ಪಸಿರಾಗಲಿ ಮನಂ, ಪಸಿರಾಗಲಿ ನೆಲಂ
ಕವನ
ಪಸಿರಾಗಲಿ ಮನಂ, ಪಸಿರಾಗಲಿ ನೆಲಂ.
-------------------------------------
ಓ ಕಬ್ಬನ್ ಉದ್ಯಾನವನವೇ ನಿನಗಿದೋ ಅರ್ಪಿಸುವೆನ್
ಹೃದಯಪೂರ್ಣ ಕೃತಜ್ಙತೆಯ ಪುಷ್ಪಂಗಳ.
ನೀಂ ನಮ್ಮೊಡೆ ಇರೆ, ನಾವಲ್ಲಿಗೆ ಬರುತಿರೆ
ಮನವು ಸಂಭ್ರಮಿಪುದು ನವೋಲ್ಲಾಸದ ಘಳಿಗೆಗಳ.
ಪರ್ಣಜನ್ಯ ಕಂಪ ಕುಡಿಯೆ ಹೃದಯಸುಖಮೀಂಟುಪುದು.
ಸುಮಧೃತ ತರುಸಮೂಹವ ನೋಡೆ ಕಣ್ ತಣಿಸಿ ನಲಿವುದು.
ಕಿರುಪಟ್ಟಣವಿಂದು ಬೆಳೆದು ಮಹಾನಗರವಾಗೆ
ಜನದುಸಿರಿಗಿಲ್ಲ ಸ್ವಚ್ಚಾನಿಲ ಸೇವನೆಯುಂ.
ಉಲ್ಲಾಸಶೂನ್ಯ ಅಚೇತನ ಕಟ್ಟಡಾರಣ್ಯದ ಮಧ್ಯೆ,
ಉಳಿದ ನೀನು ದಾನಗೈಯ್ಯುತಿರುವೆ ಶುಭ್ರಾನಿಲವಂ.
ಮಾಲಿನ್ಯದ ಭದ್ರಮುಷ್ಟಿಯೊಳ್ ಸಿಲಿಕಿ ನಲುಗುತ,
ನಿರ್ವೇಗ ವಾಹನದಟ್ಟಣೆಯೊಳ್ ಬಳಲಿ ಸಾಗುತ,
ನಿರ್ಮಲ ಆಹ್ಲಾದವಂ, ನಿತ್ಯ ಚೈತನ್ಯವಂ ಸೂಸುತ,
ಪವಡಿಸಿಹ ನಿನ್ನ ಸುಂದರ ಕಿರುವನವ ನಾವ್ ಪೊಕ್ಕಿದೊಡೆ,
ದಣಿದ ಮನವ ವನಚೈತನ್ಯ ನೇವರಿಪುದು.
ಹೊಗೆಯಲಿ ಬೆಂದುಸಿರು, ಶುದ್ಧಾನಿಲ ಗಂಗೆಯೊಳ್ ಮುಳುಗುವುದು.
ದೂರ ದಟ್ಟ ಕಾನನದ ಕಂಪು ಮೈಮನದೊಳಗೆ ನಲಿವುದು.
ಮಾಲಿನ್ಯ ರೋಗದಿಂ ಅನುದಿನವು ಸೊರಗಿದ ಜನರ್ಗೆ, ನಿನ್ನ ಬನವೇ
ತುರ್ತುಚಿಕಿತ್ಸಾಕೇಂದ್ರವಾಗಿ, ಚೈತನ್ಯದೋಷದಿಯವೀಂಟುತಿಹರು.
ನಗರಮಧ್ಯದೊಳಿಂದು ವಿಸ್ತರದಿಂ ನಿಂದ ನಿನ್ನ ಸೃಷ್ಟಿಗೆ,
ಅಂದು ಸೋಕ್ಶ್ಮಗ್ರಾಹಿಯೋರ್ವನ ದೂರಾಲೋಚನೆಯೆ ಸಾಕ್ಷಿ.
ಪಸಿರ ಮರಣಹೋಮವ ನಡೆಸಿ ಅಂಕೆಯಿಲ್ಲ ನುಗ್ಗುತಿರುವ ನಗರದಿ,
ನಿರಭ್ರ ಪ್ರಕೃತಿಯಿಂ ಕ್ಷಣಕಾಲ ನಲಿಯುತಿರ್ವ ಮನಂಗಳಿಗೆ, ನಿನ್ನ ಸಾನಿಧ್ಯವೇ ಸಾಕ್ಷಿ.
ನಿನ್ನ ಮಾರ್ಮಿಕ ಸ್ಪರ್ಷದಿಂ ಬನವೇ, ಬಿತ್ತು
ಮಂಕು ಮನಗಳಲಿ ಪಸಿರ್ಬೆಳೆಸುವ ಬೀಜಂ,
ಮುಂಬರುವ ಪೀಳೆಗೆಗೆ ಪಸಿರುಳಿಸುವ ಜ್ಞಾನಂ.
ಪಸಿರಾಗಲಿ ಮನಂ, ಪಸಿರಾಗಲಿ ನೆಲಂ.
- ಚಂದ್ರಹಾಸ ( ೨೬ - ಜನವರಿ - ೨೦೧೨)