ಪಶ್ಚಾತ್ತಾಪ
ಮೊನ್ನೆ ಶಾಲೆ ಮುಗಿಸಿ ಮನೆಗೆ ಬಂದು ಸುಧಾರಿಸಿಕೊಂಡು, ನಂತರ ಕೆಲಸದ ಗಡಿಬಿಡಿಯಲ್ಲಿರುವಾಗ, ಪೋಷಕರೊಬ್ಬರ ಕರೆ ಬಂದಿತು. ಮಾತನಾಡಿದೆ. ಅವರು ಮಾತನಾಡುವ ಮೊದಲು ನನ್ನಲ್ಲಿ ಕ್ಷಮೆ ಕೇಳಿದರು, "ಕ್ಷಮಿಸಿ ಮಾತಾಜಿ, ಪಾಪ ನೀವು ಈಗಷ್ಟೇ ಕೆಲಸ ಮುಗಿಸಿ ಬಂದು ಸುಧಾರಿಸಿಕೊಳ್ಳುವಷ್ಟು ಸಮಯ ಕೊಡದೆ, ನಿಮ್ಮ ಬಳಿ ಮಾತನಾಡಲು ಕರೆ ಮಾಡಿದೆ, ಕಾರಣ ವಿಷಯ ಸ್ವಲ್ಪ ಸೂಕ್ಷ್ಮವಾಗಿದೆ, ಅದಕ್ಕೆ. ದಯವಿಟ್ಟು ತಪ್ಪು ತಿಳಿಯಬೇಡಿ," ಎಂದರು. ಆಗ, "ತೊಂದರೆ ಇಲ್ಲ, ವಿಷಯ ಏನೆಂದು ಹೇಳಿ" ಎಂದೆ. ಆಗ ಅವರು ಹೇಳಿದರು "ಮಾತಾಜಿ ನನ್ನ ಮಗುವಿಗೆ ಶಾಲೆಯಲ್ಲಿ, ಯಾರೋ ತುಂಬಾ ಕೀಟಲೆ ಮಾಡುತ್ತಾರಂತೆ, ಅವಳು ಸುಮ್ಮನಿದ್ದರೂ ಅವಳಿಗೆ ತೊಂದರೆ ಕೊಡುತ್ತಾರಂತೆ, ದಯಮಾಡಿ ವಿಷಯ ಏನೆಂದು ವಿಚಾರಿಸಿ" ಎಂದು ಹೇಳಿದರು. ಆಗ ನಾ ಹೇಳಿದೆ, "ಅದಕ್ಕೆಲ್ಲ ಅಷ್ಟು ತಲೆಕೆಡಿಸಿಕೊಳ್ಳಬೇಡಿ, ಮಕ್ಕಳು ಎಂದ ಮೇಲೆ ಇದೆಲ್ಲ ಸಣ್ಣ ಪುಟ್ಟ ಇದ್ದದ್ದೇ.. ನಾಳೆ ಮಗುವಿನ ಬಳಿ ಕೇಳಿ ವಿಚಾರಿಸುತ್ತೇನೆ, ನೀವು ಆರಾಮಗಿರಿ" ಎಂದು ಹೇಳಿ ಫೋನ್ ಇಟ್ಟೆ.
