ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ !

ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ !

ಕನ್ನಡ ಥ್ರಿಲ್ಲರ ಸಾಹಿತ್ಯ ಲೋಕದಲ್ಲಿ ಮೊಟ್ಟ ಮೊದಲ ಬಾರಿಗೆ ಸಮೃದ್ಧ ಕೃಷಿ ಮಾಡಿ, ಹುಲುಸಾದ ಫಸಲು ತೆಗೆದು ಒಂದು ಪೀಳಿಗೆಯ ಆರಾಧ್ಯ ದೈವವಾಗಿ ನಿಂತವರು 'ಟಿ.ಕೆ. ರಾಮರಾಯರು'. ಇತರರಿಗಿಂತ ಸಂಪೂರ್ಣ ವಿಭಿನ್ನ ರೀತಿಯ ಬರಹದ ಧಾಟಿಯಲ್ಲಿ ಕನ್ನಡ ಸಾಹಿತ್ಯದ ಮನಗಳಲ್ಲಿ ಅದ್ಭುತ ಕಲ್ಪನೆ, ಚಿತ್ರಣಗಳ ಸಾಧ್ಯತೆಯನ್ನು ಎತ್ತಿ ತೋರಿಸಿದ್ದೆ ಇವರ ಬರಹಗಳೆನ್ನಬೇಕು. ಅವರ ಕೃತಿಗಳೆಂದರೆ ಏನೋ ವಿಶೇಷವಿರಲೇಬೇಕೆಂಬ ಖಡಾಖಂಡಿತ ನಿರೀಕ್ಷೆಯೊಡನೆ ಓದಲಾರಂಭಿಸುವಂತೆ ಪ್ರೇರೇಪಿಸುತ್ತಿದ್ದ ರೀತಿಯಲ್ಲಿರುತ್ತಿತ್ತು ಅವರೆಲ್ಲಾ ಬರವಣಿಗೆ.  ಅವರ ಸಾಹಿತ್ಯ ಕೃಷಿಯನ್ನು ಸವಿಯುತ್ತ ಬೆಳೆದ ಅದೃಷ್ಟ ನಮ್ಮ ಪಾಲಿಗೆ. ಆ ದಿನಗಳಲ್ಲಿ ಕೊಳ್ಳುವ ಶಕ್ತಿಯಿರದೆ ಇದ್ದರೂ, ದಿನಕ್ಕಿಷ್ಟೆಂದು ಬಾಡಿಗೆ ತೆತ್ತು ತರಬಹುದಾದ ಗ್ರಂಥಾಲಯಗಳಿಂದಾಗಿ ಓದಿನ ಕೃಷಿ ಅವ್ಯಾಹತವಾಗಿ ಸಾಗಲಿಕ್ಕೆ ಸಾಧ್ಯವಾಯ್ತು. ಆ ದಿನಗಳ ನನ್ನ ನೆಚ್ಚಿನ ಬರಹಗಾರರಲ್ಲೊಬ್ಬರು - ಟಿ.ಕೆ. ರಾಮರಾಯರು - ಅಕ್ಟೋಬರ ಏಳರ ಅವರ ಜನ್ಮ ದಿನವನ್ನು ಎಂದಿನಂತೆ ನಮ್ಮ ಸಿಂಗನ್ನಡಿಗ ಬಳಗ ನೆನಪೋಲೆಯಿಂದ ಜ್ಞಾಪಿಸಿದಾಗ ಹುಟ್ಟಿಬಂದ ನೆನಕೆಯ ಸಾಲುಗಳು ಈ ಪುಟ್ಟ ಕವನ.

ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ !
_______________________________
(ರಾಮರಾಯರಿಲ್ಲದ ಕನ್ನಡ ಥ್ರಿಲ್ಲರ ಸಾಹಿತ್ಯ ಲೋಕ)

ಮೊನ್ನೆ ಹೀಗೆ ಹುಡುಕುತ್ತಿದ್ದೆ ಪಶ್ಚಿಮದ ಬೆಟ್ಟಗಳು..
ಭೈರಾ ಕೂಬ್ಲಾ ತೇಜಾ ವರ್ಜಿನೀಯ ಬಿಳಿ ತೊಗಲು

ಪ್ಲಾಹರ್ಟಿ ಚಿರದೀಪ ಚಿಪ್ಲಂಕರ ಸಂಧ್ಯಾ ದೇಸಾಯಿ
ಎಲ್ಲಿಂದ ಎದ್ದು ಬಂದರಾವ ಲೇಖನಿಯಾ ಶಾಯಿ?

ಕುತೂಹಲ , ತಿರುವು, ಸಸ್ಪೆನ್ಸು ಕೊಳ್ಳೆ ಕೊಳ್ಳೆ ಹೊಡೆದೆ
ಬಂತೆಲ್ಲಿಂದ ಪಾಪದವ ಬಂಗಾರದ ಮನುಷ್ಯನ ಅಳ್ಳೆದೆ?

ಎಲ್ಲಿತ್ತೋ ಚನ್ನಪಟ್ಟಣದಲಿ ಕೆಂಪು ಮಣ್ಣು ದೋಸ್ತಿ
ಮರಳು ಸರಪಣಿಗೆ ಕಟ್ಟಿದ ವರ್ಣಚಕ್ರದಾ ಆಸ್ತಿ?

ಕಹಳೆ ಬಂಡೆಯನೇರಿ ನಗಾರಿ ಕೂಗಿಸದಿದ್ದರೂ ಸವಾರಿ
ಮಣ್ಣಿನ ದೋಣಿಯನೇರಿ ಈಜಾಡಿಸಿದ್ದಾವ ತರ ಕುಸುರಿ?

ತ್ರಿಕೋಣದ ಮನೆಗೂ ಶೋಧ , ಕೊನೆಗೆಲ್ಲಿ ಪಯಣದ ಕೊನೆ
ಪತ್ತೆದಾರಿಯೊಳಗಡಗಿಸಿದ ಕಾದಂಬರಿಗಳೆ ನಿನ್ನಯ ಮನೆ?

ಕನ್ನಡದಲಿ ಥ್ರಿಲ್ಲರುಗಳನೆಲ್ಲ ಬರೆದು ಮೆರೆದಾಡಿಸಿ ಪ್ರಥಮ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅಲಂಕರಿಸಿದರು ನೀ ವಿನಮ್ರ..

ಬಿಡಲಿಲ್ಲ ಬಿಟ್ಟೆಯಾ ಹೊಡೆಸಿದೆ ಗೋಳದ ಮೇಲೊಂದು ಸುತ್ತು
ಬರಹವೆ ಬದುಕಾಗುವುದಿದ್ದರೆ ಬಹುಶಃ ಏನೆಲ್ಲ ಬರೆಯಲಿತ್ತು?

ಹೆಸರಲೆ ಪುಳಕಿಸಿದೆ ಜನತೆ, ಟಿ.ಕೆ. ರಾಮರಾಯರ ಗತ್ತು
ರಾಯರ ಪುಸ್ತಕಗಳೆಂದರೆ ಪೀಳಿಗೆ ಹೆಮ್ಮೆಯಲ್ಲವೆ ಸಕತ್ತು!

ಇಂದು ಹುಟ್ಟಿದ ಹಬ್ಬ ನೆನೆವಾಗ ಪುಸ್ತಕದೊಳಗಿಂದ ಜನ
ಪಾತ್ರಗಳೆ ಎದ್ದು ಮಾತಾಡಿ ರಾಯರಿಗೆ ಸಲ್ಲಿಸಿವೆ ವಂದನ !

