ಪಾಕ್ ನಲ್ಲಿ ದಿಕ್ಕೆಟ್ಟ ಬದುಕು !
ಪಾಕಿಸ್ಥಾನದಲ್ಲಿ ದಿಕ್ಕೆಟ್ಟ ಸಾಮಾಜಿಕ ವ್ಯವಸ್ಥೆ. ಮಿತಿಮೀರಿದ ಅಗತ್ಯ ವಸ್ತುಗಳ ಬೆಲೆ. ಆಹಾರಧಾನ್ಯಗಳಿಗಾಗಿ ಜನತೆಯ ಹಾಹಾಕಾರ, ನೂಕುನುಗ್ಗಲು. ಕಾಲ್ತುಳಿತಕ್ಕೆ ಅಮಾಯಕರ ಸಾವು. ಒಂದು ಕಿಲೋ ಗೋಧಿ ಬೆಲೆಯೇ ಸಾವಿರಾರು ರೂಪಾಯಿ ಎಂದರೆ ಈ ದೇಶದ ಆರ್ಥಿಕ ಪರಿಸ್ಥಿತಿ ಅದೆಷ್ಟು ಹೀನಾಯವಾಗಿದೆ ಎಂಬುದಕ್ಕೆ ವಿವರಣೆ ಅನಗತ್ಯ.
ವಿಶಾಲ ಭಾರತದ ವಿಭಜನೆಯ ನಂತರ ಪಾಕಿಸ್ಥಾನ ಸಾಧಿಸಿದ್ದಾದರೂ ಏನು? ಕಿತ್ತು ತಿನ್ನುವ ಬಡತನ, ಅಸಮಾನತೆ, ಉಳ್ಳವರಿಂದ ಬಡವರ ಶೋಷಣೆ, ಅನಕ್ಷರತೆ, ಪರಿಗಣನೆಗೆ ಬಾರದ ಪ್ರಜಾತಂತ್ರ. ಆಡಳಿತದ ಮಟ್ಟದಲ್ಲಿ ಮಿತಿಮೀರಿದ ಭ್ರಷ್ಟಾಚಾರ, ಯಾವುದೇ ದೇಶ ಹಾಳಾಗಲು ಈ ಸಮಾಜಿಕ ಪೀಡೆಗಳೇ ಸಾಕು ! ಈ ದಿಶೆಯಲ್ಲಿ ಪಾಕ್ ಅನ್ನು ಕಳೆದ ಏಳು ದಶಕಗಳಿಂದ ಇವುಗಳು ಆವರಿಸಿದ್ದರೂ ಇದನ್ನು ತೊಲಗಿಸಿ ಪ್ರಜಾಸಂಕ್ಷೇಮ ದೇಶವನ್ನು ರಚಿಸಬೇಕೆಂಬ ಧೃಢ ಸಂಕಲ್ಪ ಈ ದೇಶದ ಆಡಳಿತಗಾರರನ್ನು ಕಾಡಲೇ ಇಲ್ಲ. ದೇಶದ ದಾರಿದ್ರ್ಯ ಮತ್ತು ಸಾಮಾಜಿಕ ಅಸಮಾನತೆಯ ಬದುಕು ಇಲ್ಲಿನ ರಾಜಕೀಯ ಪಕ್ಷಗಳು ಮತ್ತು ನಾಯಕರ ಮನ ಕಲುಕಲೇ ಇಲ್ಲ. ಪಾಕಿಸ್ಥಾನ ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ತಲೆಯೆತ್ತಿ ನಿಲ್ಲಲು ಸಾಧ್ಯವಾಗದಂತಹ ದುಃಸ್ಥಿತಿಗೆ ಬರಲು ಇಲ್ಲಿನ ರಾಜಕೀಯ ಅರಾಜಕತೆ ಮತ್ತು ಸ್ವಯಂಕೃತವೇ ಕಾರಣ.
