ಪಾತಾಳಕ್ಕೆ ಪಯಣ

ಪಾತಾಳಕ್ಕೆ ಪಯಣ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಕೆ. ಶಿವರಾಮ ಕಾರಂತ
ಪ್ರಕಾಶಕರು
ಸಪ್ನ ಬುಕ್ ಹೌಸ್, ಬೆಂಗಳೂರು
ಪುಸ್ತಕದ ಬೆಲೆ
ರೂ.130/-

ಯಕ್ಷಗಾನ, ಚಿತ್ರಕಲೆ, ವಿಜ್ಞಾನ ಸಾಹಿತ್ಯ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದವರು ಡಾ. ಕೆ. ಶಿವರಾಮ ಕಾರಂತರು. ಐವತ್ತಕ್ಕೂ ಮಿಕ್ಕಿ ಕಾದಂಬರಿಗಳನ್ನು ಬರೆದವರು. “ಕಡಲತಡಿಯ ಭಾರ್ಗವ” ಎಂದು ಹೆಸರಾದವರು. ತಮ್ಮ ಅಧ್ಯಯನಶೀಲತೆ ಮತ್ತು ಪ್ರತಿಭೆಯಿಂದ ಕನ್ನಡದ ಅಗ್ರಗಣ್ಯ ಸಾಹಿತಿಗಳಲ್ಲಿ ಒಬ್ಬರೆನಿಸಿದವರು.

ಅವರು ಬರೆದಿರುವ ಕೆಲವೇ ಪ್ರವಾಸ ಕಥನಗಳಲ್ಲೊಂದು “ಪಾತಾಳಕ್ಕೆ ಪಯಣ”. ಇದರ ಬಗ್ಗೆ ಮುನ್ನುಡಿಯಲ್ಲಿ ಡಾ. ಕಾರಂತರು ಹೀಗೆನ್ನುತ್ತಾರೆ: “ನನ್ನೀ ಬರಹದಲ್ಲಿ ನಾನು ನೋಡಿದ ಬೃಹತ್ ದೇಶವಾದ ಯುನೈಟೆಡ್ ಸ್ಟೇಟ್ಸಿನ ಅಲ್ಪ ಪರಿಚಯವು ನಿಮಗೆ ಆದೀತು. ನನಗೆ ಇರುವುದೂ ಅದರ ಅಲ್ಪ ಪರಿಚಯವೇ! ನಾನು ಅಲ್ಲಿ ಇದ್ದ ಕಾಲ ಬಲು ಸ್ವಲ್ಪ; ಅಲ್ಲಿನ ಜನಗಳ ಪರಿಚಯವನ್ನು ಬೆಳೆಯಿಸುವ ಅವಕಾಶವಂತೂ ಆಗಿರಲೇ ಇಲ್ಲ. ಇದೊಂದು ವಿಹಂಗಮ ನೋಟ. ಆ ದೇಶ ನೋಡಿ ತಿಳಿಯಬೇಕು, ಸಂತೋಷಪಡಬೇಕು ಎಂಬ ಬಯಕೆಯಿಂದ ಹೋದ ನನ್ನ ಅಲ್ಪ ಅನುಭವವನ್ನಷ್ಟೇ ಅದು ತಿಳಿಸೀತು!”

ಡಾ. ಶಿವರಾಮ ಕಾರಂತರು ಯುನೈಟೆಡ್ ಸ್ಟೇಟ್ಸಿಗೆ ಒಂದು ತಿಂಗಳ ಅವಧಿಯ ಪ್ರವಾಸವನ್ನು ಯೋಜಿಸಿದ್ದರು. ಅದನ್ನು ತಿಳಿದ  ಅವರ ಯಕ್ಷಗಾನದ ವಿದ್ಯಾರ್ಥಿ, ಮಿಚಿಗನ್ ವಿಶ್ವವಿದ್ಯಾಲಯದ ಮಾರ್ತಾ ಎಸ್ಟನ್ “ಏಷಿಯನ್ ಥಿಯೇಟರ್ ಸಂಸ್ಥೆಗಳ” ವತಿಯಿಂದ ಅವುಗಳ “ವಾರ್ಷಿಕ ಸಮ್ಮೇಳನಕ್ಕೆ ಬನ್ನಿ. 1972ರ ಆಗಸ್ಟ್ 21ರಿಂದ ಆಗಸ್ಟ್ 24ರ ತನಕ ನಮ್ಮ ಜೊತೆಗೆ ಇದ್ದು ಬಿಡಿ” ಎಂಬ ಆಹ್ವಾನ ನೀಡಿದ್ದು ಕಾರಂತರಿಗೆ ಅನುಕೂಲವೇ ಆಯಿತು.

