ಪರ್ಷಿಯನ್ ಕಥೆ - ಸಿಂಹದ ಹಚ್ಚೆ

ಪರ್ಷಿಯನ್ ಕಥೆ - ಸಿಂಹದ ಹಚ್ಚೆ

ಮಧ್ಯ ಪರ್ಷಿಯಾ ದೇಶದಲ್ಲಿ ಖಾಝ್ವಿನ್ ಎಂಬ ಹೆಸರಿನ ಒಂದು ಪಟ್ಟಣವಿದೆ. ಅಲ್ಲಿ ಕುಸ್ತಿ ಪಟುಗಳಿಗೆ ಹಚ್ಚೆ ಹಾಕಿಸಿಕೊಳ್ಳುವುದು ಕಡ್ಡಾಯ. ಒಂದು ದಿನ ಒಬ್ಬ ಮನುಷ್ಯ, ಖಾಝ್ವಿನ್ ನ ಸಾರ್ವಜನಿಕ ಸ್ನಾನ ಗೃಹದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬನ ಬಳಿಗೆ ಬಂದು ‘ತನಗೆ ಹಚ್ಚೆ ಹಾಕಿಸಿಕೊಳ್ಳಬೇಕಾಗಿದೆ’ ಎಂದ. ಅಸಲಿಗೆ ಆತ ಕುಸ್ತಿಪಟುವೇ ಅಲ್ಲ, ಆದರೆ ಅವನಿಗೆ ತನಗಿಲ್ಲದ ಶೌರ್ಯ, ಧೈರ್ಯ, ಶಕ್ತಿಯನ್ನು ಕೊಚ್ಚಿಕೊಳ್ಳುವ ಹಂಬಲ. ಹಚ್ಚೆ ಹಾಕುವವನ ಬಳಿ ಬಂದು, ಶೌರ್ಯವನ್ನು ಪ್ರತಿನಿಧಿಸುವ ಹಚ್ಚೆಯ ಮಾದರಿ ಹಾಕಬೇಕೆಂದು ಹೇಳಿದ.

ಹಚ್ಚೆ ಹಾಕುವವನು, ‘ನಿಮಗೆ ಯಾವ ವಿನ್ಯಾಸದ ಹಚ್ಚೆ ಬೇಕು?’ ಎಂದು ಕೇಳಿದ.

ಅದಕ್ಕೆ ಈ ಮನುಷ್ಯ ‘ಉಗ್ರವಾದ ಸಿಂಹದ್ದು. ಇನ್ಯಾವುದು ಹಾಕುತ್ತೀ? ನನ್ನದು ಸಿಂಹರಾಶಿಯೇ. ಹಾಗೆಯೇ, ಇದುವರೆಗೂ ಯಾರಿಗೂ ಬಳಸಿರದಂತಹ ಕಡುನೀಲಿ ಬಣ್ಣವನ್ನು ಹಚ್ಚೆ ಹಾಕಲು ಉಪಯೋಗಿಸು.’ ಎಂದು ಅತಿ ಉದ್ಧಟತನದಿಂದ ಆದೇಶಿಸಿದ.

ಅವನ ಮಾತನ್ನು ಶ್ರದ್ಧೆಯಿಂದ ಕೇಳಿಕೊಂಡ ಹಚ್ಚೆಯವ, ಎಲ್ಲ ಸಿದ್ದತೆಗಳನ್ನು ಮಾಡಿಕೊಂಡು, ತನ್ನ ಸೂಜಿಮೊನೆಯಿಂದ ಪೆನ್ನಿಗೆ ಕಡುನೀಲಿ ಶಾಯಿಯನ್ನು ತುಂಬಿಕೊಂಡು ತಯಾರಾದ. ತನ್ನ ಕೆಲಸ ಪ್ರಾರಂಭಿಸಿ ಅವನು ಆ ಮನುಷ್ಯನ ಚರ್ಮದ ಮೇಲೆ ಸೂಜಿಯಿಂದ ಒಂದು ಗೆರೆ ಎಳೆದಿದ್ದನಷ್ಟೇ, ಜೋರಾಗಿ ಕಿರುಚಿಕೊಂಡ ಆ ‘ಕುಸ್ತಿಪಟು’,

‘ನಿಲ್ಲಿಸು’ ಎಂದ.

ಗಾಬರಿಗೊಂಡ ಹಚ್ಚೆಯವನು ಏನಾಯಿತೆಂದು ಕೇಳಿದ.

ಆ ಮನುಷ್ಯ ‘ಸಿಂಹದ ಯಾವ ಭಾಗವನ್ನು ಈಗ ಕೊರೆಯುತ್ತಿದ್ದೀಯಾ?’ ಎಂದು ಕೇಳಿದ.

‘ಬಾಲದಿಂದ ಶುರು ಮಾಡುತ್ತಿದ್ದೇನೆ’ ಎಂದ.

‘ಸಿಂಹಕ್ಕೆ ಬಾಲವಿಲ್ಲದಿದ್ದರೆ ಯಾವ ನಷ್ಟವೂ ಇಲ್ಲ, ಅದನ್ನು ಬಿಟ್ಟು ಬೇರೆ ಭಾಗವನ್ನು ಬರೆ ಸಾಕು’ ಎಂದ .

ಸರಿ. ಎಂದು ತನ್ನ ಕೆಲಸ ಮುಂದುವರೆಸಿದ ಆತ ಸೂಜಿಯನ್ನು ಆ ‘ಕುಸ್ತಿಪಟು’ವಿಗೆ ಇನ್ನೂ ತಾಗಿಸಿದ್ದನಷ್ಟೇ…

ಜೋರಾಗಿ ‘ಅಯ್ಯೋ… ಹುಯಿಲಿಟ್ಟ ಆ ನಕಲಿ ಮನುಷ್ಯ… ‘ಈಗ್ಯಾವ ಭಾಗವನ್ನು ಬರೆಯುತ್ತಿದ್ದಿಯಾ?’ ಎಂದು ಕೇಳಿದ.

