ಪಶ್ಚಿಮಘಟ್ಟಕ್ಕೆ ಅಪಾಯ ತಟ್ಟದಿರಲಿ

ಹಿಮಾಲಯ ಪರ್ವತ ಶ್ರೇಣಿಗಿಂತಲೂ ಪುರಾತನವಾದ ಪಶ್ಚಿಮ ಘಟ್ಟ ಶ್ರೇಣಿ ಜಗತ್ತಿಗೆ ನೀಡುತ್ತಿರುವ ಕೊಡುಗೆ ಅಪೂರ್ವ. ಗುಜರಾತ್ ನ ತಪತಿ ನದಿಯಿಂದ ಆರಂಭವಾಗಿ ತಮಿಳುನಾಡುವರೆಗೂ ವಿಸ್ತರಿಸಿರುವ ಪಶ್ಚಿಮ ಘಟ್ಟ ವೈವಿಧ್ಯಮಯ ಜೀವಿಗಳು, ಸಸ್ಯ ಸಂಕುಲ, ಖನಿಜಗಳು, ಜಲಮೂಲಗಳು, ಆರ್ಕಿಡ್ ಗಳು, ಸರಿಸೃಪಗಳ ಆಗರ, ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮಘಟ್ಟ ಒಟ್ಟು ೧,೬೪,೨೮೦ ಚ. ಕಿ.ಮೀ. ವಿಸ್ತೀರ್ಣ ಹೊಂದಿದೆ. ಕರ್ನಾಟಕದಲ್ಲಿ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು ೪೪,೪೪೮ ಚ.ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತರಿಸಿದೆ.
ಕರ್ನಾಟಕದ ರಕ್ಷಾ ಕವಚದಂತೆ ಚಾಚಿಕೊಂಡಿರುವ ಪಶ್ಚಿಮಘಟ್ಟವೇ ಈಗ ಅಪಾಯದಲ್ಲಿರುವುದು ಆತಂಕಕಾರಿ ಸಂಗತಿ. ಕಂದಾಯ ಮತ್ತು ವಿಪತ್ತು ನಿರ್ವಹಣಾ ವಿಭಾಗ ರಾಜ್ಯ ಸರಕಾರಕ್ಕೆ ಸಲ್ಲಿಸಿದ ವರದಿ ಪಶ್ಚಿಮಘಟ್ಟದ ಮೇಲೆ ನಡೆಯುತ್ತಿರುವ ಮಾನವ ಹಸ್ತಕ್ಷೇಪದ ವಾಸ್ತವಿಕ ಅಂಶಗಳನ್ನು ತೆರೆದಿಟ್ಟಿದೆ. ಕಳೆದ ೧೯ ವರ್ಷಗಳಲ್ಲಿ ೧,೪೦೩ ಭೂಕುಸಿತ ಪ್ರಕರಣವಾಗಿದ್ದು, ೯೮ ಜನ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ಪಶ್ಚಿಮಘಟ್ಟ ವ್ಯಾಪಿಸಿರುವ ೮ ಜಿಲ್ಲೆಗಳ ೪೪,೪೪೮ ಚ.ಕಿ.ಮೀ. ಗಳಲ್ಲಿ ೩೧,೨೩೧ ಚ.ಕಿ.ಮೀ. ಪ್ರದೇಶದಲ್ಲಿ ಭೂಕುಸಿತದ ಅಪಾಯವಿದೆ ಎಂಬ ಅಂಶಗಳು ಭವಿಷ್ಯದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ಅನಾಹುತದ ಎಚ್ಚರಿಕೆಯ ಗಂಟೆಯಾಗಿದೆ.
ಪಶ್ಚಿಮಘಟ್ಟದಲ್ಲಿ ಭೂ ಕುಸಿತಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಈ ಹಿಂದೆಯೇ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಯನ ವರದಿ ಸಲ್ಲಿಸಿದೆ. ಆದರೆ, ಸರಕಾರಗಳು ಪಶ್ಚಿಮಘಟ್ಟ ಸಂರಕ್ಷಣೆ ಬಗ್ಗೆ ಯಾವುದೇ ಮಹತ್ವದ ನಿರ್ಧಾರ ಕೈಗೊಂಡು ಕಾರ್ಯಗತಗೊಳಿಸಿಲ್ಲ. ಈಗ ಕಂದಾಯ ಮತ್ತು ವಿಪತ್ತು ನಿರ್ವಹಣಾ ವಿಭಾಗ ಸಲ್ಲಿಸಿದ ವರದಿಯನ್ನಾದರೂ ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಎಲ್ಲೆಲ್ಲಿ ಮಾನವ ಹಸ್ತಕ್ಷೇಪವಾಗಿದೆಯೋ ಅಂಥ ಸ್ಥಳದಲ್ಲೇ ಭೂಕುಸಿತವಾಗಿರುವುದು ಪಶ್ಚಿಮಘಟ್ಟದ ಸೂಕ್ಷ್ಮ ಸಂರಚನೆಗೆ ಒದಗಿರುವ ಅಪಾಯವನ್ನು ಬಿಂಬಿಸುತ್ತದೆ.