ಪ್ರವಾಸ ಕಥನದ ಮೊದಲ ಅಧ್ಯಾಯ “ಜಂಬೋ ಸವಾರಿಯ ಯೋಗ” ಅವರ ಪ್ರವಾಸದ ಹಿನ್ನೆಲೆಯ ಮಾಹಿತಿ ಒಳಗೊಂಡಿದೆ. ಮಂಗಳೂರಿನಿಂದ ಬೆಂಗಳೂರು ತಲಪಿ, ಅಭಿಮಾನಿಗಳ ಸನ್ಮಾನ ಸ್ವೀಕರಿಸಿ, ಅಲ್ಲಿಂದ ವಿಮಾನದಲ್ಲಿ ಮುಂಬೈಗೆ ಸಾಗಿದ್ದರು. ಅಲ್ಲಿ ಸುಪ್ರಸಿದ್ಧ ಚಿತ್ರಕಲಾವಿದ ಕೆ.ಕೆ. ಹೆಬ್ಬಾರರ ಅತಿಥಿಯಾಗಿದ್ದು, ಅಲ್ಲಿಂದ ನ್ಯೂಯಾರ್ಕಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು.  ಎರಡನೆಯ ಅಧ್ಯಾಯ “ಪಶ್ಚಿಮಾಭಿಮುಖವಾಗಿ” ಈ ಸುದೀರ್ಘ ವಿಮಾನ ಯಾನದ ವಿವರಗಳನ್ನು ತಿಳಿಸುತ್ತದೆ. ಸುಮಾರು ಐವತ್ತು ವರುಷಗಳ ಮುಂಚಿನ ವಿಮಾನ ಯಾನಕ್ಕೂ ಈಗಿನದಕ್ಕೂ ಪ್ರಯಾಣಿಕರ ಭದ್ರತೆ, ಖರ್ಚಿಗಾಗಿ ಡಾಲರ್ ಲಭ್ಯತೆ, ನಿಯಮಗಳ ಪಾಲನೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅನೇಕ ಬದಲಾವಣೆಗಳು ಆಗಿವೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ.   

ಡಾ. ಕಾರಂತರು ನ್ಯೂಯಾರ್ಕಿನಲ್ಲಿ ಇಳಿದಾಗ ಅವರನ್ನು ಸ್ವಾಗತಿಸಿದ್ದು ಅವರ ಆಪ್ತ ಸ್ನೇಹಿತ ಡಾ. ಗೋಪಿನಾಥ ಕಲ್ಯಾಣಪುರ. ಯುನೈಟೆಡ್ ಸ್ಟೇಟ್ಸಿನಲ್ಲಿ ಆರಂಭದ ಎರಡು ವಾರ ಮತ್ತು ಕೊನೆಯ ವಾರದಲ್ಲಿ ಶಿವರಾಮ ಕಾರಂತರನ್ನು ವಿವಿಧೆಡೆಗಳಿಗೆ ತಮ್ಮ ಕಾರಿನಲ್ಲಿ ಸುತ್ತಾಡಿಸಿದವರು ಗೋಪಿನಾಥ ಕಲ್ಯಾಣಪುರ ದಂಪತಿ. ನಡುವಣ ಒಂದು ವಾರದಲ್ಲಿ ಕಾರಂತರನ್ನು ಸುತ್ತಾಡಿಸಿದಾಕೆ ಅವರ ವಿದ್ಯಾರ್ಥಿಯಾಗಿದ್ದ ಮಾರ್ತಾ ಎಸ್ಟನ್. ಇವರಿಬ್ಬರ ಸಹಾಯದಿಂದಾಗಿ ಅಪರಿಚಿತ ದೇಶದಲ್ಲಿ ತನ್ನ ಪ್ರವಾಸ ಸುಗಮವಾಯಿತು ಎಂಬುದನ್ನು ಶಿವರಾಮ ಕಾರಂತರು ದಾಖಲಿಸಿದ್ದಾರೆ.

