ಪಾಂಡವ ಪಟ್ಟಮಹಿಷಿ ದ್ರೌಪದಿ

ಪಾಂಡವ ಪಟ್ಟಮಹಿಷಿ ದ್ರೌಪದಿ

ಪುಸ್ತಕದ ಲೇಖಕ/ಕವಿಯ ಹೆಸರು
ಜಿ.ಎಂ.ಕೆ.
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೩೫.೦೦, ಮುದ್ರಣ: ಜೂನ್ ೨೦೨೩

ಸಪ್ನ ಬುಕ್ ಹೌಸ್ ನವರು ‘ಮಹಾಭಾರತದ ಪ್ರಸಿದ್ಧ ಪಾತ್ರಗಳು' ಎನ್ನುವ ಮಾಲಿಕೆಯಲ್ಲಿ ಹೊರತಂದ ಪುಸ್ತಕಗಳಲ್ಲಿ ಐದನೇ ಪುಸ್ತಕ ‘ಪಾಂಡವ ಪಟ್ಟಮಹಿಷಿ ದ್ರೌಪದಿ’. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ದ್ರೌಪದಿಯ ವಿವರಗಳನ್ನು ಪುಟ್ಟದ್ದಾಗಿ ಈ ಪುಸ್ತಕದಲ್ಲಿ ನೀಡಿದ್ದಾರೆ. ೨೦೦೫ರಲ್ಲಿ ಪ್ರಥಮ ಮುದ್ರಣ ಕಂಡ ಈ ಕೃತಿ ಈಗ ನಾಲ್ಕನೇ ಮುದ್ರಣವಾಗಿ ಹೊರಬಂದಿದೆ. 

ಈ ಮಾಲಿಕೆಯ ಬಗ್ಗೆ ಪ್ರಕಾಶಕರು ಬೆನ್ನುಡಿಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ “ಜಗತ್ತಿನ ಮಹಾಕಾವ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ‘ಮಹಾಭಾರತದ ಕಥೆ' ಪ್ರಾಚೀನ ಭಾರತದ ಕಥೆಯೂ ಆಗಿದೆ. ಈ ಕಥೆಯನ್ನು ಯಾರು, ಯಾವ ಕಾಲದಲ್ಲಿ ಓದಿದರೂ ಅದು ತಮ್ಮದೇ ಕಥೆ ಎಂಬ ಭಾವ ಗಾಢವಾಗಿ ಕಾಡುತ್ತದೆ. ಏಕೆಂದರೆ ಈ ಮಹಾಕಾವ್ಯದಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಮಾನವ ಸಹಜ ಗುಣಗಳಿಂದ, ಭಾವಗಳಿಂದ ತೊಳಲಾಡುತ್ತ ನಮ್ಮ ಮಧ್ಯೆ ಈಗ ಕೂಡಾ ನಲಿದಾಡುತ್ತಿರುವಂತೆ ಭಾಸವಾಗುತ್ತದೆ. ಅವರ ಸಂಗದಲ್ಲಿ ನಮ್ಮ ವ್ಯಕ್ತಿತ್ವ ಇನ್ನಷ್ಟು ಹಸನಾಗುತ್ತದೆ, ಹಾಗೆಯೇ ದುಷ್ಟತನ, ಮಾತ್ಸರ್ಯದಂತಹ ದುರ್ಗುಣಗಳನ್ನು ತೊರೆಯಬೇಕೆಂಬ ಪ್ರಜ್ಞೆ ಜಾಗೃತವಾಗುತ್ತದೆ. ಮಹಾಭಾರತವನ್ನು ಕೇವಲ ದಾಯಾದಿ ಕಥೆಯೆಂದು ಭಾವಿಸದೇ ಮಾನವ ಜನಾಂಗಕ್ಕೆ ಸದಾ ಬೆಳಕು ತೋರುವ ಮಹಾಕೃತಿಯೆಂದು ವಿದ್ವಾಂಸರು ಪರಿಗಣಿಸಿದ್ದಾರೆ. ಈ ಮಾಲಿಕೆಯಲ್ಲಿ ಮಹಾಭಾರತದಲ್ಲಿ ಬರುವ ಹತ್ತು ಪ್ರಮುಖ ಪಾತ್ರಗಳ ಪರಿಚಯವನ್ನು ಕೊಡಲಾಗಿದೆ. ಕೃತಿಯ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಹೇಳಲು ಪ್ರಯತ್ನಿಸಲಾಗಿದೆ. ಪ್ರತಿ ಪಾತ್ರದ ಕಥೆಯನ್ನು ಮೊದಲಿನಿಂದ ಕಡೆಯವರೆಗೆ ಸಮಗ್ರವಾಗಿ ಆದರೆ ಸಂಕ್ಷಿಪ್ತವಾಗಿ ನಿರೂಪಿಸಲು ಪ್ರಯತ್ನಿಸಲಾಗಿದೆ. ಓದುಗರು ಈ ಕೃತಿಯನ್ನು ಆದರದಿಂದ ಸ್ವೀಕರಿಸುವರೆಂಬ ನಂಬಿಕೆ ನಮ್ಮದು" ಎಂದಿದ್ದಾರೆ. 