ಮರುದಿನ ಶಾಲೆಗೆ ಬಂದ ನಂತರ, ಮಧ್ಯಾಹ್ನ ಊಟವಾದ ನಂತರ ಮಗುವನ್ನು ಕರೆದು, ಕೇಳಿದೆ "ಪುಟ್ಟ ನಿನಗೆ ಶಾಲೆಯಲ್ಲಿ ಯಾರಿಂದಲಾದರು ಸಮಸ್ಯೆ ಉಂಟೆ? ಶಾಲೆಗೆ ಬರುವುದಿಲ್ಲ ಎಂದು ಅಳುತ್ತೀಯಂತೆ? ಏಕೆ, ಯಾರು ಏನು ಹೇಳಿದರು, ನನ್ನ ಬಳಿ ಹೇಳು ನಾ ಸರಿ ಮಾಡುತ್ತೇನೆ" ಎಂದೆ.. ಆಗ ಅವಳು ಅಳು ಮುಖ ಮಾಡುತ್ತಾ, ತನಗೆ ಆದ ಸಮಸ್ಯೆಗಳನ್ನು ಹೇಳಿದಳು, ಅವರನ್ನು ಕರೆದು ವಿಚಾರಣೆ ಮಾಡುವಷ್ಟು ಗಂಭೀರ ವಿಚಾರಗಳೇನು ಅಲ್ಲ. ಮಕ್ಕಳ ವಿಚಾರವೇ ಹಾಗಲ್ಲವೇ? ಸಣ್ಣ ಪುಟ್ಟ ವಿಚಾರಗಳೆ ಅವರಿಗೆ ದೊಡ್ಡ ಸಂಗತಿಗಳು. ಅದನ್ನು ಅಲ್ಲೇ ಸಮಾಧಾನಿಸಿ, ಸರಿ ಪುಟ್ಟ ಇದನ್ನು ನೀನು ನನ್ನ ಬಳಿಯೇ ಹೇಳಬಹುದಿತ್ತಲ್ಲ. ಅಮ್ಮನ ಬಳಿ ಹೋಗಿ ಅತ್ತರೆ, ಅಮ್ಮ ಏನು ಮಾಡುತ್ತಾರೆ? ಪಾಪ ಅಲ್ವಾ, ಎಂದು ಹೇಳಿದಾಗ ಅವಳ ಉತ್ತರ ವಿಭಿನ್ನವಾಗಿತ್ತು. ಹಾಗೆ ಆಳವಾಗಿ ಯೋಚಿಸುವಂತದ್ದಾಗಿತ್ತು.. ನನ್ನ ಪ್ರಶ್ನೆಗೆ ಅವಳ ಉತ್ತರ ಹೀಗಿತ್ತು. "ಯಾರ ಬಳಿ ಹೇಳುವುದು ಬೇಡ ಎಂದು ನಾನು ಅಮ್ಮನ ಬಳಿ ಹೇಳಿದ್ದೆ ಮಾತಾಜಿ, ಅವಳು ನಿಮ್ಮ ಬಳಿ ಹೇಳಿದ್ದಾಳೆ, sorry" ಎಂದಳು. "ಏಕೆ? ಹೇಳಿದ್ದರಲ್ಲಿ ತಪ್ಪೇನಿದೆ? ಹೇಳದೆ ಇದ್ದರೆ ಸಮಸ್ಯೆ ಹೇಗೆ ಪರಿಹಾರ ಆಗತ್ತೆ? ಹೇಳಿದ್ರೆ ಅಲ್ವಾ ಸರಿ ಹೋಗೋದು " ಎಂದು ಹೇಳಿದಾಗ ಅವಳು ಹೇಳಿದಳು. "ಇನ್ನೊಬ್ಬರ ಮೇಲೆ ಬಂದು ನಿಮ್ಮ ಬಳಿ ಚಾಡಿ ಹೇಳಲು ನನಗೆ ಭಯ ಮಾತಾಜಿ," ನಾ ಕೇಳಿದೆ "ಭಯ ಏಕೆ? ನಾನೇನು ನಿನಗೆ ಏನು ಹೇಳುವುದಿಲ್ಲ ಮತ್ತೇಕೆ ಭಯ?" ಎಂದಿದ್ದಕೆ ಅವಳ ಉತ್ತರ ಹೀಗಿತ್ತು.. "ಭಯ ನೀವು ನನಗೆ ಏನಾದರೂ ಹೇಳುತ್ತೀರಿ ಎಂದಲ್ಲ ಮಾತಾಜಿ, ನನ್ನ ಭಯ ಏನೆಂದರೆ, ನಾನು ಯಾರ ಬಗ್ಗೆಯಾದರೂ ನಿಮ್ಮ ಬಳಿ ಬಂದು ಚಾಡಿ ಹೇಳಿ, ನೀವು ಏನಾದ್ರು ಅವರಿಗೆ ಬೈದು, ಬುದ್ಧಿ ಹೇಳಿ, ಅವರ ಮನಸ್ಸಿಗೆ ನೋವಾದರೆ, ನಂತರ ಅವರು ನನ್ನ ಮೇಲೆ ಸಿಟ್ಟು ಮಾಡಿಕೊಂಡರೆ? ಕಡೆಗೆ ನನ್ನ ದೋಸ್ತಿ ಕಟ್ ಮಾಡಿದರೆ? ಕಡೆಗೆ ನನಗೆ ಯಾರೂ ಫ್ರೆಂಡ್ಸ್ ಇರೋದೇ ಇಲ್ಲ. ಅಲ್ವಾ ಮಾತಾಜಿ ಆಮೇಲೆ ಎಲ್ಲರೂ ನನ್ನಿಂದ ದೂರ ಆಗ್ತಾರೆ, ಅದಕ್ಕೆ ನಿಮ್ಮ ಬಳಿ ಹೇಳಲಿಲ್ಲ. ನೀವು ಅವರಿಗೆ ಏನು ಹೇಳಬೇಡಿ ಪ್ಲೀಸ್ ಮಾತಾಜಿ..". ಎಂದು ಗೋಗರೆದಳು.