ಮೂರು ಮತ್ತು ನಾಲ್ಕನೆಯ ಅಧ್ಯಾಯದಲ್ಲಿ ಮಹಾನಗರ ನ್ಯೂಯಾರ್ಕಿನ ಸುತ್ತಾಟದ ವಿವರಗಳನ್ನು ನೀಡಿದ್ದಾರೆ ಡಾ. ಕಾರಂತರು. ಪ್ರಸಿದ್ಧವಾದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಅಲ್ಲಿಗೆ ನೀಡಿದ ಭೇಟಿಯ ಬಗ್ಗೆ ಬರೆಯುತ್ತಾ ಆ ಕಟ್ಟಡದ ಭವ್ಯತೆಯನ್ನು ಹೀಗೆ ಬಣ್ಣಿಸುತ್ತಾರೆ: ಅದು, ದೈತ್ಯ ವಿಸ್ತಾರದ ಅಸಂಖ್ಯ ದೊಡ್ಡ ಕೊಠಡಿಗಳುಳ್ಳ ನೆಲಮಾಳಿಗೆ ಮತ್ತು ಎರಡು ಉಪ್ಪರಿಗೆಗಳಿರುವ ಒಂದು ಕಟ್ಟಡ. ….” ಅಲ್ಲಿರುವ ಚಿತ್ರ ಕಲಾಕೃತಿಗಳ ಬಗ್ಗೆ ಅವರು ನೀಡುವ ಕೆಲವು ವಿವರಗಳು:     “ಯುರೋಪಿನ ಕಲಾವಿದರ ಪ್ರಸಿದ್ಧ ಚಿತ್ರಗಳ ಮೂಲ ಕೃತಿಗಳೆಲ್ಲ ಅಲ್ಲಿಯೇ ಬಂದು ಕಲೆತಂತಿತ್ತು. ರೆಮ್ರಾಂಡ್, ವೆಲ್ಲಾಸ್ಕ್, ವ್ಯಾನ್-ಗಫ್, ಟೇಶಿಯನ್, ಕೆನಲಿಟೋ - ಹೀಗೆ ನೂರಾರು ಪ್ರಸಿದ್ಧ ಹೆಸರುಗಳು ಅಲ್ಲಿ ಪ್ರಾತಿನಿಧ್ಯ ಪಡೆದಿವೆ. ಇಂದು ಅಲ್ಲಿನ ಒಂದೊಂದೂ ಚಿತ್ರದ ಮೌಲ್ಯ ಲಕ್ಷ ಮಿಲಿಯ ಡಾಲರುಗಳಲ್ಲಿ ಎಣಿಕೆ ಹಾಕುತ್ತಾರೆ. ಎಷ್ಟು ನೋಡಿದರೂ ಮುಗಿಯದಿರುವ ಸಂಭ್ರಮ ಅಲ್ಲಿನದು….”

