ಪಾಕಿಸ್ತಾನದ yorker

ಪಾಕಿಸ್ತಾನದ yorker


 

ಪಾಕಿಸ್ತಾನದ ವಿದೇಶಾಂಗ ಸಚಿವೆ ಮಾತುಕತೆಗೆಂದು  ಭಾರತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಡೆಯಿಂದ ಒಂದು ‘ಯಾರ್ಕರ್’ ನಮ್ಮ ಕಾಲ ಬುಡಕ್ಕೆ ಬಂದು ಬಿದ್ದಿದೆ. ಭಾರತದ ವಿದೇಶಾಂಗ ಸಚಿವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಮುತ್ಸದ್ದಿಯಾಗಿದ್ದು ಪಾಕ್ ನ ಹೊಸ ವಿದೇಶಾಂಗ ಸಚಿವೆ ಅವರ ಮುಂದೆ ಏನೂ ಅಲ್ಲ ಅನುಭವದಲ್ಲಿ. ಹೀಗೆಂದು ಹೇಳಿದ್ದು ಕಾಂಗ್ರೆಸ್ ಹೈ ಕಮಾಂಡ್ ಅಲ್ಲ. ಈ ಅಪರೂಪದ ಹೊಗಳಿಕೆಯ ಮಾತುಗಳು ಪಾಕಿಸ್ತಾನದ ಜಮೀಯತ್ ಉಲೇಮಾ ಪಕ್ಷದ ಫಜ್ಲುರ್ ರಹಮಾನ್ ಬಾಯಿಂದ ಬಿದ್ದಿದ್ದು. ಭಾರತದ ಕೃಷ್ಣ, ಪಾಕ್ ನ ನೂತನ ವಿದೇಶಾಂಗ ಸಚಿವೆ ‘ಹೀನಾ ಖಾರ್’ ರನ್ನು outsmart ಮಾಡುವರು ಎನ್ನುವ ಮಾತಿನ ಹಿಂದೆ ಮಾತುಕತೆಗಳ ಮುನ್ನವೇ ನಮ್ಮನ್ನು outsmart ಮಾಡೋ ಹುನ್ನಾರವೇ ಪಾಕಿಗಳದು? ಪಾಕಿಸ್ತಾನವನ್ನು ನಂಬಿ ಕೆಟ್ಟವರ “ಕ್ಯೂ” ನಮ್ಮ ಪಡಿತರ ಅಂಗಡಿಯ ಮುಂದೆ ಸಕ್ಕರೆಗಾಗಿ ಕಾದು ನಿಲ್ಲುವವರಿಗಿಂತಲೂ ದೊಡ್ಡದು. ಹಾಗಾಗಿ ಪ್ರಶಂಸೆಯ ಮಾತುಗಳೂ ಸಹ ‘ಸ್ಕ್ಯಾನರ್’  ದಾಟಿಯೇ ಹೋಗಬೇಕು. ಇಲ್ಲದಿದ್ದರೆ ಚಳ್ಳೆ ಹಣ್ಣಿನ ಆತಿಥ್ಯ ನಮ್ಮದಾಗುತ್ತದೆ.   

 

ಹೀನಾ ರಬ್ಬಾನಿ ಖಾರ್. ಆಧುನಿಕ ಶಿಕ್ಷಣ ಪಡೆದ, ಈ ಮಹಿಳೆ ಪಾಕ್ ರಾಜಕೀಯ ಕ್ಷೇತ್ರ ಪ್ರವೇಶ ಪಡೆದಿದ್ದು ತನ್ನ ತಂದೆಯ ಹೆಸರಿನ ಕಾರಣ. ಸಾಮಾನ್ಯವಾಗಿ ಮಹಿಳೆಯರು ರಾಜಕೀಯಕ್ಕೆ ಪುರುಷರ ನೆರಳಿನಿಂದಲೇ ಬರುವರು ಎನ್ನುವ ಮಾತು ಕೇಳಿ ಬಂದರೂ ಸಾಕಷ್ಟು ಮಹಿಳೆಯರು ಸ್ವ ಸಾಮರ್ಥ್ಯದಿಂದ ಅಧಿಕಾರದ ಚುಕ್ಕಾಣಿ ಹಿಡಿದ್ದಾರೆ. ಬ್ರಿಟನ್ ದೇಶದ ಮಾರ್ಗರೆಟ್ ಥ್ಯಾಚರ್, ತುರ್ಕಿ ದೇಶದ ಮಾಜಿ ಪ್ರಧಾನಿ ತಾಂಸು ಚಿಲ್ಲರ್, ನಮ್ಮ ಮಮತಾ ಬ್ಯಾನರ್ಜೀ ಮುಂತಾದವರು ಸ್ವ ಸಾಮರ್ಥ್ಯದಿಂದ ಜನಬೆಂಬಲ ಪಡೆದು ಕೊಂಡವರು. ಪಾಕಿಸ್ತಾನದ  ಸಂಸತ್ ಸದಸ್ಯರಾಗ ಬೇಕೆಂದರೆ ಪದವೀಧರರಾಗಿರಬೇಕು ಎನ್ನುವ ನಿಯಮವಿದೆ. ಈ ನಿಯಮದ ಕಾರಣ ಪದವೀಧರರಲ್ಲದ ರಾಜಕಾರಣಿಗಳು ತಮ್ಮ ಮಕ್ಕಳನ್ನು ಚುನಾವಣೆಯಲ್ಲಿ ಸ್ಪರ್ದಿಸಲು ಉತ್ತೇಜಿಸುತ್ತಾರೆ. ಹೀಗೆ ಮತ್ತೆ ಇನ್ನಿತರ ರೀತಿಯಲ್ಲಿ ತಮ್ಮ ತಂದೆಯರ ಪ್ರಭಾವ ಬಳಸಿ ರಾಜಕಾರಣ ಪ್ರವೇಶಿಸುವವರು ಹೆಚ್ಚು. ಈ ವ್ಯವಸ್ಥೆಯ ಮುಖಾಂತರ ಹೀನಾ ರಾಜಕಾರಣ ಪ್ರವೇಶಿಸಿದ್ದು.