ಪಾಕಿಸ್ಥಾನಕ್ಕೆ ಮೊದಲಿನಿಂದಲೂ ಚೀನಾ ದೇಶವು ಎಲ್ಲಾ ರೀತಿಯಲ್ಲಿ ನೆರವು ನೀಡಿದೆ. ರಕ್ಷಣಾ ಸಾಮಗ್ರಿ ನೆರವಲ್ಲದೆ ಇತರೆ ವಿಷಯಗಳಲ್ಲಿಯೂ ಸಹಾಯ ಹಸ್ತ ನೀಡುವ ಚೀನಾ ಎಂದೂ ಪಾಕ್ ಹಿತಾಸಕ್ತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಕಳೆದ ಮೂರು ವರ್ಷಗಳಿಂದ ಕೊರೊನಾ ಕ್ರೂರ ದವಡೆಯಲ್ಲಿ ಸಿಲುಕಿರುವ ಚೀನಾ ಆರ್ಥಿಕ ಪರಿಸ್ಥಿತಿಯೇ ಇಂದು ಭೀಕರವಾಗಿದೆ. ಇಂತಹ ಸನ್ನಿವೇಶದಲ್ಲಿ ಚೀನಾ ಆದರೂ ಪಾಕ್ ಗೆ ಹೇಗೆ ನೆರವಾಗಲು ಸಾಧ್ಯ? ಇನ್ನು ರಷ್ಯಾ ಮತ್ತು ಅಮೇರಿಕ ಕೂಡಾ ಪಾಕ್ ಬಗ್ಗೆ ಸದಭಿಪ್ರಾಯ ಹೊಂದಿಲ್ಲ. ಉಗ್ರವಾದವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಪ್ರಪಂಚದ ದೃಷ್ಟಿಯಲ್ಲಿ ಸೋಗಲಾಡಿ ಮಾತುಗಳನ್ನು ಹೇಳುವ ಈ ದೇಶದ ಆಡಳಿತಗಾರರನ್ನು ಪ್ರಪಂಚದ ಬಹುತೇಕ ದೇಶಗಳು ಸಂಪೂರ್ಣವಾಗಿ ನಂಬಿಲ್ಲ.
ವಾಸ್ತವದಲ್ಲಿ ಇಸ್ಲಾಮಿಕ್ ದೇಶಗಳಿಂದಲೇ ಪಾಕಿಸ್ಥಾನಕ್ಕೆ ಸಮರ್ಥನೀಯವಾದ ನೆರವು ಮತ್ತು ಮೈತ್ರಿ ಇಲ್ಲದಿರುವುದು ಕಟುಸತ್ಯ. ಒಣ ಜಂಬ ಮತ್ತು ಉಗ್ರವಾದಿಗಳ ಕೈಗೊಂಬೆಯಾಗಿರುವ ಪಾಕಿಸ್ಥಾನಕ್ಕೆ ತನ್ನದೇ ಆದ ಸ್ವಂತ ಶಕ್ತಿಯ ಮೇಲೆ ಸದೃಢ ಸಮಾಜವನ್ನು ಕಟ್ಟಲು ಇದುವರೆಗೂ ಸಾಧ್ಯವಾಗಿಲ್ಲ. ಮೂರು ತಿಂಗಳ ಹಿಂದೆ ಶ್ರೀಲಂಕಾದಲ್ಲಿ ಹಾಲು, ಪೆಟ್ರೋಲ್ ಮೊದಲಾದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಇಲ್ಲಿನ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಆದರೆ ಭಾರತವೂ ಸೇರಿದಂತೆ ವಿದೇಶಿ ಸಕಾಲಿಕ ನೆರವಿನಿಂದ ದ್ವೀಪ ದೇಶದಲ್ಲಿ ತಲೆದೋರಿದ್ದ ಅರಾಜಕತೆ ಮತ್ತು ಆರ್ಥಿಕ ಕ್ಷಾಮ ಬಹಳ ಬೇಗ ನಿಯಂತ್ರಣಕ್ಕೆ ಬಂದಿದ್ದು ನಿಜ. ಆದರೆ ಪಾಕಿಸ್ಥಾನದಲ್ಲಿ ಪ್ರಸ್ತುವ ನಿರ್ಮಾಣವಾಗಿರುವ ಸಂಕಷ್ಟಕರ ಪರಿಸ್ಥಿತಿಯಿಂದ ಹೊರಬರುವುದು ಅಷ್ಟು ಸುಲಭವಲ್ಲ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೧೧-೦೧-೨೦೨೩