ಶಿವರಾಮ ಕಾರಂತರು ನ್ಯೂಯಾರ್ಕಿನಿಂದ ಮುಂದೆ ಸಾಗಿದ್ದು ಸಾವಿರ ಮೈಲು ಈಶಾನ್ಯಕ್ಕಿರುವ ಸೈಂಟ್ ಪಾಲ್ ನಗರಕ್ಕೆ. ಅದು  ಅವರ ಮಿತ್ರ ಗೋಪಿನಾಥ ಕಲ್ಯಾಣಪುರರ ಮನೆಯಿರುವ ನಗರ. ಅಲ್ಲಿ ನಾಲ್ಕು ದಿನಗಳಿದ್ದ ಕಾರಂತರು, ಆ ಅವಧಿಯಲ್ಲಿ ಹತ್ತಿರದಲ್ಲಿದ್ದ ಮಿನಿಯ ಪೊಲೀಸ್ ನಗರಕ್ಕೂ ಭೇಟಿ ನೀಡುತ್ತಾರೆ. ಶಿವರಾಮ ಕಾರಂತರನ್ನು ಕಾಣಲು ಎರಡೂ ನಗರಗಳಲ್ಲಿ ಕರ್ನಾಟಕ ಮೂಲದ ಹಲವು ಪರಿಚಿತರು ಬರುತ್ತಾರೆ. ಗೆಳೆಯನ ಮನೆಯಲ್ಲೇ ಉಳಿದ ಕಾರಣ ಅವರಿಗೆ “ಊರಿನ ಆಹಾರವೇ” ಲಭ್ಯವಾದದ್ದು ಅವರ ಅದೃಷ್ಟ. ಮಿನಿಯ ಪೋಲೀಸಿನಲ್ಲಿ ಮಿತ್ರರ ಮನೆಗೆ ಬರುತ್ತಿದ್ದ ದಿನಪತ್ರಿಕೆ “ಸ್ಟಾರ್” ಬಗ್ಗೆ ಕೆಲವು ಕುತೂಹಲಕರ ಮಾಹಿತಿ ನೀಡುತ್ತಾರೆ ಕಾರಂತರು. ಅದು ನಿತ್ಯಕ್ಕೆ 40-50 ಪುಟಗಳ ಪತ್ರಿಕೆ! ಭಾನುವಾರದ ಸಂಚಿಕೆಯಲ್ಲಿ 150 ಪುಟಗಳು! ನ್ಯೂಯಾರ್ಕ್ ಅಥವಾ ವಾಷಿಂಗ್ಟನ್ ನಗರಗಳಲ್ಲಿ ಇಂತಹ ಪತ್ರಿಕೆಗಳ ಗಾತ್ರ ಇದರ ಎರಡು ಪಟ್ಟು! ಅವುಗಳಲ್ಲಿ ವಿವಿಧ ವಿಷಯಗಳಿಗೆ ವಿವಿಧ ಪುರವಣಿಗಳು. ಜೊತೆಗೆ ವಾರ್ತೆಗಳು, ಜಾಹೀರಾತುಗಳು ಮತ್ತು ಬೆಲೆಪಟ್ಟಿಗಳು ತುಂಬಿರುತ್ತವೆ.

“ಸ್ಟಾರ್” ಪತ್ರಿಕೆಯ ಒಂದು ಸ್ವಾರಸ್ಯಕರ ಪುಟದ ಬಗ್ಗೆ ದಾಖಲಿಸಿದ್ದಾರೆ. ಅದು ಜನರಿಂದ ಪತ್ರಿಕೆಯ ಕಚೇರಿಗೆ ಬರುವ ದೂರುಗಳು ಮತ್ತು ಉತ್ತರಗಳ ಪುಟ. ಆ ಪುಟದ ಉಪಸಂಪಾದಕ ಟೆಲಿಫೋನ್ ಮೂಲಕ ದೂರಿಗೆ ಕಾರಣರಾದ ಅಧಿಕಾರಿ, ಪೂರೈಕೆದಾರ, ಮಾರಾಟಗಾರ ಅಥವಾ ಕಂಪೆನಿಯನ್ನು ಸಂಪರ್ಕಿಸಿ ಅವರು ದೂರಿನ ಪರಿಹಾರಕ್ಕಾಗಿ ಕ್ರಮ ತೆಗೆದುಕೊಳ್ಳುವಂತೆ ಮಾಡುತ್ತಾನೆ. ದೂರಿಗೆ ಬಂದ ಪರಿಹಾರ ಅಥವಾ ಬರಲಿರುವ ಪರಿಹಾರವನ್ನು “ಉತ್ತರ”ವಾಗಿ ಪತ್ರಿಕೆಯಲ್ಲಿ ಪ್ರಕಟಿಸುತ್ತಾನೆ. ಇದನ್ನು ಓದುತ್ತಿದ್ದಂತೆ, ಭಾರತದ ಸಾವಿರಾರು ಪತ್ರಿಕೆಗಳು ಈಗ ಐವತ್ತು ವರುಷಗಳ ನಂತರವಾದರೂ ಇಂತಹ ಪುಟವೊಂದನ್ನು ಶುರು ಮಾಡಿದರೆ ಎಷ್ಟು ಚೆನ್ನ ಎನಿಸಿತು (ನನಗೆ).  

