ಪಾಂಡು ಟೆಡ್ದಿ ಕರಡಿಯ ಗೊಣಗಾಟ

ಪಾಂಡು ಟೆಡ್ದಿ ಕರಡಿಯ ಗೊಣಗಾಟ

ಅಲಾರಮ್ ಸದ್ದು ಮಾಡಿದೊಡನೆ ಸರಸು ಸರಕ್ಕನೆ ಹಾಸಿಗೆಯಿಂದ ಎದ್ದಳು. ಅವಳ ಪಕ್ಕದಲ್ಲಿದ್ದ ಪಾಂಡು ಟೆಡ್ಡಿ ಕರಡಿ ತನ್ನ ಒಂದು ಕಣ್ಣನ್ನು ತೆರೆದು ನೋಡಿತು. ಯಾಕೆಂದರೆ ಅದರ ಇನ್ನೊಂದು ಕಣ್ಣು ವರುಷಗಳ ಮುಂಚೆ ಕುರುಡಾಗಿತ್ತು.

“ಇನ್ನೊಂದು ಮುಂಜಾನೆ. ಈ ದಿನ ಚೆನ್ನಾಗಿರುವುದಿಲ್ಲ” ಎಂದಿತು ಪಾಂಡು ಟೆಡ್ಡಿ ಕರಡಿ. ಅದಕ್ಕೆ ವಯಸ್ಸಾಗಿದ್ದು, ಅದು ಯಾವಾಗಲೂ ಹೀಗೆ ಗೊಣಗುಟ್ಟುತ್ತಲೇ ಇರುತ್ತದೆ. ಸರಸುವಿನ ತಾಯಿ ಯುವತಿಯಾಗಿದ್ದಾಗ ಅದು ಅವಳೊಂದಿಗಿತ್ತು. ಆಗ ಚುರುಕಾಗಿ ಖುಷಿಯಾಗಿ ಇದ್ದ ಪಾಂಡು ಕರಡಿ ಈಗ ಎಲ್ಲದರ ಬಗ್ಗೆಯೂ ಟೀಕೆ ಮಾಡುತ್ತದೆ. ಉಳಿದೆಲ್ಲ ಗೊಂಬೆಗಳಿಗಿಂತ ಜಾಸ್ತಿ ವಯಸ್ಸಾಗಿರುವ ಪಾಂಡು ಕರಡಿ ಹಲವು ಸಂಕಷ್ಟಗಳನ್ನು ಎದುರಿಸಿತ್ತು. ಇತರ ಗೊಂಬೆಗಳು ಪಾಂಡು ಕರಡಿಯನ್ನು ಪ್ರೀತಿಸುತ್ತಿದ್ದವು. ಆದರೆ ಅದರ ಎಡೆಬಿಡದ ಗೊಣಗಾಟ ಮತ್ತು ಟೀಕೆಗಳಿಂದಾಗಿ ಅವುಗಳಿಗೆ ಸಾಕಾಗಿ ಹೋಗಿತ್ತು.

“ಈ ಹಾಸಿಗೆಯನ್ನು ಯಾವಾಗ ಸರಿ ಮಾಡುತ್ತಾರೋ? ಈ ಬೆಡ್‌ಷೀಟುಗಳು ಮುದ್ದೆಮುದ್ದೆಯಾಗಿದ್ದರೆ ನನಗೆ ಸರಿ ಹೋಗೋದಿಲ್ಲ” ಎಂದು ಪಾಂಡು ಟೆಡ್ದಿ ಕರಡಿ ಪುನಃ ಗೊಣಗುಟ್ಟಿತು. "ಆ ಕಿಟಕಿಯ ಬಿಸಿಲುತಡೆಯನ್ನು ಅವರು ಕೆಳಗೆ ಎಳೆಯ ಬೇಕಾಗಿತ್ತು. ಸೂರ್ಯನ ಕಿರಣಗಳು ನನ್ನ ಕಣ್ಣನ್ನೇ ಚುಚ್ಚುತ್ತಿವೆ” ಎಂದು ಅದು ಟೀಕೆ ಮಾಡಿತು. ಬಿಸಿಲೇರುವ ವರೆಗೂ ಅದು ಹೀಗೆ ಗೊಣಗಾಡುತ್ತಲೇ ಇತ್ತು.