 

ವಿದೇಶಾಂಗ ಖಾತೆಯ ವಿಷಯದಲ್ಲಿ ಪಾಕ್ ಬಹಳ ನಾಜೂಕು, choosy. ಕಳ್ಳರು ತಮ್ಮ ಕಿತಾಪತಿಯಿಂದ ಬೇಸತ್ತ ವಿಶ್ವಕ್ಕೆ ಅವಶ್ಯವಾಗಿ ಬೇಕಾದ ಆರೈಕೆಯನ್ನು ಆಕರ್ಷಕ ವ್ಯಕ್ತಿತ್ವಗಳ ಕೈಯ್ಯಲ್ಲಿ ಮಾಡಿಸುತ್ತಾರೆ. ಪಾಕಿಸ್ತಾನದ ಅಮೆರಿಕೆಯ ರಾಯಭಾರಿ ಯಾಗಿದ್ದ ಮಲೀಹಾ ಲೋಧಿ ಶ್ವೇತ ಭವನದ ಮೇಲೆ ದೊಡ್ಡ ಪ್ರಭಾವ ಬೀರಿದ್ದರು. ಪಾಕಿಸ್ತಾನ ಕಿತಾಪತಿ ಮಾಡಿದಾಗಲೆಲ್ಲಾ ಇನ್ನೇನು ಅಮೇರಿಕಾ ಆ ದೇಶವನ್ನು ಭಯೋತ್ಪಾದಕ ದೇಶ ಎಂದು ಘೋಷಿಸುತ್ತದೆ ಎನ್ನುತ್ತಿದ್ದಂತೆಯೇ ಈಕೆ ತನ್ನ ಮಾತಿನ, ನಗುವಿನ ಪ್ರಭಾವದಿಂದ ತನ್ನ ದೇಶವನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದಳು.  ಜುಲ್ಫಿಕಾರ್ ಅಲಿ ಭುಟ್ಟೋ ಸಹ ಪಾಕ್ ದೇಶದ ಪ್ರತಿಭಾವಂತ ವಿದೇಶಾಂಗ ಸಚಿವರಾಗಿದ್ದರು. ದೇಶದ ವರ್ಚಸ್ಸು, ಹೆಚ್ಚೆಬೇಕೆಂದರೆ ಸಾಮಾನ್ಯವಾಗಿ ವಿದೇಶಾಂಗ ಸಚಿವರುಗಳು ಮತ್ತು ದೊಡ್ಡ ದೊಡ್ಡ ಪ್ರಭಾವಶಾಲೀ ದೇಶಗಳ ರಾಯಭಾರಿಗಳು ಆಕರ್ಷಕ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಇಂಥ ಹುದ್ದೆಗಳ ಆಯ್ಕೆಯಲ್ಲಿ ಸರಕಾರಗಳು ಜಾಗರೂಕವಾಗಿರುತ್ತವೆ.  

 

ಕೇವಲ ೩೪ ವರುಷ ಪ್ರಾಯದ ಪಾಕಿಸ್ತಾನದ ನವ ನಿಯುಕ್ತ ವಿದೇಶಾಂಗ ಸಚಿವೆ ಕಂಡಿದ್ದು ಕಾರ್ಗಿಲ್ ಯುದ್ಧ ಮಾತ್ರ. ೨೦೦೫ ರ ಭೂಕಂಪದ ವೇಳೆ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ದೊಡ್ಡ ವಿದೇಶೀ ಅನುಭವ ಈಕೆಯಲ್ಲಿ ಕಾಣುತ್ತಿಲ್ಲ. ೨೦೦೯ ರಲ್ಲಿ ಪಾಕಿಸ್ತಾನದ ಆಯವ್ಯಯ ಪತ್ರವನ್ನೂ ಈಕೆ ಮಂಡಿಸಿದ್ದರು. ವಯಸ್ಸು ೩೨ ಆದರೂ ಈಗಾಗಲೇ ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.  

ಹಾಗಾಗಿ ಸಾಕಷ್ಟು ಅನುಭವ ಇಲ್ಲದ ಈ ಮಹಿಳೆ ಭಾರತದಲ್ಲಿ ಬಂದು ಯಾವ ರೀತಿಯ ಪ್ರದರ್ಶನ ನೀಡುವರೋ ಎನ್ನುವುದು ಕುತೂಹಲಕರ ಸಂಗತಿ. ಆಕೆಯ ರಾಜಕೀಯ, ಕೌಟುಂಬಿಕ, ಅನುಭವದ ಹಿನ್ನೆಲೆ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳದೆ ನಾವು ಹೇಳಬೇಕಾದ್ದನ್ನು ಸ್ಪಷ್ಟ ಮಾತುಗಳಲ್ಲಿ ಹೇಳಬೇಕು. ಅತಿಥಿ ಎಳೆ ಪ್ರಾಯದವಳು, ಅನುಭವ ಇಲ್ಲದಾಕೆ, ಅತಿಥಿ ಸತ್ಕಾರ, ಹಾಗೆ ಹೀಗೆ ಎಂದು ಸಲೀಸಾಗಿ ನಡೆಸಿಕೊಳ್ಳದೆ ನಮ್ಮ ಹಿತಾಸಕ್ತಿಯನ್ನು ಎಂದಿಗಿಂತ ಸ್ವಲ್ಪ ಜೋರಾಗಿಯೇ ಕಾಯ್ದು ಕೊಂಡರೆ ನಮಗೇ ಹಿತ. ಅಷ್ಟು ಮಾತ್ರ ಅಲ್ಲ, ಇಲ್ಲೊಂದು ‘caveat emptor’ ಸಹ ಇದೆ. ಪಾಕ್ ನ ಈ ವಿದೇಶಾಂಗ ಸಚಿವೆ ಪದವಿ ಪಡೆದಿದ್ದು ಹೋಟೆಲ್ ಮ್ಯಾನೇಜ್ಮೆಂಟ್ನಲ್ಲಿ, ಅದೂ ಅಮೆರಿಕೆಯ ವಿಶ್ವ ವಿದ್ಯಾಲಯದಿಂದ. deadly double. ಈ ಪದವಿ ಪಡೆದವರು ಯಾವಾಗಲೂ ಮುಗುಳ್ನಗುವನ್ನೇ ಧರಿಸಿರುತ್ತಾರೆ, ಒಳ್ಳೆಯ, ಸಿಹಿಯಾದ, ಸತ್ಕಾರದ ಮಾತುಗಳನ್ನೇ ಆಡುತ್ತಾರೆ ಎಂಥ ಸಂದರ್ಭಗಳಲ್ಲೂ. ಹಳಸಿದ ಪುಳಿಯೋಗರೆ ಯನ್ನು ಇದು ತುಂಬಾ delicious ಎಂದು ನಮ್ಮ ಒಲ್ಲದ ಬಾಯಿಗೆ ತುರುಕುವ ಜನ ಈ hospitality management ಗಳಿಸಿದವರು.

 

 

ಒಂದು ಕಡೆ ಹಿಲರಿ ಕ್ಲಿಂಟನ್, ಮತ್ತೊಂದು ಕಡೆ ಹೀನಾ ರಬ್ಬಾನಿ, ಇವರಿಬ್ಬರ ನಡುವೆ ನಮ್ಮ ಮುದ್ದು ಕೃಷ್ಣಾ, ಊಹಿಸಿ ನೋಡಿ. ಅಂತಾರಾಷ್ಟ್ರೀಯ ರಾಜಕಾರಣ ಮುಗುಳ್ನಗುವಿನ, ಫೋಟೋ ಶಾಟ್ ಗಳಿಂದ ತುಂಬಿದ ಪಿಕ್ನಿಕ್ ಅಲ್ಲ. ನಲ್ನುಡಿಗಳ land mine ಗಳು ತುಂಬಿರುತ್ತವೆ ಹಾದಿ ಯುದ್ದಕ್ಕೂ. ಇವನ್ನು  ಗುರುತಿಸಿ ನಮ್ಮ ಹಿತಾಸಕ್ತಿ ಕಾಯ್ದು ಕೊಳ್ಳುವುದು ಒಂದು ದೊಡ್ಡ ಸಾಹಸವೇ ಸರಿ. ಈ ಸಾಹಸದಲ್ಲಿ ನಮ್ಮ ಕೃಷ್ಣ ವಿಜಯಿಯಾಗಲಿ.  

 

ಚಿತ್ರ ಕೃಪೆ: ibtimes.com

Comments