ಅಲ್ಲಿಂದ ಮಾರ್ತಾ ಎಸ್ಟನ್ ಜೊತೆ ಡಾ. ಕಾರಂತರು ವಿಮಾನದಲ್ಲಿ ಪ್ರಯಾಣಿಸಿದ್ದು ಸಾನ್-ಫ್ರಾನ್ಸಿಸ್ಕೋ ಮಹಾನಗರಕ್ಕೆ. ಅಧ್ಯಾಯ 6 ಮತ್ತು 7 ಅಲ್ಲಿನ ಭೇಟಿಯ ವಿವರಗಳಿಗೆ ಮೀಸಲು. ಅಲ್ಲಿಂದ ನೂರು ಮೈಲು ದೂರದ ಸಿಕೋಯಾ ರಾಷ್ಟ್ರೀಯ ಅರಣ್ಯೋದ್ಯಾನಕ್ಕೆ ನೀಡಿದ ಭೇಟಿ ನೀಡಿದಾಗ ಗಮನಿಸಿದ ಸಂಗತಿಗಳನ್ನು ಅಧ್ಯಾಯ 8 - ಸಿಕೋಯಾ ಉದ್ಯಾನದಲ್ಲಿ ಬರೆದಿದ್ದಾರೆ. ಸಿಕೋಯಾ ಜಾತಿಯ ಬೃಹತ್ ಮರಗಳು 200 - 300 ಅಡಿಗಳ ಎತ್ತರಕ್ಕೆ ಬೆಳೆಯುತ್ತವೆ. ಅಂತಹ ಒಂದು ದೈತ್ಯ ವೃಕ್ಷ “ಜನರಲ್ ಶರ್ಮಾನ್”. ಅದರ ಪ್ರಾಯ 3,000 - 3,500 ವರುಷಗಳು! ಅದರ ಎತ್ತರ 272 ಅಡಿ, ಬುಡದ ಸುತ್ತಳತೆ 101 ಅಡಿ ಮತ್ತು ದಪ್ಪ 36 ಅಡಿ! ಆ ಮಹಾಮರದ ಸಂಪೂರ್ಣ ಕಾಂಡದ ಘನ ಅಳತೆ 50,000 ಘನ ಅಡಿ! “ಈ ಗಾತ್ರದ ಮರದ ಮುಂದೆ ಮನುಷ್ಯ ತನ್ನ ಕುಬ್ಜಾಕಾರವನ್ನು ನೆನೆದು ನಾಚಿಕೆ ಪಡುವಂತಾದೀತು!” ಎಂಬುದು ಕಾರಂತರ ಅಭಿಪ್ರಾಯ.

ಅದೇ ದಿನ ಸಂಜೆ ಅವರಿಬ್ಬರೂ ವಿಮಾನದಲ್ಲಿ “ಗ್ರಾಂಡ್ ಕೆನಿಯನ್” ಎಂಬ ಜಗತ್ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವನ್ನು ಸೇರುತ್ತಾರೆ. ಅಧ್ಯಾಯ 9ರಲ್ಲಿ ಆ ಅದ್ಭುತ ಕೊರಕಲಿನ ವರ್ಣನೆ ಮಾಡುತ್ತಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, “ಈ ಕೊರಕಲಿನ ಇತಿಹಾಸ ನಾವು ನೆಲೆಸುವ ಭೂಮಿಯ ಪಾಲಿಗೆ 2200,000,000 ವರುಷಗಳ ಇತಿಹಾಸ…”

