ಪಲಾಯನ ಮತ್ತು ಇತರ ಕಥೆಗಳು

ಪಲಾಯನ ಮತ್ತು ಇತರ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಶಾರದಾ ಮೂರ್ತಿ
ಪ್ರಕಾಶಕರು
ಸಾಹಿತ್ಯ ಲೋಕ ಪಬ್ಲಿಕೇಷನ್ಸ್, ರಾಜಾಜಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. 125.00, ಮುದ್ರಣ: 2022

ಶಾರದಾ ಮೂರ್ತಿ ಇವರು ಬರೆದ ಸಣ್ಣ ಕಥೆಗಳ ಸಂಗ್ರಹವೇ ‘ಪಲಾಯನ ಮತ್ತು ಇತರ ಕಥೆಗಳು' ಕೃತಿ. ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಶಾರದಾ ಮೂರ್ತಿ ಅವರ ಕೃತಿಯ ಕುರಿತು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ...

ಶಾರದಾ ಮೂರ್ತಿಯವರ ಪಲಾಯನ ಕಥಾ ಸಂಕಲನ ಆಶಾಡದ ತುಂತುರು ಮಳೆಯ ತಂಪಿನೊಂದಿಗೆ ಲೋಕಾರ್ಪಣೆಯಾಯಿತು. ಕಥೆಗಳನ್ನು ಓದಿದಾಗ ಶಾರದ ಅವರಲ್ಲಿದ್ದ ಲೇಖಕಿ ಪ್ರಬುಧ್ಧಳಾಗಿದ್ದಾಳೆ. ಇಂತಹ ಅನೇಖ ಸಂಕಲನಗಳು ಅವರಿಂದ ಹೊರಬಂದು ಜನ ಮನ್ನಣೆ ಗಳಿಸುವುದೆಂದು ಅವರ ಮೊದಲ ಕಥೆಯ ಶೀರ್ಷಿಕೆ 'ನಂಬಿಕೆ' ನನ್ನ ನಂಬಿಕೆಯನ್ನು ಗಟ್ಟೆಮಾಡಿತು.

ಒಂದೊಂದು ಕಥೆಗಳೂ ಭಿನ್ನವಾಗಿದ್ದು ಆಸಕ್ತಿಯಿಂದ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಶಾರದಾ ಮೂರ್ತಿಯವರಿಗೆ ಸಣ್ಣಕಥೆಗಳಲ್ಲಿ ಎಲ್ಲವನ್ನೂ ನಿರೂಪಿಸುವ ಕಲೆ ಒಲಿದಿದೆ. ಮುಗ್ದ ಹೆಣ್ಣೊಬ್ಬಳು ಅಣ್ಣನಿಂದ ಮೋಸಹೋಗಿ ಸ್ವಂತ ಮಗನನ್ನೂ ನಂಬದ ಮಟ್ಟಕ್ಕೆ ಹೋಗುವ ಕಥೆ ನಂಬಿಕೆ. ಕೆಲವೊಮ್ಮೆ ಬೀಳುವ ಏಟು ಎಲ್ಲರಲ್ಲೂ ನಂಬಿಕೆಯನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುವ ಸಹಜ ಚಿತ್ರಣ. 'ತಪ್ಪಿಲ್ಲ' ಕಥೆಯಲ್ಲಿ ಅಕ್ಕ ತಂಗಿಯರ ಬದುಕು... ಅಕ್ಕ ಶೋಷಣೆಗೆ ಒಳಗಾಗಿ ಅದರ ವಿರುದ್ದ ನಿಂತು ತನ್ನ ಜೀವನವನ್ನು ರೂಪಿಸಿಕೊಂಡರೆ, ಇನ್ನೊಬ್ಬಳು ಬಂದ ಕಷ್ಟವನ್ನು ಅನುಭವಿಸುವ ಕಥೆ .