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
07.10.2013
  

 

Comments

Submitted by partha1059 Mon, 10/07/2013 - 09:13

ನೀವು ಹೇಳಿದ‌ ಟೀಕೆರಾಮರಾಯರ‌ ಎಲ್ಲ ಪುಸ್ತಕಗಳನ್ನು ಓದಿರುವೆ. ನಾನು ಬರೆದಿರುವೆ ಒಂದೆರಡು ಪತ್ತೆದಾರಿ ಕತೆಯಲ್ಲಿನ‌ ಪೋಲಿಸ್ ಪಾತ್ರಗಳ‌ ನಿರೂಪಣೆಗೆ ಅವರ‌ ಕತೆಗಳೆ ಪ್ರೇರಣೆ
Submitted by nageshamysore Tue, 10/08/2013 - 17:34

In reply to by partha1059

ಪಾರ್ಥಾ ಸಾರ್, ಆ ದಿನಗಳಲ್ಲಿ ಹೀಗೂ ಬರೆಯೋಕೆ ಸಾಧ್ಯಾನ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳೊ ಹಾಗೆ ಮಾಡಿದ ಲೇಖಕರಿವರು. ಅವರ ಹೊಸ ಪುಸ್ತಕಕ್ಕೆ ಜಾತಕ ಪಕ್ಷಿ ಹಾಗೆ ಕಾಯ್ತಾ ಇದ್ವಿ. ಅವರ ಬೇರೆ ಎಲ್ಲಾ ಪುಸ್ತಕ ಓದಿದ ಮೇಲೆ ಬಂಗಾರದ ಮನುಷ್ಯ ಓದಿ ತುಂಬಾ ಡಿಸಪಾಯಿಂಟ್ ಆಗಿ ಹೋಗಿತ್ತು...ಏನೂ ಸಸ್ಪೆನ್ಸ್ ಥ್ರಿಲ್ಲರ ತರ ಇಲ್ವಲ್ಲಾ ಅಂತ..!
Submitted by nageshamysore Mon, 10/07/2013 - 10:32

ಗೆಳೆಯ ಗಿರೀಶ್ ಜಮದಗ್ನಿಯವರು ಮಿಂಚಂಚೆಯ ಮುಖಾಂತರ ತಮ್ಮ ರಾಯರ ಅಭಿಮಾನಿ ದಿನಗಳನ್ನ ಸ್ಮರಿಸಿಕೊಂಡಿದ್ದಾರೆ. ದಾಖಲೆಗಾಗಿ ಇಲ್ಲಿ ಪ್ರತಿಕ್ರಿಯೆಯಡಿ ಸೇರಿಸುತ್ತಿದ್ದೇನೆ ಯಥಾವತ್ತಾಗಿ: Nagesh, ನಾನು ಕೂಡ ಟಿ.ಕೆ. ರಾಮರಾವ್ ಅವರ ಅಪ್ಪಟ ಅಭಿಮಾನಿ! ನಿಮ್ಮ ಕವನ ನಾ ಹಿಂದೆ ಓದಿದ್ದ ಅವರ ಕಥೆ / ಕಾದಂಬರಿಗಳ ಮೆಲುಕು ಹಾಕಿಸಿತು. ಪತ್ತೇದಾರಿ ಕಥೆಗಳಿಗೊಂದು ಹೊಸ format ಹಾಕಿ ಕೊಟ್ಟವರು ಅವರು. ಅವರ ಕಥೆ / ಕಾದಂಬರಿಗಳ ಹೆಸರು ಮತ್ತು ಪಾತ್ರ ಗಳನ್ನು ನಿಮ್ಮ ಪುಟ್ಟ ಕವನದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದೀರಿ. ಧನ್ಯವಾದಗಳು ಗಿರೀಶ್
Submitted by venkatb83 Mon, 10/07/2013 - 17:54