ಅನಂತರ ಮಾರ್ತಾ ಎಸ್ಟನ್ ಶಿವರಾಮ ಕಾರಂತರಿಗೆ ವಿದಾಯ ಹೇಳುತ್ತಾಳೆ. ಆಗ, ಸಾವಿರ ಮೈಲು ದೂರ ಪ್ರಯಾಣಿಸಿ ಬಂದ ಗೋಪಿನಾಥ ಕಲ್ಯಾಣಪುರ ಅವರ ಕುಟುಂಬವು ಕಾರಂತರನ್ನು ಸೇರಿಕೊಳ್ಳುತ್ತದೆ. ಮುಂದಿನ ಅಧ್ಯಾಯ 10ರಲ್ಲಿ ಇನ್ನೆರಡು ಅರಣ್ಯೋದ್ಯಾನಗಳಲ್ಲಿ ಕಂಡ ನೋಟಗಳ ವಿವರ ನೀಡಿದ್ದಾರೆ. ಅಧ್ಯಾಯ 11ರಲ್ಲಿ “ಯಲ್ಲೋಸ್ಟೋನ್ ಪಾರ್ಕ್” ಎಂಬಲ್ಲಿರುವ ವಿಖ್ಯಾತ ಬಿಸಿನೀರ ಬುಗ್ಗೆಗಳ ಮಾಹಿತಿ ಹಾಗೂ ವರ್ಣನೆ.

ತದನಂತರ ಸೈಂಟ್ ಪಾಲ್ ನಗರಕ್ಕೆ ಮರಳಿ ಬರುವ ಕಾರಂತರು ಗೋಪಿನಾಥ ಕಲ್ಯಾಣಪುರ ಕುಟುಂಬನ್ನು ಬೀಳ್ಗೊಂಡು ವಾಷಿಂಗ್ಟನಿಗೆ ಸಾಗುತ್ತಾರೆ. ಅಧ್ಯಾಯ 13ರಲ್ಲಿ ಯುನೈಟೆಡ್ ಸ್ಟೇಟ್ಸಿನ ರಾಜಧಾನಿಯಾದ ವಾಷಿಂಗ್ಟನಿನ ಸುತ್ತಾಟದ ವಿವರಗಳನ್ನು ದಾಖಲಿಸಿದ್ದಾರೆ. ಕೊನೆಯ ಅಧ್ಯಾಯದಲ್ಲಿ ಆ ಬೃಹತ್ ದೇಶದ ಪುಟ್ಟ ಪ್ರವಾಸದ “ಕೊನೆಯ ದಿನಗಳ” ವಿವರಗಳಿವೆ. ಪುಸ್ತಕದ ಕೊನೆಯಲ್ಲಿ ಎಂಟು ಫೋಟೋಗಳಿವೆ.

ಐವತ್ತು ವರುಷಗಳ ಮುಂಚೆ “ಯುನೈಟೆಡ್ ಸ್ಟೇಟ್ಸ್” ಎಂಬ ದೇಶ ಹೇಗಿತ್ತು? ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ನಾವು ಈ ಪ್ರವಾಸ ಕಥನದಿಂದ ಪಡೆಯಬಹುದು. ಡಾ. ಶಿವರಾಮ ಕಾರಂತರು 206 ಪುಟಗಳ ಈ ಪುಸ್ತಕದಲ್ಲಿ ತುಂಬಿರುವ ಮಾಹಿತಿಯನ್ನು ಆ ದೇಶದ “ಅಲ್ಪ ಪರಿಚಯ” ಎಂದು ಕರೆದಿದ್ದಾರೆ. ಅವರ ನಂತರ ನಮ್ಮ ದೇಶದ ಲಕ್ಷಗಟ್ಟಲೆ ಜನರು ಯುನೈಟೆಡ್ ಸ್ಟೇಟ್ಸಿಗೆ ಪ್ರವಾಸ ಹೋಗಿದ್ದಾರೆ; ಲಕ್ಷಗಟ್ಟಲೆ ಭಾರತೀಯರು ಅಲ್ಲಿ ನೆಲೆಸಿ, ಅಲ್ಲಿನ ಪ್ರಜೆಗಳೇ ಆಗಿದ್ದಾರೆ. ಅವರಲ್ಲಿ ಎಷ್ಟು ಜನರು ಅದರ ಬಗ್ಗೆ ಬರೆದಿದ್ದಾರೆ ಮತ್ತು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ ಎಂದು ಪರಿಶೀಲಿಸಿದರೆ, ಡಾ. ಕಾರಂತರ ಪ್ರವಾಸ ಕಥನದ ವಿಶೇಷತೆ ಮತ್ತು ಮಹತ್ವ ಅರ್ಥವಾಗುತ್ತದೆ.