ಪಾಂಡೆಮಿಕ್
ಮಗಳು, 'ಅಮ್ಮ ಹೋಳಿಗೆ, ಮಾವಿನಹಣ್ಣಿನ ಸೀಕರಣಿ ಭಾಳ್ ಚಲೋ ಐತಿ!' ಅಂತ ಚಪ್ಪರಿಸಿಕೊಂಡು ತಿನ್ನುತ್ತಿರುವಾಗಲೇ, ಅಮಿತನಿಗೆ ಹೊರಗಡೆ ಏನೋ ಘೋಷಣೆ ಕೇಳಿಸಿದಂತೆ ಆಗಿ ಮಗಳಿಗೆ, 'ಒಂದ್ನಿಮಿಷ ಸುಮ್ಮನಿರು' ಎಂದು ಅತ್ತ ಕಿವಿಗೊಟ್ಟ.
'ಜಿಲ್ಲಾಧಿಕಾರಿ ಕಚೇರಿಯಿಂದ ಸಾರ್ವಜನಿಕರಲ್ಲಿ ಒಂದು ವಿನಂತಿ, ಈ ಪ್ರದೇಶದಲ್ಲಿ ಎರಡು ಮೂರು ದಿನದ ಹಿಂದೆ ಗೂಡ್ಸ್ ಆಟೋ ಒಂದರಲ್ಲಿ ಮಾವಿನಹಣ್ಣು ಮಾರಿಕೊಂಡು ಓಡಾಡಿದ್ದ ರಸ್ತೆ ಬದಿ ವ್ಯಾಪಾರಿಯೋರ್ವನಿಗೆ ಕರೋನಾ ಪಾಸಿಟಿವ್ ಎಂದು ದೃಢಪಟ್ಟಿರುವುದರಿಂದ, ಈ ಪ್ರದೇಶದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಯಾರಾದರೂ ರಸ್ತೆ ಬದಿ ವ್ಯಾಪಾರಿಗಳಿಂದ ಮಾವಿನಹಣ್ಣು ಖರೀದಿಸಿದ್ದರೆ, ಅಂತವರು ಸ್ವಯಂಪ್ರೇರಿತರಾಗಿ ಈ ಕೂಡಲೇ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕರೋನಾ ತಪಾಸಣೆಗೆ ಒಳಗಾಗಬೇಕಾಗಿ ವಿನಂತಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ' ಎಂದು ಪೋಲೀಸ್ ಜೀಪ್ ಒಂದು ಘೋಷಣೆ ಕೂಗುತ್ತಾ ಸಾಗುತ್ತಿತ್ತು.
ಪ್ರಕಟಣೆ ಕೇಳಿಸಿಕೊಂಡ ಶೃತಿ, 'ರೀ ನಾವು, ಮೊನ್ನೆ ಮಾವಿನಹಣ್ಣು ತಗೊಂಡವಲ್ಲ ಅವನು ಇರೋಕ್ಕಿಲ್ಲ ಅಲ್ಲವೇನ್ರಿ' ಎಂದಳು. 'ಯಾರಿಗೆ ಗೊತ್ತು ಅವನದ್ದೂ ಕೂಡಾ ಗೂಡ್ಸ್ ಆಟೋನೇ ಅಲ್ವಾ' ಎಂದ ಗಣೇಶ.
'ಇದೇನ್ರಿ ಇದು, ಹಣಿ ಬರಕ್ಕ ಹೊಣಿ ಯಾರು? ಅನ್ನೋ ಹಂಗ್ ಆಯ್ತಲ್ರಿ. ಅವಾ ಹಿಂದೂ ಅಂತಾ ಪಕ್ಕಾ ಮಾಡಿಕೊಂಡೇ ತಗೊಂಡದ್ದಿವಲ್ಲ'ಎಂದಳು.
ಮೂರು ದಿನಗಳ ಹಿಂದೆ, 'ರಸಪುರಿ ಮಾವಿನಹಣ್ಣು ಕೆಜಿಗೆ ಐವತ್ತು' ಎಂದು ಮನೆಯ ಮುಂದೆಯೇ ಒಬ್ಬ ಕೂಗಿಕೊಂಡು ಬಂದಾಗ, ಲಗುಬಗೆಯಿಂದ ಹಣ್ಣು ಕೊಳ್ಳಲು ಹೊರಟ ಅಮಿತನನ್ನು ತಡೆದ ಶೃತಿ. 'ಒಂದ್ನಿಮಿಷ ಇರ್ರೀ, ಸಾಬ್ರನೋ ಅಲ್ವೋ ನೋಡಿ ತಗಳೋಣು. ಹಣ್ಣ್ ಮಾರೋರು ಜಾಸ್ತಿ ಸಾಬ್ರೇ ಇರ್ತಾರೆ' ಎಂದು ಕಿಟಕಿಯಲ್ಲಿ ಇಣುಕಿ ನೋಡಿ, 'ಹಿಂದೂನೇ ಇರಬೇಕು ಹಣಿ ಮ್ಯಾಲೇ ವಿಭೂತಿ ಪಟ್ಟಿ ಐತ್ರೀ' ಎಂದು ತಾರೀಫು ಮಾಡಿದ್ದಲ್ಲದೇ, ಹಣ್ಣು ಕೊಳ್ಳುವಾಗ ಜೊತೆಗೆ ಬಂದು, ಅವನ ಹೆಸರು ಕೇಳಿಕೊಂಡು 'ಪಕ್ಕಾ ಹಿಂದೂನೇ' ಎಂದು ಪಿಸುಗುಟ್ಟಿದಳು. ಮನೆ ಎಲ್ಲಿ ಎಂದು ಕೇಳಿಕೊಂಡು 'ಕಂಟೈನ್ಮೆಂಟ್ ಏರಿಯಾದನೋ ಅಲ್ಲ ಬಿಡ್ರಿ' ಎಂದು ಮತ್ತೊಮ್ಮೆ ಪಿಸುಗುಟ್ಟಿದ್ದು ಜ್ಞಾಪಕ ಬಂತು.
ಶೃತಿ, 'ಈಗೇನ್ರೀ ಮಾಡೋದು ಮತ್ತೆ?' ಎಂದಳು.
'ಮಾಡೋಕ್ಕೆ ಇನ್ನೇನೈತಿ, ಎಲ್ಲರೂ ಆಸ್ಪತ್ರಿಗೆ ಹೋಗಿ ಚೆಕ್ ಮಾಡಿಸೋದಷ್ಟೇ, ಲಗೂನ ತಯಾರಾಗು' ಎಂದು ಹೇಳಿದ ಅಮಿತ, ಆಸ್ಪತ್ರೆಗೆ ಹೋಗಲು ತಾನು ತಯಾರಾಗ ತೊಡಗಿದ.