ಪಾತ್ರೆಯ ಕನಸು
ಬರಹ
ಇಪ್ಪತ್ತೊಂದು ವರ್ಷಗಳ ಹಿಂದೆ, ನಾನು ಒಂಬತ್ತು ವರ್ಷದವನಾಗಿದ್ದಾಗ ನನ್ನ ತಂದೆ, ಅವರು ಸುಮಾರು ಹದಿನೈದು ವರ್ಷದವರಾಗಿದ್ದಾಗ, ದಾವಣಗೆರೆಯಲ್ಲಿ, ಅವರ ಮನೆಯಲ್ಲಿ ನಡೆದ ಒಂದು ಘಟನೆಯನ್ನು ನನಗೆ ತಿಳಿಸಿದರು.
ನನ್ನ ತಂದೆಯವರ ಸಹೋದರ ಮನೆಯಿಂದ ಬೇರೆಯಾದರಂತೆ. ತಮಗೆ ಬರುವ ಸಾಮಗ್ರಿಗಳನ್ನು ತುಂಬಿಕೊಂಡು ಹೋಗಲು ಮನೆಯ ಮುಂದೆ ಎತ್ತಿನಗಾಡಿಯನ್ನು ತಂದು ನಿಲ್ಲಿಸಿದಾಗ, ಅವರ ಪತ್ನಿ (ನನ್ನ ತಂದೆಯವರ ಅತ್ತಿಗೆ) ನನ್ನ ತಾತನವರನ್ನು, "ಯಾವ ಯಾವ ವಸ್ತುಗಳನ್ನು ನಾನು ತೆಗೆದುಕೊಳ್ಳಲಿ?" ಎಂದು ಕೇಳಿದರಂತೆ.
"ನಿನಗೆ ಬೇಕಾದದ್ದನ್ನೆಲ್ಲಾ ತೆಗೆದುಕೊಂಡು ಹೋಗು. ನನಗೇನೂ ಕೇಳುವುದು ಬೇಡ" ಎಂದು ನನ್ನ ತಾತ ಉತ್ತರಿಸಿದರಂತೆ. ಒಂದು ಹಿತ್ತಾಳೆಯ ಪಾತ್ರೆಯನ್ನು ಹೊರತುಪಡಿಸಿ, ಮನೆಯಲ್ಲಿದ್ದ ಸಕಲ ಪಾತ್ರೆಪರಡಿಗಳು ಹೊರಗೆ ನಿಂತಿದ್ದ ಎತ್ತಿನಗಾಡಿಯನ್ನು ಸೇರಿದವಂತೆ. ಉಳಿದ ಹಿತ್ತಾಳೆ ಪಾತ್ರೆಯಲ್ಲಿ ಅಂದು ಮುಂಜಾನೆಯ ಊಟಕ್ಕಾಗಿ ಮಾಡಿದ ಅನ್ನ ಇನ್ನೂ ಉಳಿದಿತ್ತಂತೆ. ನನ್ನ ತಂದೆಯ ಅತ್ತಿಗೆ ಆ ಪಾತ್ರೆಯನ್ನೂ ಸಹ ತಮ್ಮೊಂದಿಗೆ ತೆಗೆದುಕೊಂಡು ಹೋಗಲು ಅದರಲ್ಲಿದ್ದ ಅನ್ನವನ್ನು ಮುತ್ತುಗದ ಎಲೆಯ ಮೇಲೆ ತೋಡಲಾರಂಭಿಸಿದರಂತೆ!
ನನ್ನ ತಾತ ಮಾತ್ರ ಏನೂ ಮಾತನಾಡದೆ ಸುಮ್ಮನೆ ಇದ್ದರಂತೆ!
ತವರು ಮನೆಗೆ ಬಂದಿದ್ದ ನನ್ನ ತಂದೆಯ ಅಕ್ಕ ಕೊನೆಗೆ ತಡೆಯಲಾರದೆ,
"ಏನೇ? ಈ ಒಂದು ಪಾತ್ರೆಯನ್ನಾದರೂ ಇಲ್ಲಿ ಬಿಡುವ ದೊಡ್ಡತನವಿಲ್ಲವೇನು ನಿನಗೆ?" ಎಂದು ನನ್ನ ತಂದೆಯ ಅತ್ತಿಗೆಗೆ ಕೇಳಿದರಂತೆ.
