ಪಶುವೈದ್ಯ ಸಮಾಲೋಕನ

ಪಶುವೈದ್ಯ ಸಮಾಲೋಕನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಅನಿಲಕುಮಾರ ಮುಗಳಿ
ಪ್ರಕಾಶಕರು
ಅನಿತಾ ಪ್ರಕಾಶನ, ಕುಸುಮನಗರ, ಧಾರವಾಡ-೫೮೦೦೦೮
ಪುಸ್ತಕದ ಬೆಲೆ
ರೂ.೮.೦೦, ಮುದ್ರಣ: ಫೆಬ್ರವರಿ ೨೦೦೩

ದನಗಳ ಪಾಲನೆ, ರೋಗಗಳು, ಮುಂಜಾಗ್ರತೆ ಹಾಗೂ ಪ್ರಾಥಮಿಕ ಚಿಕಿತ್ಸೆ ಕುರಿತು ಜನಪ್ರಿಯ ಪಶುವೈದ್ಯಕೀಯ ಲೇಖನಗಳ ಸಂಗ್ರಹವೇ ‘ಪಶುವೈದ್ಯ ಸಮಾಲೋಕನ' ಎಂಬ ಪುಸ್ತಕ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಪಶು ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಕೆ ಆರ್ ಲಕ್ಷ್ಮಯ್ಯ ಇವರು ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ "ಪಶುವೈದ್ಯಕೀಯ ಅತ್ಯಂತ ಪವಿತ್ರ ವೃತ್ತಿ. ಮೂಕ ಪ್ರಾಣಿಗಳ ವೇದನೆ ಪರಿಹರಿಸುವಲ್ಲಿ ಮತ್ತು ಬಡ ಪಶುಪಾಲಕನ ಶ್ರೇಯೋಭಿವೃದ್ಧಿಯಲ್ಲಿ ಪಶುವೈದ್ಯ ವಿಜ್ಞಾನ ವಿಶೇಷ ಪಾತ್ರ ವಹಿಸುತ್ತದೆ. ಪಶುಪಾಲನೆ, ಹೈನುಗಾರಿಕೆ, ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ, ತರಬೇತಿ ಪಡೆಯುವವರಿಗೆ, ವೃತ್ತಿನಿರತರಿಗೆ ಉಪಯುಕ್ತವಾದ ಮಾಹಿತಿ ಈ ಪುಸ್ತಕದಲ್ಲಿ ಹೇರಳವಾಗಿ ದೊರೆಯುತ್ತದೆ. ವಿಸ್ತರಣಾ ಮಾರ್ಗದರ್ಶಿಗಳಿಗೂ 'ಕೈಪಿಡಿ' ಎನಿಸಬಲ್ಲದು. 

ಪಶುಗಳ ಆರೋಗ್ಯ, ಪಾಲನೆ, ಆರೈಕೆ, ಚಿಕಿತ್ಸೆ ಕುರಿತು ಹೇಳುವಾಗ ಮುಂಜಾಗರೂಕತಾ ಕ್ರಮಗಳ ಕಡೆ ಹೆಚ್ಚು ಒತ್ತು ನೀಡಿರುವುದು ಒಂದು ವಿಶೇಷ. ಪಶುವೈದ್ಯ ಕುರಿತು ಜನಜಾಗೃತಿ ಹಾಗೂ ಜ್ಞಾನ ಪ್ರಸಾರಗೊಳಿಸುವಲ್ಲಿ ವಸ್ತುನಿಷ್ಟತೆಯಿಂದಾಗಿ ಪುಸ್ತಕ ತನ್ನ ಗುರಿ ತಲುಪುತ್ತದೆ. ಲೇಖನಗಳಲ್ಲಿ ವಿಷಯ ನಿರೂಪಣೆ ಚೆನ್ನಾಗಿದೆ. ಶೀರ್ಷಿಕೆಗಳಂತೂ ಥಟ್ಟನೇ ಲಕ್ಷ್ಯ ಸೆಳೆಯುತ್ತವೆ. ಪಶುಪಾಲನೆ, ಚಿಕಿತ್ಸಾ ಪದ್ಧತಿ ಅಥವಾ ಔಷಧಿ ವಿವರಣೆ ಕುರಿತು ಸಂಪೂರ್ಣ ಮಾಹಿತಿ ಈ ಪುಸ್ತಕದಲ್ಲಿ ಇಲ್ಲ. ಪ್ರಕಟಿತ ಲೇಖನಗಳ ಸಂಗ್ರಹವಾದ್ದರಿಂದ ಈ ಕೊರತೆ ಕಾಣುತ್ತಿದೆ." ಎಂದಿದ್ದಾರೆ.