ಇದನ್ನೆಲ್ಲ ಕೇಳಿಕೇಳಿ ಬೇಸತ್ತ ಸೈನಿಕ ಗೊಂಬೆ, ಜೋಕರ್ ಗೊಂಬೆಯ ಬಳಿ ಹೇಳಿತು, "ಪಾಂಡು ಟೆಡ್ಡಿ ಕರಡಿ ಅದರ ಗೊಣಗಾಟ ನಿಲ್ಲಿಸದಿದ್ದರೆ ನನ್ನ ಹ್ಯಾಟನ್ನು ಅದರ ಬಾಯಿಯೊಳಗೆ ತುರುಕುತ್ತೇನೆ.” "ಅದಕ್ಕಿಂತ ಮುಂಚೆ ನನ್ನ ಆಟದ ಚೆಂಡುಗಳನ್ನು ಅದರ ಬಾಯಿಯೊಳಗೆ ನಾನೇ ತುರುಕಿಸುತ್ತೇನೆ” ಎಂದಿತು ಜೋಕರ್ ಗೊಂಬೆ. ಷೆಲ್ಫಿನಲ್ಲಿದ್ದ ಎಲ್ಲ ಗೊಂಬೆಗಳೂ ನಕ್ಕವು.

“ಪಾಂಡು ಟೆಡ್ಡಿ ಕರಡಿಗೆ ನಾವು ಪಾಠ ಕಲಿಸಬೇಕಾದ ಸಮಯ ಬಂದಿದೆ. ಅದರ ಗೊಣಗಾಟ ನಿಲ್ಲಿಸಲು ನಾವು ಏನು ಮಾಡಬಹುದು?” ಎಂದು ಕೇಳಿತು ಪುಟ್ಟಿ ಗೊಂಬೆ. ಬುದ್ಧಿವಂತ ಗೂಬೆ ಗೊಂಬೆ ಹೇಳಿತು, "ಪಾಂಡು ಮಲಗಿದ್ದಾಗ ಅದರ ಬಾಯಿಗೆ ಒಂದು ಪ್ಲಾಸ್ಟರ್ ಅಂಟಿಸಿಬಿಡೋಣ." ಎಲ್ಲರೂ ಒಪ್ಪಿದರು.
 
ಆ ದಿನ ರಾತ್ರಿ ಸ್ನಾನದ ಕೋಣೆಯ ಪೆಟ್ಟಿಗೆಯಿಂದ ಒಂದು ತುಂಡು ಪ್ಲಾಸ್ಟರ್ ತಂದ ಪುಟ್ಟಿ ಗೊಂಬೆ ಅದನ್ನು ಮಲಗಿದ್ದ ಪಾಂಡು ಟೆಡ್ದಿ ಕರಡಿಯ ಬಾಯಿಗೆ ಬಿಗಿಯಾಗಿ ಅಂಟಿಸಿತು. ಎಲ್ಲ ಗೊಂಬೆಗಳಿಗೂ ಸಂತೋಷವಾಯಿತು - ಅಬ್ಬ, ಇನ್ನಾದರೂ ತಾವು ನೆಮ್ಮದಿಯಿಂದ ಇರಬಹುದೆಂದು.

ಮರುದಿನ ಬೆಳಗ್ಗೆ ಅಲಾರಮ್ ಸದ್ದು ಮಾಡಿದಾಗ ಸರಸು ಚಕ್ಕನೆ ಹಾಸಿಗೆಯಿಂದ ಎದ್ದು ಸ್ನಾನದ ಕೋಣೆಗೆ ನಡೆದಳು. ಪಾಂಡು ಟೆಡ್ದಿ ಕರಡಿ "ಅಲಾರಮ್ ಇನ್ನೂ ಸದ್ದು ಮಾಡುತ್ತಿದೆ” ಎಂದು ಗೊಣಗಾಡಲಿಕ್ಕಾಗಿ ಬಾಯಿ ತೆರೆಯಲು ಪ್ರಯತ್ನಿಸಿತು. ಆದರೆ ಅದಕ್ಕೆ ಬಾಯಿ ತೆರೆಯಲು ಸಾಧ್ಯವಾಗಲೇ ಇಲ್ಲ!

