ಪರ್ಸೆಂಟ್ ಗಳ ನಡುವೆ ಉತ್ಪತ್ತಿ ಕಳೆದುಕೊಂಡ ಕೃಷಿಕರು (ಭಾಗ 2)

ಪರ್ಸೆಂಟ್ ಗಳ ನಡುವೆ ಉತ್ಪತ್ತಿ ಕಳೆದುಕೊಂಡ ಕೃಷಿಕರು (ಭಾಗ 2)

ಎಲೆಚುಕ್ಕಿ ಶಿಲೀಂಧ್ರ ರೋಗ ಬಾಧೆಗೆ ಅತಿ ಮುಖ್ಯ ಔಷಧೀ ಎಂದರೆ ಬಿಸಿಲು ಅಥವಾ ಸೆಪ್ಟೆಂಬರ್ ನಲ್ಲಿ ಮುಕ್ಕಾಲು ಪಾಲು "ಮಳೆ" ಕಡಿಮೆ ಆಗುವುದು ಮತ್ತು ಅಕ್ಟೋಬರ್ ತಿಂಗಳಲ್ಲಿ ಮಳೆ ಬಾರದಿರುವುದು. ಚಳಿಗಾಲ ಆರಂಭವಾಗುವುದು . ಮಲೆನಾಡು ಮತ್ತು ಕರಾವಳಿಯ ಅಡಿಕೆ ಕೃಷಿಕರು ಈ ವರ್ಷ ಒಂದಷ್ಟು ಗಂಭೀರ ಚಿಂತನೆ ಮಾಡಲಿಕ್ಕಿದೆ. ಇಷ್ಟು ಸರ್ತಿ ಎಲೆಚುಕ್ಕಿ ಶಿಲೀಂಧ್ರ ಅಡಿಕೆ ಮರದ ಸೋಗೆಯ ಮೇಲೆ ಕಾಣಿಸಿಕೊಂಡರೆ ಈ ಸರ್ತಿ ಎಲೆಚುಕ್ಕಿ ಶಿಲೀಂಧ್ರ ಅಡಿಕೆ ಗೊನೆಯ ಮೇಲೇ ದಾಳಿ ಮಾಡಿ ಅಡಿಕೆ ಫಸಲಿನ ಮೇಲೆ ಗಂಭೀರ ಪರಿಣಾಮ ಬೀರಿದೆ.

ಇಲ್ಲಿ ಅಡಿಕೆ ಬೆಳೆಗಾರರು ಚಿಂತನೆ ಮಾಡಬೇಕಾದದ್ದು ಈ ಅನಾಹುತ ಈ ವರ್ಷಕ್ಕೆ ಕೊನೆಯಾಗುತ್ತದೆಯಾ? ಖಂಡಿತವಾಗಿಯೂ ಇಲ್ಲ. ಮುಂದಿನ ವರ್ಷ ವೂ ಅಡಿಕೆ ಬೆಳೆಗಾರರು ಚೇತರಿಸಿಕೊಳ್ಳಲು ಅವಕಾಶ ಸಿಗದು ಎಂದೆನ್ನಿಸುತ್ತಿದೆ. ಏಕೆಂದರೆ ಎಲೆಚುಕ್ಕಿ ಶಿಲೀಂಧ್ರ ಕ್ಕೆ ಮದ್ದಿಲ್ಲ. ಋತುಮಾನ ಸಹಕರಿಸಿದರೆ ಮಾತ್ರ ಎಲೆಚುಕ್ಕಿ ಶಿಲೀಂಧ್ರ ನಿಯಂತ್ರಣಕ್ಕೆ ಬರಬಹುದು. ಮಲೆನಾಡಿನಲ್ಲಿ ಈ ಹಿಂದೆ ಒಂದೊಂದು ವರ್ಷ ಅಡಿಕೆ ಕೊಳೆರೋಗ ಶಿಲೀಂಧ್ರ ಕ್ಕೆ  ಫಸಲು ನಷ್ಟ ವಾಗುತ್ತಿದ್ದದ್ದು ಸಾಮಾನ್ಯ ಸಂಗತಿ. ಅಡಿಕೆ ಕೊಳೆ ಶಿಲೀಂದ್ರ ನಿಯಂತ್ರಣ ಮಾಡಬಹುದು ಆದರೆ  ಎಲೆಚುಕ್ಕಿ ಶಿಲೀಂಧ್ರ ನಿಯಂತ್ರಣ ಮಾಡಲು ಅಸಾಧ್ಯ ವಾಗಿದೆ.

ಈ ಕಾರಣಕ್ಕೆ ಮಲೆನಾಡು ಕರಾವಳಿಯಲ್ಲಿ ನೇರವಾಗಿ ಅಡಿಕೆ ಕೃಷಿಯನ್ನೇ  ನಂಬಿಕೊಂಡ ಐದು ಎಕರೆ ಯ ಒಳಗಿನ ಅಡಿಕೆ ಬೆಳೆಗಾರರು ಭವಿಷ್ಯದ ದಿನಗಳನ್ನು ಎದುರಿಸಲು ಮತ್ತು ಪರ್ಯಾಯ ಜೀವನೋಪಾಯದ ಬಗ್ಗೆ ಚಿಂತನೆ ನೆಡೆಸುವುದು ಅತ್ಯವಶ್ಯಕ. ಹೌದು ಈ ಹವಾಮಾನ ವೈಪರೀತ್ಯ ಅಡಿಕೆ ಒಂದು ಬೆಳೆಯಲ್ಲದೇ ಈ ಭಾಗದ ಉಳಿದ ಕೃಷಿ ಬೆಳೆಗಳ ಮೇಲೂ ದುಷ್ಪರಿಣಾಮ ಬೀರುತ್ತದೆ.

ಈ ವರ್ಷ ಅಡಿಕೆ ಕೃಷಿ ವಿಸ್ತರಣೆ ಮಾಡಬೇಕು ಎನ್ನುವವರೂ, ಅಡಿಕೆ ಉತ್ಪತ್ತಿ ನಂಬಿಕೊಂಡು ಸಾಲ ಮಾಡುವವರೂ, ಅಡಿಕೆ ಅಧಾರಿತ ಉದ್ಯೋಗ ಮಾಡಬೇಕು ಎನ್ನುವವರು., ಮತ್ತೆ ಮತ್ತೆ ಪರಮಾರ್ಶೆ ಮಾಡಿ. ಮಲೆನಾಡು ಕರಾವಳಿಯಲ್ಲಿ ಅಡಿಕೆ ಯನ್ನು ಮೊದಲ್ಗೊಂಡು ಯಾವುದೇ ಕೃಷಿ ಬೆಳೆಗೂ ಸದ್ಯ ಪೂರಕ ವಾತಾವರಣ ಇಲ್ಲ.  ಮಲೆನಾಡು - ಕರಾವಳಿಯಲ್ಲಿ ಅಡಿಕೆ ಯಷ್ಟು ಉತ್ತಮ ಬೆಳೆ ಇನ್ನೊಂದು ಇಲ್ಲ. ಇಲ್ಲಿ ಅಡಿಕೆ ಬೆಳೆಗೆ ಅಡಿಕೆ ಬೆಳೆಯೇ ಪರ್ಯಾಯ....!!

ಪರ್ಯಾಯ ಕ್ಕೆ ಸದ್ಯ ಕಾಫಿ ಮತ್ತು ಕಾಳುಮೆಣಸು ಆಯ್ಕೆ ಗಳು.  ಅಡಿಕೆ ಬೆಳೆಗೆ ಪರ್ಯಾಯ ಹುಡುಕುವವರು ದಯವಿಟ್ಟು ಯೂಟ್ಯೂಬ್ ನೋಡಿ "ಡ್ರ್ಯಾಗನ್ ಫ್ರೂಟ್ " ಬೆಳೆದು ಕೋಟ್ಯಾಧೀಶರಾಗಿ, ಬಟರ್ ಫ್ರೂಟ್ ಬೆಳೆದು "ಬೆಟರ್ ಲೈಫ್ " ಲೀಡ್ ಮಾಡಿ, "ರಾಂಬೊಟನ್ " ಬೆಳೆದು ಬದುಕಿನಲ್ಲಿ "ರೈಂಬೋ" ನೋಡಿ ಹೀಗಿನ ಜಾಹೀರಾತು/ಕಾರ್ಯಕ್ರಮ ನೋಡಿ ಬಂಡವಾಳ ದಯವಿಟ್ಟು ಹೂಡಿ ಬಾಣಲೆಯಿಂದ ಬೆಂಕಿಗೆ ಬೀಳದಿರಿ. 