In reply to by bhalle

ಕೆಲ ತಿಂಗಳುಗಳ ಹಿಂದೆ ಮಲ್ಲೇಶ್ವರ ಲೈಬ್ರರಿಗೆ ಹೋಗಿದ್ದಾಗ ಒಂದು ದೊಡ್ಡ ರ್ಯಾಕ್ ತುಂಬಾ ಟಿ ಕೆ ರಾಮರಾಯರ ಕಾದಂಬರಿಗಳೇ ತುಂಬಿದ್ದವು .. ಅದುವರೆಗೂ ನಂಗೆ ಪತ್ತೆದಾರಿಯಲ್ಲಿ ಗೊತ್ತಿದ್ದದು ಎನ್ ನರಸಿಂಹಯ್ಯ ,ಮ. ರಾಮ ಮೂರ್ತಿ ,ಕೌಂಡಿನ್ಯ ,ಬಿ ವಿ ಅನಂತರಾಮ್ ,ಮಾತ್ರ ... ಅವರ ಬಗ್ಗೆ ಮತ್ತು ಅವರ ಪ್ರಭಾವ ಓದಿದವರ ಮೇಲೆ ಆದ ರೀತಿಯನ್ನ ಸೂಪರ್ ಆಗಿ ಬರೆದಿರುವಿರಿ .. ಈಗೀಗ ವರ್ಷಕ್ಕೊಮ್ಮೆ ತುಷಾರದವರು (ಮಾಸಿಕ) ತರುವ ಪತ್ತೇದಾರಿ ವಿಶೇಷ ಓದುವ ಸೌಭಾಗ್ಯ ನಮದು ...!! ನನಗೊಂದು ಆಲೋಚನೆ ಬಂದಿದೆ -ಗದ್ಯ ಬರಹದಲ್ಲಿ ಪತ್ತೆಧಾರಿ ಕಥೆ ಬರೆಯಬಹುದು , ಅದನ್ನೇ (ಪತ್ತೆದಾರಿ ಅಂಶಗಳ ಬಗ್ಗೆ )ಕವಿತೆಯಲ್ಲಿ ಬರೆಯಲು ಸಾಧ್ಯವೇ? ಹಾಗಿದ್ದರೆ ನೀವ್ ಯಾಕೆ ಒಂದು ಪತ್ತೇದಾರಿ ಕಾವ್ಯ ಬರೆಯಬಾರದು .. ನಾಡ ಹಬ್ಬ ದಸರಾದ ಹಾರ್ದಿಕ ಶುಭಾಶಯಯಗಳು ಶುಭವಾಗಲಿ \।
Submitted by nageshamysore Tue, 10/08/2013 - 17:40

In reply to by venkatb83

ಸಪ್ತಗಿರಿಗಳೆ ಮೊದಲಿಗೆ ತಮಗೆ ಮತ್ತು ಎಲ್ಲಾ ಸಂಪದಿಗರಿಗೆ, ನಾಡಹಬ್ಬದ ಶುಭಕಾಮನೆಗಳು ! ಅಲ್ಲಾ ನಿಮಗೆ ಈ ಕ್ರಿಯೇಟೀವ್ ಐಡಿಯಾ ಎಲ್ಲಾ ಹೇಗೆ ಹೊಳೆಯುತ್ತೆ ಅಂತಿನಿ? ಕವನದಲ್ಲೆ ಪತ್ತೆದಾರೀ..ವಾಹ್ವಾ..! ಅದ್ಭುತ ಪ್ರಯೋಗ - ಸರಿಯಾದ ಕಥಾ ಹಂದರ ಇದ್ರೆ..ಏನಾದ್ರೂ ಸರಿಯಾದ ವಸ್ತು ಹೊಳೆದ್ರೆ ಒಂದು ಕೈ ನೋಡಿಯೆ ಬಿಡೋಣ ಬಿಡಿ..ಗಣೇಶ್ ಜಿ ಗಜಲ್, ನಿಮ್ಮದು ಪತ್ತೇದಾರಿ ಕಾವ್ಯ - ಎಲ್ಲಾ ಸೇರಿದರೆ, ವಿಶಿಷ್ಟ ಪ್ರಯೋಗಗಳಂತೂ ಗಟ್ಟಿ :-)