'ಅನಾಥರು ಯಾರು?': ನನ್ನವರು ಯಾರೂ ಇಲ್ಲವೆಂಬ ನೋವಿನಿಂದ ಮನಸ್ಥೈರ್ಯವನ್ನು ಕಳೆದುಕೊಳ್ಳದೆ ವಯೋವೃದ್ದ ದಂಪತಿಗಳಿಗೆ ಆಶ್ರಯ ಕೊಟ್ಟ ಕಥೆ ನಿಜಕ್ಕೂ ಆದರ್ಶವಾಗಿದೆ. ಇನ್ನು ಜಾತಿಪದ್ದತಿಯಿಂದ ಒಂದಿಂಚೂ ಹಿಂದೆ ಸರಿಯದ ಹಿರಿಯರಿಂದ ಮುಗ್ದ ಹೆಣ್ಣಿನ ಬಾಳು ಹಾಳಾಗುವ ಮನ ಕರಗುವ ಕಥೆ 'ಯಾರ ತಪ್ಪು'. ಅಪ್ಪನ ಹಳ್ಳಿಯ ಜೀವನ ಮಗನಿಗೆ ಬೇಡವಾದರೆ ಮೊಮ್ಮಗ ಅದಕ್ಕೇ ಮರುಳುವ ಕಥೆ 'ಬೇರು'. ಕಾರಂತರ ಮರಳಿ ಮಣ್ಣಿಗೆಯ ನೆನಪನ್ನು ಮರುಕಳಿಸುತ್ತದೆ. ಇನ್ನು 'ಅಮ್ಮ' ತಾಯಿಯ ವಾತ್ಸಲ್ಯವನ್ನು ಪ್ರತಿಬಿಂಬಿಸಿದರೆ, ಮನುಷ್ಯನ ವಿಭಿನ್ನ ವ್ಯಕ್ತಿತ್ವವನ್ನು ಎತ್ತಿ ತೋರಿಸಿ ಪ್ರಪಂಚ ವೆಂದರೆ ಒಳ್ಳೆಯ, ಕೆಟ್ಟ ಜನರೂ ಇರುವುದನ್ನು ಶಾರದ ತಮ್ಮ ಬರಹದಲ್ಲಿ ನಿರೂಪಿಸಿದ್ದಾರೆ. 'ಚೌಕುಳಿ ಸೀರೆ. ಮುಗ್ದ ಹೆಣ್ಣೊಬ್ಬಳು ಒಂದು ಚೌಕುಳಿ ಸೀರೆಯಿಂದ ಜೀವಕಳೆದುಕೊಂಡರೆ, ತನ್ನ ವ್ಯಕಿತ್ವಕ್ಕೆ ಬೆಲೆಯೇ ಕೊಡದ ಗಂಡನಿಗೆ ಬುದ್ದಿ ಕಲಿಸಿ ತನ್ನ ಅವಶ್ಯಕತೆ ಎಷ್ಟಿದೆಯೆಂದು ತೋರಿಸುವ ಜಾಣೆ ಹೆಣ್ಣುಮಗಳು ಕವಿತಳ ಕಥೆ 'ಭರವಸೆ'.

'ಪಲಾಯನ' ಕಥೆಯಲ್ಲಿ ಬೇಜವಾಬ್ದಾರಿಯ ಗಂಡ ತನ್ನ ದರ್ಪದಿಂದಲೇ ಹೆಂಡತಿಯನ್ನು ಆಳುವ ಅವನು, ತಾನಿಲ್ಲದಿದ್ದರೆ ಅವರು ಬಾಳಲಾರರೆಂದು ಮನೆಯಿಂದ ಪಲಾಯನಗೈಯುವ ಹೇಡಿ. ಮರಳಿ ಬಂದಾಗ ಬದಲಾದ ಹೆಂಡತಿ, ಜೊತೆಯಾದ ಮಗಳಿಂದ ಮನೆಯಲ್ಲಿರಲಾಗದೆ ಹೋಗುತ್ತಾನೆ. ಅದರಿಂದ ಪಶ್ಚಾತ್ತಾಪವಾದರೂ ಮತ್ತೆ ಹಳೆಯ ಬದುಕನ್ನು ಒಪ್ಪಿಕೊಳ್ಳದ ಅಮ್ಮ ಮಗಳು ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾರೆ. ಉಳಿದ ಕಥೆಗಳೂ ಒಂದಲ್ಲೊಂದು ರೀತಿಯಲ್ಲಿ ದಿನ ನಿತ್ಯದಲ್ಲಿ ನಡೆಯುವ ಬದುಕಿನ ಪ್ರತಿಬಿಂಬವಾಗಿ ಎಲ್ಲಿಯೂ ಹೇಡಿತನವಿಲ್ಲದೆ ಬಾಳ್ವೆ ಮಾಡುವ ಮಾರ್ಗ ಹೇಗೆಂಬುದಕ್ಕೆ ಸಾಕ್ಷಿಯಾಗಿದ್ದಾರೆ. ಒಟ್ಟಿನಲ್ಲಿ ಶಾರದಾ ಮೂರ್ತಿಯವರು ಒಂದೊಳ್ಳೆ ಕಥಾ ಸಂಕಲನವನ್ನು ಓದುಗರಿಗೆ ಕೊಟ್ಟಿದ್ದಾರೆ.

- ಸಿರಿ ಮೂರ್ತಿ ಕಾಸರವಳ್ಳಿ