ಸದ್ಯ ನಮ್ಮ ಭಾಗಕ್ಕೆ ಖಾತರಿ ಮಾರುಕಟ್ಟೆ ಇರುವ ಪರ್ಯಾಯ ಬೆಳೆ ಇಲ್ಲ. ಅಡಿಕೆ ಉತ್ಪತ್ತಿ ಇಲ್ಲದೇ ಕಂಗೆಟ್ಟ ರೈತರು ಮತ್ತೆ ಇಂತಹ ಅನಾಹುತ ಕ್ಕೆ ಕೈ ಹಾಕಿ ಇನ್ನಷ್ಟು ಪ್ರಪಾತಕ್ಕೆ ಬೀಳದಿರಿ ಜಾಗೃತೆ. ರೈತನ ನಷ್ಟಕ್ಕೆ ಸರ್ಕಾರ ಖಂಡಿತವಾಗಿಯೂ ಕೈ ಹಿಡಿಯೋಲ್ಲ. ರೈತರಿಗೆ ರೈತಾಪಿ ಬದುಕಿಗೆ ರೈತರೇ ಜವಾಬ್ದಾರರು. ಮಲೆನಾಡು ಕರಾವಳಿಯ ಅಡಿಕೆಯನ್ನೇ ನಂಬಿಕೊಂಡ ಚಿಕ್ಕ ಮದ್ಯಮ ವರ್ಗದ ಅಡಿಕೆ ಬೆಳೆಗಾರರು ಈ ವರ್ಷದ ಎಪ್ಪತ್ತು ಪರ್ಸೆಂಟ್ ಅಡಿಕೆ ಉತ್ಪತ್ತಿ ಕಡಿತ ಎಂಬ ವಾಸ್ತವ ಸಂಗತಿಯನ್ನು ಒಂದು ಜಾಗೃತಿಯ ಘಂಟೆ ಎಂದು ಅರ್ಥ ಮಾಡಿ ಕೊಂಡರೆ ಭವಿಷ್ಯ ನೆಮ್ಮದಿ. ಏಳಿರಿ ಎಚ್ಚರವಾಗಿ ಅಡಿಕೆ ಬೆಳೆಗಾರ ಬಂಧುಗಳೇ... ‌ಈ ವರ್ಷದ ಎಪ್ಪತ್ತು ಪ್ರತಿಶತ ಇಳುವರಿ ಇಲ್ಲ ಎನ್ನುವ ವಿಚಾರ ಈ ವರ್ಷಕ್ಕೆ ಕೊನೆ ಅಲ್ಲ. ಇದು ಮುಂದುವರಿತದೆ. ಇದು ನಿಯಂತ್ರಣವಾಗಲು ಅಡಿಕೆ ಕೊಳೆ ರೋಗ ಅಲ್ಲ. ಇದು ಔಷಧ ಇಲ್ಲದ ಅಡಿಕೆ ಎಲೆಚುಕ್ಕಿ ಶಿಲೀಂಧ್ರ ರೋಗ.

ತಕ್ಷಣಕ್ಕೆ ಋತುಮಾನ ಗಳು ಸರಿಹೊಂದಲ್ಲ. ಹಾಗಾಗಿ ನೇರವಾಗಿ ಅಡಿಕೆ ಉತ್ಪತ್ತಿ ಯನ್ನೇ ನಂಬಿಕೊಂಡ‌ ಅಡಿಕೆ ಬೆಳೆಗಾರರು ಈ ವರ್ಷದ ಎಪ್ಪತ್ತು ಪರ್ಸೆಂಟ್ ಅಡಿಕೆ ಉತ್ಪತ್ತಿ ಇಲ್ಲ ಎನ್ನುವ ವಾಸ್ತವ ಘಟನೆ ಯನ್ನು ಭವಿಷ್ಯಕ್ಕೂ ಮುಂದುವರಿತದೆ ಎನ್ನುವ ಪ್ರಜ್ಞೆ ಮೂಡಿಸಿಕೊಂಡರೆ ಅತ್ಯುತ್ತಮ. ವಾತಾವರಣ ಸರಿಯಾಗಿ ಎಲೆಚುಕ್ಕಿ ಶಿಲೀಂಧ್ರ ಒಂದು ಹಂತಕ್ಕೆ ನಿಯಂತ್ರಣ ಕ್ಕೆ ಬರುವ ಹೊತ್ತಿಗೆ ಮಲೆನಾಡು ಕರಾವಳಿಯ ಅಡಿಕೆ ಕೃಷಿ ಬದುಕಿಗೊಂದು ತಿರುವು ಬಂದಾಗಿರುತ್ತದೆ.

