಟದ ಕೆಲಸ ಕೊಟ್ಟರೂ ನಾವು ಮುಗಿಸಬಲ್ಲೆವು" ಎಂದ ಮಲ್ಲಿಕಾಳ ಮಗ. “ಹಾಗಲ್ಲ. ಅವನು ನಮಗೆ ದಿನದಿನವೂ ಮಾಡಲಿಕ್ಕಾಗದ ಕೆಲಸಗಳನ್ನು ಕೊಡುತ್ತಾ, ಕೊನೆಗೊಂದು ದಿನ ನಮ್ಮನ್ನು ಕೊಂದೇ ಬಿಡುತ್ತಾನೆ” ಎಂದಳು ಹುಡುಗಿ.

“ಹಾಗಾದರೆ ನಾವೀಗ ಏನು ಮಾಡೋಣ?” ಎಂದು ಕೇಳಿದ ಮಲ್ಲಿಕಾಳ ಮಗ. ಆ ಜಾಣೆ ಹುಡುಗಿ ಹೇಳಿದಳು, “ಇಲ್ಲಿಂದ ಓಡಿ ಹೋಗಲು ಇದುವೇ ಸರಿಯಾದ ಸಮಯ. ಯಾಕೆಂದರೆ ಪರ್ವತವಾಸಿ ಇನ್ನೂ ಮಲಗಿದ್ದಾನೆ. ತಕ್ಷಣವೇ ಹೊರಟು ಬಿಡೋಣ. ಪರ್ವತದ ಹಾದಿಯಲ್ಲಿ ಇಳಿದು ಬಿಟ್ಟರೆ ನಾವು ಕಾಡು ಸೇರಿಕೊಳ್ಳುತ್ತೇವೆ. ನನಗೆ ಆ ದಾರಿ ಚೆನ್ನಾಗಿ ಗೊತ್ತಿದೆ.”

ಮೂರು ನಾಯಿಗಳ ಜೊತೆ ಅವರು ತಕ್ಷಣವೇ ಅಲ್ಲಿಂದ ಓಟ ಕಿತ್ತರು. ಸುಮಾರು ಒಂದು ಗಂಟೆ ಹೊತ್ತು ಓಡಿದ ನಂತರ ಅವರು ಹಿಂತಿರುಗಿ ನೋಡಿದಾಗ ಅವರಿಗೆ ದೂರದಲ್ಲಿ ಧೂಳು ಮೇಲೇರುತ್ತಿರುವುದು ಕಾಣಿಸಿತು. “ಪರ್ವತವಾಸಿ ನಮ್ಮ ಬೆನ್ನು ಹತ್ತಿದ್ದಾನೆ” ಎಂದಳು ಗಾಬರಿಯಿಂದ ಹುಡುಗಿ. ಅಷ್ಟರಲ್ಲಿ ಅವರು ಒಂದು ತಿರುವಿಗೆ ಬಂದರು. ಅಲ್ಲಿಗೆ ದಾರಿ ಕೊನೆಗೊಂಡಿತ್ತು.

“ನಾವೀಗ ಸಿಕ್ಕಿ ಬಿದ್ದೆವು. ಪರ್ವತವಾಸಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದ ಮಲ್ಲಿಕಾಳ ಮಗ. “ನನಗೊಂದು ಐಡಿಯಾ ಹೊಳೆದಿದೆ. ನಿನ್ನ ಒಂದು ತಲೆಗೂದಲನ್ನು ಕಿತ್ತು ಬಲಕ್ಕೆ ಎಸೆದು ಬಿಡು. ಆಗ ನೀನೊಂದು ಮರವಾಗುತ್ತಿ. ನನ್ನ ಒಂದು ತಲೆಗೂದಲನ್ನು ಕಿತ್ತು ಎಡಕ್ಕೆ ಎಸೆಯುತ್ತೇನೆ. ಆಗ ನಾನೊಂದು ಹಕ್ಕಿಯಾಗುತ್ತೇನೆ” ಎಂದಳು ಜಾಣ ಹುಡುಗಿ.

ಅವರು ಹಾಗೆಯೇ ಮಾಡಿದರು. ತಕ್ಷಣವೇ ಮರ ಮತ್ತು ಹಕ್ಕಿಯಾಗಿ ಬದಲಾದರು! ಕೆಲವೇ ನಿಮಿಷಗಳಲ್ಲಿ ಪರ್ವತವಾಸಿ ಅಲ್ಲಿಗೆ ನುಗ್ಗಿ ಬಂದ. ಅವನು ಎಷ್ಟು ರಭಸದಿಂದ ನುಗ್ಗಿ ಬಂದನೆಂದರೆ, ಆ ತಿರುವಿನಲ್ಲಿ, ದಾರಿ ಕೊನೆಯಾದಲ್ಲಿ ನಿಲ್ಲದೆ ಮುನ್ನುಗ್ಗಿದ; ಪರ್ವತದಿಂದ ಉರುಳುತ್ತಾ ಕೆಳಗೆ ಬಿದ್ದು ಸತ್ತು ಹೋದ.

ಈಗ “ಮರ" ಮತ್ತು "ಹಕ್ಕಿ"ಯಾಗಿ ರೂಪ ಬದಲಾಯಿಸಿದ್ದ ಹುಡುಗ ಮತ್ತು ಹುಡುಗಿ ಮುಂಚಿನಂತಾದರು. ಅನಂತರ ಅವರು ಆ ಕಾಡಿನಲ್ಲೇ ಮನೆಕಟ್ಟಿ ಸಂತೋಷದಿಂದ ಬಾಳಿದರು.