ಲೇಖಕರಾದ ಡಾ. ಅನಿಲ ಕುಮಾರ ಮುಗಳಿ ಇವರು ತಮ್ಮನ್ನು ಈ ಪುಸ್ತಕವನ್ನು ಹೊರತರುವಲ್ಲಿ ಬೆಂಬಲಿಸಿದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಪುಸ್ತಕದಲ್ಲಿರುವ ಅಧ್ಯಾಯಗಳು ಈ ಹಿಂದೆಯೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಇದರಲ್ಲಿ ಮೂರು ಪ್ರಮುಖ ಅಧ್ಯಾಯಗಳಿವೆ. ಋತುಮಾನದ ವಿಶೇಷಗಳು, ಪಶುಪಾಲನೆ ಮತ್ತು ಪಶು ವೈದ್ಯಕೀಯದಲ್ಲಿ ಗಮನಿಸಬೇಕಾದ ಅಂಶಗಳು, ಮರೆಯಬಾರದ ಅಂಶಗಳು. ಋತುಮಾನದ ವಿಶೇಷಗಳಲ್ಲಿ ಬೇಸಿಗೆ, ಮಳೆ, ಚಳಿಗಾಲದಲ್ಲಿ ಪಶುಗಳಿಗೆ ತಗಲುವ ರೋಗಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಪಶುಪಾಲನೆಯಲ್ಲಿ ದನಗಳ ಮೈ ಕಪ್ಪಾಗುವುದೇಕೆ, ಕುಂದು ರೋಗ, ಉಣ್ಣೆ ಬಾಧೆ, ಕಾಮಾಲೆ, ರಕ್ತ ಹೀನತೆ, ಕೆಚ್ಚಲು ಬೇನೆ ಹೀಗೆ ಹಲವು ವಿಷಯಗಳ ಬಗ್ಗೆ ಮಾಹಿತಿಗಳಿವೆ. ಕೊನೆಯ ಅಧ್ಯಾಯದಲ್ಲಿ ದನಗಳ ಪೋಸ್ಟ್ ಮಾರ್ಟಂ ಅವಶ್ಯಕ ಏಕೆ?, ಸೂಕ್ತ ಅಂತ್ಯಸಂಸ್ಕಾರ, ಕೊಟ್ಟಿಗೆಯಲ್ಲಿ ರಸಗೊಬ್ಬರದಿಂದ ಗಂಡಾಂತರ, ಹಾಯುವ ಒದೆಯುವ ಪಶುಗಳು ಮೊದಲಾದ ಉಪಯುಕ್ತ ಮಾಹಿತಿಗಳಿವೆ.

ಪ್ರತಿಯೊಂದು ಲೇಖನಕ್ಕೆ ಸೂಕ್ತ ಛಾಯಾಚಿತ್ರವನ್ನು ನೀಡಿದ್ದಾರೆ. ಪುಸ್ತಕದ ಕೆಲವೆಡೆ ಜಾಹೀರಾತುಗಳಿರುವುದು ಕಿರಿಕಿರಿ ಅನಿಸುತ್ತದೆ. ಉತ್ತಮ ಮಾಹಿತಿಗಳು ತಪ್ಪಿಹೋಗುವುದೋ ಎಂಬ ಭಾವನೆ ಮೂಡುತ್ತದೆ. ಸುಮಾರು ೯೦ ಪುಟಗಳ ಈ ಪುಸ್ತಕವನ್ನು ಲೇಖಕರು ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಕನ್ನಡ ನಾಡಿನ ನೆಚ್ಚಿನ ಪತ್ರಿಕೆಗಳಿಗೆ ಅರ್ಪಿಸಿದ್ದಾರೆ.