ಅವರ ಮಾತಿನಿಂದ ಅನ್ನವಿದ್ದ ಪಾತ್ರೆಯೊಂದು ಮಾತ್ರ ನನ್ನ ತಾತನ ಮನೆಯಲ್ಲಿಯೇ ಉಳಿಯಿತಂತೆ.
"ಅಂದು ನಮ್ಮ ಪರಿಸ್ಥಿತಿ ಹೇಗಿತ್ತೆಂದರೆ, ನಮಗೆ ಅಡುಗೆ ಮಾಡಿಕೊಳ್ಳಲು ಇದ್ದದ್ದು ಅದೊಂದೇ ಪಾತ್ರೆ. ನಮಗೆ ಇನ್ನೊಂದು ಪಾತ್ರೆ ತೆಗೆದುಕೊಳ್ಳಲೂ ಸಹ ಶಕ್ತಿ ಇರಲಿಲ್ಲ. ಎಷ್ಟೋ ದಿನಗಳವರೆಗೂ ನಾವು ಪ್ರತಿನಿತ್ಯವೂ ಅದೇ ಪಾತ್ರೆಯಲ್ಲಿ ಅನ್ನವನ್ನು ಮಾಡಿ, ಅದನ್ನು ಎಲೆಯ ಮೇಲೆ ತೋಡಿ ಅನಂತರ ಅದರಲ್ಲಿಯೇ ಸಾರೋ ಹುಳಿಯೋ ಮಾಡಿಕೊಳ್ಳುತ್ತಿದ್ದೆವು." ಎಂದು ನನ್ನ ತಂದೆಯವರು ಮಾತು ಮುಗಿಸಿದಾಗ ಅವರ ಕಣ್ಣಿನಿಂದ ಇಳಿದ ನೀರ ಹನಿಗಳು ನನ್ನ ಚಿಕ್ಕ ವಯಸ್ಸಿನಲ್ಲಿಯೂ ಘಟನೆಯ ಹಿಂದಿದ್ದ ಕ್ರೌರ್ಯವನ್ನು ಅರ್ಥಮಾಡಿಸಲು ಯಶಸ್ವಿಯಾಗಿದ್ದವು!
ಆದರೆ ಆ ಪಾತ್ರೆ ಆಗ ನಮ್ಮ ಮನೆಯಲ್ಲಿರಲಿಲ್ಲ! ನನ್ನ ತಂದೆಯವರಿಗೆ ಅದು ಯಾರ ಮನೆಯಲ್ಲಿದೆ ಎಂದೂ ತಿಳಿದಿರಲಿಲ್ಲ. ಆ ಪಾತ್ರೆಯ ಮೇಲೆ ನನ್ನ ತಾತನ ಹೆಸರಿದೆ ಎಂದು ಮಾತ್ರ ನನಗೆ ತಿಳಿದು ಬಂತು. ನಾನು ಆ ಪಾತ್ರೆಯನ್ನು ನೋಡಬೇಕು, ಅಷ್ಟೆ ಅಲ್ಲ, ಅದನ್ನು ತಂದು ನಮ್ಮ ಮನೆಯಲ್ಲಿಯೇ ಇಟ್ಟುಕೊಳ್ಳಬೇಕು, ಸ್ಮಾರಕವಾಗಿ. ಏಕೆಂದರೆ ಮಾನವೀಯ ಮೌಲ್ಯಗಳ ಅಧಃಪತನಕ್ಕೆ ಸಾಕ್ಷಿಯಾಗಿ ಆ ಪಾತ್ರೆ ನಿಂತಿದೆಯಲ್ಲವೆ?
ಅಂದಿನಿಂದಲೇ ಆ ಪಾತ್ರೆಯನ್ನು ಹುಡುಕಿ ತರುವುದೇ ನನ್ನ ದೊಡ್ಡ ಕನಸಾಯಿತು.
ಸುಮಾರು ಹನ್ನೆರಡು ವರ್ಷಗಳ ಕಾಲ ಸತತವಾಗಿ ಆ ಪಾತ್ರೆಯನ್ನು ಹುಡುಕಿದೆ. ಕೊನೆಗೊಂದು ದಿನ ಯಾರೋ, ಯಾವುದೋ ದೂರದ ಬಂಧುಗಳ ಮನೆಯಲ್ಲಿ ನೀನು ಹುಡುಕುತ್ತಿರುವ ಪಾತ್ರೆ ಇದ್ದಹಾಗೆ ನೆನಪು ಎಂದು ತಿಳಿಸಿದರು. ಆ ವೇಳೆಗೆ ನನ್ನ ತಂದೆಯವರು ನಿಧನರಾಗಿದ್ದರು.
ನಾನು ಪಾತ್ರೆಯನ್ನು ಹುಡುಕಿಕೊಂಡು ಅವರು ಹೇಳಿದ್ದ ಊರಿಗೆ ಹೋದೆ. ನನ್ನನ್ನು ಕಂಡರಿಯದ ಬಂಧುಗಳಿಗೆ ನನ್ನ ಪರಿಚಯ ಮಾಡಿಕೊಂಡೆ. ಅವರೂ ಸಹ ನನ್ನನ್ನು ತುಂಬು ವಿಶ್ವಾಸದಿಂದ ಆದರಿಸಿದರು.
ಕೊನೆಗೆ ನಾನು ಬಂದ ಕಾರಣವನ್ನು ಅವರಿಗೆ ತಿಳಿಸಿದೆ.
"ನಿನ್ನ ತಾತನ ಹೆಸರಿದ್ದ ಹಿತ್ತಾಳೆಯ ಪಾತ್ರೆ ನಮ್ಮ ಮನೆಯಲ್ಲಿ ಬಹಳ ವರ್ಷಗಳಿಂದಲೂ ಇತ್ತು. ಅದು ಹೇಗೆ ನಮ್ಮ ಮನೆಗೆ ಬಂದಿತ್ತು ಎನ್ನುವುದು ನನಗೂ ಸಹ ಗೊತ್ತಿಲ್ಲ. ಬಹುಶಃ ನಾವು ದಾವಣಗೆರೆಯಲ್ಲಿದ್ದಾಗ ನಿನ್ನ ತಾತನ ಮನೆಯಿಂದ ನಮ್ಮ ಮನೆಗೆ ಅದರಲ್ಲಿ ಏನಾದರೂ ತಿನಿಸು ಬಂದು, ಪಾತ್ರೆ ನಮ್ಮ ಮನೆಯಲ್ಲಿಯೇ ಉಳಿದಿರಬೇಕು. ಈಚೆಗೆ ನಮ್ಮ ಮನೆಯ ಹಳೆಯ ಪಾತ್ರೆಗಳನ್ನು ಮಾರಿದೆ, ಅದರೊಂದಿಗೆ ನಿಮ್ಮ ಪಾತ್ರೆ ಹಳೆಯದ್ದಾಗಿದ್ದುದರಿಂದಲೂ ಹಾಗೂ ನಾಲ್ಕೈದು ಕಡೆ ತೂತು ಬಿದ್ದಿದ್ದರಿಂದಲೂ ಅದನ್ನೂ ಮಾರಿಬಿಟ್ಟೆ." ಎಂದು ನನ್ನ ಬಂಧುಗಳು ಉತ್ತರಿಸಿದರು. ಆ ಪಾತ್ರೆಯನ್ನು ಹುಡುಕಿ ತೆಗೆಯುವ ನನ್ನ ಕನಸು ಕೊನೆಗೂ ಕೈಗೂಡಲಿಲ್ಲ.
ಪ್ರಸ್ತುತ ಲೇಖನ ತರಂಗ ವಾರಪತ್ರಿಕೆಯ ೨೫, ಜುಲೈ ೨೦೦೨ನೆಯ ಸಂಚಿಕೆಯ 'ಕೈಜಾರಿದ ಕನಸು' ಅಂಕಣದಲ್ಲೂ (ಪುಟ ಸಂಖ್ಯೆ - ೪೪) ಪ್ರಕಟವಾಗಿತ್ತು. - ತಾ ಶ್ರೀ ಗುರುರಾಜ.