ಮಾನ್ಯ ಅಡಿಕೆ ಕೃಷಿಕ ಬಂಧುಗಳೇ… ನನ್ನ ಊಹೆ ಅಥವಾ ಅನಿಸಿಕೆ ಸುಳ್ಳಾಗಲಿ ಎಂದು ಆಶಿಸುತ್ತಿದ್ದೇನೆ. ಏಕೆಂದರೆ ನಾನೂ ಕೂಡ ಚಿಕ್ಕ ಅಡಿಕೆ ಬೆಳೆಗಾರ. ಈ ಎಲೆಚುಕ್ಕಿ ಶಿಲೀಂಧ್ರ ರೋಗ ಬಾಧೆಯಿಂದಾದ ಈ ಎಪ್ಪತ್ತು ಪರ್ಸೆಂಟ್ ಉತ್ಪತ್ತಿ ಕಡಿಮೆ ನಷ್ಟ ದ ಸಮಸ್ಯೆ ಗೆ ಸರ್ಕಾರಗಳು, ರಾಜಕೀಯ ಪಕ್ಷಗಳು ಯಾರೂ ಪರಿಹಾರ ಕೊಡೋಲ್ಲ. ನಾವು ಅಡಿಕೆ ಬೆಳೆಗಾರರು ಯಾರೋ ನಮ್ಮ ಜೊತೆಗೆ ಇದ್ದಾರೆ ಎನ್ನುವ ಬ್ರಮೆಯಿಂದ ಹೊರಬರಬೇಕು. ಅಡಿಕೆ ಬೆಳೆಗೊಂದಷ್ಟು ಪೌಷ್ಟಿಕಾಂಶ ದ ಗೊಬ್ಬರ ನೀಡಿ. ಯಾರೋ ಕಂಪನಿಯವರು ನಮ್ಮ ಉತ್ಪನ್ನ ಬಳಸಿ ಎಲೆಚುಕ್ಕಿ ರೋಗ ವಾಸಿಯಾಗುತ್ತದೆ ಅಂತ  ಅವರ ಔಷಧ ಗೊಬ್ಬರ ಬಳಸಬೇಡಿ.  ಇದೂವರೆಗೂ ಎಲೆಚುಕ್ಕಿ ಶಿಲೀಂಧ್ರ ಬಾಧೆ ಸಂಪೂರ್ಣ ನಿವಾರಣೆ  ಯಾಗುವ ಔಷಧ ಬಂದಿಲ್ಲ. ಈ ವಿಚಾರ ಜ್ಞಾಪಕ ದಲ್ಲಿರಲಿ ಬಂಧುಗಳೇ...

ಮಲೆನಾಡು ಕರಾವಳಿಯ ಅಡಿಕೆ ಬೆಳೆಗಾರರಲ್ಲಿ ಮುಕ್ಕಾಲು ಪಾಲು ಅಡಿಕೆ ಬೆಳೆಗಾರರಿಗೆ ಅಡಿಕೆ ಬೆಳೆ "ಬರಡೆಮ್ಮೆ ಹಾಲು" ಕೊಟ್ಟಷ್ಟು ದಿನ ಕರೆದುಕೊಂಡ ಹಾಗೆ ಅಡಿಕೆ ಉತ್ಪತ್ತಿ ಬಂದಷ್ಟು ದಿನ ಕೊಯ್ದು ಮಾರಾಟ ಮಾಡುವುದು. ಏಕೆಂದರೆ ಬಹುತೇಕ ಅಡಿಕೆ ಬೆಳೆಗಾರರ ಮನೆಯಲ್ಲಿ ಅಡಿಕೆ ಕೃಷಿ ಮುಂದುವರಿಸಿ ಕೊಂಡು ಹೋಗುವ ಮುಂದಿನ ಪೀಳಿಗೆ ಇಲ್ಲ. ಹೊರಗೆ ದುಡಿಯುತ್ತಿರುವ ಅವರ ಮಕ್ಕಳಿಗೆ  ಅಡಿಕೆ ಉತ್ಪತ್ತಿ ಮುಖ್ಯ ಅಲ್ಲ...!! ಹಾಗಾಗಿ ತೀರಾ ಕಡಿಮೆ ಪ್ರಮಾಣದಲ್ಲಿ ಕರಾವಳಿ ಮಲೆನಾಡಿನಲ್ಲಿ ನೇರವಾಗಿ ಅಡಿಕೆ ಕೃಷಿಯನ್ನೇ  ನೆಚ್ಚಿಕೊಂಡ ಅಡಿಕೆ ಬೆಳೆಗಾರರಿರುವುದು. ಇಂತಹ ಅಡಿಕೆ ಬೆಳೆಗಾರರು ನಮ್ಮ ಜೊತೆಗೆ ಯಾರೂ ಇಲ್ಲ.  ಇದನ್ನು ಹೆಚ್ಚು ನಂಬಿ ಬಾರ ಹಾಕಿ ಜೀವನ ಮುಂದುವರಿಸಿಕೊಂಡು ಹೋಗುವುದು ತೀರಾ ಅಪಾಯಕಾರಿ.

ಜಾಗೋ ಅಡಿಕೆ ಬೆಳೆಗಾರ ಜಾಗೋ.... ಇದು "ಅಂತ್ಯ ಅಲ್ಲ ಆರಂಭ"... ಅಷ್ಟೇ…!

(ಮುಗಿಯಿತು)

-ಪ್ರಬಂಧ ಅಂಬುತೀರ್ಥ

ಚಿತ್ರ ಕೃಪೆ: ಇಂಟರ್ನೆಟ್ ತಾಣ