ಪಾಂಡು ಕರಡಿ ಮುಖವನ್ನು ಜೋರಾಗಿ ಅತ್ತಿತ್ತ ತಿರುಗಾಡಿಸಿತು, ತುಟಿಗಳನ್ನು ಊದಿತು. ಏನು ಮಾಡಿದರೂ ಅದಕ್ಕೆ ಬಾಯಿ ತೆರೆಯಲು ಆಗಲಿಲ್ಲ. ಆಗ, ಇತರ ಗೊಂಬೆಗಳೆಲ್ಲವೂ ತನ್ನನ್ನು ನೋಡುತ್ತಿವೆ ಎಂಬುದನ್ನು ಪಾಂಡು ಕರಡಿ ಗಮನಿಸಿತು. ತಕ್ಷಣ ಅದು ಹಾಸಿಗೆಯಿಂದೆದ್ದು ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಂಡಿತು. ಬಾಯಿಗೆ ಅಂಟಿಸಿದ್ದ ಪ್ಲಾಸ್ಟರ್ ಕಂಡೊಡನೆ ಸಿಟ್ಟಿನಿಂದ ಅದನ್ನು ಕಿತ್ತೆಸೆಯಿತು ಮತ್ತು ಇತರ ಎಲ್ಲ ಗೊಂಬೆಗಳನ್ನು ದಬಾಯಿಸಲು ತಯಾರಾಯಿತು.
 
"ಯಾರು ಇದನ್ನು ಮಾಡಿದ್ದು?” ಎಂದು ರೇಗಿತು ಪಾಂಡು ಟೆಡ್ದಿ ಕರಡಿ. "ನಾನು ಇದನ್ನು ಪತ್ತೆ ಮಾಡಿದಾಗ ನಿಮಗೆಲ್ಲರಿಗೂ ಕಾದಿದೆ ತೊಂದರೆ. ಹಿರಿಯ ಕರಡಿಗೆ ಗೌರವ ಕೊಡಲು ನಿಮಗ್ಯಾರಿಗೂ ಗೊತ್ತಿಲ್ಲ” ಎಂದು ಪಾಂಡು ಕರಡಿ ಎಗರಾಡುತ್ತಲೇ ಇತ್ತು. ಅದರ ರಂಪಾಟ ನೋಡಿ ಇತರ ಗೊಂಬೆಗಳಿಗೆ ಭಯವಾಯಿತು.

ಪಾಂಡು ಟೆಡ್ದಿ ಕರಡಿ ಹೀಗೆ ಜೋರಾದ ಧ್ವನಿಯಲ್ಲಿ ಕೂಗಾಡುತ್ತಿದ್ದಾಗ ಒಂದು ವಿಚಿತ್ರ ಸಂಗತಿ ನಡೆಯಿತು. ಅಚಾನಕ್ ಅದರ ಧ್ವನಿ ನಿಂತು ಹೋಯಿತು! ಪಾಂಡು ಕರಡಿ ಮತ್ತೆಮತ್ತೆ ಪ್ರಯತ್ನಿಸಿದರೂ ಅದರ ಗಂಟಲಿನಿಂದ ಧ್ವನಿ ಹೊರಡಲೇ ಇಲ್ಲ.

"ನಿನಗೆ ಹಾಗೇ ಆಗಬೇಕು” ಎನ್ನುತ್ತಾ ಪುಟ್ಟಿ ಗೊಂಬೆ ತಮ್ಮೆಲ್ಲರ ಸಂಕಟವನ್ನು ವಿವರಿಸಿತು: “ಯಾವಾಗಲೂ ನಿನ್ನದು ಬರೀ ಗೊಣಗಾಟ. ನಮಗೆಲ್ಲ ನಿನ್ನ ಗೊಣಗಾಟ ಕೇಳಿಕೇಳಿ ಸಾಕಾಗಿ ಹೋಗಿದೆ. ನಿನಗೆ ಪಾಠ ಕಲಿಸಲಿಕ್ಕಾಗಿ ನಿನ್ನ ಬಾಯಿಗೆ ಪ್ಲಾಸ್ಟರ್ ಅಂಟಿಸಿದ್ದು ನಾವೇ. ಈಗಂತೂ ನೀನು ಎಷ್ಟು ಎಗರಾಡಿದ್ದಿ ಎಂದರೆ ನಿನ್ನ ಧ್ವನಿಯನ್ನು ನೀನು ಪೂರಾ ಕಳೆದುಕೊಂಡಿದ್ದಿ.”