ಒಂದು ನಿಮಿಷ ನನ್ನ ಮನಸ್ಸಿನನಲ್ಲಿ ಪ್ರಶ್ನೆಗಳ ತರಂಗಗಳೇ ಹಾದು ಹೋದವು, ಆ ಮಗುವಿನ ನೋವನ್ನು ಕೇಳಿದ ಅಮ್ಮ, ಕ್ಷಣ ಮಾತ್ರದಲ್ಲಿ ನನಗೆ ಕರೆ ಮಾಡಿ ಸಮಸ್ಯೆಗಳ ಸರಮಾಲೆ ಇಟ್ಟರು. ಆದರೆ ಆ ಪುಟ್ಟ ಮಗುವಿನ ಯೋಚನಾ ಶಕ್ತಿ ನೋಡಿ, ಮೌನ ನನ್ನನ್ನು ಆವರಿಸಿತ್ತು,.. ಆಗ ಅವಳನ್ನು ಬೆನ್ನು ತಟ್ಟಿ, "ಆಯಿತು ಪುಟ್ಟ ನಾನು ಯಾರಿಗೂ ಬೈಯುವುದಿಲ್ಲ ಏನು ಹೇಳುವುದಿಲ್ಲ, ನಿನ್ನ ದೋಸ್ತಿ ಯನ್ನು ಹಾಳು ಮಾಡುವುದಿಲ್ಲ, ಆದರೆ ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಹೇಳು ಆಯಿತಾ?" ಎಂದು ಸಮಾಧಾನ ಪಡಿಸಿ ಕಳಿಸಿದೆ..
ವಿಷಯ ಕೇಳಲು ಚಿಕ್ಕದು ಆದರೆ ಆ ಮಗುವಿನ ಯೋಚನಾ ಶಕ್ತಿಯನ್ನು ನೋಡಿ ನಾವು ಯೋಚಿಸಬೇಕು.. ತನಗೆ ತೊಂದರೆಯಾದರು ಅದನ್ನು ಬೇಕಾದರೆ ಸಹಿಸುತ್ತೇನೆ ಆದರೆ ಆ ಸ್ನೇಹಸಂಬಂಧವನ್ನು ಕಳೆದುಕೊಳ್ಳಲಾರೆ.. ಎನ್ನುವ ಭಾವ ಅದ್ಭುತವಾದದ್ದು. ಹಲವು ವರ್ಷಗಳು ಕಳೆದು, ಸಂಬಂಧಗಳಲ್ಲಿ ಮಿಂದೆದ್ದು, ಅವುಗಳನ್ನು ಬೆಳೆಸಿಕೊಂಡು ಹೋಗುವುದು ಇರಲಿ, ಕೇವಲ ಉಳಿಸಿಕೊಂಡು ಹೋಗುವ ಮನಸ್ಥಿತಿ ಎಲ್ಲರಲ್ಲೂ ನಶಿಸಿ ಹೋಗಿದೆ ಎಂದರೆ ತಪ್ಪಾಗಲಾರದು. ಇಂತಹ ಮುಗ್ಧ ಮನಸ್ಸುಗಳಿಂದ ನಾವು ಕಲಿಯಬೇಕ್ಕಾದ್ದು ಬೇಕಾದಷ್ಟಿದೆ.. ನಮ್ಮ ಮನಸ್ಸು ಇದಕ್ಕೆ ಸಿದ್ದವಿರಬೇಕಷ್ಟೆ.
-ರಮ್ಯಾ ಆರ್ ಭಟ್, ಕುಂದಾಪುರ
ಚಿತ್ರ ಕೃಪೆ: ಇಂಟರ್ನೆಟ್ ತಾಣ