'ಪಾಂಡವ ಪಟ್ಟಮಹಿಷಿ ದ್ರೌಪದಿ' ಕೃತಿಯು ಆಕೆಯ ಜನನದ ಮೂಲಕ ಪ್ರಾರಂಭವಾಗುತ್ತದೆ. ದ್ರೌಪದಿಯ ಜನನದ ಉದ್ದೇಶ ಆಕೆಯ ತಂದೆಯಾದ ದ್ರುಪದನಿಗೆ ಗುರು ದ್ರೋಣಾಚಾರ್ಯರ ಮೇಲಿದ್ದ ದ್ವೇಷ. ಈ ಕಾರಣದಿಂದಲೇ ದ್ರುಪದ ತಪಸ್ಸನಾಚರಿಸಿ ಅಗ್ನಿದೇವನನ್ನು ಪ್ರಸನ್ನಗೊಳಿಸಿ ದ್ರೋಣನನ್ನು ಕೊಲ್ಲುವಂತಹ ಮಗ ಹಾಗೂ ಪಾಂಡವ-ಕೌರವರ ನಡುವಿನ ಕಾಳಗಕ್ಕೆ ಕಾರಣವಾಗುವ ಮಗಳನ್ನು ಪಡೆಯುತ್ತಾನೆ. ಈ ಮಗಳ ಹೆಸರೇ ದ್ರೌಪದಿ. ದ್ರೌಪದಿಯ ಮದುವೆಗಾಗಿ ಸ್ವಯಂವರವನ್ನು ಏರ್ಪಡಿಸಲಾಗಿರುತ್ತದೆ. ಮತ್ಸ್ಯಯಂತ್ರವನ್ನು ಬೇಧಿಸಿದವರನ್ನು ಮಾತ್ರ ದ್ರೌಪದಿ ತನ್ನ ಪತಿಯಾಗಿ ಸ್ವೀಕರಿಸುತ್ತಾಳೆ ಎಂದು ಹೇಳಿದ್ದ ಕಾರಣ ದುರ್ಯೋಧನ, ಜರಾಸಂಧ, ಶಿಶುಪಾಲನಂಥ ವೀರರು ಸೋತು ಹೋದಾಗ ಬ್ರಾಹ್ಮಣ ವೇಷದಲ್ಲಿದ್ದ ಅರ್ಜುನ ಆ ಯಂತ್ರವನ್ನು ಬೇಧಿಸಿ ದ್ರೌಪದಿಯನ್ನು ವಿವಾಹವಾಗುತ್ತಾನೆ. ವಿವಾಹವಾಗಿ ಮನೆಗೆ ಬಂದಾಗ ತಾಯಿ ಕುಂತಿಯ ತಪ್ಪು ಕಲ್ಪನೆಯಿಂದ ದ್ರೌಪದಿ ಅನಿವಾರ್ಯವಾಗಿ ಐದೂ ಮಂದಿ ಪಾಂಡವರ ಪತ್ನಿಯಾಗಬೇಕಾಗುತ್ತದೆ. ಇದಕ್ಕೆ ಆಕೆ ಪೂರ್ವ ಜನ್ಮದಲ್ಲಿ ಪಡೆದ ವರವೂ ಕಾರಣವಾಗಿರುತ್ತದೆ. 