ಪುಟ್ಟು ಗೊಂಬೆ ಇಷ್ಟು ಹೇಳಿದಾಗ ಪಾಂಡು ಟೆಡ್ದಿ ಕರಡಿಯ ಕಣ್ಣುಗಳಿಂದ ಕಣ್ಣೀರು ತೊಟ್ಟಿಕ್ಕಿದವು. ಅದು ಕೆಟ್ಟ ಕರಡಿ ಆಗಿರಲಿಲ್ಲ. ಆದರೆ ಅದಕ್ಕೆ ತನ್ನ ಗೊಣಗಾಟದಿಂದ ಇತರರಿಗೆ ತೊಂದರೆ ಆಗುತ್ತಿದೆಯೆಂದು ಅರ್ಥವಾಗಿರಲಿಲ್ಲ. ಈಗ ಅದು ಪಶ್ಚಾತ್ತಾಪ ಪಡುತ್ತಿತ್ತು.

ಪಾಂಡು ಟೆಡ್ದಿ ಕರಡಿ ಕಣ್ಣೀರು ಹಾಕುವುದನ್ನು ನೋಡುತ್ತಾ ಪುಟ್ಟಿ ಗೊಂಬೆಗೆ ಸಂಕಟವಾಯಿತು. ಇತರ ಎಲ್ಲ ಗೊಂಬೆಗಳಿಗೂ ತಾವು ಮಾಡಿದ ಕೆಲಸಕ್ಕಾಗಿ ಪಶ್ಚಾತ್ತಾಪವಾಯಿತು.

"ನಾನು ಅಡುಗೆ ಕೋಣೆಗೆ ಹೋಗಿ ನೀನು ತಿನ್ನಲಿಕ್ಕಾಗಿ ಸ್ವಲ್ಪ ಜೇನು ತರುತ್ತೇನೆ. ಅದರಿಂದ ನಿನ್ನ ಗಂಟಲಿಗೆ ಹಿತವಾಗುತ್ತದೆ. ಆದರೆ ಇನ್ನು ಮುಂದೆ ಗೊಣಗಾಡುವುದಿಲ್ಲ ಎಂದು ನೀನು ಭಾಷೆ ಕೊಡಬೇಕು" ಎಂದಿತು ಪುಟ್ಟಿ ಗೊಂಬೆ.

ಅನಂತರ ಪಾಂಡು ಟೆಡ್ದಿ ಕರಡಿಗೆ ಪುಟ್ಟಿ ಗೊಂಬೆ ಒಂದು ಚಮಚ ಜೇನು ತಿನ್ನಿಸಿತು. ಸ್ವಲ್ಪ ಹೊತ್ತಿನಲ್ಲೇ ಅದರ ಗಂಟಲು ಸರಿ ಹೋಯಿತು. “ನನ್ನನ್ನು ಕ್ಷಮಿಸಿ. ನಾನಿನ್ನು ಗೊಣಗಾಡುವುದಿಲ್ಲ ಎಂದು ಭಾಷೆ ಕೊಡುತ್ತೇನೆ” ಎಂದು ಪಾಂಡು ಕರಡಿ ಪಿಸುಗುಟ್ಟಿತು. ತಕ್ಷಣವೇ ಇತರ ಎಲ್ಲ ಗೊಂಬೆಗಳೂ ಅದನ್ನು ಒಂದೊಂದಾಗಿ ತಬ್ಬಿಕೊಂಡವು. ಪುಟ್ಟಿ ಗೊಂಬೆ ಅದಕ್ಕೆ ಇನ್ನೊಂದು ಚಮಚ ಜೇನು ತಿನ್ನಿಸಿತು.

ಅದಾದ ನಂತರ, ಪಾಂಡು ಟೆಡ್ದಿ ಕರಡಿ ಗೊಣಗಾಡುವುದನ್ನು ನಿಲ್ಲಿಸಿದೆ. ಯಾವತ್ತಾದರೂ ಗೊಣಗಾಟ ತುಟಿ ಮೀರಿದಾಗ ಅದು ತನ್ನ ಬಾಯಿಗೆ ಪ್ಲಾಸ್ಟರ್ ಹಾಕಿದ್ದನ್ನು ನೆನಪು ಮಾಡಿಕೊಂಡು ಸುಮ್ಮನಾಗುತ್ತದೆ. ಇತರ ಗೊಂಬೆಗಳು ಪಾಂಡು ಗೊಂಬೆಯನ್ನು ಚೆನ್ನಾಗಿ ನೋಡಿಕೊಂಡು ಅದನ್ನು ಸಂತೋಷವಾಗಿಟ್ಟಿವೆ.
ಚಿತ್ರ ಕೃಪೆ: "ದ ನರ್ಸರಿ ಕಲೆಕ್ಷನ್" ಪುಸ್ತಕ