ಪರ ಊರಿನವನು

“ವೈಚಿತ್ರ್ಯಗಳಿಂದ ಕೂಡಿದ ಬದುಕೇ ಒಂದು ಬವಣೆಯ ಯಾತ್ರಾ-ಅಯನದಂತೆ! ಅಲಿಯುವುದು, ಅರಸುವುದು, ತೊಳತೊಳಲಿ ನೆಲೆಗಾಣದೇ ಅಂತಿಮ ಅಳಿದು ಹೋಗುವುದು. ಪ್ರಾಯಶಃ ಇದುವೇ ಜೀವನಕ್ರಮವೇ! ಅಥವಾ ಜೀವಿತಾವಧಿಗೆ ಹಿಡಿದ ಕೈಗನ್ನಡಿಯ ಮಾದರಿಯೇ? ಅರ್ಥವಾಗದ ನಿರೀಕ್ಷಣವಿದು. ಕೇಳಲು ತಾತ್ವಿಕ ವಿಷಯ ವಾದರೂ; ಯಾಂತ್ರಿಕ ಗುಣಧರ್ಮದಲ್ಲಿನ ಮನುಷ್ಯ-ಪಾತ್ರವು ಕೇವಲ ತೃಣು-ಅಣು- ಕಣವಾಗಿಯೇ ಇರಿಸಿ, ನಶಿಸಿ ಅಸುನೀಗಿಸುವುದು. ಇದು ಪ್ರಾಕೃತಿಕ-ವಿಕಲ್ಪವಲ್ಲದಿದ್ದರೂ ಸುಕೃತದೊಳಗಿನ ಸೂಕ್ಷ್ಮ ಸಂವೇದನೆಯ ವೈರುಧ್ಯವೂ ಹೌದು! ಇಂಥ ನಿಂತ ನೆಲವೇ ಅವಿರತ ಅಸ್ತಿತ್ವದ ಬುನಾದಿಯನ್ನರಿಸಿರುವಾಗ; ಅಸ್ಮಿತೆಯ ಪ್ರಶ್ನೆ ಧುತ್ತೆಂದು ಮೆದುಳನ್ನೇರಿ ಅನ್ಯವಿಚಾರಗಳಿಗೆ ವಲಸೆಯಾಗುವುದು ಸಜಿಕವೇ. ಇದೀಗ ಈ ಹೊತ್ತಗೆಯ ಯದು-ಮಧುವಿನ "ಪರೂರ" ವ್ಯಥೆಯೂ ಇದನ್ನೇ ಯಾನಿಸುವಂತೆ..
ಹೌದು! ಅರಸುತ್ತ ಅರಸುತ್ತ ಅನ್ವೇಷಣ ಪಥದಲ್ಲಿ ಸಾಗುತ್ತ "ಪರ ಊರಿನವನು" ಎನುತಲೇ 'ಶ್ರೀ. ಕೆ.ಎನ್. ಸುಬ್ರಹ್ಮಣ್ಯ' ಅವರು ಗಾಢವಾಗಿ, ಅಷ್ಟೇ ಅಗಾಧಾ'ದ್ಯವಾಗಿ ತಂತ್ರಜ್ಞಾನದ ಆಗರ ಬೇಗೆಯಲಿ ಬೆಂದು-ಬಳಲಿ ಪರಮಾತ್ಮವಾಗಿ ಈ ಕಾದಂಬರಿಯನ್ನು ರಚಿಸಿದ್ದಾರೆ! ಇದು ಅವರ ಸ್ವ-ನುಭೂತಿಯ ಕಥೆಯಾದರೂ ವ್ಯತಿರಿಕ್ತ ಭಾವಗಳಿಗೆ ಭಿನ್ನ-ಹಂದರವೇ ಆಗಿದೆ. ಅಂತೇ; ಸಂಬಂಧಗಳ ನಂಟು ಎಷ್ಟೇ ಸಮತತ್ವದಲ್ಲಿದ್ದರೂ ಅಷ್ಟೇ ವಿಚ್ಚಿನ್ನ-ಭಾವವೂ ವ್ಯಕ್ತವಾಗುವಂತೆ! ಅರ್ಥಾತ್, ಓರ್ವನ ಸಾಧನೆ-ಆರ್ಥಿಕತೆ-ಛಲ-ಕನಸು-ಜ್ಞಾನ- ಪರಿಶ್ರಮ-ನಿಷ್ಠೆ-ತ್ಯಾಗ-ಪ್ರೀತಿ ಎಲ್ಲವೂ ವಿಫಲತೆಗೆ ಎಡೆಯಾದಾಗ ಹತಾಶೆಯ ಗೂಡೊಂದು ತೆರೆದುಕೊಳ್ಳುವಂತೆ!! ಆಗಲ್ಲಿ ಚಿಲಿಪಿಲಿಗಳ ಕಲರವವಿರುವುದಿಲ್ಲ. "ಮನೋ-ತಾಂತ್ರಿಕ- ದೋಷವೇ" ಎಂಬಂತೆ ಜೀವಿಗಳೂ ನಾಮಾವಶೇಷವಾಗುತ್ತವೆ. "ವಲಸೆ ಬಂದ ಹಕ್ಕಿಗಳಿಗೆಲ್ಲಿ ಜಾಗೆ" ಅಂಬಂತೆ? ಇನ್ನೂ ಹುಲುಮಾನವ?! ಆದಾಗ್ಯೂ; ಲೇಖಕರರು ಎಲ್ಲಿಯೂ, ಏನನ್ನೂ ಬಿಟ್ಟುಕೊಡದೇ, ಅಪೂರ್ಣಗೊಳಿಸದೇ, ಅಲೆಮಾರಿಯಾಗಿಸದೇ ಒಟ್ಟೂ-ವಲಯದ ಪ್ರಾಕರಿಯನ್ನು ಕಾದಂಬರಿಯಲ್ಲಿ ಬೆಸೆದು; ಸಾರದಂತೆ, ನೋವಲ್ಲದ್ದಿದ ಕುಂಚದಂತೆ ಭಾವನಾತ್ಮಕವಾಗಿ "ಪರೂರ-ಗಾಥೆಯನ್ನು" ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಅಷ್ಟೇ ಸುಂದರ ಸಚಿತ್ರಿಸಿದ್ದಾರೆ…” ಎಂದು ‘ಪರ ಊರಿನವನು’ ಎನ್ನುವ ಕಾದಂಬರಿಯ ಬಗ್ಗೆ ಬೆನ್ನುಡಿಯನ್ನು ಬರೆದಿದ್ದಾರೆ ನಟ-ಚಿಂತಕರಾದ ಪ್ರವೀಣ ರಬಕವಿ.
ಈ ೧೪೪ ಪುಟಗಳ ಪುಟ್ಟ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ನಾಗೇಂದ್ರ ಎಫ್ ಹೊನ್ನಳ್ಳಿ. ಇವರು ತಮ್ಮ ಮುನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ…” ಶ್ರೀ ಕೆ. ಎನ್. ಸುಬ್ರಮಣ್ಯ, ಕಿರಿಯ ತರಬೇತಿ ಅಧಿಕಾರಿ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಹಾರೋಹಳ್ಳಿ ಇವರು ಬರೆದ ಸಾಮಾಜಿಕ ಕಾದಂಬರಿ 'ಪರ ಊರಿನವನು; ಇಂದಿನ ಯುವ ಜನಾಂಗದ ವೃತ್ತಿ ಬದುಕಿನ ಹಲವಾರು ಬವಣೆ ಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿನ ಪ್ರಸ್ತುತಪಡಿಸಿರುವ ವಾಸ್ತವ ಬದುಕಿನ ಪರಿಕಲ್ಪನೆಗಳ ಒಂದು ಸುಂದರ ಪಕ್ಷಿನೋಟ. ಇಂದು ಬಹಳಷ್ಟು ಗ್ರಾಮೀಣ ಭಾಗದ ಯುವಕರು ಉದ್ಯೋಗ ಬಯಸಿ ನಗರ ಪ್ರದೇಶಗಳಿಗೆ ಬರುವುದನ್ನು ಕಾಣಲಾಗುತ್ತಿದೆ. ಬದುಕಿನ ಸವಾಲುಗಳಿಗೆ ನಗರ ಪ್ರದೇಶಗಳಲ್ಲಿ ದೊರಕುವ ವಿಪುಲ ಉದ್ಯೋಗ ಅವಕಾಶಗಳೇ ಅಂತಿಮ ಅನ್ನುವ ಮನೋಭಾವನೆ ಬಹಳಷ್ಟು ಗಟ್ಟಿಯಾಗಿ ಬೇರೂರಿರುವ ಇಂದಿನ ದಿನಮಾನಗಳಲ್ಲಿ ಎಲ್ಲಿಯೂ ಬದುಕು ಸುಲಭ ಅಲ್ಲಾ ಅನ್ನುವ ವಾಸ್ತವ ಅರಿವಾಗುವಷ್ಟರಲ್ಲಿ ಬದುಕಿನ ಬಹುಭಾಗ ಮುಗಿಯುವುದೇ ವಿಪರ್ಯಾಸದ ಸಂಗತಿಯೆಂಬುದನ್ನು ಇಲ್ಲಿ ಕಾಣಬಹುದಾಗಿದೆ. ಈ ಕಥಾವಸ್ತುವನ್ನು ಆಧಾರವಾಗಿಟ್ಟುಕೊಂಡು ಹೆಣೆದಿರುವ ಈ ಅಕ್ಷರಮಾಲೆಯೇ 'ಪರ ಊರಿನವನು' ಕಾದಂಬರಿ.
ಗ್ರಾಮೀಣ ಭಾಗದ ಒಂದು ಬಡ ಕುಟುಂಬದ ಬವಣೆಯನ್ನು ಈ ಸಾಮಾಜಿಕ ಕಾದಂಬರಿಯಲ್ಲಿ ಅತ್ಯಂತ ಮಾರ್ಮಿಕವಾಗಿ ಓದುಗರ ಮನ ಮುಟ್ಟುವಂತೆ ವಿವರಿಸಿದ್ದಾರೆ. ಜೀವನದಲ್ಲಿ ಪಡುವ ಆಸೆ ಮತ್ತು ಮಾಡುವ ಆಯ್ಕೆಗಳು ಹೇಗೆ ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸಬಲ್ಲದು ಎಂಬುದನ್ನು ಮನವರಿಕೆ ಮಾಡಿಕೊಡುವುದರ ಮುಖಾಂತರ ಇಂದಿನ ದಿನಮಾನದಲ್ಲಿ ವೃತ್ತಿ ಕೌಶಲ್ಯ ಮತ್ತು ವೃತ್ತಿ ಕೌಶಲ್ಯವನ್ನು ನೀಡುತ್ತಿರುವ ಐ.ಟಿ.ಐ.ಗಳ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವ ಮೊಟ್ಟ ಮೊದಲ ಪ್ರಯೋಗ ಇದಾಗಿದೆ ಎಂದರೆ ಅತಿಶಯೋಕ್ತಿ ಯಾಗಲಾರದು. ಬಡ ಕುಟುಂಬದ ಶ್ರೀ ರಂಗಪ ಎಂಬ ಒಬ್ಬ ಗಾರೆ ಕೆಲಸದವನ ಇಬ್ಬರು ಗಂಡು ಮಕ್ಕಳಾದ 'ಯದು' ಮತ್ತು 'ಮಧು' ಇವರುಗಳ ಜೀವನ ಸಾಗಿ ಬಂದ ರೀತಿ, ಅವರ ಬದುಕಿನ ಆಯ್ಕೆಗಳು, ಮಾಡಿದ ಹೋರಾಟಗಳು, ಸಮಾಜದಲ್ಲಿ ಕೆಲವರು ನೀಡಿದ ಬೆಂಬಲ ಮತ್ತು ಇನ್ನು ಕೆಲವರು ಮಾಡಿದ ಹೊಟ್ಟೆಕಿಚ್ಚಿನ/ಕುತಂತ್ರದ ಯೋಜನೆಗಳು, ಕೌಟುಂಬಿಕ ಬಾಂಧವ್ಯಗಳ ಮಹತ್ವ ಮತ್ತು ಅಂತಿಮವಾಗಿ ಬದುಕಿನಲ್ಲಾಗುವ ಸೋಲಿನ ಕಹಿ ಅನುಭವಗಳು ಎಲ್ಲರನ್ನೂ ಒಂದು ಕ್ಷಣ ಗಂಭೀರವಾಗಿ ಯೋಚಿಸುವಂತೆ ಮಾಡುತ್ತವೆ. ಈ ಕಾದಂಬರಿಯಲ್ಲಿನ ಸನ್ನಿವೇಶಗಳು ಮತ್ತು ಪಾತ್ರಗಳು ಸಾಮಾಜಿಕ ಬದುಕಿನ ಎಲ್ಲ ದೃಷ್ಟಿಕೋನಗಳನ್ನು ಸಂದರ್ಭಕ್ಕೆ ತಕ್ಕಂತೆ ವ್ಯಕ್ತಪಡಿಸಿವೆ. 'ಯದು' ಪರ ಊರಿನವನಾಗದೇ ತನ್ನ ಸ್ವಂತ ಊರಲ್ಲೇ ಉಳಿದು ವರ್ಕ್ ಶಾಪ್ ಕೆಲಸಗಾರನಾಗಿ ಪ್ರಿಯಸುತನ ಮಾರ್ಗದರ್ಶನದಲ್ಲಿ ವೃತ್ತಿ ಆರಂಭಿಸಿ, ನಂತರ ತಾನೇ ಸ್ವಂತ ವರ್ಕ್ ಶಾಪ್ ಸ್ಥಾಪಿಸಿ ಸಾಕಷ್ಟು ನೋವು/ಸೋಲು ಕಾಣುವ ಪ್ರಸಂಗಗಳು ಮತ್ತು ಐ.ಟಿ.ಐ ಮಾಡಿದ್ದರೆ ತನ್ನ ಬದುಕು ಚೆನ್ನಾಗಿ ಇರುತ್ತಿತ್ತೇನೋ ಅನ್ನುವ ಹತಾಶೆಯ ದುಃಸ್ಥಿತಿಯಾದರೆ, ಇನ್ನೊಂದು ಕಡೆ ಆತನ ತಮ್ಮ 'ಮಧು' ಐ.ಟಿ.ಐಗಳಲ್ಲಿ ವೃತ್ತಿ ಕೌಶಲ್ಯ ಶಿಕ್ಷಣವನ್ನು ಪಡೆದುಕೊಂಡು ನಗರ ಪ್ರದೇಶದಲ್ಲಿ ಒಂದು ಸುಂದರವಾದ ಮತ್ತು ಉತ್ತಮವಾದ ಜೀವನವನ್ನು ರೂಪಿಸಿಕೊಂಡು ಸಂತೃಪ್ತಿಯೊಂದಿಗೆ ಬಾಳುವ ಪರಿಯನ್ನು ಅತ್ಯಂತ ಸುಂದರವಾಗಿ ವಿವರಿಸಲಾಗಿದೆ. ಈ ಮಧ್ಯೆ. ಸಮಾಜದಲ್ಲಿ ಕಾಣಸಿಗುವ ಸ್ವಾರ್ಥಿಗಳ ಕುತಂತ್ರಗಳು ಯದುವನ್ನು ಏಳಿಗೆ ಆಗಲು ಬಿಡದೇ ಇರುವುದು ಇಂದಿನ ಸಮಾಜದ ದುಃಸ್ಥಿತಿಯನ್ನು/ಪ್ರಸ್ತುತಿಯನ್ನು ಮಾರ್ಮಿಕವಾಗಿ ಪರಿಚಯಿಸಿದೆ.”