ದುರ್ಯೋಧನನ ಕುಟಿಲತೆಗೆ ಬಲಿಯಾದ ಧರ್ಮರಾಯ ಪಗಡೆಯಾಟದಲ್ಲಿ ದ್ರೌಪದಿಯನ್ನೂ ಸೋತಾಗ ಆಕೆಯ ಮಾನಭಂಗ ಮಾಡಲು ದುಶ್ಯಾಸನ ಮುಂದಾಗುತ್ತಾನೆ. ಆದರೆ ಶ್ರೀಕೃಷ್ಣನ ಕೃಪೆಯಿಂದ ಆಕೆ ತೊಟ್ಟ ವಸ್ತ್ರ ಅಕ್ಷಯವಾಗುತ್ತದೆ. ವಸ್ತ್ರಾಪಹರಣ ಮಾಡಲು ಸಾಧ್ಯವಾಗದೇ ದುಶ್ಯಾಸನ ಸೋತು ಸುಣ್ಣವಾಗುತ್ತಾನೆ. ಪುಸ್ತಕದಲ್ಲಿ ವನವಾಸದ ಸಮಯದಲ್ಲಿ ದುರ್ವಾಸ ಮುನಿಗಳು ಬಂದಾಗ ದ್ರೌಪದಿ ನೀಡಿದ ಆತಿಥ್ಯ, ಜಯದ್ರಥನಿಂದ ದ್ರೌಪದಿಯ ಅಪಹರಣ ಘಟನೆ, ಅಜ್ಞಾತವಾಸದ ಸಮಯದಲ್ಲಿ ಕೀಚಕನ ದ್ರೌಪದಿಯ ಮೇಲಿನ ಮೋಹ, ಕುರುಕ್ಷೇತ್ರ ಯುದ್ಧದಲ್ಲಿ ದುಶ್ಯಾಸನ ಮತ್ತು ದುರ್ಯೋಧನರ ಮರಣದ ಬಳಿಕ ಪಾಂಚಾಲಿಯ ಕಡೆಯ ದಿನಗಳು ಈ ಬಗ್ಗೆ ಸವಿವರ ನೀಡಲಾಗಿದೆ. ರಾಜ ವಂಶದಲ್ಲಿ ಹುಟ್ಟಿದರೂ, ಯುವರಾಜರನ್ನೇ ಮದುವೆಯಾದರೂ ಸಂಕಷ್ಟಗಳು ದ್ರೌಪದಿಗೆ ತಪ್ಪಲಿಲ್ಲ. ಕರ್ಮದ ಫಲವನ್ನು ಅನುಭವಿಸಲೇ ಬೇಕಾಯಿತು. ಐದು ಮಂದಿ ಪತಿಯರಿದ್ದರೂ ಆಕೆಯ ಹೆಚ್ಚಿನ ಒಲವು ಅರ್ಜುನನ ಕಡೆಗೆ ಇದ್ದುದರಿಂದ ಸ್ವರ್ಗಾರೋಹಣ ಸಮಯದಲ್ಲಿ ಸಶರೀರವಾಗಿ ಸ್ವರ್ಗವನ್ನು ತಲುಪಲಾಗದೇ ನಡುವೆಯೇ ಮರಣವನ್ನಪ್ಪುತ್ತಾಳೆ.  

ಕೃತಿಗೆ ಪುಟಗಳ ಮಿತಿ ಇರುವುದರಿಂದ ಸಂಕ್ಷಿಪ್ತವಾಗಿ ದ್ರೌಪದಿಯ ಮಾಹಿತಿಯನ್ನು ನೀಡಲಾಗಿದೆ. ಇದು ಮಕ್ಕಳಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ಪೌರಾಣಿಕ ಪ್ರಬಂಧ, ಭಾಷಣ, ನಾಟಕ ರಚನೆಗೆ ಸಹಕಾರಿಯಾಗಬಲ್ಲದು. ಪುಸ್ತಕದ ಒಳಪುಟಗಳಲ್ಲಿ ಅಲ್ಲಲ್ಲಿ ಸೊಗಸಾದ ರೇಖಾಚಿತ್ರಗಳನ್ನು ನೀಡಲಾಗಿದೆ. ೫೦ ಪುಟಗಳ ಈ ಪುಟ್ಟ ಕೃತಿಯು ‘ಪಾಂಡವ ಪಟ್ಟಮಹಿಷಿ ದ್ರೌಪದಿ' ಯ ಬಗ್ಗೆ ಬಹಳಷ್ಟು ವಿಷಯಗಳನ್ನು ಚುಟುಕಾಗಿ ತಿಳಿಸುವಲ್ಲಿ ಸಹಕಾರಿಯಾಗಿದೆ.