ಅದಕ್ಕೆ ಆತ ‘ಈಗ ಕಿವಿಯನ್ನು ಬರೆಯೋಣ ಎಂದುಕೊಂಡಿದ್ದೇನೆ’ ಎಂದ.

‘ಕಿವಿಯಿಲ್ಲದ ಸಿಂಹದ ಶೌರ್ಯವೇನೂ ಕಡಿಮೆಯಾಗುವುದಿಲ್ಲ, ಬಿಡು, ಬೇರಿನ್ನಾವ ಭಾಗವನ್ನಾದರೂ ಬರೆ’ ಎಂದು ನೋವಿನಿಂದ ಕನಲುತ್ತಾ ಹೇಳಿದ.

ನಕಲಿ ಕುಸ್ತಿಪಟು ಎಬ್ಬಿಸುತ್ತಿದ್ದ ಗಲಾಟೆಯಿಂದ ಗೊಂದಲಕ್ಕೀಡಾಗಿದ್ದ ಹಚ್ಚೆಯವ, ಈ ಬಾರಿ ಇನ್ನೂ ಸೂಜಿಯನ್ನು ತಾಗಿಸಿರಲೂ ಇಲ್ಲ.

ಅಷ್ಟರಲ್ಲಿ ಆತ, ‘ಈಗ ಯಾವ ಭಾಗವನ್ನು ಬರೆಯುತ್ತಿರುವೆ?’ ಎಂದು ಕೇಳಿದ. 

ಹಚ್ಚೆಯವನು ಶಾಂತವಾಗಿ ‘ಸಿಂಹದ ಹೊಟ್ಟೆಯನ್ನು…’ ಎಂದ.

ಈ ಬಾರಿಯಂತೂ ಹೌಹಾರಿದ ನಮ್ಮ ಪಟು, ‘ಸುಂದರವಾದ ಸಿಂಹಕ್ಕೆ ಹೊಟ್ಟೆಯ ಹಂಗಾದರೂ ಯಾಕೆ?’ ಎಂದು ದೈನ್ಯದಿಂದ ಕೇಳಿದ. 

ಆ ಮನುಷ್ಯನ ಈ ಮಾತುಗಳನ್ನು ಕೇಳಿದ ಮೇಲಂತೂ ಹಚ್ಚೆಯವನಲ್ಲಿ ಅಳಿದುಳಿದಿದ್ದ ತಾಳ್ಮೆಯ ಕೊಸರು ಖಾಲಿಯಾಗಿಬಿಟ್ಟಿತು.

ನಕಲಿ ಜಟ್ಟಿಯ ಹುಚ್ಚಾಟಗಳಿಂದ ಬೇಸತ್ತಿದ್ದ ಅವನಿಗೆ ತಾಳಲಾರದಷ್ಟು ಸಿಟ್ಟು ಬಂದು ಬಿಟ್ಟಿತು. ಅಂದವಾಗಿ ಜೋಡಿಸಿಟ್ಟುಕೊಂಡಿದ್ದ ತನ್ನ ಹಚ್ಚೆ ಹಾಕುವ ಸಾಮಗಿಗಳನ್ನೆಲ್ಲಾ ಸಿಟ್ಟಿನಿಂದ ಎಸೆದಾಡಿ, ಹೊರನಡೆದುಬಿಟ್ಟ.

ಏನಾಯಿತೆಂದು ಅಯೋಮಯದಲ್ಲಿ ಹಿಂಬಾಲಿಸಿದ ‘ಜಟ್ಟಿ’ಯನ್ನು ನೋಡುತ್ತಾ, ‘ಅಲ್ಲ ಬಾಲ, ಕಿವಿ ಹೊಟ್ಟೆಗಳಿಲ್ಲದ ಸಿಂಹದ ಹಚ್ಚೆಯನ್ನು ನಾನು ಹೇಗೆ ಬರೆಯಲು ಸಾಧ್ಯ? ದೇವರೇ ಅಂತಹ ಸಿಂಹವನ್ನು ಇನ್ನೂ ಸೃಷ್ಟಿಸಿಲ್ಲ, ನೀವು ಇಲ್ಲಿಂದ ಈ ಕೂಡಲೇ ಹೊರಟು ಬಿಡಿ. ಮತ್ತೆಂದೂ ನನ್ನ ಅಂಗಡಿಯ ಕಡೆ ಸುಳಿಯಬೇಡಿ.’ ಎಂದು ಅತೀವ ಕೋಪದಿಂದ ಹೇಳಿದ.

ಆ ನಕಲಿ ಕುಸ್ತಿಪಟು ಇನ್ನೇನೋ ಹೇಳಲು ಬಾಯಿತೆರೆಯುವವನಿದ್ದ. ಅವನಿಗೆ ಉಸಿರಾಡಲು ಅವಕಾಶ ಕೊಡದಂತೆ, ಅವನ ಅಂಗಿಯ ಕೊರಳಪಟ್ಟಿಯನ್ನು ಹಿಡಿದು ಸ್ನಾನಗೃಹದಿಂದಲೇ ಹೊರಹಾಕಿ, ನಿಟ್ಟುಸಿರು ಬಿಟ್ಟ.

(ಹಳೆಯ ‘ತುಷಾರ’ ಪತ್ರಿಕೆಯಿಂದ ಸಂಗ್ರಹಿತ)

ಚಿತ್ರ ಕೃಪೆ: ಅಂತರ್ಜಾಲ ತಾಣ