ಪ್ರವಾಸೋದ್ಯಮದ ಹೆಸರಲ್ಲಿ ಪಶ್ಚಿಮಘಟ್ಟದ ಪರ್ವತಗಳಲ್ಲಿ ಕೇಬಲ್ ಕಾರ್, ಫ್ಲೈ ಓವರ್ ಗಳು, ಹೆದ್ದಾರಿಗಳು, ಸುರಂಗ ಮಾರ್ಗ, ರೈಲ್ವೇ ಯೋಜನೆಗಳು, ನದಿ ತಿರುವು ಯೋಜನೆಗಳಂಥ ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿಗಳು, ನೀರಿನ ಸಹಜ ಹರಿವಿಗೆ ತಡೇ ಒಡ್ಡುವುದು, ಅರಣ್ಯ ನಾಶ ಘಟ್ಟದ ತಳಹದಿಯನ್ನೇ ಅಲುಗಾಡಿಸುತ್ತಿದೆ. ಅತಿಸೂಕ್ಷ್ಮ ಪ್ರದೇಶದ ಬಳಿಯೇ ನಿರ್ಮಾಣವಾಗುತ್ತಿರುವ ರೆಸಾರ್ಟ್ ಮತ್ತು ಹೋಮ್ ಸ್ಟೇಗಳು, ದೂರದೃಷ್ಟಿ, ಪರಿಸರ ಕಾಳಜಿಯೇ ಇಲ್ಲದ ಪ್ರವಾಸೋದ್ಯಮ ಅಭಿವೃದ್ಧಿ ಘಟ್ಟ ಪ್ರದೇಶವನ್ನು ಮತ್ತಷ್ಟು ಸಂಕಟಕ್ಕೆ ದೂಡುತ್ತಿದೆ. ನಿಯಮಗಳನ್ನು ಉಲ್ಲಂಘಿಸಿ ಭೂಪರಿವರ್ತನೆ ಮಾಡಿದ ಅಧಿಕಾರಿಗಳೂ ಪಶ್ಚಿಮಘಟ್ಟದ ಪಾಲಿಗೆ ಖಳನಾಯಕರೇ ಆಗಿದ್ದಾರೆ.
ಪಶ್ಚಿಮಘಟ್ಟದ ಸೂಕ್ಷ್ಮತೆಯನ್ನು ಅರಿಯದೆ ಸರಕಾರಗಳು ನಡೆಸುವ ಅಭಿವೃದ್ಧಿ ಕಾರ್ಯಗಳು ಭೂಕುಸಿತಕ್ಕೆ ಮುನ್ನುಡಿ ಬರೆಯುತ್ತಿವೆ. ಸೂಕ್ಷ್ಮ ಪ್ರದೇಶದಲ್ಲಿ ಎಲ್ಲ ಬಗೆಯ ಗಣಿಗಾರಿಕೆಗೆ ಕಡಿವಾಣ ಬೀಳದ ಹೊರತು ಪಶ್ಚಿಮಘಟ್ಟದ ಮೇಲೆ ಆಗಿರುವ ಗಾಯ ಮಾಯುವುದಿಲ್ಲ. ಪಶ್ಚಿಮಘಟ್ಟ ಸಂರಕ್ಷಣೆಯ ವಿಷಯದಲ್ಲಿ ಸರಕಾರ ವಿಳಂಬ ನೀತಿ ಅನುಸರಿಸದೆ ಸಮರೋಪಾದಿಯ ಕಾರ್ಯಗಳನ್ನೇ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅಪಾಯ ಎದುರಾಗದಂತೆ ಉಪಾಯ ಹುಡುಕುವ ಕೆಲಸವನ್ನು ಸರಕಾರ ಪ್ರಾಮಾಣಿಕವಾಗಿ ಮಾಡಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೪-೦೩-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